ಡಿಸೆಂಬರ್ 30ರ ನಂತರ ಭ್ರಷ್ಟ ಬ್ಯಾಂಕು ಅಧಿಕಾರಿಗಳಿಗೆ ಕಾದಿದೆಯಾ ಹಬ್ಬ?

ಡಿಜಿಟಲ್ ಕನ್ನಡ ಟೀಮ್:

ಡಿಸೆಂಬರ್ 30 ಕ್ಕೆ ನೋಟು ಅಮಾನ್ಯ ನಿರ್ಧಾರಕ್ಕೆ ಸರ್ಕಾರ ತೆಗೆದುಕೊಂಡ 50 ದಿನಗಳ ಗಡವು ಮುಕ್ತಾಯವಾಗಲಿದೆ. ಈ ಅವಧಿ ಮುಕ್ತಾಯವಾದ ನಂತರ ಅಕ್ರಮ ನೋಟು ಬದಲಾವಣೆ ದಂಧೆಗೆ ಸಾಥ್ ನೀಡಿರುವ ಬ್ಯಾಂಕು ಅಧಿಕಾರಿಗಳಿಗೆ ಕಾದಿದೆ ಹಬ್ಬ!

ಕಾರಣ, ನವೆಂಬರ್ 8ರ ನಂತರ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆ ಪೈಕಿ ಈವರೆಗೂ 500ಕ್ಕೂ ಹೆಚ್ಚು ಬ್ಯಾಂಕುಗಳಲ್ಲಿ ಸರ್ಕಾರ ಕುಟುಕು ಕಾರ್ಯಾಚರಣೆ ಮಾಡಿ ಯಾರೆಲ್ಲಾ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ಪಟ್ಟಿ ಮಾಡಿಕೊಳ್ಳುತ್ತಿದೆ ಎಂಬುದು ಗಮನಾರ್ಹ ಅಂಶ.

ನೋಟು ಅಮಾನ್ಯ ನಿರ್ಧಾರದ ನಂತರ ಕಪ್ಪುಕುಳಗಳೆಲ್ಲಾ ಅಕ್ರಮವಾಗಿ ನಗದು ಬದಲಾವಣೆ ದಂಧೆಯಲ್ಲಿ ತೊಡಗಿಕೊಂಡಿವೆ. ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ತೆರಿಗೆ ಅಧಿಕಾರಿಗಳು ನಡೆಸುತ್ತಿರುವ ದಾಳಿಯಲ್ಲಿ ಈ ದಂಧೆ ಎಷ್ಟರ ಮಟ್ಟಿಗೆ ಹಬ್ಬಿದೆ ಎಂಬುದು ಗೊತ್ತಾಗುತ್ತದೆ. ಕೋಟಿ ಕೋಟಿ ಮೌಲ್ಯದ ಹೊಸ ನೋಟುಗಳು ಅದಾಗಲೇ ಕಾಳಧನಿಕರ ತಿಜೋರಿ ಸೇರಿಕೊಂಡಿವೆ. ಬ್ಯಾಂಕುಗಳ ಸಾಥ್ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಹೊಸ ನೋಟುಗಳ ರೂಪದಲ್ಲಿ ಕಪ್ಪು ಹಣವನ್ನು ಹೊಂದಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರ ಡಿಸೆಂಬರ್ 30ರ ನಂತರ ಸರ್ಕಾರ ಬ್ಯಾಂಕುಗಳ ಕಾರ್ಯವನ್ನು ಪರಿಶೀಲಿಸಲಿದೆ.

ಎಬಿಪಿ ನ್ಯೂಸ್ ಮಾಡಿರುವ ವರದಿ ಪ್ರಕಾರ, ಈಗಾಗಲೇ ಕೇಂದ್ರ ಸರ್ಕಾರ 500ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳ ಮೇಲೆ ಕುಟುಕು ಕಾರ್ಯಾಚರಣೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಾಚರಣೆಗಳ ವಿಡಿಯೋಗಳನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗಿದೆ. ಒಟ್ಟು 400ಕ್ಕೂ ಹೆಚ್ಚು ಕುಟುಕು ಕಾರ್ಯಾಚರಣೆಯ ಸಿಡಿಗಳು ಹಣಕಾಸು ಇಲಾಖೆಗೆ ರವಾನೆಯಾಗಿವೆ. ಈ ಸಿಡಿಯಲ್ಲಿ ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು, ಪ್ರಭಾವಿ ವ್ಯಕ್ತಿಗಳು ಹೇಗೆ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಬ್ಯಾಂಕಿನ ಹೊರಗೆ ಜನ ಕ್ಯೂನಲ್ಲಿ ನಿಂತಿದ್ದರೂ ಬ್ಯಾಂಕಿನ ಒಳಗೆ ಪ್ರಭಾವಿ ವ್ಯಕ್ತಿಗಳಿಗೆ ಅಧಿಕಾರಿಗಳು ಹೇಗೆ ಕಂತೆ ಕಂತೆ ನೋಟನ್ನು ಅಕ್ರಮವಾಗಿ ನೀಡಿದ್ದಾರೆ ಎಂಬುದು ಈ ಸಿಡಿಯಲ್ಲಿ ದಾಖಲಾಗಿವೆ.

ಇಷ್ಟೆಲ್ಲಾ ದಾಖಲೆ ಇದ್ದರೂ ಸರ್ಕಾರ ಇನ್ನು ಏಕೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಸದ್ಯದ ಮಟ್ಟಿಗೆ ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೆಟು ಹಾಕುತ್ತಿರುವುದು ಸರ್ಕಾರದ ಕಾರ್ಯತಂತ್ರದ ಒಂದು ಭಾಗ. ಪ್ರಸ್ತುತ ದೇಶದಲ್ಲಿನ ನಗದು ಅಭಾವ ಪರಿಸ್ಥಿತಿ ಸುಧಾರಿಸಬೇಕು, ಬ್ಯಾಂಕುಗಳ ಕಾರ್ಯಕ್ಕೆ ಅಡ್ಡಿಯಾಗಬಾರದು. ಡಿಸೆಂಬರ್ 30ರ ಒಳಗೆ ಆಗಲಿರುವ ಎಲ್ಲ ಹಣ ಠೇವಣಿ ಕಾರ್ಯಗಳು ಸುಗಮವಾಗಿ ಸಾಗಲಿ. ಅಲ್ಲಿಯವರೆಗೂ ಎಲ್ಲರ ಮೇಲೂ ಕಣ್ಣಿಡೋಣ, ಗೊಂದಲದ ಪರಿಸ್ಥಿತಿ ತಿಳಿಗೊಂಡ ಮೇಲೆ ಅಕ್ರಮದಲ್ಲಿ ಭಾಗಿಯಾಗಿರುವ ಬ್ಯಾಂಕು ಅಧಿಕಾರಿಗಳು ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳೋಣ ಎಂಬುದು ಸರ್ಕಾರ ನಿರ್ಧಾರ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂದು ವಾರದಿಂದ ತಾವು ನೋಟು ಅಮಾನ್ಯ ವಿಷಯದ ಬಗ್ಗೆ ಮಾತನಾಡಿದ ಎಲ್ಲ ವೇದಿಕೆಗಳಲ್ಲೂ, ಈ ಅವಧಿಯಲ್ಲಿ ಅಕ್ರಮವಾಗಿ ನೋಟು ಬದಲಾವಣೆ ಮಾಡುವ ಕಾರ್ಯದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪದೇ ಪದೇ ಸಾರುತ್ತಲೇ ಬಂದಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಗುಜರಾತಿನಲ್ಲಿ ಮಾತನಾಡಿದಾಗಲು ಮೋದಿ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಆ ವೇದಿಕೆಯಲ್ಲಿ ಮೋದಿ ಅವರು ಅಕ್ರಮ ನೋಟು ಬದಲಾವಣೆ ದಂಧೆ ಕುರಿತಂತೆ ಹೇಳಿದಿಷ್ಟು…

‘ನೋಟು ಅಮಾನ್ಯ ನಿರ್ಧಾರ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ತೆಗೆದುಕೊಂಡ ದಿಟ್ಟ ಹೆಜ್ಜೆ. ಹೊಸ ನೋಟುಗಳ ಕಂತೆ ಕಂತೆಯನ್ನು ಅಕ್ರಮವಾಗಿ ಇಟ್ಟುಕೊಂಡಿರುವ ಭ್ರಷ್ಟರು, ಅಕ್ರಮ ನೋಟು ಬದಲಾವಣೆಯಲ್ಲಿ ಭಾಗಿಯಾದ ಬ್ಯಾಂಕು ಅಧಿಕಾರಿಗಳು ಜೈಲಿಗೆ ಹೋಗಲಿದ್ದಾರೆ. ಇವರೆಲ್ಲರು ಮೋದಿ ಕೇವಲ ಹಳೆ ನೋಟುಗಳನ್ನು ರದ್ದು ಮಾಡಿದ್ದಾರೆ ಎಂದುಕೊಂಡಿದ್ದಾರೆ. ಆದರೆ ಮೋದಿ ಬ್ಯಾಂಕುಗಳ ಗೇಟಿಗೆ ಕ್ಯಾಮೆರಾ ಅಳವಡಿಸಿ ಬ್ಯಾಂಕಿನ ಮೇಲೆ ಕಣ್ಣಿಟ್ಟಿರುವುದನ್ನು ಇವರು ಗಮನಿಸಿಯೇ ಇಲ್ಲ. ಈ ಅಕ್ರಮದಲ್ಲಿ ಭಾಗಿಯಾದವರನ್ನು ಸರ್ಕಾರ ಬಿಡುವುದಿಲ್ಲ. ಎಲ್ಲರೂ ಜೈಲಿಗೆ ಹೋಗಲಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾಗಲಿ ನವೆಂಬರ್ 8ರ ನಂತರ ಯಾರೆಲ್ಲಾ ಈ ಅಕ್ರಮ ಕೆಲಸದಲ್ಲಿ ಭಾಗಿಯಾಗಿದ್ದಾರೊ ಅವರನ್ನು ಸುಮ್ಮನೆ ಬಿಡುವುದಿಲ್ಲ. ದೇಶದ 125 ಕೋಟಿ ಜನರ ಭ್ರಷ್ಟಾಚಾರ ಮುಕ್ತ ಭಾರತದ ಕನಸಿಗೆ ಅಡ್ಡಿಯಾಗಿ ನಿಂತಿರುವವರ ವಿರುದ್ಧ ಕಠಿಣ ಕ್ರಮ ಖಂಡಿತವಾಗಿಯೂ ಜರುಗಲಿದೆ. ಈ ಬಗ್ಗೆ ದೇಶದ ಜನರಿಗೆ ಅಭಯ ನೀಡುತ್ತೇನೆ.’

Leave a Reply