ನಗರದಲ್ಲಿ ಅಕ್ರಮ ಸಕ್ರಮಕ್ಕೆ ಹೈಕೋರ್ಟ್ ಅಸ್ತು, ಅಕ್ರಮ ನೋಟು ಬದಲಾವಣೆ: ಆರ್ಬಿಐ ಅಧಿಕಾರಿ ಬಂಧನ, ಸಚಿವರ ರಾಸಲೀಲೆ ಪ್ರಕರಣಕ್ಕೆ ತಿರುವು

Traffice Jam at Richmond Road in Bengaluru on Tuesday.

ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯ ಪರಿಣಾಮಕ್ಕೆ ನಗರದ ರಿಚ್ಮಂಡ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆದ ಪರಿ.

ಡಿಜಿಟಲ್ ಕನ್ನಡ ಟೀಮ್:

ನಗರದಲ್ಲಿ ಅಕ್ರಮ ಸಕ್ರಮ

ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ಕಟ್ಟಡಗಳು ಮತ್ತು ನಿವೇಶನಗಳ ಸಕ್ರಮಕ್ಕೆ ರಾಜ್ಯ ಹೈಕೋರ್ಟ್ ಮಂಗಳವಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ರೀತಿಯಾದ ಕಟ್ಟಡ ಹಾಗೂ ನಿವೇಶನಗಳಿಗೆ ಸರ್ಕಾರ ವಿಧಿಸುವ ದಂಡವನ್ನು ಕಟ್ಟಿ ಸಕ್ರಮ ಮಾಡಿಕೊಳ್ಳಲು ನ್ಯಾಯಾಲಯ ಅವಕಾಶ ಕೊಟ್ಟಿದೆ.

ನ್ಯಾಯಾಲಯ 2003ರ ಅಕ್ಟೋಬರ್ 19ಕ್ಕೂ ಮೊದಲು ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡ ಮತ್ತು ಅಕ್ರಮ ಬಡಾವಣೆಗಳಲ್ಲಿನ ನಿವೇಶನ ಸಕ್ರಮಕ್ಕೆ ಸಮ್ಮತಿ ನೀಡಲಾಗಿದ್ದು, ದ ಈ ತೀರ್ಪಿನಿಂದಾಗಿ ಲಕ್ಷಾಂತರ ಕುಟುಂಬಗಳು ನಿಟ್ಟುಸಿರು ಬಿಡುವಂತಾಗಿದೆ. ಇದೇ ವೇಳೆ ಸರ್ಕಾರಿ ಜಮೀನು, ಉದ್ಯಾನವನ, ಕ್ರೀಡಾಂಗಣಕ್ಕೆ ಕಾಯ್ದಿರಿಸಿದ ಜಾಗಗಳಲ್ಲಿ ಕಟ್ಟಡ, ನೆಲಮಹಡಿಯಲ್ಲಿ ನಿರ್ಮಾಣ ಮಾಡಿದ ಕಟ್ಟಡ ಸಕ್ರಮಗೊಳಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟ ಪಡಿಸಿದೆ.

ಕೇವಲ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳು, ಭೂ ಉಪಯೋಗಗಳ ಉಲ್ಲಂಘನೆ, ಕಟ್ಟಡದ ಸುತ್ತ ನಿಗದಿಯಷ್ಟು ಜಾಗ (ಸೆಟ್ ಬ್ಯಾಕ್) ಬಿಡದಿರುವುದು, ನೆಲ ವಿಸ್ತೀರ್ಣ ಪ್ರಮಾಣ ಉಲ್ಲಂಘನೆಯಂತಹ ಮನೆ ಹಾಗೂ ನಿವೇಶನಗಳನ್ನು ಮಾತ್ರ ಸಕ್ರಮ ಮಾಡಿಕೊಳ್ಳಬಹುದಾಗಿದೆ.

ಆರ್ ಬಿಐ ಅಧಿಕಾರಿ ಬಂಧನ

ಅಕ್ರಮವಾಗಿ ನೋಟು ಬದಲಾವಣೆ ಮಾಡುತ್ತಿದ್ದ ಜಾಲವನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದು, ಬೆಂಗಳೂರಿನ ಆರ್ ಬಿ ಐ ಶಾಖೆಯ ಅಧಿಕಾರಿ ಮೈಕೆಲ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಇತರೆ ಬ್ಯಾಕುಗಳ ಜತೆ ಕೈ ಜೋಡಿಸಿ ಮೈಕೆಲ್ ₹ 1.50 ಕೋಟಿ ಹಣ ಬದಲಾವಣೆ ಮಾಡಿದ್ದಾರೆ. ಮಧ್ಯವರ್ತಿಗಳಿಂದ ಒಟ್ಟು ₹ 90 ಲಕ್ಷ ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಬಿಐ ಅಧಿಕಾರಿಗಳೇ ಖುದ್ದಾಗಿ ಗಿರಾಕಿಗಳ ರೂಪದಲ್ಲಿ ಹಣ ಬದಲಾವಣೆಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸಿ ಅವರನ್ನು ತಮ್ಮ ಬಲೆಯೊಳಗೆ ಬೀಳಿಸಿಕೊಂಡಿದ್ದಾರೆ. ಈ ಮಧ್ಯವರ್ತಿಗಳು ಹಣ ಬದಲಾವಣೆಗೆ ಶೇ.15 ರಿಂದ 35 ರಷ್ಟು ಕಮಿಶನ್ ಪಡೆದುಕೊಂಡು ನೋಟು ಬದಲಾವಣೆ ಮಾಡಿಕೊಡುತ್ತಿದ್ದರು ಎಂಬ ಮಾಹಿತಿಗಳು ಬಂದಿವೆ.

ರಾಸಲೀಲೆ ಪ್ರಕರಣ: ಆಸ್ಪತ್ರೆ ಸೇರಿದ ಸಂತ್ರಸ್ತೆ ಜಯಲಕ್ಷ್ಮಿ

ಅಬಕಾರಿ ಸಚಿವ ಎಚ್.ವೈ ಮೇಟಿ ಅವರು ನಡೆಸಿದ್ದಾರೆ ಎನ್ನಲಾಗಿರುವ ರಾಸಲೀಲೆ ಪ್ರಕರಣ ದಿನಕ್ಕೊಂದು ಬಣ್ಣ ಪಡೆಯುತ್ತಿದೆ. ಮೊದಲು ಆ ವಿಡಿಯೋದಲ್ಲಿರುವ ಮಹಿಳೆ ನಾನೇ ಎಂದಿದ್ದ ಜಯಲಕ್ಷ್ಮಿ ನಂತರ ಅದು ನಾನಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ ಮಂಗಳವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜಯಲಕ್ಷ್ಮಿ ಆ ವಿಡಿಯೋದಲ್ಲಿರುವ ಮಹಿಳೆ ನಾನೇ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಧ್ಯಾಹ್ನ ಈ ಹೇಳಿಕೆ ನೀಡಿದ ಬೆನ್ನಲ್ಲೇ ಸಂಜೆ ವೇಳೆಗೆ ಆಕೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯನ್ನು ಐಸಿಯುನಲ್ಲಿ ಇರಿಸಲಾಗಿದೆ ಎಂದು ಮಾಹಿತಿಗಳು ಬಂದಿವೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಜಯಲಕ್ಷ್ಮಿ ಹೇಳಿದಿಷ್ಟು… ‘ವಿಡಿಯೋದಲ್ಲಿರುವುದು ನಾನೇ. ಸಚಿವರು ನನ್ನೊಂದಿಗೆ ಆ ರೀತಿ ನಡೆದುಕೊಂಡಿರುವುದನ್ನು ಅವರ ಗನ್ ಮ್ಯಾನ್ ಸುಭಾಷ್ ಸೆರೆ ಹಿಡಿದಿದ್ದಾರೆ. ಈಗ ಈ ವಿಷಯ ಎಲ್ಲೂ ಹೇಳಬಾರದು ಎಂದು ಸುಭಾಷ್, ಸಚಿವರು ಹಾಗೂ ಅವರ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ. ನನಗೆ ಮಕ್ಕಳಿರುವ ಕಾರಣ ನಿಜ ಹೇಳಲು ಹಿಂಜರಿದಿದ್ದೆ.’

ಮತ್ತೊಂದೆಡೆ ಪ್ರಕರಣದಲ್ಲಿ ತಮಗೆ ಪ್ರಾಣ ಬೆದರಿಕೆ ಇದೆ ಎಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಆರ್ ಟಿ ಐ ಕಾರ್ಯಕರ್ತ ರಾಜಶೇಖರನ್ ನಾಳೆ ಗೃಹ ಸಚಿವ ಪರಮೇಶ್ವರ್ ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಿ ಸಾಕ್ಷಿ ಸಮೇತ ಸಚಿವರ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ. ಆ ಮೂಲಕ ಈ ವಿಡಿಯೋ ಹೊರಬರುವ ನಿರೀಕ್ಷೆಯೂ ಇದೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಮೇಟಿ ಅವರಿಗೆ ಸೂಚಿಸಿರುವುದಾಗಿ ಮಾಹಿತಿ ಬಂದಿವೆ.

ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲಿಸಲು ಸೂಚನೆ

ರಾಜ್ಯ ಬಿಜೆಪಿ ಪಕ್ಷದಲ್ಲಿ ಒಡಕು ಮೂಡಲು ಕಾರಣವಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಿ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈಶ್ವರಪ್ಪನವರಿಗೆ ಆದೇಶ ನೀಡಿದ್ದಾರೆ. ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಮುರಳೀಧರರಾವ್ ಅವರ ದೂರಿನ ಹಿನ್ನೆಲೆಯಲ್ಲಿ ಈಶ್ವರಪ್ಪನವರನ್ನು ಇಂದು ನವದೆಹಲಿಗೆ ಈಶ್ವರಪ್ಪನವರನ್ನು ಕರೆಸಿಕೊಂಡು ಶಾ ಮಾತನಾಡಿದರು ಎಂದು ಮಾಹಿತಿಗಳು ಬಂದಿವೆ.

ಕೇಂದ್ರ ಮಂತ್ರಿ ರಿಜಿಜು ವಿರುದ್ಧ ಭ್ರಷ್ಟಾಚಾರ ಆರೋಪ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಅರುಣಾಚಲ ಪ್ರದೇಶದಲ್ಲಿ ತಲೆ ನಿರ್ಮಾಣವಾಗಲಿರುವ ಜಲ ವಿದ್ಯುತ್ ಘಟಕ ನಿರ್ಮಾಣ ಸಂಬಂಧಿಸಿ ₹ 450 ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆಡಿಯೋ ಸಾಕ್ಷ್ಯಗಳು ಲಭ್ಯವಿದ್ದು ರಿಜಿಜು ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಿಜುಜು ಇದೊಂದು ಸುಳ್ಳಿನ ಕಂತೆ ಎಂದು ನಿರಾಕರಿಸಿದ್ದಾರೆ. ‘ನನ್ನ ಮೇಲಿನ ಆರೋಪ ನಿಜಕ್ಕೂ ನಾಚಿಕೆಗೇಡಿನದ್ದು. ಈ ಸುಳ್ಳು ಸುದ್ದಿ ಸೃಷ್ಟಿಸಿದವರು ಯಾರು? ಯಾರೇ ಈ ಸುಳ್ಳು ಸೃಷ್ಟಿಸಿರಲಿ ಅವರು ಅ ಸ್ಥಳಕ್ಕೆ ಹೋದರೆ ಬೂಟು ಎಸೆತಕ್ಕೆ ಗುರಿಯಾಗಲಿದ್ದಾರೆ. ಜನಸೇವೆಯನ್ನು ಭ್ರಷ್ಟಾಚಾರ ಎಂದು ಕರೆಯುವುದು ಎಷ್ಟು ಸರಿ?’ ಎಂಬುದು ಪ್ರಶ್ನಿಸಿದರು ರಿಜಿಜು.

Leave a Reply