ಭ್ರಷ್ಟಾಚಾರದಲ್ಲಿ ಪ್ರಧಾನಿ ಮೋದಿ ಭಾಗಿ: ರಾಹುಲ್ ಆರೋಪ, ರಾಷ್ಟ್ರೀಯ ಪಕ್ಷಗಳ ಬಗ್ಗೆ ಹೆಚ್ಡಿಕೆ ಹೇಳಿದ್ದೇನು? ಮಾರ್ಚ್ ವೇಳೆಗೆ ಪೌರಕಾರ್ಮಿಕರ ಕೆಲಸ ಖಾಯಂ ಎಂದ ಸಚಿವರು

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಸಾಹಿತಿ ಬರಗೂರು ರಾಮಚಂದ್ರ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಸಭೆ ನಡೆಸಿ ಬರುವ ಶೈಕ್ಷಣಿಕ ವರ್ಷದಿಂದಲೇ 1ರಿಂದ 10ನೇ ತರಗತಿಯ ಪರಿಷ್ಕೃತ ಪಠ್ಯಕ್ರಮ ಜಾರಿ ಮಾಡಲು ನಿರ್ಧರಿಸಿದರು.

ಡಿಜಿಟಲ್ ಕನ್ನಡ ಟೀಮ್:

ರಾಹುಲ್ ಗಾಂಧಿ ಆರೋಪ

ಹಲವು ದಿನಗಳಿಂದ ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ಮಾರೋಪ ಮಾಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈಗ ಒಂದು ಹೆಜ್ಜೆ ಮುಂದೆ ಹೋಗಿ ‘ಪ್ರಧಾನಿ ನರೇಂದ್ರ ಮೋದಿ ಅವರು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ. ಇದನ್ನು ನಾನು ಬಹಿರಂಗ ಮಾಡುತ್ತೇನೆ ಎಂದು ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ಬುಧವಾರ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದಿಷ್ಟು…

‘ಪ್ರಧಾನಿ ಅವರ ವೈಯಕ್ತಿಕ ವಿಷಯದ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಹೀಗಾಗಿ ನರೇಂದ್ರ ಮೋದಿ ಅವರು ಹೆದರಿದ್ದಾರೆ. ಸಂಸತ್ತಿನಲ್ಲಿ ಮಾತನಾಡಲು ನಮಗೆ ಹಕ್ಕಿದೆ. ನಾವು ಈ ಬಗ್ಗೆ ಮಾತನಾಡಬೇಕೆಂದು ಸಭಾಪತಿಗಳಿಗೂ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನೋಟು ಬದಲಾವಣೆಯ ನಿರ್ಧಾರ ದೇಶದ ಅತಿ ದೊಡ್ಡ ಹಗರಣವಾಗಿದೆ. ಹೀಗಾಗಿ ಮೋದಿ ಅವರು ಆ ಜಾಗದಲ್ಲಿ ಕೂರಲು ಅರ್ಹರಲ್ಲ. ನಾನು ಲೋಕಸಭೆಯಲ್ಲಿ ಮಾತನಾಡಬೇಕು. ಎಲ್ಲ ವಿಷಯವನ್ನು ಅಲ್ಲಿಯೇ ಹೇಳುತ್ತೇನೆ.’

ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಬಿಜೆಪಿ ಜತೆಗೆ ಎಎಪಿಯೂ ಪ್ರಶ್ನಿಸಿದೆ. ‘ರಾಹುಲ್ ಗಾಂಧಿ ಅವರ ಬಳಿ ಮೋದಿ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದ್ದರೆ ತಕ್ಷಣವೇ ಅದನ್ನು ಬಿಡುಗಡೆ ಮಾಡಲಿ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಇನ್ನು ಬಿಜೆಪಿಯು ಸಹ ರಾಹುಲ್ ಗಾಂಧಿ ಬಳಿ ನಿಜವಾಗಿಯೂ ದಾಖಲೆಗಳಿದ್ದರೆ ಅದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದೆ. ‘ರಾಹುಲ್ ಗಾಂಧಿಯ ಮಾತಿಗೆ ಮೋದಿ ಅವರು ಹೆದರುತ್ತಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದಿಂದ ಬಂದಿರುವ ಮತ್ತೊಂದು ಹಾಸ್ಯ’ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೆಚ್ಡಿಕೆ ಟೀಕೆ

‘ರಾಜ್ಯದ ಸಂಪತ್ತನ್ನು ಲೂಟಿ ಮಾಡಿ, ವರಿಷ್ಟರಿಗೆ ಕಪ್ಪ ಸಲ್ಲಿಸುವುದೇ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳ ದಂಧೆ…’ ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮಾಡಿರುವ ಆರೋಪ.

‘ರಾಜ್ಯವನ್ನು ಅಭಿವೃದ್ಧಿ ಮಾಡಲು ಎಲ್ಲಿದಲೂ ಹಣ ತರಬೇಕಿಲ್ಲ. ಇಲ್ಲಿರುವ ಸಂಪನ್ಮೂಲಗಳನ್ನೇ ಸದ್ಬಳಕೆ ಮಾಡಿಕೊಂಡರೆ ಸಾಕು. ಆದರೆ ಈ ರಾಷ್ಟ್ರೀಯ ಪಕ್ಷಗಳು ಪ್ಯಾಕೇಜ್, ಕಮಿಷನ್ ದಂಧೆಗಳ ಮೂಲಕ ದಿಲ್ಲಿಗೆ ಹಣ ಕಳುಹಿಸುವುದರಿಂದಲೇ ರಾಜ್ಯ ದಿವಾಳಿಯಾಗುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಅರ್ಕಾವತಿ ಲೇಔಟಿನ ಐನೂರು ಎಕರೆ ಭೂಮಿಯನ್ನು ರೀ ಡೂ ಹೆಸರಿನಲ್ಲಿ ಡಿನೋಟಿಫೈ ಮಾಡಿ ಲೂಟಿ ಮಾಡಿದೆ. ಈ ಲೂಟಿಗೆ ಚಾಲನೆ ನೀಡಿದ್ದೇ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ. ಈಗ ಸರ್ಕಾರ ಸ್ಟೀಲ್ ಬ್ರಿಡ್ಜ್ ಮಾಡಲು ಹೊರಟಿದೆ. ಇದೇ ಜಾಗದಲ್ಲಿ ಎಂಟು ಪಥದ ರಸ್ತೆ ಮಾಡಲು ಚೀನಾದ ಶಾಂಗೈ ಕನ್ಸ್ ಸ್ಟ್ರಕ್ಷನ್ಸ್ ಕಾರ್ಪೋರೇಶನ್ ಮುಂದೆ ಬಂದಿತ್ತು. ಈ ಕಾಮಗಾರಿಗೆ ಸರ್ಕಾರ ನಯಾ ಪೈಸೆ ಹಾಕಬೇಕಿಲ್ಲ ಎಂದು ಹೇಳಿತ್ತು. ಆದರೆ ಯಡಿಯೂರಪ್ಪನವರು ಆವ ಕಾರಣಕ್ಕೆ ಅವರನ್ನು ವಾಪಸ್ ಕಳುಹಿಸಿದರೋ ನನಗೆ ಗೊತ್ತಿಲ್ಲ. ಕಳಿಸದೆ ಹೋಗಿದ್ದರೆ, ಈ ಹಿಂದೆಯೇ ಆ ಕೆಲಸ ಆಗಿ ಹೋಗುತ್ತಿತ್ತು’ ಎಂದು ಟೀಕೆ ಮಾಡಿದರು ಎಚ್ಡಿಕೆ.

ಪೌರಕಾರ್ಮಿಕರ ಕೆಲಸ ಖಾಯಂ

ಮುಂದಿನ ವರ್ಷ ಮಾರ್ಚ್ ಒಳಗಾಗಿ ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕೆಲಸವನ್ನು ಖಾಯಂ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ.

‘ಹೊರ ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದು ಮಾಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಕನಿಷ್ಟ ₹ 14 ಸಾವಿರ ವೇತನ ಬರುವಂತೆ ಮಾಡುತ್ತೇವೆ. ಪೌರ ಕಾರ್ಮಿಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಈ ಪದ್ಧತಿಯನ್ನು ತೆಗೆದುಹಾಕುವುದಾಗಿ’ ಭರವಸೆ ನೀಡಿದರು.

ಅಂಗವಿಕಲರ ಹಕ್ಕು ಮಸೂದೆ ಅಂಗೀಕಾರ

ಇಂದು ರಾಜ್ಯಸಭೆಯಲ್ಲಿ ಅಂಗವಿಕಲರ ಹಕ್ಕು ಮಸೂದೆಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ ವಿಕಲಚೇತನರಿಗೆ ದೊರೆಯಬೇಕಿರುವ ಮೂಲಭೂತ ಸೌಕರ್ಯಗಳು ಕಡ್ಡಾಯವಾಗಿ ದೊರೆಯುವಂತೆ ಮಾಡಲಾಗಿದೆ. ಈ ಮಸೂದೆಯು ಅಂಗವೈಕಲ್ಯ ವ್ಯಕ್ತಿ ಕಾಯ್ದೆ 1995 (ಸಮಾನ ಅವಕಾಶ, ಹಕ್ಕು ರಕ್ಷಣೆ ಹಾಗೂ ಸಂಪೂರ್ಣ ಭಾಗಿತ್ವ) ರ ಸ್ಥಾನವನ್ನು ತುಂಬಲಿದೆ. 2007ರಲ್ಲಿ ಭಾರತವು ಅಮೆರಿಕ ಜತೆಗೆ ಅಂಗವಿಕಲರ ಹಕ್ಕಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೂ ಸಹಿ ಹಾಕಿತ್ತು. ಈ ಮಸೂದೆಯು 2014ರ ಫೆಬ್ರವರಿಯಿಂದಲೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯದೇ ಕಾದು ಕುಳಿತಿತ್ತು. ಇಂದು ಈ ಮಸೂದೆಗೆ ಅನುಮೋದನೆ ಸಿಗುವ ಮೂಲಕ ಈ ಕಾಯ್ದೆ ಜಾರಿಗೆ ಬಂದಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿರುವ ಭಾರತೀಯ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಎನ್ ಕೌಂಟರ್ ಮೂಲಕ ಹೊಡೆದು ಹಾಕಿದೆ. ಅನಂತನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಾರತೀಯ ಸೇನೆಯ ಗಸ್ತು ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆ ದಿಟ್ಟ ಉತ್ತರ ನೀಡಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಬಸಿತ್ ಅಹ್ಮದ್ ದರ್ ಎಂಬ ಉಗ್ರರನೂ ಸಹ ಹತನಾಗಿರುವುದಾಗಿ ಸೇನೆ ಮಾಹಿತಿ ನೀಡಿದೆ.
  • ಬಹುಕೋಟಿ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತರಾಗಿರುವ ವಾಯು ಸೇನಾ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಹಾಗೂ ಇತರ ಆರೋಪಿಗಳನ್ನು ನ್ಯಾಯಾಲಯ ಇನ್ನು ಮೂರುದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ. ಅದರೊಂದಿಗೆ ಸಿಬಿಐ ಡಿ.17ರವರೆಗೂ ಎಸ್.ಪಿ ತ್ಯಾಗಿ ಜತೆಗೆ ಸಂಜೀವ್ ತ್ಯಾಗಿ, ಗೌತಮ್ ಖೇತಾನ್ ಅವರನ್ನು ವಿಚಾರಣೆಗೆ ಒಳಪಡಿಸಲಿದೆ.

Leave a Reply