ಅಣ್ವಸ್ತ್ರ ಕ್ಷಿಪಣಿ ತಯಾರಿ, ಏಷ್ಯದ ನೆರೆಹೊರೆಯೊಂದಿಗೆ ಬಾಂಧವ್ಯವೃದ್ಧಿ… ಭಾರತ ವರ್ಸಸ್ ಚೀನಾದ ತಾಜಾ ಆಯಾಮಗಳಿವು

ಡಿಜಿಟಲ್ ಕನ್ನಡ ಟೀಮ್:

ಚೀನಾ ವರ್ಸಸ್ ಭಾರತದ ವಿದ್ಯಮಾನ ಹೇಳಲು ಹೊರಟಾಗಲೆಲ್ಲ ಪ್ರಾರಂಭದಲ್ಲೇ ಒಂದಂಶ ಸ್ಪಷ್ಟಪಡಿಸಿಕೊಂಡುಬಿಡಬೇಕು. ಅದೆಂದರೆ, ಮಿಲಿಟರಿ ಮತ್ತು ಆರ್ಥಿಕ ಬಲಗಳೆರಡರಲ್ಲೂ ಭಾರತಕ್ಕಿಂತ ಅದು ಬಹಳವೇ ಮುಂದಿದೆ ಅನ್ನೋದು. ಹೀಗಾಗಿ ಚೀನಾದ ವಿರುದ್ಧ ತನ್ನ ಸ್ಥಿತಿ ಬಲಪಡಿಸಿಕೊಳ್ಳುವುದಕ್ಕೆ ಭಾರತ ಮಾಡುವ ಪ್ರಯತ್ನಗಳೆಲ್ಲ ಅಹೋರಾತ್ರಿ ಪರಿಣಾಮ ಉಂಟುಮಾಡಿಬಿಡಬಲ್ಲ ಮಹಾಜಿಗಿತಗಳೇನಲ್ಲ.

ಆದರೆ… ಎಲ್ಲೋ ಒಂದು ಕಡೆ ಶುರು ಮಾಡಲೇಬೇಕಲ್ಲ. ಹಾಗೆಂದೇ ಇತ್ತೀಚಿನ ವರ್ಷಗಳಲ್ಲಿ ಭಾರತವು ಚೀನಾದ ವಿರುದ್ಧ ಕಾರ್ಯತಂತ್ರದ ದೃಷ್ಟಿಯಿಂದ ಹಲವು ಹೆಜ್ಜೆಗಳನ್ನು ಇಡುತ್ತಿದೆ. ಚೀನಾ ಮಗ್ಗುಲಿನ ವಿಯೆಟ್ನಾಮಿಗೆ ಮಿಲಿಟರಿ ಸಹಯೋಗ, ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಅಮೆರಿಕದೊಂದಿಗೆ ನಿಂತು ಚೀನಾಕ್ಕೆ ಬಿಸಿ ಮುಟ್ಟಿಸುತ್ತಿರುವುದು, ಈಶಾನ್ಯ ರಾಜ್ಯಗಳಲ್ಲಿ ಚೀನಾದ ಎಚ್ಚರಿಕೆಗಳಿಗೆ ಸೊಪ್ಪು ಹಾಕದೇ ಮಿಲಿಟರಿ ಬಲವೃದ್ಧಿಯಲ್ಲಿ ತೊಡಗಿರುವುದು ಇತ್ಯಾದಿ…

ಇದೀಗ ಭಾರತವು ಅಣ್ವಸ್ತ್ರ ಬಲದ ಅಗ್ನಿ-5 ಶ್ರೇಣಿಯ ಕ್ಷಿಪಣಿಗಳನ್ನು ಹೆಚ್ಚೂ ಕಡಿಮೆ ಸಿದ್ಧಗೊಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಖಂಡಾಂತರ ಕ್ಷಿಪಣಿ ಅಗ್ನಿ-5ರ ವಿಶೇಷ ಎಂದರೆ ಇದು ಉತ್ತರ ಚೀನಾ ಭಾಗವನ್ನೂ ಇಲ್ಲಿಂದ ತಲುಪಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಎರಡು ವರ್ಷಗಳಿಂದ ಸಿದ್ಧತೆಯಲ್ಲಿದ್ದ ಇದರ ಕಾರ್ಯ ಅಂತಿಮ ಹಂತ ತಲುಪಿದ್ದು, ಜನವರಿ ವೇಳೆಗೆಲ್ಲ ಅಂತಿಮ ಪರೀಕ್ಷೆ ನಡೆಯಬಹುದೆಂಬ ನಿರೀಕ್ಷೆ ಇದೆ.

ಎನ್ಎಸ್ಜಿ ಗುಂಪಿಗೆ ಸೇರುವ ಯತ್ನದಲ್ಲಿದ್ದ ಭಾರತವು ಆ ಕಾರಣಕ್ಕಾಗಿಯೇ ಅಗ್ನಿ-5ನ್ನು ತುಸು ವಿಳಂಬ ಮಾಡಿತ್ತು, ಆದರೆ ಚೀನಾ ಯಥಾಪ್ರಕಾರ ತನ್ನ ಮೊಂಡುತನ ಮುಂದುವರಿಸಿ ಎನ್ಎಸ್ಜಿ ಸೇರ್ಪಡೆ ಹಾಗೂ ಮಸೂದ್ ಅಜರ್ ಮೇಲಿನ ನಿಷೇಧಕ್ಕೆ ಅಡ್ಡಿಯಾಗಿರುವುದರಿಂದ ಅದಕ್ಕಿನ್ನು ಮುಲಾಜು ತೋರಿಸುತ್ತ ಇರಬೇಕಿಲ್ಲವೆಂಬ ನಿರ್ಧಾರಕ್ಕೆ ಭಾರತ ಬಂದಂತಿದೆ.

ಇದು ಒಂದೆಡೆಯಾದರೆ, ಕೆಲದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಇಂಡೊನೇಷ್ಯ ಅಧ್ಯಕ್ಷರೊಂದಿಗೆ ಭಾರತವು ಮಿಲಿಟರಿ ಸಹಯೋಗ ಹೆಚ್ಚಿಸಿಕೊಳ್ಳುವ ಒಪ್ಪಂದಗಳಿಗೆ ಸಹಿ ಹಾಕಿರುವುದು ಸಹ ಚೀನಾಕ್ಕೆ ಅರಗಿಸಿಕೊಳ್ಳಲಾಗದ ಸಂಗತಿಯೇ ಆಗಿದೆ. ದಕ್ಷಿಣ ಚೀನಾ ಸಮುದ್ರವನ್ನು ಮುಕ್ತವಾಗಿರಿಸಿ ವಿಶ್ವಸಂಸ್ಥೆಯ ನಿಯಮಗಳಂತೆ ನಡೆದುಕೊಳ್ಳಬೇಕೆಂಬ ನಿಯಮಕ್ಕೆ ಭಾರತ ಮತ್ತು ಇಂಡೊನೇಷ್ಯಗಳು ಬದ್ಧತೆ ತೋರಿವೆ. ಎಲ್ಲ ರಾಷ್ಟ್ರಗಳು ಈ ನಿಯಮಕ್ಕೆ ಬದ್ಧರಾಗಿರಬೇಕಾಗಿದ್ದು ಅವಶ್ಯ ಅಂತಲೂ, ಸಾಗರ ಸಂಚಾರ ಸಹಕಾರದ ತಮ್ಮ ಒಡಂಬಡಿಕೆಗಳಲ್ಲಿ ಉಭಯ ರಾಷ್ಟ್ರಗಳು ದಾಖಲಿಸಿವೆ. ಇದು ಚೀನಾ ನಿಲುವಿಗೆ ತದ್ವಿರುದ್ಧ. ದಕ್ಷಿಣ ಚೀನಾ ಸಮುದ್ರದ ನಿಯಂತ್ರಣ ಸಂಪೂರ್ಣ ತನ್ನ ಹಿಡಿತದಲ್ಲಿರಬೇಕು ಎನ್ನುತ್ತದೆ ಚೀನಾ.

ಹೀಗೆಲ್ಲ ಚೀನಾದ ನಿಲುವಿಗೆ ವಿರುದ್ಧವಾಗಿಯೇ ಹೋಗುತ್ತಿದ್ದರೆ ಭಾರತಕ್ಕೆ ಅದನ್ನು ದಕ್ಕಿಸಿಕೊಳ್ಳಲಾಗುವುದೇ ಅಂತಲೂ ಕೇಳುವವರಿದ್ದಾರೆ. ಆದರೆ ಎನ್ಎಸ್ಜಿ, ಪಾಕಿಸ್ತಾನದ ನಿಯಂತ್ರಣ, ಉಗ್ರವಾದ ಇವ್ಯಾವ ವಿಷಯಗಳಲ್ಲೂ ಸಾಥ್ ನೀಡದ ಚೀನಾಕ್ಕೆ ಮೃದುತ್ವ ತೋರುವುದಕ್ಕೇನಿದೆ ಎಂಬುದು ವಾಸ್ತವದ ಪ್ರಶ್ನೆ.

Leave a Reply