ನಾಲ್ಕನೇ ಟೆಸ್ಟ್- ಆಂಗ್ಲರ ವಿರುದ್ಧ ಇನಿಂಗ್ಸ್ ಜಯ, ಸರಣಿ ಗೆದ್ದ ಕೊಹ್ಲಿ ಪಡೆ

ಡಿಜಿಟಲ್ ಕನ್ನಡ ಟೀಮ್:

ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಆರ್.ಅಶ್ವಿನ್ ಅವರ ಸ್ಪಿನ್ ಮೋಡಿ, ಜಯಂತ್ ಯಾದವ್ ಅವರ ಅಮೋಘ ಆಟದೊಂದಿಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 36 ರನ್ ಗಳ ಜಯ ಸಂಪಾದಿಸಿತು. ಅದರೊಂದಿಗೆ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದ ಮುನ್ನಡೆಯೊಂದಿಗೆ ಸರಣಿ ಗೆದ್ದುಕೊಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 400 ರನ್ ಗಳ ಗೌರವ ಮೊತ್ತ ಪೇರಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಭಾರತದ ಬ್ಯಾಟಿಂಗ್ ವಿಭಾಗವನ್ನು ನಿಯಂತ್ರಿಸಲು ಆಂಗ್ಲ ಬೌಲರ್ ಗಳ ಕೈಯಲ್ಲಿ ಸಾಧ್ಯವಾಗಲೇ ಇಲ್ಲ. ಆತಿಥೇಯರು ಮೊದಲ ಇನಿಂಗ್ಸ್ ನಲ್ಲಿ ಭರ್ಜರಿ 631 ರನ್ ಪೇರಿಸಿ ಪ್ರವಾಸಿ ತಂಡದ ವಿರುದ್ಧ 231 ರನ್ ಗಳ ಅತ್ಯುತ್ತಮ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ ನಲ್ಲಿ ಭಾರತ ನೀಡಿದ ಗುರುತರ ಸವಾಲನ್ನು ಮೆಟ್ಟಿನಿಂತು ಭಾರತಕ್ಕೆ ಗುರಿ ನೀಡಲು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಸಾಧ್ಯವಾಗಲಿಲ್ಲ. ಪರಿಣಾಮ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 195 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತದ ಮುಂದೆ ಮಂಡಿಯೂರಿ ನಿಂತಿತು.

ಈ ಪಂದ್ಯದಲ್ಲಿ ಆಂಗ್ಲರ ಪರ ಪದಾರ್ಪಣೆ ಮಾಡಿದ ಜೆನ್ನಿಂಗ್ಸ್ ಮೊದಲ ಇನಿಂಗ್ಸ್ ನಲ್ಲಿ ಶತಕ (112) ದಾಖಲಿಸಿದ್ದು, ಬಿಟ್ಟರೆ ಪ್ರವಾಸಿ ತಂಡದ ಪರವಾಗಿ ಯಾವುದೇ ಆಕರ್ಷಕ ಪ್ರದರ್ಶನ ಹೊರಬರಲಿಲ್ಲ. ಅದೇ ಭಾರತ ತಂಡದ ಆಟದತ್ತ ಕಣ್ಣಾಡಿಸಿದರೆ ನಮಗೆ ಕಾಣುವುದು ಮೂವರ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳು…

ಆರಂಭಿಕ ಮುರಳಿ ವಿಜಯ್ ಶತಕ (136) ದಾಖಲಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿ ಕೊಟ್ಟರಾದರೂ ತಂಡದ ಮುಂದೆ ಸಾಗಬೇಕಾದ ಹಾದಿ ದೊಡ್ಡದಾಗಿತ್ತು. ಈ ಹಂತದಲ್ಲಿ ಕ್ರೀಸ್ ನ ಒಂದು ಬದಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ್ದು ನಾಯಕ ವಿರಾಟ್ ಕೊಹ್ಲಿ. ಆಕರ್ಷಕ ಬ್ಯಾಟಿಂಗ್ ಮೂಲಕ ದ್ವಿಶತಕ (235) ದಾಖಲಿಸಿದ ಕೊಹ್ಲಿ, ಸತತ ಮೂರು ಸರಣಿಗಳಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದರು. ಅಲ್ಲದೆ ಭಾರತದ ನಾಯಕನಾಗಿ ಗರಿಷ್ಠ ವೈಯಕ್ತಿಕ ಮೊತ್ತ ಬಾರಿಸಿದ ಹಾಗೂ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ದ್ವಿಶತಕ ಗಳಿಸಿದ ದಾಖಲೆಯನ್ನೂ ಬರೆದರು.

ಕೊಹ್ಲಿಯ ಆಕರ್ಷಕ ಬ್ಯಾಟಿಂಗ್ ಜತಗೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ಯುವ ಪ್ರತಿಭೆ ಜಯಂತ್ ಯಾದವ್. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಸಮಯೋಚಿತ ಬ್ಯಾಟಿಂಗ್ ಮಾಡಿ ಶತಕ (104) ರನ್ ದಾಖಲಿಸಿ, ಭಾರತದ ಪರ 9ನೇ ಕ್ರಮಾಂಕದಲ್ಲಿ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದರು. ಇನ್ನು ಪಂದ್ಯವನ್ನು ಡ್ರಾ ಮೂಲಕ ಪಾರು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ಆಂಗ್ಲರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಮಿಸ್ಟರಿ ಸ್ಪಿನ್ನರ್ ಆರ್.ಅಶ್ವಿನ್. ಆಂಗ್ಲರ ಮೊದಲ ಇನಿಂಗ್ಸ್ ನಲ್ಲಿ 6 ಹಾಗೂ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಬಾಚಿದ ಅಶ್ವಿನ್ ಪ್ರವಾಸಿ ಬ್ಯಾಟ್ಸ್ ಮನ್ ಗಳನ್ನು ಎಡಬಿಡದೆ ಕಾಡಿದರು. ಎರಡೂ ಇನಿಂಗ್ಸ್ ಗಳಲ್ಲಿ 5 ಕ್ಕೂ ಹೆಚ್ಚು ವಿಕೆಟ್ ಪಡೆದ ಅಶ್ವಿನ್ ತಮ್ಮ ವೃತ್ತಿ ಜೀವನದಲ್ಲಿ 24ನೇ ಬಾರಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಆ ಮೂಲಕ ಕಪಿಲ್ ದೇವ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

ಇನ್ನು ಈ ಸೋಲಿನಿಂದ ಅಲಾಸ್ಟೇರ್ ಕುಕ್, ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ಆಂಗ್ಲ ತಂಡದ ನಾಯಕ ಎಂಬ ಅಪಕೀರ್ತಿಗೂ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್ 400

ಜೆನ್ನಿಂಗ್ಸ್ 112, ಬಟ್ಲರ್ 76, ಅಲಿ 50 (ಅಶ್ವಿನ್ 112ಕ್ಕೆ 6, ಜಡೇಜಾ 109ಕ್ಕೆ 4)

ಭಾರತ ಮೊದಲ ಇನಿಂಗ್ಸ್ 631

ವಿರಾಟ್ ಕೊಹ್ಲಿ 235, ವಿಜಯ್ 136, ಜಯಂತ್ 104 (ರಶೀದ್ 192ಕ್ಕೆ 4, ರೂಟ್ 31ಕ್ಕೆ 2)

ಇಂಗ್ಲೆಂಡ್ ಎರಡನೇ ಇನಿಂಗ್ಸ್ 195

ರೂಟ್ 77, ಬೇರ್ ಸ್ಟೋ 51, ಕುಕ್ 18 (ಅಶ್ವಿನ್ 55ಕ್ಕೆ 6, ಜಡೇಜಾ 63ಕ್ಕೆ 2)

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

Leave a Reply