ವಾರ್ಧಾ ದಾಳಿಗೆ ತತ್ತರಿಸಿದ ತಮಿಳುನಾಡು, ಸಚಿವರ ರಾಸಲೀಲೆ ಪ್ರಕರಣದ ಬಗ್ಗೆ ರಾಜಶೇಖರನ್ ಹೇಳಿದ್ದೇನು?, ನನ್ನ ವಿರುದ್ಧ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ಜಾರ್ಜ್

ನೈಸ್ ಕಂಪನಿಯು ಕರ್ನಾಟಕದಲ್ಲಿ ನಡೆಸಿರುವ ಭ್ರಷ್ಟಚಾರ ಮತ್ತು ಭೂ ಕಬಳಿಕೆ ಮತ್ತು ರೈತರ ಮೇಲಿನ ದಬ್ಬಾಳಿಕೆ ಬಗ್ಗೆ ಸದನ ಸಮಿತಿ ಸಲ್ಲಿಸಿರುವ ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸದಸ್ಯರು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಚೆನ್ನೈನಲ್ಲಿ ಚಂಡಮಾರುತದ ಅವಾಂತರ

ವಾರ್ಧಾ ಚಂಡಮಾರುತದ ಅಬ್ಬರಕ್ಕೆ ಸೋಮವಾರ ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಕರಾವಳಿ ಭಾಗ ಸಂಪೂರ್ಣವಾಗಿ ತತ್ತರಿಸಿದೆ. ಬಿರುಗಾಳಿ ಹಾಗೂ ಭಾರಿ ಮಳೆಯ ಪರಿಣಾಮ ಇಲ್ಲಿನ ಜನಜೀವನ ಚಿತ್ರಣ ಸಂಪೂರ್ಣ ಬದಲಾಗಿದೆ. ತಂಗಲ್ ಪೇಟೆಯಲ್ಲಿ ಎಂಟು ವರ್ಷದ ಬಾಲಕಿ ಅಸ್ವತಿ ಹಾಗೂ ಕಂಜಿಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಸಾವಿರಾರು ಮರಗಳು ನೆಲಕ್ಕುರುಳಿದ್ದು, ಗುಡಿಸಲುಗಳು ಗಾಳಿಯ ವೇಗಕ್ಕೆ ತೂರಿ ಹೋಗಿವೆ. ಇನ್ನು ಕೆಲವು ಕಟ್ಟಡಗಳು ಹಾನಿಗೆ ಒಳಗಾಗಿರುವುದು ಈ ಚಂಡಮಾರುತದ ಅಬ್ಬರಕ್ಕೆ ಸಾಕ್ಷಿ. ಇನ್ನು ಹಲವು ಮೀನುಗಾರರು ಕಣ್ಮರೆಯಾಗಿರುವ ವರದಿಗಳು ಬಂದಿವೆ. ಇನ್ನು ಕಲ್ಪಕಂನಲ್ಲಿರುವ ಅಣುಸ್ಥಾವರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಯಿತು.

ವಾರ್ಧಾ ಚಂಡಮಾರುತ ತಮಿಳುನಾಡು ಮಾರ್ಗವಾಗಿ ಆಂದ್ರಪ್ರದೇಶದ ದಿಕ್ಕಿನಲ್ಲಿ ಸಾಗುತ್ತಿದ್ದು, ನೆಲ್ಲೂರು, ಪ್ರಕಾಶಂ, ಕೃಷ್ಣಾ, ಮಚಲಿಪಟ್ಟಣ ಮುಖಾಂತರವಾಗಿ ಗೋವಾದತ್ತ ಸೇರುವ ನಿರೀಕ್ಷೆ ಇದೆ. ಚಂಡಮಾರುತದ ಅಬ್ಬರ ತೀವ್ರವಾಗಿರುವುದರಿಂದ ಆಂಧ್ರಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಚಿವರ ರಾಸಲೀಲೆ ಸಿಡಿ ನನ್ನ ಬಳಿ ಇಲ್ಲ ಆದ್ರೆ ಸಿಡಿ ನೋಡಿದ್ದೇನೆ

ಅಬಕಾರಿ ಸಚಿವ ಎಚ್.ವೈ ಮೇಟಿ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ಸಿಡಿ ನನ್ನ ಬಳಿ ಇಲ್ಲ… ಆದರೆ, ಆ ಸಿಡಿಯನ್ನು ನಾನು ನೋಡಿದ್ದೇನೆ.. ಇದು ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ನೀಡಿರುವ ಹೇಳಿಕೆ. ಸೋಮವಾರ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಸಂದರ್ಭದಲ್ಲಿ ಸಿಡಿಯಲ್ಲಿ ಏನಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಶೇಖರನ್, ‘ಆ ಸಿಡಿಯಲ್ಲಿ ಸಚಿವರ ರಾಸಲೀಲೆ ದೃಶ್ಯ ನೋಡಿದರೆ ನನಗೂ ಬೇಸರವಾಗುತ್ತೆ. ಅಷ್ಟು ಅಸಹ್ಯವಾಗಿದೆ. ಅದನ್ನು ಇಲ್ಲಿ ವಿವರಿಸುವುದು ಅಸಾಧ್ಯ. ಹೀಗಾಗಿ ಅಂತಹ ಸಚಿವರು ನಮಗೆ ಬೇಡ. ಅವರನ್ನು ಕೂಡಲೇ ವಜಾ ಮಾಡಬೇಕು. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಉತ್ತಮ ಸಮಾಜಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಈ ಪ್ರಕರಣದ ಬಗ್ಗೆ ಮೊದಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ವರದಿ ಸಲ್ಲಿಸುತ್ತೇನೆ. ನಂತರ ಎಐಸಿಸಿಗೂ ಸಲ್ಲಿಸುತ್ತೇನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆದರಿಕೆ ಇದೆ.’ ಎಂದಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪತಿಯೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ‘ಕಳೆದ ಮೂರು ದಿನಗಳಿಂದ ನನ್ನ ಪತ್ನಿ ಕಾಣುತ್ತಿಲ್ಲ. ದೂರವಾಣಿ ಕರೆಗೂ ಸಿಗುತ್ತಿಲ್ಲ. ಮಹಿಳೆ ನೋವು ತೋಡಿಕೊಂಡಿರುವ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದು, ಅದರಲ್ಲಿರುವುದು ನನ್ನ ಪತ್ನಿ. ಸಚಿವ ಮೇಟಿ ಅವರು ನನ್ನ ಸಂಬಂಧಿ. ಸಂಬಂಧದಲ್ಲಿ ಅವರು ಅಜ್ಜನಾಗಬೇಕು. ಅವರಿಗೂ ನಮಗೂ ಬೇರೆ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಆರೋಪ ಸುಳ್ಳು. ಯಾರದೋ ರಾಜಕೀಯ ದ್ವೇಶಕ್ಕೆ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಮಾನನಷ್ಟ ಮೊಕದ್ದಮೆ ಹಾಕಲು ಜಾರ್ಜ್ ತಯಾರಿ

‘ಐಎಎಸ್ ಅಧಿಕಾರಿ ಡಿ.ಕೆ ರವಿ ಹಾಗೂ ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಪ್ರಕರಣದಲ್ಲಿ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಎಲ್ಲ ರೀತಿಯ ತಯಾರಿ ನಡೆಸುತ್ತಿದ್ದೇನೆ…’ ಇದು ಸಚಿವ ಕೆ.ಜೆ ಜಾರ್ಜ್ ನೀಡಿರುವ ಎಚ್ಚರಿಕೆ. ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಜಾರ್ಜ್, ‘ಈ ಎರಡು ಪ್ರಕರಣಗಳಲ್ಲಿ ನನ್ನ ಮೇಲೆ ಹೀನಾಮಾನವಾಗಿ ಆರೋಪ ಮಾಡಿ, ಬಾಯಿಗೆ ಬಂದ ಹಾಗೆ ಮಾತಾಡಿ ನನ್ನನ್ನು ಕೊಲೆಗಾರನೆಂಬ ರೀತಿಯಲ್ಲಿ ಬಿಂಬಿಸಿದ್ದರು. ಆದರೆ ಡಿ.ಕೆ ರವಿ ಪ್ರಕರಣದಲ್ಲಿ ಸಿಬಿಐ ವರದಿ ನೀಡಿದೆ. ನನ್ನ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದವರು ಈಗ ಏಕೆ ಸುಮ್ಮನಿದ್ದಾರೆ. ಡಿ.ಕೆ ರವಿಯವರ ಪೋಷಕರು ಮಾನಸಿಕವಾಗಿ ನೊಂದಿದ್ದರು ಅವರು ಆರೋಪ ಮಾಡಿದರು. ಆದರೆ ಬೇರೆಯವರು ನಮ್ಮ ವಿರುದ್ಧ ಅನವಶ್ಯಕ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದರು.

ಮಳೆ ವೈಫಲ್ಯ 10 ಸಾವಿರ ಕೋಟಿ ಬೆಳೆ ನಷ್ಟ: ಕಾಗೋಡು ತಿಮ್ಮಪ್ಪ

ಹಿಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರಾಜ್ಯದಲ್ಲಿ ₹ 10 ಸಾವಿರ ಕೋಟಿಯಷ್ಟು ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಕಾಗೋಡು ತಿಮ್ಮಪ್ಪ, ‘ರಾಜ್ಯದಲ್ಲಿ 8 ರಿಂದ 10 ಲಕ್ಷ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದು ನಿಂತ ಬೆಳೆ ನೀರಿಲ್ಲದೆ ಹಾಳಾಗಿದೆ. ಮುಂಗಾರು ಮಳೆ ವೈಫಲ್ಯದಿಂದ ₹ 17 ಸಾವಿರ ಕೋಟಿ ಮೊತ್ತದ ಬೆಳೆ ನಷ್ಟವಾಗಿದೆ. ಜನವರಿ ಮೊದಲ ವಾರದೊಳಗೆ ನಷ್ಟದ ಬಗ್ಗೆ ಅಂದಾಜು ತಯಾರಿಸಿ ಪರಿಹಾರ ಕೋರಿ ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಮಾಡಲಾಗುವುದು’ ಎಂದರು.

ಕಾರ್ಯಕರ್ತರು ಮನಸ್ಸು ಮಾಡಿದರೆ ಮಾತ್ರ ಬಿಎಸ್ವೈ ಸಿಎಂ

‘ಪಕ್ಷದ ಕಾರ್ಯಕರ್ತರು ಮನಸ್ಸು ಮಾಡಿದರೆ ಮಾತ್ರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ…’ ಇದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರ ಮಾರ್ಮಿಕವಾದ ಮಾತು. ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷ ಘೋಷಣೆ ಮಾಡಿದ ಮಾತ್ರಕ್ಕೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದಿಲ್ಲ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಉತ್ತಮಸರ್ಕಾರ ಇರಲು ಕಾರ್ಯಕರ್ತರೇ ಕಾರಣ. ಕೆಳ ಮಟ್ಟದಲ್ಲಿ ಯಾರು ನಾಯಕರಾಗಬೇಕು ಎಂದು ನಿರ್ಧರಿಸಿದರೆ ಮಾತ್ರ ಯಡಿಯೂರಪ್ಪನವರು ಸಿಎಂ ಆಗುತ್ತಾರೆ. ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷ ಸಂಘಟನೆ ಮಾಡಿ ಭ್ರಷ್ಟ ಆಡಳಿತ ವಿರುದ್ಧ ಜನರ ಬಳಿ ಧ್ವನಿವೆತ್ತಿದರೆ ನಾವು ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯ’ ಎಂದರು.

Leave a Reply