ರಾಹುಲ್ ಗಾಂಧಿ, ಬರ್ಕಾ ದತ್ ಸೇರಿದಂತೆ ಹಲವರ ಟ್ವಿಟರ್ ಖಾತೆಗೆ ಕನ್ನ ಹಾಕಿದ ಹ್ಯಾಕರ್ಸ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಉದ್ಯಮಿ ವಿಜಯ್ ಮಲ್ಯ ಪತ್ರಕರ್ತರಾದ ಬರ್ಕಾ ದತ್ ಹಾಗೂ ರವೀಶ್ ಕುಮಾರ್ ಅವರ ಟ್ವಿಟರ್ ಖಾತೆಗಳಿಗೆ ಕನ್ನ ಹಾಕಿದ್ದ ಹ್ಯಾಕರ್ಸ್ ಗಳು ಈಗ ಸಾಕಷ್ಟು ಖ್ಯಾತಿ ಪಡೆಯುತ್ತಿದ್ದಾರೆ. ಈ ಹ್ಯಾಕರ್ಸ್ ಗಳು ತಮ್ಮನ್ನು ತಾವು ಲೇಜಿಯನ್ (ದೊಡ್ಡ ಪಡೆ) ಎಂದು ಕರೆದುಕೊಂಡಿದ್ದು, ನಮ್ಮಲ್ಲಿರುವ ಮಾಹಿತಿಯನ್ನು ಹೊರ ಹಾಕಿದರೆ, ಇಡೀ ಭಾರತವೇ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇವರು ಮಾಡಿರುವುದು ಕಾನೂನು ಬಾಹೀರ ಕೆಲಸವೇ ಆಗಿದ್ದರು, ಹಾಲಿವುಡ್ ಚಿತ್ರಗಳಲ್ಲಿ ವಿಲನ್ ಗಳೇ ಕೇಂದ್ರ ಬಿಂದುವಾಗಿ ಪ್ರೇಕ್ಷಕರನ್ನು ಸೆಳೆಯುವಂತೆ ಈ ಹ್ಯಾಕರ್ಸ್ ಗಳು ಈಗ ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಲೇಜಿಯನ್ ಪಡೆ ಅಂತರ್ಜಾಲದ ಮೂಲಕವೇ ವಾಶಿಂಗ್ಟನ್ ಪೋಸ್ಟ್ ಪತ್ರಿಕೆಗೆ ಸಂದರ್ಶನ ನೀಡಿದ್ದು, ತಾವು ಅಪೋಲೊ ಆಸ್ಪತ್ರೆ ಹಾಗೂ ಇತರೆ ಸರ್ವರ್ (ಜಾಲತಾಣ) ಗಳನ್ನು ಹ್ಯಾಕ್ ಮಾಡಿ ಬಳಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

‘ನಮ್ಮ ಪಡೆ ಕಳೆದ ಕೆಲವು ವಾರಗಳವರೆಗೂ ರಾಜಕೀಯ ದಾಖಲೆಗಳಿಗೆ ಕನ್ನ ಹಾಕುವ ಆಸಕ್ತಿ ಹೊಂದಿರಲಿಲ್ಲ. ಆದರೆ ಹ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿ ನಮಗೆ ಅತಿ ದೊಡ್ಡ ಪ್ರಮಾಣದಲ್ಲಿ ಭಾರತದ ಖ್ಯಾತನಾಮರ ಮಾಹಿತಿಗಳು ಲಭಿಸಿವೆ’ ಎಂದು ಹ್ಯಾಕರ್ಸ್ ಗುಂಪಿನ ವ್ಯಕ್ತಿಯೊಬ್ಬ ಹೇಳಿಕೆ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತಾ ಮೋದಿ ತಮ್ಮ ಮುಂದಿನ ಗುರಿ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಲಿದೆ. ಈಗ ಬಂದಿರುವ ಮಾಹಿತಿಗಳು ಕೇವಲ ಚಿಕ್ಕ ತುಣುಕು ಮಾತ್ರ, ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಪ್ರಮಾಣದ ಮಾಹಿತಿಗಳು ಸೋರಿಕೆಯಾಗಲಿವೆ. ನಾವು ಒಂದು ಸೇನಾ ಪಡೆ ಇದ್ದಂತೆ’ ಎಂದಿದ್ದಾರೆ ಹ್ಯಾಕರ್ಸ್.

ಒಟ್ಟಿನಲ್ಲಿ ಭಾರತದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಖಾತೆಗಳಿಗೆ ಕನ್ನ ಹಾಕುತ್ತಲೇ ಎಲ್ಲರ ಗಮನ ಸೆಳೆದಿರುವ ಈ ಲೇಜಿಯನ್ ಗಳು ಮುಂದಿನ ದಿನಗಳಲ್ಲಿ ಇನ್ನು ಯಾವ ರೀತಿಯ ಮಾಹಿತಿಗಳನ್ನು ಹೊರಹಾಕಲಿದ್ದಾರೆ, ಯಾರನ್ನು ಗುರಿಯಾಗಿಸಲಿದ್ದಾರೆ ಎಂಬ ಕುತೂಹಲವನ್ನು ಹುಟ್ಟಿಸಿದೆ.

Leave a Reply