ಎನ್ಡಿಆರ್’ಎಫ್, ಹವಾಮಾನ ಇಲಾಖೆಗೆ ಧನ್ಯವಾದ ಹೇಳುತ್ತಲೇ ಚೆನ್ನೈ-ಬೆಂಗಳೂರನ್ನು ಬಚ್ಚಲಮನೆಯನ್ನಾಗಿಸಿದ ವಾರ್ಧಾ ಬಗ್ಗೆ ಒಂದಿಷ್ಟು ಮಾಹಿತಿ

ಡಿಜಿಟಲ್ ಕನ್ನಡ ಟೀಮ್:

ಕಳೆದ ಡಿಸೆಂಬರಿನಲ್ಲೂ ಚೆನ್ನೈಗೆ ಪ್ರವಾಹ ಅಪ್ಪಳಿಸಿತ್ತು. ಈ ಬಾರಿ ವಾರ್ಧಾ ಚಂಡಮಾರುತ.

ಪ್ರಕೃತಿ ವಿಕೋಪದೆದುರು ಯಾರೇನೂ ಮಾಡಲಾಗದು. ಆದರೆ ಈ ಬಾರಿಯ ತಯಾರಿ ಮಾತ್ರ ಕರಾರುವಾಕ್ ಆಗಿತ್ತು. ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದಂತೆ ಮೃತರ ಸಂಖ್ಯೆ 7. ಕೆಲವು ಇಲಾಖೆಗಳು 10 ಎಂದು ಹೇಳುತ್ತಿವೆ. ಸಾವು ನತದೃಷ್ಟವೇ ಆದರೂ ಚಂಡಮಾರುತದ ಪ್ರತಾಪಕ್ಕೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲೇ ಸಾವು-ನೋವು ತಡೆಗಟ್ಟಲಾಗಿದೆ.

ಚಂಡಮಾರುತದ ಬಗ್ಗೆ ಮೊದಲೇ ಎಚ್ಚರಿಕೆ ಮೊಳಗಿಸಿದ್ದ ಹವಾಮಾನ ಇಲಾಖೆ ಹಾಗೂ ಅದಕ್ಕೆ ತಕ್ಕಂತೆ ಅಖಾಡಕ್ಕೆ ಇಳಿದು ತೆರವು ಕಾರ್ಯಾಚರಣೆ ನಡೆಸಿದ ಎನ್ಡಿಆರ್’ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ಪ್ರಶಂಸೆಗೆ ಅರ್ಹ. ವಿಪತ್ತಿಗೊಳಗಾಗುವ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಲ್ಲಿನ ಜನರನ್ನು ಸ್ಥಳಾಂತರಿಸುವುದಷ್ಟೇ ಅಲ್ಲ, ಸ್ಥಳಾಂತರವಾದ ಜನರಿಗೆ ತಾತ್ಕಾಲಿಕ ವಸತಿ, ಅಗತ್ಯ ಆಹಾರಗಳನ್ನು ಒದಗಿಸಬೇಕಾಗುತ್ತದೆ. ಇವೆಲ್ಲವನ್ನೂ ಈ ಬಾರಿ ಉತ್ತಮವಾಗಿ ನಿರ್ವಹಿಸಿದಂತಿದೆ ಸ್ಥಳೀಯಾಡಳಿತ. 1996ರ ನಂತರ ತಮಿಳುನಾಡು ಎದುರಿಸುತ್ತಿರುವ ಅತಿ ಘೋರ ಚಂಡಮಾರುತವಿದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಹಿಂದಿನ ಬಾರಿ ಚೆನ್ನೈನಲ್ಲಿ ಅತಿವೃಷ್ಟಿಯಾಗಿದ್ದಾಗ ಮಾನವ ಸಂಕಷ್ಟವೇ ಪ್ರಮುಖವಾಗಿತ್ತು. ಆ ದುಃಖ ಚಿತ್ರಣ ನಮಗೆಲ್ಲ ಬೇರೆಡೆ ದೃಷ್ಟಿ ಹಾಯಿಸುವುದಕ್ಕೆ ಜಾಗವನ್ನೇ ಕೊಟ್ಟಿರಲಿಲ್ಲ. ಆದರೆ, ಈ ಬಾರಿಯ ಚಂಡಮಾರುತ ತಯಾರಿಯಲ್ಲಿ ಮಾನವ ಸಾವಿನ ಕತೆ ಮುನ್ನೆಲೆಯಲ್ಲಿ ಇಲ್ಲವಾಗಿರುವುದರಿಂದ ಬೇರೆ ಹಾನಿಗಳು ಕಣ್ಣಿಗೆ ಕಟ್ಟುವಂತಿವೆ. ಸುಮಾರು 4000 ಮರಗಳು ಬುಡಮೇಲಾಗಿವೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿ ವಿದ್ಯುತ್ ಕಂಬಗಳು, ಲೈನ್ ಸೇರಿದಂತೆ ಸಂಚಾರ ಮಾರ್ಗವನ್ನೆಲ್ಲ ಅಸ್ತವ್ಯಸ್ತವಾಗಿಸಿದೆ. ಮರದಡಿಗೆ ಸಿಕ್ಕ ಕಾರು-ವಾಹನಗಳ ದೃಶ್ಯ ವಾರ್ಧಾ ನೀಡಿಹೋಗಿರುವ ಆರ್ಥಿಕ ಪ್ರಹಾರಕ್ಕೆ ಸಾಕ್ಷಿ ಎಂಬಂತಿವೆ. ವ್ಯಾಪಾರ ಒಕ್ಕೂಟ ಅಸ್ಸೊಚಾಂ ಹೇಳಿರುವ ಪ್ರಕಾರ ವಾರ್ಧಾದಿಂದ ಕೈಗಾರಿಕೆಗಳಿಗೆ ಆಗಿರುವ ನಷ್ಟ 1 ಬಿಲಿಯನ್ ಡಾಲರ್.

  • ವಾರ್ಧಾ ಪರಿಣಾಮದಿಂದ ಬೆಂಗಳೂರಿನಲ್ಲಿ ಮಳೆ ಮತ್ತು ಮೋಡದ ವಾತಾವರಣ ಸಂಪೂರ್ಣ ತಗ್ಗುವುದಕ್ಕೆ ಗುರುವಾರದವರೆಗೂ ಕಾಯಬೇಕಾಗಬಹುದೆಂಬುದು ಒಂದು ಅಂದಾಜು.
  • ಮಾರುತವು ಗೋವಾದ ಕಡೆ ಪ್ರಯಾಣ ಬೆಳೆಸಿದ್ದು, ನಿಧಾನವಾಗಿ ಕ್ಷೀಣಿಸಲಿದೆ.
  • ಆಂಧ್ರ ಪ್ರದೇಶದ ದಕ್ಷಿಣ ಕರಾವಳಿ ಹಾಗೂ ತಮಿಳುನಾಡಿನ ಉತ್ತರ ಕರಾವಳಿಗಳಲ್ಲಿ ಮಂಗಳವಾರ ಜೋರು ಮಳೆಯಾಗಿದೆ.

ಚೆನ್ನೈ ವಿಮಾನ ನಿಲ್ದಾಣವು ಮಂಗಳವಾರ ಕಾರ್ಯಾರಂಭ ಮಾಡಿದೆ. ಬೆಳಗ್ಗೆ 10.30ರಿಂದ ಚೆನ್ನೈ-ಬೆಂಗಳೂರು ವಿಮಾನಗಳೆಲ್ಲ ಸುಸೂತ್ರವಾಗಿ ಸಂಚರಿಸುತ್ತಿವೆ.

Leave a Reply