ಹಿಂಗಾರು ಬೆಳೆಯ ಸಂದರ್ಭದಲ್ಲೇ ಗೋಧಿ ಆಮದು ಸುಂಕ ತೆರವು, ಕೇಂದ್ರದ ಈ ನಿರ್ಧಾರದಿಂದ ರೈತರಿಗೆ ಶಾಕ್

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ರಾಬಿ (ಹಿಂಗಾರು) ಬೆಳೆ ಋತುವಿನಲ್ಲಿ ಬಂಪರ್ ಗೋಧಿ ಬೆಳೆದು ಲಾಭ ನೋಡುವ ಕನಸು ಕಾಣುತ್ತಿರುವ ರೈತರಿಗೆ ಕೇಂದ್ರ ಸರ್ಕಾರದ ನಿರ್ಧಾರವೊಂದು ತೀವ್ರ ನಿರಾಸೆ ಮೂಡಿಸಿದೆ. ಅದೇನೆಂದರೆ ದೇಶಕ್ಕೆ ಆಮದು ಮಾಡಿಕೊಳ್ಳುವ ಗೋಧಿ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದು.

ದೇಶದಲ್ಲಿ ಗೋಧಿಯ ಬೆಲೆ ನಿಯಂತ್ರಣ, ಗೋಧಿಯ ಲಭ್ಯತೆ ಹೆಚ್ಚಳ ಹಾಗೂ ಗೋಧಿ ವ್ಯಾಪಾರ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇಷ್ಟು ದಿನಗಳ ಕಾಲ ವಿಧಿಸುತ್ತಿದ್ದ ಶೇ.10 ರಷ್ಟು ಆಮದು ಸುಂಕವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ರಾಬಿ ಬೆಳೆಯ ಮುಂಚಿತವಾಗಿ ಸರ್ಕಾರದ ಈ ಕ್ರಮದ ಬೆನ್ನಲ್ಲೆ ಗೋಧಿ ವ್ಯಾಪಾರಿಗಳು ವಿದೇಶದಿಂದ ಸುಮಾರು 50 ಲಕ್ಷ ಟನ್ ಗೋಧಿ ಆಮದಿಗೆ ಮುಂದಾಗಿದ್ದಾರೆ. ಇದರೊಂದಿಗೆ ವಿದೇಶಿ ಗೋಧಿಯ ನಡುವೆ ನಮ್ಮ ರೈತರು ಬೆಳೆದ ಗೋಧಿ ತನ್ನ ಬೇಡಿಕೆ ಕಳೆದುಕೊಳ್ಳಲಿದೆ.

ರಾಬಿ ಬೆಳೆಗೂ ಆರಂಭಿಕ ಹಂತದಲ್ಲಿ ಸದ್ಯ ಒಂದು ಟನ್ ಗೋಧಿಗೆ ₹16,250 ಬೆಲೆ ನಿಗದಿಯಾಗಿದ್ದು, ಸರ್ಕಾರದ ಸುಂಕ ತೆರವಿನ ನಂತರ ಈ ಮೊತ್ತ ಮತ್ತಷ್ಟು ಕುಸಿಯಲಿದೆ. ಆ ಮೂಲಕ ಗೋಧಿ ಬೆಳೆಗಾರರಿಗೆ ಸರ್ಕಾರದ ನಿರ್ಧಾರ ದೊಡ್ಡ ಮಟ್ಟದದ ಶಾಕ್ ಕೊಟ್ಟಿದೆ. ಆ ಮೂಲಕ ಈ ಬಾರಿ ಬೆಳೆ ಬರುವ ಮುನ್ನವೇ ರೈತರ ಕನಸಿಗೆ ತಣ್ಣೀರೆರೆಚಲಾಗಿದೆ.

ಸರ್ಕಾರದ ಈ ಕ್ರಮವನ್ನು ರೈತ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿದ್ದು, ಅಖಿಲ ಭಾರತ ಕಿಸಾನ್ ಸಭಾ ಸಂಘಟನೆ, ‘ಸರ್ಕಾರಿ ಸಂಸ್ಥೆಗಳು ಈಗಾಗಲೇ ಗೋಧಿ ಬೆಳೆಗೆ ಬೆಂಬಲ ಬೆಲೆಯನ್ನು ನಿಗದಿಮಾಡಲು ವಿಫಲವಾಗಿವೆ. ಇನ್ನು ರೈತರ ಬೆಳೆಯನ್ನು ಖರೀದಿಸಲು ಸರಿಯಾದ ಕೇಂದ್ರಗಳನ್ನು ತೆರೆಯದ ಹಿನ್ನೆಲೆಯಲ್ಲಿ ರೈತರು ಸಿಕ್ಕ ಸಿಕ್ಕ ಕಡೆ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈಗ ಆಮದು ಸುಂಕ ತೆಗೆದು ಹಾಕುವ ನಿರ್ಧಾರದಿಂದ ಗೋಧಿ ವ್ಯಾಪಾರಿಗಳಿಗೆ ಹಾಗೂ ಉತ್ಪನ್ನದಾರರಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಯಾವುದೇ ಅನುಕೂಲವಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಈ ನಿರ್ಧಾರ ಗೋಧಿ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಗೋದಿಯ ಬೆಲೆ ಪ್ರತಿ ಕ್ವಿಂಟಾಲಿಗೆ ₹ 250ಕ್ಕೆ ಕುಸಿಯುವುದು ಖಚಿತ. ಆ ಮೂಲಕ ರೈತರ ಮೇಲೆ ಋಣಾತ್ಮಕ ಪರಿಣಾಮ ಬೀಳಲಿದೆ’ ಎಂದು ತಿಳಿಸಿದೆ.

ಒಟ್ಟಿನಲ್ಲಿ ಮಳೆ ಬಂದರೆ ಬೆಳೆ ಇಲ್ಲ, ಬೆಳೆ ಬಂದರೆ ಬೆಲೆ ಇಲ್ಲ ಎಂಬ ನಮ್ಮ ರೈತರ ಪಾಡು ಇದೇ ರೀತಿ ಮುಂದುವರಿಯುತ್ತಿರುವುದು ನಿಜಕ್ಕೂ ನಿರಾಸೆಯ ಬೆಳವಣಿಗೆಯೇ ಸರಿ.

Leave a Reply