ಸಾಲ ಮಾಡಿ ತುಪ್ಪ ತಿಂದವನೇ ಜಾಣ, ಇದು ಜಾಗತಿಕ ಹಣಕಾಸು ಚಿತ್ರಣ

authors-rangaswamyನಿನ್ನೆ ನಾನು ಹೂಡಿಕೆದಾರರ ಸಮ್ಮೇಳನಕ್ಕೆ ಹೋಗಿದ್ದೆ ಅಲ್ಲಿ ಒಬ್ಬ ಭಾಷಣಕಾರ  ‘ಜರ್ಮನಿ ಪ್ರಥಮ ಬಾರಿಗೆ ನೆಗೆಟಿವ್ ಇಂಟರೆಸ್ಟ್ ಬಾಂಡ್  ಬಿಡುಗಡೆ ಮಾಡಿತು. ಅದು ಬಿಸಿ ದೋಸೆಯಂತೆ ಖರ್ಚಾಯಿತು’ ಎಂದು ಹೇಳಿದರು. ಜಗತ್ತು ಹಿಂದೆಂದೂ ಕಂಡಿರದ ಆರ್ಥಿಕ ಸಂಕಷ್ಟದಲ್ಲಿದೆ. ಸಾಂಪ್ರದಾಯಿಕವಾಗಿ ಹಣವಿದ್ದವರು ಚಿಂತಿಸುವ ಸ್ಥಿತಿ ಇರಲಿಲ್ಲ, ಕಷ್ಟವೇನಿದ್ದರೂ ಹಣವಿಲ್ಲದವರಿಗೆ ಸಾಲ ಮಾಡುವರಿಗೆ ಇತ್ತು. ಇದೀಗ ಎಲ್ಲಾ ಉಲ್ಟಾ! ತೀರಾ ಅಸಾಂಪ್ರದಾಯಿಕ ಸ್ಥಿತಿ ಮನೆ ಮಾಡಿದೆ. ಹೀಗಾಗಲು ಕಾರಣವೇನು? ಇಂತಹ ಸ್ಥಿತಿಯಲ್ಲಿ ಹೂಡಿಕೆದಾರ ಏನು ಮಾಡಬೇಕು?  ಎಂದು ಪ್ರಶ್ನಿಸಿದ್ದು ಹೂಡಿಕೆಯಲ್ಲಿ ತೀವ್ರ ಆಸಕ್ತಿ ಇರುವ ಅಂತರರಾಷ್ಟ್ರೀಯ ಹೂಡಿಕೆದಾರ ಮಿತ್ರ.

ನೇರವಾಗಿ ಉತ್ತರ ಹೇಳುವುದಕ್ಕೆ ಮುಂಚೆ ನೆಗೆಟಿವ್ ಇಂಟರೆಸ್ಟ್ ರೇಟ್ ಅಥವಾ ನೆಗೆಟಿವ್ ಇಂಟರೆಸ್ಟ್ ರೇಟ್ ಪಾಲಿಸಿ (NIRP ) ಎಂದರೇನು? ಎಂದು ತಿಳಿದುಕೊಳ್ಳುವ ಅವಶ್ಯಕತೆ ಇದೆ.

hana classನೆಗೆಟಿವ್ ಇಂಟರೆಸ್ಟ್ ರೇಟ್ ಎನ್ನುವುದು ಒಂದು ಅಸಾಂಪ್ರದಾಯಿಕ ವಿತ್ತೀಯ ನೀತಿ. ಇಲ್ಲಿ ಸಾಮಾನ್ಯ ಬಡ್ಡಿ ದರ ಸೊನ್ನೆಗಿಂತ ಕಡಿಮೆ ಇರುತ್ತದೆ. ಬ್ಯಾಂಕುಗಳು ಸೆಂಟ್ರಲ್ ಬ್ಯಾಂಕ್ ಮೂಲಕ ಹಣವನ್ನು ಸಾಲದ ರೂಪದಲ್ಲಿ ಪಡೆದರೆ, ಸೆಂಟ್ರಲ್ ಬ್ಯಾಂಕ್ ಬಡ್ಡಿ ವಿಧಿಸುತಿತ್ತು ಆದರೆ ಈಗ ಸೆಂಟ್ರಲ್ ಬ್ಯಾಂಕ್ ಸಾಲ ಪಡೆದ ಬ್ಯಾಂಕಿಗೆ ಬಡ್ಡಿ ನೀಡುತ್ತದೆ. ಈ ಕ್ರಿಯೆಗೆ ನೆಗೆಟಿವ್ ಇಂಟರೆಸ್ಟ್ ರೇಟ್ ಪಾಲಿಸಿ ಎನ್ನುತ್ತಾರೆ. ಒಂದು ಸಣ್ಣ ಉದಾಹಾರಣೆ ಇದನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಾಂಪ್ರದಾಯಿಕವಾಗಿ  ಬ್ಯಾಂಕ್ ಆಫ್ ಮೈಸೂರು ಸೆಂಟ್ರಲ್ ಬ್ಯಾಂಕ್ ನಿಂದ ಒಂದು ಲಕ್ಷ ಹಣವನ್ನು ಸಾಲ ಪಡೆದರೆ ಅಂತಹ ಸಾಲದ 6.25 ಬಡ್ಡಿ ಹಾಕುತಿತ್ತು. ಅಂದರೆ ವಾರ್ಷಿಕ 6250 ಬಡ್ಡಿ ತೆರಬೇಕಿತ್ತು. ನೆಗೆಟಿವ್ ಇಂಟರೆಸ್ಟ್ ರೇಟ್ ಸನ್ನಿವೇಶದಲ್ಲಿ ಸೆಂಟ್ರಲ್ ಬ್ಯಾಂಕ್ 5 ಪ್ರತಿಶತ ನೆಗೆಟಿವ್ ಬಡ್ಡಿ ನೀಡುತ್ತದೆ. ಅಂದರೆ ಬ್ಯಾಂಕ್ ಆಫ್ ಮೈಸೂರು ಸಾಲ ಪಡೆದದಕ್ಕೆ ವಾರ್ಷಿಕ ಲಕ್ಷಕ್ಕೆ 5000 ರೂಪಾಯಿ ಪಡೆಯುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ ಸಾಲಗಾರ ತಾನು ಪಡೆದ ಸಾಲವನ್ನು ವರ್ಷದ ನಂತರ ತೀರಿಸಲು ನೀಡಬೇಕಿದ್ದ ಮೊತ್ತ ಒಂದು ಲಕ್ಷ ಆರು ಸಾವಿರದ ಇನ್ನೂರಾ ಐವತ್ತು, ನೆಗೆಟಿವ್ ಇಂಟರೆಸ್ಟ್ ಸನ್ನಿವೇಶದಲ್ಲಿ 96 ಸಾವಿರ ಕೊಟ್ಟರೆ ಸಾಲ ತೀರಿದಂತೆ!

ಜರ್ಮನಿ ಪ್ರಥಮ ಬಾರಿಗೆ 10 ವರ್ಷದ ಡೆಟ್ ಬಾಂಡ್ ಗಳನ್ನು ಹಲವು ತಿಂಗಳ ಹಿಂದೆಯಷ್ಟೇ ವಿತರಿಸಿತು. ಹೂಡಿಕೆದಾರನ ಪ್ರತಿ 100 ಯುರೋ ಹತ್ತು ವರ್ಷದ ನಂತರದ ಮೌಲ್ಯ 95 ಯುರೋ. ಅಂದರೆ ಪ್ರತಿ 100 ಯುರೋ ಗೆ ಐದು ಯುರೋ ನಷ್ಟ. ಹತ್ತು ವರ್ಷ ತಮ್ಮ ಹಣವನ್ನ ಬೇರೆಯವರಿಗೆ ಕೊಟ್ಟು ಕೊನೆಗೆ ಕಡಿಮೆ ಹಣ ಪಡೆಯಲು ಹೂಡಿಕೆದಾರ ತಯಾರಿದ್ದಾನೆ ಎಂದರೆ  ಹೂಡಿಕೆದಾರರಲ್ಲಿ ಎಂತಹ ತಲ್ಲಣ ಇರಬಹುದು? ಈ ಬಾಂಡ್ ಗಳು ಬಿಡುಗಡೆ ಯಾದ ಹಲವು ವಾರಗಳಲ್ಲಿ ೪ ಬಿಲಿಯನ್ ಯುರೋ (ಸರಿಸುಮಾರು ₹ 28,500 ಕೋಟಿ ರೂಪಾಯಿ ) ಸಂಗ್ರಹಿಸಿದೆ ಎಂದರೆ ವಿತ್ತ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದರ ಅರಿವಾದೀತು.

ಇಂತಹ ಸ್ಥಿತಿ ಸೃಷ್ಟಿಯಾಗಲು ಕಾರಣವೇನು?

ಸರಕು ಮತ್ತು ಸೇವೆಯ ಮೇಲಿನ ಬೇಡಿಕೆ ಕುಸಿಯುತ್ತಾ ಹೋಗುವುದು ಮುಖ್ಯ ಕಾರಣ ಇದನ್ನು ಡಿಫ್ಲೇಶನ್ ಎನ್ನುತ್ತಾರೆ. ತನ್ಮೂಲಕ ಹಣ ಕೂಡ ತನ್ನ ಮೌಲ್ಯ ಕಳೆದುಕೊಳ್ಳುವುದು. ಹೀಗೆ ಕುಸಿದ ವಿಶ್ವಾಸ, ಬೇಡಿಕೆಯನ್ನ ಮತ್ತೆ ಊರ್ಜಿತಗೊಳಿಸಲು ನೆಗೆಟಿವ್ ಇಂಟರೆಸ್ಟ್ ರೇಟ್ ಸೆಂಟ್ರಲ್ ಬ್ಯಾಂಕ್ ಜಾರಿಗೆ ತರುತ್ತದೆ. ಈ ನೆಗೆಟಿವ್ ಇಂಟರೆಸ್ಟ್ ರೇಟ್  ಹೂಡಿಕೆ ಮಾಡುವರಿಗೆ ಮತ್ತು ಇತರ ಬ್ಯಾಂಕುಗಳಿಗೆ ಮಾತ್ರ ಅನ್ವಯವಾಗುತ್ತಿದೆ. ಜನ ಸಾಮಾನ್ಯ ಮಾಡುವ ಸಾಲದ ಮೇಲಿನ ಬಡ್ಡಿ ಇನ್ನೂ ಪಾಸಿಟಿವ್ ಇದೆ. ಆದರೆ ದರ ಕುಸಿದಿದೆ.

ಇಂತಹ ಸಮಯದಲ್ಲಿ ಹೂಡಿಕೆದಾರ ನಿಧಾನಿಸಬೇಕು. ಎಮರ್ಜಿಂಗ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ಸಧ್ಯಕ್ಕೆ ಇರುವ ಉತ್ತಮ ಆಯ್ಕೆ.

ಮುಂದಿನ ಒಂದು ದಶಕ ಜಗತ್ತು ಕಂಡರಿಯದ ಬದಲಾವಣೆ ಕಾಣಲಿದೆ. ವಿತ್ತ ಜಗತ್ತಿನ ನಿತ್ಯ ಬದಲಾಗುವ ನೀತಿ ನಿಯಮಗಳ ಅರಿವು ನಮ್ಮನ್ನ ಬದಲಾವಣೆಗೆ ಬೇಗ ಹೊಂದಿಕೊಳ್ಳಲು ತಯಾರು ಮಾಡುತ್ತದೆ. ಹೀಗಾಗಿ ವಿತ್ತ ಜಗತ್ತಿನ ಪ್ರಮುಖ ಘಟನೆಗಳ ಮೇಲಿರಲಿ ನಿಮ್ಮ ಚಿತ್ತ !

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply