ನೋಟು ಬದಲಾವಣೆ: 50 ದಿನಗಳ ಸಿಸಿಟಿವಿ ದೃಶ್ಯ- ಇತರೆ ದಾಖಲೆ ಸಂಗ್ರಹಕ್ಕೆ ಆರ್ಬಿಐ ಸೂಚನೆ, ಅಕ್ರಮದಲ್ಲಿ ಭಾಗಿಯಾದವರಿಗೆ ಶಾಸ್ತಿ ಮಾಡಲು ಬೆತ್ತ ಸಿದ್ಧ ಮಾಡಿಕೊಳ್ಳುತ್ತಿದೆ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ನಿರ್ಧಾರದ ನಂತರ ಅಕ್ರಮ ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 8ರಿಂದ ಡಿಸೆಂಬರ್ 30ರವರೆಗಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಇಡುವಂತೆ ಎಲ್ಲ ಬ್ಯಾಂಕುಗಳಿಗೂ ಸೂಚನೆ ಕೊಟ್ಟಿದೆ.

ಕೇವಲ ಸಿಸಿಟಿವಿ ದೃಶ್ಯಗಳನ್ನು ಮಾತ್ರವಲ್ಲ ಈ ಐವತ್ತು ದಿನಗಳ ಅವಧಿಯಲ್ಲಿ ಪ್ರತಿ ಬ್ಯಾಂಕು ಪ್ರತಿ ಶಾಖೆಯಲ್ಲಿ ಹೊಸ ನೋಟುಗಳ ಕುರಿತು ಆಗಿರುವ ವ್ಯವಹಾರಗಳ ದಾಖಲೆಗಳನ್ನು ಸಿದ್ಧವಿಡುವಂತೆ ಸೂಚನೆ ಬಂದಿದೆ.

ದೇಶದೆಲ್ಲೆಡೆ ತೆರಿಗೆ ಅಧಿಕಾರಿಗಳು ಕಾಳಧನಿಕರ ಮೇಲಿನ ಸರಣಿ ದಾಳಿಗಳನ್ನು ನಿತ್ಯ ನೋಡುತ್ತಲೇ ಇದ್ದು, ಅಕ್ರಮ ನೋಟು ಬದಲಾವಣೆ ದಂಧೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡಿದೆ ಎಂಬುದು ತಿಳಿಯುತ್ತದೆ. ಈ ದಂಧೆಗೆ ಬ್ಯಾಂಕುಗಳಿಂದಲೂ ಉತ್ತೇಜನ ದೊರೆತಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. ಹೀಗಾಗಿ ಸರ್ಕಾರ ಈಗ ನೇರವಾಗಿ ಬ್ಯಾಂಕುಗಳ ಚಟುವಟಿಕೆ, ಬ್ಯಾಂಕುಗಳಲ್ಲಿ ಹಣ ಯಾವರೀತಿ ಹಂಚಿಕೆಯಾಗಿದೆ, ಸರದಿ ಸಾಲಿನಲ್ಲಿ ನಿಂತ ಜನರಿಗೆ ಎಷ್ಟು ಹಣ? ಹಿಂಬಾಗಿಲಿನಿಂದ ದೊಡ್ಡ ಕುಳಗಳಿಗೆ ಎಷ್ಟು ಹಣ ರವಾನೆಯಾಗಿದೆ ಎಂಬುದನ್ನು ಪರಿಶೀಲಿಸಲು ಆರ್ ಬಿ ಐ ಹಾಗೂ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಸದ್ಯ ಆರ್ ಬಿ ಐ ನೀಡಿರುವ ಸೂಚನೆಯಲ್ಲಿ ಕೇವಲ ಬ್ಯಾಂಕುಗಳ ಸಿಸಿಟಿವಿ ದೃಶ್ಯಗಳನ್ನಷ್ಟೇ ಕೇಳಿಲ್ಲ. ಬದಲಿಗೆ ಕರೆನ್ಸಿ ಚೆಸ್ಟ್ಸ್ ಪೋಸ್ಟ್ (ಆರ್ ಬಿ ಐ ಕೇಂದ್ರಗಳಿಂದ ವಿವಿಧ ಬ್ಯಾಂಕುಗಳಿಗೆ ಹಣ ವಿತರಣೆಯಾಗುವ ಕೇಂದ್ರ) ಗಳ ಸಿಸಿಟಿವಿ ದೃಶ್ಯಗಳನ್ನು ಕೇಳಲಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ಬ್ಯಾಂಕುಗಳಲ್ಲಿ ಅಕ್ರಮವಾಗಿ ನೋಟು ಬದಲಾವಣೆ ಮಾಡುತ್ತಿರುವ ಬಗ್ಗೆ ಕುಟುಕು ಕಾರ್ಯಾಚರಣೆಯಾಗಿದ್ದು, ಆ ಕಾರ್ಯಾಚರಣೆಯ ದೃಶ್ಯಗಳ ಸಿಡಿಗಳನ್ನು ಕೇಂದ್ರ ಹಣಕಾಸು ಇಲಾಖೆಗೆ ರವಾನಿಸಿರುವ ಬಗ್ಗೆ ಡಿಜಿಟಲ್ ಕನ್ನಡ ವರದಿ ಮಾಡಿತ್ತು.

ಒಟ್ಟಿನಲ್ಲಿ ನೋಟು ಅಮಾನ್ಯ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವಾಗ ಈ ಅಕ್ರಮ ನೋಟು ಬದಲಾವಣೆ ಮಾಡಿಕೊಂಡಿರುವ ಕಾಳಧನಿಕರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲ ಟೀಕೆಗಳಿಗೆ ಕಾರಣವಾಗಿರುವ ಅಕ್ರಮ ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾದವರಿಗೆ ತಕ್ಕ ಶಾಸ್ತಿ ಮಾಡಲು ಸರ್ಕಾರ ದೊಡ್ಡ ಬೆತ್ತವನ್ನೇ ಸಿದ್ಧ ಮಾಡಿಕೊಳ್ಳುತ್ತಿರೋದು ಈ ಎಲ್ಲ ಬೆಳವಣಿಗೆಗಳಿಂದ ಗೊತ್ತಾಗುತ್ತಿದೆ.

Leave a Reply