ಡಿಜಿಟಲ್ ಕನ್ನಡಕ್ಕೆ ವರ್ಷ ತುಂಬಿರುವ ಈ ಹೊತ್ತಿನಲ್ಲಿ ಒಂದು ವಿನಮ್ರ ನೆನಕೆ, ಅರಿಕೆ

ಡಿಜಿಟಲ್ ಕನ್ನಡ ಟೀಮ್:

ಒಂದು ವರ್ಷದ ಹಿಂದೆ ಇದೇ ದಿನಾಂಕದಂದು ಡಿಜಿಟಲ್ ಕನ್ನಡ ಲೋಕಾರ್ಪಣೆಯಾಗಿತ್ತು.

ಅಂದು ನೀವೆಲ್ಲ ಹರಸಿದ್ದಿರಿ. ಹೊಸ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂಬ ಹಾರೈಕೆ ನಡುವೆಯೂ ಸಹಜವಾಗಿ ಅನುಮಾನಗಳಿದ್ದವು. ಇಷ್ಟೆಲ್ಲ ಮಾಹಿತಿ ಅಬ್ಬರದಲ್ಲಿ ಹೊಸತಾಗಿ ಏನು ಕೊಡಲು ಸಾಧ್ಯ? ಚಿಕ್ಕದೊಂದು ತಂಡ ಅದೆಷ್ಟು ಸುದ್ದಿ ತಾನೇ ಹೆಕ್ಕೀತು? ಬ್ರೇಕಿಂಗ್ ನ್ಯೂಸ್ ಮಾಡುವುದಕ್ಕೆ ಇಷ್ಟೆಲ್ಲ ಮಾಧ್ಯಮಗಳು ಬಹುಕೋಟಿ ಬಂಡವಾಳದೊಂದಿಗೆ ನಿಂತಿರುವಾಗ ಇದೇನಿದು ವೆಬ್ಸೈಟ್? ಇತ್ಯಾದಿ… ಇತ್ಯಾದಿ.

ನಾವು ಸುದ್ದಿಸ್ಫೋಟಕ್ಕಾಗಿ ಇರುವವರಲ್ಲ. ಅದು ನಮ್ಮ ಉದ್ದೇಶವೂ ಅಲ್ಲ. ಸ್ಫೋಟವಾಗಿ ಬಿದ್ದಿರುವ ಅಸಂಖ್ಯ ಸುದ್ದಿಗಳ ನಡುವೆ ಆ ದಿನಕ್ಕೆ ಪ್ರಸ್ತುತವೆನಿಸುವ ಕೆಲವು ವಿದ್ಯಮಾನಗಳನ್ನು ಹೆಕ್ಕಿ, ಅದರ ಆಯಾಮಗಳನ್ನು ಪರಿಚಯಿಸುವುದು ನಮ್ಮ ಆದ್ಯತೆ ಎಂಬುದು ಮೊದಲಿಂದಲೂ ಪಕ್ಕಾ ಆಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಜಗತ್ತನ್ನು ಕನ್ನಡದ ಕಣ್ಣುಗಳಿಂದ ನೋಡುವ ಬೆರಗೊಂದರ ಬೆನ್ನು ಹತ್ತಿದೆವಷ್ಟೆ. ಕನ್ನಡದಲ್ಲಿ ಜಾಲತಾಣವೆಂದರೆ ಒಂದೋ ಸಾಹಿತ್ಯಿಕ ಗಾಂಭೀರ್ಯ, ಅಕಾಡೆಮಿಕ್ ಚರ್ಚೆ ಹೊದ್ದು ‘ಓದಿಕೊಂಡ ತಿಳಿವಳಿಕಸ್ಥ’ ವರ್ಗವನ್ನು ಮುಟ್ಟಬೇಕು, ಇಲ್ಲವೇ, ಸನ್ನಿ ಲಿಯೋನ್ ಒಳ ಉಡುಪಿನ ಬೆಲೆ ಎಷ್ಟು ಗೊತ್ತೇ ಎಂದೋ, ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ನಡುರಸ್ತೆಯಲ್ಲಿ ಥಳಿಸಿದ ಹೆಂಗಸು ಎನ್ನುವ ಜಾಯಮಾನದ್ದೇನೋ ಕ್ಲಿಕ್ ಗೆ ಅರ್ಹ ಸುದ್ದಿ ಸುತ್ತುವ ಇನ್ನೊಂದು ತುದಿಯಲ್ಲಿರಬೇಕೆಂಬ ಅತಿಗಳಾಚೆ ಜಾಗ ಕಂಡುಕೊಳ್ಳುವ ಯತ್ನವೂ ಇದಾಗಿತ್ತು.

ಹಾಗೆಂದೇ ಡಿಜಿಟಲ್ ಕನ್ನಡದಲ್ಲಿ ಅಂಥ ವಿಶ್ಲೇಷಣೆಗಳೇ ಮಿನುಗಿವೆ ಹಾಗೂ ಓದುಗರನ್ನೂ ತಟ್ಟಿವೆ. ಜಾಗತಿಕ ರಾಜಕೀಯದ ಆಟಗಳು ಹೇಗೆಲ್ಲ ನಮ್ಮನ್ನು ಪ್ರಭಾವಿಸುತ್ತಿವೆ, ಹಣಕಾಸು ಲೆಕ್ಕಾಚಾರಗಳು ಹೊಸೆಯುವ ಸೂತ್ರಗಳೇನು, ನಮಗೆ ಅಷ್ಟೇನೂ ಸಂಗತವಲ್ಲ ಅಂತ ಉಪೇಕ್ಷಿಸಿಬಿಡುವ ಅಂತಾರಾಷ್ಟ್ರೀಯ ವಿದ್ಯಮಾನಗಳು ತಮ್ಮೊಳಗೆ ಇಟ್ಟುಕೊಂಡಿರುವ ಬೆರಗುಗಳೇನು, ಕರ್ನಾಟಕದ ರಾಜಕೀಯ ವಿದ್ಯಮಾನಗಳ ಒಡಲ ತುಮುಲಗಳೇನು…. ದಿನಂಪ್ರತಿ ಇಂಥದ್ದೇ ಸೀಳುನೋಟಗಳನ್ನು ಕೊಡುತ್ತ ಬಂದಿದೆ ಡಿಜಿಟಲ್ ಕನ್ನಡ. ಗಮನಿಸಬೇಕಾದ ಕಿರುಚಿತ್ರಗಳು, ವಿಜ್ಞಾನ-ತಂತ್ರಜ್ಞಾನಗಳ ಜಿಗಿತಗಳು, ಆಚರಿಸಬೇಕಾದ ಸಂಭ್ರಮ… ಇಂಥವೆಲ್ಲವನ್ನೂ ಹಂಚಲಾಗಿದೆ, ಕೊಂಡಿ ಬೆಸೆಯಲಾಗಿದೆ.

ಹೀಗೆ ವಿಷಯ ನಿರೂಪಣೆಯ ದೃಷ್ಟಿಯಿಂದ ಹೇಳುವುದಾದರೆ ನಮಗೆ ಖಂಡಿತ ಯಶಸ್ಸು ಸಿಕ್ಕಿದೆ. ಈ ಯಶಸ್ಸನ್ನು ನಾವು ನಮ್ಮ ನಿನ್ನೆಗಳೊಂದಿಗೆ ಹೋಲಿಸಿಕೊಂಡು ನಿರ್ಧಾರಕ್ಕೆ ಬಂದಿದ್ದೇವೆ ಹೊರತು ಬೇರೆಯವರೊಂದಿಗೆ ಅಲ್ಲ. ಹಿಟ್ಸ್, ಪೇಜ್ ವ್ಯೂ ಇತ್ಯಾದಿ ಮಾಪನಗಳ ಜತೆಜತೆಯಲ್ಲೇ ಓದುಗರ ನಂಬಿಕೆ ಗೆದ್ದ ಹೆಮ್ಮೆ ನಮ್ಮದು. ನಮ್ಮ ಪಾಲಿಗೆ ಖುಷಿಯೆಂದರೆ, ಪ್ರಗತಿ ಎಂದರೆ, ಪ್ರಾರಂಭದಲ್ಲಿ 48 ಸಾವಿರದಷ್ಟಿದ್ದ ಯೂನಿಕ್ ವಿಸಿಟರ್ ಸಂಖ್ಯೆ 1 ಲಕ್ಷ 80 ಸಾವಿರ, 1 ಲಕ್ಷ 96 ಸಾವಿರ ಅಂತೆಲ್ಲ ಜಿಗಿದಾಡುತ್ತಿರುವುದು. 1.90 ಲಕ್ಷದಷ್ಟಿದ್ದ ಪೇಜ್ ವ್ಯೂ 5 ಲಕ್ಷಕ್ಕೆ ನೆಗೆದಿರುವುದು. ನಿತ್ಯ ಸರಾಸರಿ 1.50 ಲಕ್ಷ ಹಿಟ್ಸ್ ಇರುವುದು.

ನಿಜ… ತಂತ್ರಜ್ಞಾನದ ದೃಷ್ಟಿಯಿಂದ ನಾವು ಸುಧಾರಿಸಿಕೊಳ್ಳುವುದು ಬಹಳಷ್ಟಿದೆ. ಈ ಬಗ್ಗೆ ಅದಾಗಲೇ ಓದುಗರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅವೆಲ್ಲವನ್ನೂ ಅನುಷ್ಠಾನ ಮಾಡುವ ಯತ್ನ ಜಾರಿಯಲ್ಲಿರುತ್ತದೆ. ದಿನದಿಂದ ದಿನಕ್ಕೆ ನಾವೂ ಹೊಸ ವಿಚಾರಗಳನ್ನು ಕಲಿಯುತ್ತಿದ್ದೇವೆ. ನಮ್ಮ ಮಿತಿಗಳು ಹಾಗೂ ಆ ಚೌಕಟ್ಟಿನಲ್ಲೇ ಸೃಷ್ಟಿಸಬಹುದಾದ ಸಾಧ್ಯತೆಗಳ ಅರಿವು ನಮಗಿದೆ. ಮಾಧ್ಯಮವನ್ನೇ ಬದಲಿಸಲು ಬಂದಿದ್ದೇವೆ, ಕ್ರಾಂತಿ ಮಾಡಿ ಬಿಸಾಕುತ್ತೇವೆ ಎಂಬ ಅಹಂಕಾರಗಳು ಮೊದಲೂ ಇರಲಿಲ್ಲ, ಈಗಲೂ ಇಲ್ಲ. ಕಲಿಕೆ ಮತ್ತು ಹೊಸನೋಟಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ನಿಮ್ಮೊಂದಿಗೆ ಅಂತರ್ಜಾಲ ವೇದಿಕೆಯಲ್ಲಿ ಬೆಸಗೊಂಡಿದ್ದೇವೆ. ಈವರೆಗಿನ ಪ್ರಯಾಣ ಮಧುರವಾಗಿದೆ, ಮುಂದುವರಿಯಲು ನಿಮ್ಮ ಸಹಕಾರವಿರಲೆಂಬ ವಿನಂತಿಯಷ್ಟೇ ನಮ್ಮದು.

ಈ ಯಾನದಲ್ಲಿ ನಮಗೆ ನೆರವಾಗುತ್ತಿರುವ ಹಿರಿಯ ಅಂಕಣಕಾರರು, ಬರಹಗಾರರು, ಜಾಹೀರಾತುದಾರರು ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ಓದುಗರಿಗೆ ಅಗ್ರ ನಮಸ್ಕಾರ.

3 COMMENTS

  1. its a nice website. i especially like your choice of articles and the inviting headlines. congratulations on turning one year. all the best.

Leave a Reply