ಮಹಿಳೆಯರ ಕುರಿತಾದ ಚರ್ಚೆಗಳಲ್ಲಿ ಪುರುಷರು ಏಕಿಲ್ಲ?

author-geetha‘ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವಾಗ ಪುರುಷರನ್ನು ದೂರ ಇಟ್ಟು ಚರ್ಚಿಸುವುದರಿಂದಲೇ ಸಮಸ್ಯೆಗಳು ಉಲ್ಬಣಿಸುವುದು… ಪರಿಹಾರ ಸಿಗದಿರುವುದು.’

‘ಮಹಿಳೆಯರ ಸಮಸ್ಯೆ ಪರಿಹರಿಸಲು ಪುರುಷರ ಸಹಾಯ ಬೇಕೆನ್ನಿ ಹಾಗಾದರೇ…’ ದನಿಯಲ್ಲೇ ವ್ಯಂಗ್ಯ. ಈ ಬಗೆಯ ಮನೋಭಾವ ಇರುವಾಗ ಏನು ಮಾಡುವುದು.

‘ಹಾಗಲ್ಲ… ಮಹಿಳೆಯರ ಹಲವು ಸಮಸ್ಯೆಗಳಿಗೆ ಪುರುಷರೇ ಕಾರಣಭೂತರು… ಹಾಗಾಗಿ ಪರಿಹಾರಕ್ಕೆ, ಪರಿಹಾರ ಕಂಡುಕೊಳ್ಳಲು ಪುರುಷರೂ ಭಾಗಿಯಾಗಬೇಕು.’

‘ಓಹೋ…’

‘ಮಹಿಳೆಯರ ಸಮಸ್ಯೆಗಳು ಅಂದರೆ ಅದು ಸಾಮಾಜಿಕ ಸಮಸ್ಯೆ ಕೂಡ… ಮದ್ಯಪಾನ ವ್ಯಸನ ಸಾಮಾಜಿಕ ಸಮಸ್ಯೆ ಎಂದಾದರೆ ಅಶ್ಲೀಲ ಜಾಹೀರಾತುಗಳ ಮಹಿಳೆಯರ ಸಮಸ್ಯೆ ಯಾಕೆ? ಅತ್ಯಾಚಾರ ಮಹಿಳೆಯರ ಸಮಸ್ಯೆ ಮಾತ್ರವೇ? ಅಶ್ಲೀಲ ಜಾಹಿರಾತುಗಳು ಪುರುಷರ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಕೂಡ ಚರ್ಚೆಯಾಗಬೇಕು. ಅಲ್ಲವೇ?’

‘ಸರಿ.. ಬಿಡುವಾಗಿ ಇರುವ ಪುರುಷರು ಸಿಗುತ್ತಾರ ನೋಡಿ ನಿಮ್ಮ ಚರ್ಚೆಗೆ! ನಿಮಗಾಗಿ ವೇದಿಕೆ ಸಿದ್ಧಪಡಿಸಿದೇವೆ. ಅವಕಾಶ ಮಾಡಿಕೊಟ್ಟಿದ್ದೇವೆ. ಚರ್ಚಿಸಿಕೊಳ್ಳಿ…’

ಸುಮ್ಮನೆ ವೇದಿಕೆಯಿಂದ ಇಳಿದು ಅವರು ಹೊರಟು ಹೋದರು. ನಾನು ನಿಂತೇ ಇದ್ದೆ.

ಹದಿನೈದು ವರ್ಷಗಳ ಹಿಂದೆ ಒಂದು ಸಮಾರಂಭ… ಹೀಗೆಯೇ ಮಹಿಳೆಯರ ಸಮಸ್ಯೆಯನ್ನು ಕುರಿತೋ ಅಥವಾ ಮಹಿಳಾ ಕವಿಗೋಷ್ಠಿಯೋ ಏನೋ… ನಿರೂಪಣೆಗೆ ನಿಂತಿದ್ದೆ. ಮುಖ್ಯ ಅತಿಥಿಗಳಾಗಿ ಬಂದವರು ಮಂತ್ರಿಗಳು. ಸಮಾರಂಭ ಏರ್ಪಡಿಸಿದವರು ಮುಖ್ಯಮಂತ್ರಿಗಳನ್ನೇ ಕರೆದಿದ್ದರು. ಅವರು ಬರದೆ ಈ ಮಂತ್ರಿಗಳನ್ನು ಕಳುಹಿಸಿದ್ದರು. ಯಾವುದೇ ತಯಾರಿಲ್ಲದೆ ಬಂದಿದ್ದವರು ಭಾಷಣಕ್ಕೆ ನಿಂತರು.

‘ಬಣ್ಣ ಬಣ್ಣದ ಸೀರೆಯುಟ್ಟ ಹೆಣ್ಣು ಮಕ್ಕಳನ್ನು ನೋಡಿ ಖುಷಿಯಾಗುತ್ತಲಿದೆ. ಮುಡಿದಿರುವ ಮಲ್ಲಿಗೆ ಪರಿಮಳ ಘಮಘಮ ಅಂತಿದೆ… ಮಹಿಳೆಯರ ಸಮಾರಂಭ ಅಂದರೆ ಊಟ ರುಚಿಯಾಗಿರಬಹುದು. ಸರಬರ ಓಡಾಡುತ್ತ ಹಬ್ಬದ ವಾತಾವರಣ ನಿರ್ಮಿಸಿದ್ದಾರೆ… ಹೆಣ್ಣು ದೇವತೆ… ತಾಯಿ ದೇವರಿಗೇ ದೇವತೆ…’

ಹೀಗೆ ಮುಂದುವರಿದಿತ್ತು ಆತನ ಮಾತುಗಳು…

ಅವರ ತಪ್ಪಿಲ್ಲ ಬಿಡಿ. ಯಾವುದೇ ಸಾಮೂಹಿಕ ಕಾರ್ಯಕ್ರಮವಾದರೂ (ಅದು ಮಹಿಳಾ ವಿಷಯ, ಸಮಸ್ಯೆಗಳನ್ನು ಕುರಿತದ್ದು ಅಲ್ಲದಿದ್ದರೆ) ವೇದಿಕೆಯ ಮೇಲೆ ಮಹಿಳೆಯರು ಇರುವುದಿಲ್ಲ. ನಿರೂಪಣೆ ಮಾಡಲು ಮಹಿಳೆ ಇರಬಹುದು. ಅಷ್ಟೇ ಹೆಚ್ಚೆಂದರೆ ಪ್ರಾತಿನಿಧಿಕವಾಗಿ ಒಬ್ಬರು ಮಹಿಳೆಯಿರುತ್ತಾರೆ.

ಮಹಿಳೆಯರಿಗೆ ಪ್ರತ್ಯೇಕ ವೇದಿಕೆ, ಅಲ್ಲಿ ಸಮಸ್ಯೆಯೂ ಅವಳದೇ, ಮಾತನಾಡುವವಳು ಅವಳೇ, ಕೇಳುಗರು ಮಹಿಳೆಯರೇ.

ಮತ್ತೊಂದು ಸಮಾರಂಭ ಲೇಖಕಿಯೊಬ್ಬರಿಗೆ ಅವರ ಜೀವಮಾನ ಸಾಧನೆಗೆ ಒಂದು ಪ್ರಶಸ್ತಿ. ಪ್ರಶಸ್ತಿ ಕೊಡಲು ನಮ್ಮ ನಾಡಿನ ಸುಪ್ರಸಿದ್ಧ ಲೇಖಕರು ಆಗಮಿಸಿದ್ದರು. ಆಹ್ವಾನ ಪತ್ರಿಕೆ ಕೊಟ್ಟು, ಕರೆದು, ಮೂರು ವಾರಗಳೇ ಸಮಯವಿದ್ದರೂ ಸಮಾರಂಭದ ದಿನ ಬಂದು ಕುಳಿತು ಪ್ರಶಸ್ತಿ ಕೊಟ್ಟು, ನಂತರ ತಮ್ಮ ಭಾಷಣದಲ್ಲಿ ಅವರ ಬಗ್ಗೆಯೇ ಹೇಳಿಕೊಂಡು ಕೊನೆಯಲ್ಲಿ ‘ಇಂತಹ ಪ್ರಶಸ್ತಿ ಇವರಿಗೆ ಕೊಟ್ಟಿದ್ದೀರಿ ಅಂದರೆ ಅವರು ಚೆನ್ನಾಗಿಯೇ ಬರೆದಿರಬಹುದು ನಾನು ಓದಿಲ್ಲ… ನನಗೆ ಗೊತ್ತಿಲ್ಲ’ ಎಂದು ಆಹ್ವಾನ ಪತ್ರಿಕೆ ನೋಡಿಕೊಂಡು ಲೇಖಕಿಯ ಹೆಸರು ಹೇಳಿದ್ದರು.

ಮಹಿಳೆಯರ ಸಾಧನೆ, ಸಮಸ್ಯೆ ಎರಡೂ ಬೇಕಿಲ್ಲ ಪುರುಷರಿಗೆ ಅಂದರೆ ಹೇಗೆ? ಯಾಕೆ ಹೀಗೆ?

ಸಾಹಿತ್ಯ ಸಮ್ಮೇಳನವಾಗುತ್ತದೆ. ಮಹಿಳೆಯರಿಗೆ ಒಂದು ವಿಶೇಷ ಗೋಷ್ಠಿ. ಕವಿ ಸಮ್ಮೇಳನವಾಗುತ್ತದೆ. ಅಲ್ಲಿ ಕೂಡ ಮಹಿಳೆಯರಿಗೆ ಪ್ರತ್ಯೇಕವಾದ ಮಹಿಳಾ ಕವಿಗೋಷ್ಠಿ. ದಿನಪತ್ರಿಕೆಗಳಲ್ಲಿ ವಾರದಲ್ಲಿ ಒಂದು ದಿನ ಮಹಿಳೆಯರಿಗೆ ಒಂದು ಸ್ಪೆಷಲ್ ನಾಲ್ಕು ಹಾಳೆಗಳ ವಿಶೇಷಾಂಕ.

ಹಲವು ವರ್ಷಗಳ ಹಿಂದೆ ನನ್ನದೊಂದು ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಲು ಒಂದು ಪಬ್ಲಿಷಿಂಗ್ ಹೌಸಿಗೆ ಕಳುಹಿಸಿದ್ದೆ. ಮಹಿಳೆಯೇ ಮುಖ್ಯ ಪಾತ್ರಧಾರಿಯಾಗಿರುವುದರಿಂದ ಅದನ್ನು ಮಹಿಳಾ ಸಂಚಿಕೆಯಲ್ಲಿ ಪ್ರಕಟಿಸುತ್ತೇವೆ ಎಂದಿದ್ದರು… ಬೇಡ… ದಯವಿಟ್ಟು ಅದನ್ನು ಎಲ್ಲರೂ ಓದುವಂತೆ ವಾರಪತ್ರಿಕೆಯಲ್ಲಿಯೇ ಪ್ರಕಟಿಸಿ ಎಂದು ಕೇಳಿಕೊಂಡಿದ್ದೆ. ಮಹಿಳೆಯರ ಸಮಸ್ಯೆಗಳ ಅರಿವು, ಅವಳ ಮನಸ್ಸಿನ ತೊಳಲಾಟ ಗಂಡಸಿನ ಅರಿವಿಗೆ ಬರಬೇಕು. ಅವನಲ್ಲಿ empathy ಹುಟ್ಟಬೇಕು. ಆಗಲೇ ಪರಿಹಾರ ಸಹಜೀವನ ಸಾಧ್ಯ.

ಮಹಿಳಾ ಕಾಲೇಜುಗಳು ಇರುವುದೇ ಹೆಣ್ಣುಮಕ್ಕಳು ಧೈರ್ಯದಿಂದ ಮುಂದೆ ಬರಲು ಸಮಯ ತೆಗೆದುಕೊಳ್ಳುತ್ತಾರೆ ಎಂದು. ಮಹಿಳಾ ಕಾಲೇಜುಗಳು ಇರುವುದೇ ಹುಡುಗರು ಇದ್ದಾಗ ಹಿಂದೆ ಸರಿಯುವ ಹುಡುಗಿಯರು ಧೈರ್ಯವಾಗಿ ಮುಂದೆ ಬರಲು, ವಿಷಯ ಮಂಡನೆ ಮಾಡಲು.. ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸರಿ.. (ಪೂರ್ತಿ ಮನಸ್ಸಿನಿಂದ ನನಗೆ ಒಪ್ಪಿಗೆಯಿಲ್ಲ) ಆದರೆ ಜೀವನ ಪೂರ್ತಿ ಬೇರೆಯೇ ವೇದಿಕೆ ಬೇಕೇ? ಮಹಿಳೆಯರ ಸಮಸ್ಯೆಗಳು ಬರೀ ಮಹಿಳೆಯರ ಸಮಸ್ಯೆಗಳಷ್ಟೇ ಅಲ್ಲ.. ಅನುಭವಿಸುವವರು ಮಹಿಳೆಯರು ಮಾತ್ರವಲ್ಲ… ಹೀಗಾಗಿ ಪರಿಹಾರ ಕೂಡ ಮಹಿಳೆಯರು ಮಾತ್ರ ಕಂಡುಕೊಳ್ಳಲು ಸಾಧ್ಯವಿಲ್ಲ. ಹಾಗೆ ಸಾಧ್ಯವಾದರೆ ಅದು ಪುರುಷರ ವಿರುದ್ಧ ಆಗುವ ಸಾಧ್ಯತೆಯಿದೆ.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ’ ಯಾಕೆ? ಪುರುಷರಿಗೆ ಕಲ್ಯಾಣ ಆಗುವುದು ಬೇಡವೇ? ಮಕ್ಕಳ ವಿಷಯದಲ್ಲಿ ಅವರ ಶ್ರೇಯೋಭಿವೃದ್ಧಿಯಲ್ಲಿ ಪುರುಷರು ಭಾಗವಹಿಸುವುದು ಬೇಡವೇ?

ಹಿಂದೆ ಮಹಿಳೆಯರನ್ನು ದೂರವಿಟ್ಟು, ಅವರ ಅಭಿಪ್ರಾಯಗಳಿಗೆ, ಅನಿಸಿಕೆಗಳಿಗೆ, ವಿಚಾರಗಳಿಗೆ ಬೆಲೆ ಕೊಡದೆ ರೂಪಿಸಿದ ಕಟ್ಟಲೆಗಳೆಲ್ಲಾ ಪುರುಷ ದೃಷ್ಠಿಯಿಂದ ಕೂಡಿದ್ದು ಮಹಿಳೆಗೆ ಅನ್ಯಾಯವಾಗಿತ್ತು. ಈಗ ಅದನ್ನು ಸರಿಪಡಿಸಲು ಅಥವಾ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮಹಿಳಾ ಪ್ರಾಧಿಕಾರ, ವುಮೆನ್ಸ್ ಸೆಲ್, ಮಹಿಳಾ ಪೊಲೀಸ್ ಠಾಣೆ, ಮಹಿಳಾ ನ್ಯಾಯಾಲಯ, ಮಹಿಳಾ ಇಲಾಖೆ, ಮಹಿಳಾ ಕಲ್ಯಾಣ ಮಂತ್ರಿ… ಹೀಗೇ ಎಲ್ಲವನ್ನೂ ಅವಳಿಗೆ ಪ್ರತ್ಯೇಕವಾಗಿ ಮಾಡಿ ಮೈನ್ ಸ್ಟ್ರೀಮ್ (ಮುಖ್ಯ ಹಾದಿ)ಗೆ ಅವಳು ಬರದಂತೆ ಮಾಡಲಾಗುತ್ತಿದೆ.

ರಕ್ಷಿಸುವ ಅಥವಾ ಸಬಲೀಕರಿಸುವ ನಿಟ್ಟಿನಲ್ಲಿ ಅವಳ ಶೋಷಣೆ ಹೆಚ್ಚೇ ಆಗುತ್ತಿದೆ. ಸಮಾನತೆಯ ಮುಸುಕಿನಲ್ಲಿ ಪ್ರತ್ಯೇಕವಾಗುತ್ತಿದ್ದಾಳೆ ಮಹಿಳೆ.

ಹಲವಾರು ವರ್ಷಗಳು ಕಳೆದಿವೆ. Women centric lawಗಳನ್ನು ಮಾಡಿ. ಸ್ತ್ರೀಯರನ್ನು ಕೇಂದ್ರವಾಗಿ ಇಟ್ಟುಕೊಂಡು ವಿಶೇಷ ಕಾನೂನುಗಳನ್ನು ಮಾಡಲಾಗಿದೆ. ಅವಳಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ‘ವಿಶೇಷ’ ಅಂದರೆ ಅವು ಕೆಲವು ವರ್ಷಗಳು ಇರಬೇಕು… ಕಾಲಮಿತಿ ಇರಬೇಕು. ಕಾಲಮಿತಿ ಇಲ್ಲದಿದ್ದರೆ ಅದು ವಿಶೇಷವಲ್ಲ.. ಮಾಮೂಲು ಆಗಿಬಿಡುತ್ತದೆ. ವಿಶೇಷ ಸೌಲಭ್ಯಗಳ ದುರುಪಯೋಗ ಕೂಡ ಆಗುತ್ತದೆ. ನಾವು ಇರುವುದೇ ಇಬ್ಬರು… ಸ್ತ್ರೀ, ಪುರುಷರು. ಒಟ್ಟಿಗೆ ಬಾಳಿದರಷ್ಟೇ ಮಕ್ಕಳು, ಮರಿ, ಭವಿಷ್ಯ.

ವಿಶೇಷ ಎಂದ ತಕ್ಷಣ ಮಾಮೂಲು ಹಾದಿಯಿಂದ ದೂರವಿಡುತ್ತಾರೆ. ಸಮಾನ ಹಕ್ಕು ಕೊಟ್ಟರೆ, ಒಂದು ವೇದಿಕೆ ಕೊಟ್ಟರೆ ಒಟ್ಟಿಗೆ ಇರಬಹುದು ಮುಂದುವರಿಯಬಹುದು. Feminist ನ ಅರ್ಥ ಗೊತ್ತಿಲ್ಲದೆ ದೂರಿ, meninistಗಳು ಹುಟ್ಟಿಕೊಂಡಿದ್ದಾರೆ.

ಮಹಿಳಾ ಹಕ್ಕು ಹೋರಾಟದ ಜೊತೆಗೆ ಪುರುಷರ ಹಕ್ಕು ಎಂದು ಹೋರಾಡುತ್ತಿದ್ದಾರೆ. ಒಬ್ಬರ ವಿರುದ್ಧ ಒಬ್ಬರು ಹೋರಾಡಿದರೆ ಸೋಲು ಇಬ್ಬರಿಗೂ… humanistಗಳಾಗಿ, ಒಂದಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ. ಮಹಿಳೆಯರ ಸಮಸ್ಯೆ, ಪುರುಷರ ಸಮಸ್ಯೆ ಎನ್ನುವುದಕ್ಕಿಂಥ ಸಾಮಾಜಿಕ ಸಮಸ್ಯೆ ಎಂದು ಪರಿಗಣಿಸಿ ಪರಿಹಾರ ಹುಡುಕಿದರೆ ಉತ್ತಮ. ಪ್ರತ್ಯೇಕವಾದ ಪ್ರತ್ಯೇಕ ಹಾದಿಗಳನ್ನು ಸೃಷ್ಟಿಸುತ್ತದೆ.

Leave a Reply