ಬದಲಾದ ಐಎಸ್ಐ ಮುಖ್ಯಸ್ಥ, ಪಾಕ್ ಸೇನಾ ಮುಖ್ಯಸ್ಥರಿಗೆ ಬಂತೆ ಶಾಂತಿಯ ಉತ್ಸಾಹ

ಡಿಜಿಟಲ್ ಕನ್ನಡ ಟೀಮ್:

ದಿಢೀರ್ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ದೇಶದ ಅತ್ಯುನ್ನತ ಗೂಢಚರ್ಯ ಸಂಸ್ಥೆ ಐಎಸ್ಐ ಮುಖ್ಯಸ್ಥನನ್ನು ಕಿತ್ತುಹಾಕಿದ್ದಾರೆ.

ಕಳೆದ ವಾರವಷ್ಟೇ ರಾಹೀಲ್ ಶರೀಫ್ ಅವರಿಂದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಧಿಕಾರವನ್ನು ವಹಿಸಿಕೊಂಡ ಖಮರ್ ಪಾಕಿಸ್ತಾನ ಸೇನೆಯ ಉನ್ನತ ಮಟ್ಟದ ಅಧಿಕಾರ ವಲಯದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಅಲ್ಲದೆ ತಮಗೆ ಬೇಕಾದವರನ್ನು ಉನ್ನತ ಸ್ಥಾನದಲ್ಲಿ ಕೂರಿಸುವ ಪ್ರಯತ್ನವೂ ಇದಾಗಿದೆ. ಅದರ ಭಾಗವಾಗಿಯೇ ಐಎಸ್ಐ ಸಂಸ್ಥೆಗೆ ಲೆಫ್ಟಿನೆಂಟ್ ಜೆನರಲ್ ರಿಜ್ವಾನ್ ಅಖ್ತರ್ ಅವರ ಬದಲಿಗೆ ಲೆಫ್ಟಿನೆಂಟ್ ಜೆನರಲ್ ನವೀದ್ ಮುಖ್ತರ್ ರನ್ನು ಪ್ರಧಾನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಇದ್ದಕ್ಕಿದ್ದಂತೆ ಪಾಕಿಸ್ತಾನ ಸೇನೆಯಲ್ಲಿ ಇಂತಹ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾದರೂ ಏನು ಎಂದು ನೋಡುವುದಾದರೆ ನಮಗೆ ಸಿಗೋದು ಜಾಗತಿಕ ಮಟ್ಟದಲ್ಲಿ ನಿರ್ಲಕ್ಷಕ್ಕೆ ಒಳಗಾಗುವ ಭೀತಿ. ಹೌದು, ಐಎಸ್ಐ ಹಾಗೂ ಸೇನೆಯ ಉನ್ನತ ಮಟ್ಟದಲ್ಲಿ ಬದಲಾವಣೆ ತರುವ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕುವ ಕ್ರಮ ಪಾಕಿಸ್ತಾನ ಕೈಗೊಳ್ಳುತ್ತಿದೆ ಎಂಬುದು ಜಾಗತಿಕ ಮಟ್ಟದಲ್ಲಿ ಬಿಂಬಿತವಾಗಬೇಕಿದೆ.

ಪಾಕ್ ಸೇನೆ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಆ ಪೈಕಿ ಹೊಸದಾಗಿ ಲೆಫ್ಟಿನೆಂಟ್ ಜೆನರಲ್ ಆಗಿ ಬಡ್ತಿ ಪಡೆದಿರುವ ಬಿಲಾಲ್ ಅಕ್ಬರ್ ಅವರನ್ನು ಸಿಬ್ಬಂದಿ ಮುಖ್ಯಸ್ಥರನ್ನಾಗಿ, ಸದ್ಯ ಎನ್ ಡಿ ಯು ಮುಖಯಸ್ಥರಾಗಿರುವ ನಜೀರ್ ಬಟ್ ರನ್ನು ಪೇಶಾವರದ ಕಾರ್ಪ್ ಕಮಾಂಡರ್ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಎಲ್ಲ ರಾಷ್ಟ್ರಗಳು ಉಗ್ರರಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನವನ್ನು ದೂರವಿಡಲು ಮುಂದಾಗಿದ್ದು ಹಾಗೂ ಅಮೆರಿಕದಂತಹ ಪ್ರಬಲ ರಾಷ್ಟ್ರಗಳು ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡಲೇ ಬೇಕು ಎಂಬ ಎಚ್ಚರಿಕೆ ರವಾನಿಸಿದ ನಂತರ ತನ್ನ ವಿರೋಧಿ ಅಲೆಯನ್ನು ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಪಾಕಿಸ್ತಾನಕ್ಕೆ ಇದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳುವಿಕೆಯೂ ಪಾಕಿಸ್ತಾನಕ್ಕೆ ಕಷ್ಟ ಎನಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಈ ವಿದ್ಯಮಾನಗಳು ನಡೆಯುತ್ತಿವೆ.

ಪಾಕಿಸ್ತಾನ ಸೇನಾ ಮುಖ್ಯಸ್ಥರ ಈ ಪ್ರಯತ್ನದಿಂದ ಭಯೋತ್ಪಾದನೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply