ಅಮೆರಿಕದಲ್ಲಿ ಏರಿರುವ ಬಡ್ಡಿ ದರ ಭಾರತಕ್ಕೆ ಹಾಕಲಿದೆಯೇ ಬರೆ?

ಡಿಜಿಟಲ್ ಕನ್ನಡ ವಿಶೇಷ:

ನಿನ್ನೆ ಅಮೇರಿಕ ತನ್ನ ಫೆಡರಲ್ ಇಂಟರೆಸ್ಟ್ ರೇಟ್ ಅನ್ನು 25 ಬೇಸಿಸ್ ಪಾಯಿಂಟ್ ಏರಿಸಿದೆ. ಫೆಡರಲ್ ಬಡ್ಡಿ ದರ 0.5 ಇದದ್ದು ಇದೀಗ 0.75 ಕ್ಕೆ ಏರಿಕೆ ಆಗಿದೆ. ಈ ವರ್ಷದಲ್ಲಿ ಇದು ಪ್ರಥಮ ರೇಟ್ ಏರಿಕೆಯಾಗಿದೆ. ಇದು ಜಗತ್ತಿನ ಎಲ್ಲಾ ವಿತ್ತ ಪಂಡಿತರು ಎಣಿಸಿದಂತೆ ಆಗಿದೆ. ಈ ರೀತಿಯ ದರ ಏರಿಕೆ ಬಹು ನಿರೀಕ್ಷಿತವಾಗಿತ್ತು. ಕಳೆದ ಏಳೆಂಟು ವರ್ಷದಿಂದ ಜಡ್ಡು ಹಿಡಿದಿರುವ ಅಮೇರಿಕ ಮಾರುಕಟ್ಟೆಗೆ ದರ ಏರಿಕೆಯ ಟಾನಿಕ್ ಬೇಕಾಗಿತ್ತು. ಎಲ್ಲಕ್ಕೂ ಮುಖ್ಯ 2017ರಲ್ಲಿ ರಲ್ಲಿ ಈ ಫೆಡರಲ್ ಬಡ್ಡಿ ದರ ಇನ್ನಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. 2017 ರ ವರ್ಷಾಂತ್ಯದ ವೇಳೆಗೆ ಈ ಬಡ್ಡಿದರ 1.5% ತಲುಪಲಿದೆ ಎನ್ನುವುದು ಪಂಡಿತರ ಲೆಕ್ಕಾಚಾರ. ನಿಧಾನವಾಗಿಯಾದರೂ ಸರಿ ಅಮೇರಿಕ ಮಾರುಕಟ್ಟೆಯಲ್ಲಿ ಹಣದುಬ್ಬರ ಕಾಣಿಸಿಕೊಳ್ಳಲು ಶುರುವಾಗಿದೆ. ಜೀವಂತ ಮಾರುಕಟ್ಟೆಯ ಪ್ರಮುಖ ಲಕ್ಷಣ ಹಣದುಬ್ಬರ. ಇದೊಂತರ ಎರಡು ಅಲುಗಿನ ಕತ್ತಿಯಂತೆ ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ.  ಸರಿ ಹೆಚ್ಚಾಗುತ್ತಿರುವ ಫೆಡರಲ್ ಬಡ್ಡಿ ದರ ಅಮೇರಿಕ ಮರುಕಟ್ಟೆಯನ್ನು ಪುನರುಜ್ಜೀವನಗೊಳಿಸುತ್ತದೆ ಇದರಿಂದ ಭಾರತದ ಮೇಲೆ ಆಗುವ ಪರಿಣಾಮಗಳೇನು? ಎನ್ನುವುದರ ಒಂದು ಸುತ್ತು ಅವಲೋಕಿಸೋಣ.

  • ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಬಂಡವಾಳಗಾರರು ಅಮೇರಿಕ ದೇಶದಲ್ಲಿ ಸಾಲ ಪಡೆದು ಇಲ್ಲಿ ಹೂಡಿಕೆ ಮಾಡುತ್ತಿದ್ದರು. ಎಕೆಂದರೆ ಅಲ್ಲಿ ಸಾಲದ ಮೇಲಿನ ಬಡ್ಡಿ ದರ ಅತ್ಯಂತ ಕಡಿಮೆ ಇತ್ತು ಮತ್ತು ಭಾರತದ ಹೂಡಿಕೆ ಮೇಲಿನ ಬಡ್ಡಿ ದರ ಹೆಚ್ಚಾಗಿತ್ತು. ಹೀಗಾಗಿ ತಮ್ಮ ಹೂಡಿಕೆ ಮೇಲಿನ ಲಾಭದಿಂದ ಅಲ್ಲಿನ ಸಾಲ ಕಟ್ಟಲು ಮತ್ತು ಇಲ್ಲಿ ಹಣ ತೊಡಗಿಸಲು ಎರಡೂ ಸಮತೋಲನ ಕಾಯಲು ಸಾಧ್ಯವಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಪದೇ ಪದೇ ತನ್ನ ರೆಪೋ ರೇಟ್ ಕಡಿಮೆ ಮಾಡುತ್ತಾ ಹೋಗುತ್ತಿದೆ. ಅತ್ತ ಅಮೇರಿಕ ತನ್ನ ಫೆಡರಲ್ ಬಡ್ಡಿ ದರ ಹೆಚ್ಚಾಗಿಸುತ್ತಾ ಸಾಗುತ್ತದೆ. ಇದು ಅಮೇರಿಕದಲ್ಲಿ ಮಾಡುವ ಸಾಲದ ವೆಚ್ಚ ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿನ ಹೂಡಿಕೆಯ ಮೇಲಿನ ಲಾಭ ಕಡಿಮೆ ಮಾಡುತ್ತದೆ. ಹೀಗಾಗಿ ವಿದೇಶಿ ಹೂಡಿಕೆದಾರು ತಮ್ಮ ಹೂಡಿಕೆಯನ್ನು ಭಾರತದಿಂದ ಹೊರ ತೆಗೆಯುವ ಸಾಧ್ಯತೆ ಹೆಚ್ಚಿದೆ.
  • ಭಾರತೀಯ ರುಪಾಯಿ ಅಮೇರಿಕ ಡಾಲರ್ ಎದುರು ಬಹಳಷ್ಟು ಅಪಮೌಲ್ಯಗೊಂಡಿದೆ. ಅಮೇರಿಕ ದೇಶದಲ್ಲಿ ಹೊಸ ಅಧ್ಯಕ್ಷರ ಆಯ್ಕೆ, ಯುರೋ ಝೋನ್ ನಲ್ಲಿ ಕಡಿಮೆಯಾಗದ ಆರ್ಥಿಕ ಸಂಕಷ್ಟ ಇವು ಹೂಡಿಕೆದಾರ ಮತ್ತೆ ಅಮೇರಿಕ ದೇಶವನ್ನ ಅಪ್ಪಲು ಕಾರಣವಾಗಿವೆ. ಸಹಜವಾಗೇ ಹೆಚ್ಚಿದ ನಂಬಿಕೆ, ವಿಶ್ವಾಸ ಡಾಲರ್ ಅನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಿದೆ. ಕುಸಿಯುತ್ತಿರುವ ರುಪಾಯಿ ಮೇಲೆ ಹೂಡಿಕೆ ಮಾಡಲು ಯಾರು ತಾನೇ ಮುಂದೆ ಬಂದಾರು?
  • ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ (FII ) ಫೆಡರಲ್ ಬಡ್ಡಿ ದರ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಾಗುತ್ತದೆ ಎನ್ನುವ ವಾಸನೆ ಹಿಡಿದು ನವೆಂಬರ್ ತಿಂಗಳಿನಲ್ಲಿ 17 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನಮ್ಮ ಷೇರು ಮಾರುಕಟ್ಟೆಯಿಂದ ಹೊರತೆಗೆದಿದೆ. ಕೇವಲ 0.25% ಬಡ್ಡಿ ದರ ಏರಿಕೆಗೆ ಈ ರೀತಿಯ ಪ್ರತಿಕ್ರಿಯೆ ಕಂಡು ಬಂದಿದೆ. 2017 ರಲ್ಲಿ ಕನಿಷ್ಠ ಎರಡರಿಂದ ಮೂರು ಬಾರಿ ಫೆಡರಲ್ ಬಡ್ಡಿ ದರ ಹೆಚ್ಚಾಗುವ ಸಾಧ್ಯತೆ ಇದೆ. ಇಂದು 0.75 ಇರುವ ಬಡ್ಡಿ ದರ 1.5 ತಲುಪುತ್ತದೆ ಎನ್ನುತ್ತದೆ ಲೆಕ್ಕಾಚಾರ. ಅಂದರೆ ಇಂದಿನ ರೇಟ್ ನ ದುಪ್ಪಟ್ಟು! ನಮ್ಮ ಷೇರು ಮಾರುಕಟ್ಟೆ ಕುಸಿಯಲು ಬೇರೆ ಕಾರಣವೇಕೆ ಬೇಕು?
  • ಕುಸಿಯುವ ರುಪಾಯಿ ಮೌಲ್ಯ ಆಮದು (ಇಂಪೋರ್ಟ್) ಮೇಲಿನ ಖರ್ಚನ್ನು ಹೆಚ್ಚಿಸುತ್ತದೆ. ಪೆಟ್ರೋಲ್ ಡೀಸೆಲ್ ಮೇಲಿನ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗದಿದ್ದರು ತೈಲ ಬೆಲೆ ಡಾಲರ್ ನಲ್ಲಿ ಅಳೆಯುವುದರಿಂದ ನಾವು ಅದಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಸಹಜವಾಗೇ ಇದು ನಮ್ಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುವಂತೆ ಮಾಡುತ್ತದೆ. ಇದು ಸಾರಿಗೆ ವೆಚ್ಚ ಹೆಚ್ಚಿಸುತ್ತದೆ, ಒಂದಕ್ಕೊಂದು ಕೊಂಡಿಯಂತೆ ಹೆಚ್ಚುತ್ತಾ ಹೋಗಿ ನಮ್ಮ ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ.
  • ಆಗಲೇ ಸೊರಗುತ್ತಿರುವ ನಮ್ಮ IT  ಕಂಪನಿಗಳು ಮತ್ತಷ್ಟು ಸೊರಗಲಿವೆ. ಭಾರತದ IT  ಉದ್ಯಮದ 60 ಪ್ರತಿಶತ ಹಣ ಬರುವುದು ಅಮೇರಿಕ ಮತ್ತು ಯೂರೋಪ್ ದೇಶಗಳಿಂದ. ಅಪಮೌಲ್ಯಗೊಂಡ ರುಪಾಯಿ ನಿನ್ನೆ ಗಳಿಸುತ್ತಿದ್ದ ಡಾಲರ್ ಗಳಿಸಲು ದುಪ್ಪಟ್ಟು ವೇಳೆ ವ್ಯಯಿಸಬೇಕಾದ ಸ್ಥಿತಿ ನಿರ್ಮಿಸುತ್ತದೆ.

ಮೇಲೆ ಹೇಳಿದ ಎಲ್ಲವೂ ದಿನದೊಪ್ಪತ್ತಿನಲ್ಲಿ ಆಗುತ್ತದೆ ಎನ್ನುವುದಲ್ಲ 2017 ರ ವರ್ಷಾಯಂತ್ಯದ ವೇಳೆಗೆ ಇವುಗಳ ಹೆಚ್ಚಿನ ಪರಿಣಾಮ ಕಾಣಲು ಸಿಗುತ್ತದೆ. ಟ್ರಂಪ್ ಅಮೇರಿಕ ಅಧ್ಯಕ್ಷ ಆಗುವ ಮುನ್ನ ಆತನನ್ನು ಹೀಯಾಳಿಸಿದ್ದ ಉದ್ಯಮಿ ವರ್ಗ ಆಗಲೇ ಆತನ ಬೆನ್ನಿಗೆ ನಿಂತಿದೆ. ಆತನ ಪ್ರತಿ ನಡೆಯನ್ನು ಜೈಕಾರದೊಂದಿಗೆ ಸ್ವಾಗತಿಸುತ್ತಿದೆ. ದೇಶ ಭಾಷೆ ಯಾವುದೇ ಇರಲಿ ‘ಗೆದ್ದ ಎತ್ತಿನ ಬಾಲ ಹಿಡಿಯುವುದು’ ಅನಾದಿ ಕಾಲದಿಂದ ಮನುಷ್ಯನ ಸಹಜ ಸ್ವಭಾವ ಎನ್ನುವುದನ್ನು ಅಮೆರಿಕನ್ ಉದ್ಯಮಿಗಳು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಈ ಹಿಂದೆ ಡಿಜಿಟಲ್ ಕನ್ನಡದಲ್ಲಿ  ಭಾರತದಲ್ಲಿ ಕುಸಿಯುತ್ತಿರುವ ಬಡ್ಡಿ ದರ ಅಷ್ಟೇನೂ ಒಳ್ಳೆಯದಲ್ಲ ಎನ್ನುವುದರ ಬಗ್ಗೆ ವಿಶ್ಲೇಷಿಸಿದ್ದೆವು . ಏರುತ್ತಿರುವ ಫೆಡರಲ್ ಬಡ್ಡಿ ದರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬದಲಾಗುತ್ತಿರುವ ಹಣಕಾಸು ಆಟ ನಮ್ಮ ವಿಶ್ಲೇಷಣೆಗೆ ಮತ್ತಷ್ಟು ಪುಷ್ಟಿ ನೀಡಿದೆ.

Leave a Reply