ಡಿಜಿಟಲ್ ಪಾವತಿಗೆ ಬಹುಮಾನದ ಉತ್ತೇಜನ, ಮುಂದುವರಿದ ಐಟಿ ದಾಳಿ, ಮೋದಿ ಮೇಲಿನ ಸಿಟ್ಟನ್ನು ಜನತಾ ದರ್ಶನದಲ್ಲಿ ಬರಿದಾಗಿಸಿದ ಮುಮಂ, ರಾಮದೇವ್ ಅವರ ಪತಂಜಲಿಗೆ ಬಿತ್ತು ₹ 11 ಲಕ್ಷ ದಂಡ

Seer, Dr. Nirmalanandanatha, with others during Hindu Spiritual Fair-2016 at National College in Bengaluru on Thursday.

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 5 ದಿನಗಳ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಕ್ಕೆ ಗುರುವಾರ ಆಗಮಿಸಿದ್ದ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ.

ಡಿಜಿಟಲ್ ಕನ್ನಡ ಟೀಮ್:

ಡಿಜಿಟಲ್ ವ್ಯವಹಾರ ನಡೆಸಿದವರಿಗೆ ಬಹುಮಾನ, ನೀತಿ ಆಯೋಗದ ಹೊಸ ಪ್ರಯತ್ನ

ಡಿಜಿಟಲ್ ವ್ಯವಸ್ಥೆ ಮೂಲಕ ಹಣಕಾಸು ವ್ಯವಹಾರ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಲಾಟರಿ ಶೈಲಿಯಲ್ಲಿ ಬಹುಮಾನ ನೀಡಲು ನೀತಿ ಆಯೋಗ ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಗ್ರಾಹಕರಿಗಾಗಿ ‘ಲಕ್ಕಿ ಗ್ರಾಹಕ ಯೋಜನೆ’ ಹಾಗೂ ವ್ಯಾಪಾರಿಗಳಿಗೆ ‘ಡಿಜಿ-ಧನ್ ವ್ಯಾಪಾರಿ ಯೋಜನೆ’ ಮೂಲಕ ಡಿಜಿಟಲ್ ಪದ್ಧತಿ ಮೂಲಕ ವ್ಯವಹರಿಸುವವರಿಗೆ ದಿನನಿತ್ಯ, ವಾರ ಹಾಗೂ ಮೇಘಾ ಬಹುಮಾನದ ಯೋಜನೆಯನ್ನು ಜಾರಿಗೆ ತಂದಿದೆ.

₹ 50 ರಿಂದ 3000 ವರೆಗಿನ ವಹಿವಾಟಿಗೆ ಈ ಬಹುಮಾನ ಸಿಗಲಿದ್ದು, ಹೆಚ್ಚಿನ ಜನರು ಡಿಜಿಟಲ್ ವ್ಯವಹಾರದತ್ತ ಮುಖಮಾಡಲು ಈ ಪ್ರಯತ್ನ ಮಾಡಲಾಗಿದೆ. ಈ ಯೋಜನೆಗಾಗಿ ₹ 350 ಕೋಟಿ ಮೀಸಲಿಡಲಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ತಿಳಿಸಿದ್ದಾರೆ. ಈ ಯೋಜನೆ ಪ್ರಕಾರ ಪ್ರತಿನಿತ್ಯ ಬಹುಮಾನದಲ್ಲಿ 15 ಸಾವಿರ ಮಂದಿ ಡಿಸೆಂಬರ್ 25ರಿಂದ ಮುಂದಿನ ವರ್ಷ ಏಪ್ರಿಲ್ 14ರವರೆಗೆ ನಿತ್ಯ ₹ 1 ಸಾವಿರ ರುಪಾಯಿ ಬಹುಮಾನ ಪಡೆಯಲಿದ್ದಾರೆ. ಇನ್ನು ವಾರದ ಬಹುಮಾನದಲ್ಲಿ 7 ಸಾವಿರ ಮಂದಿ ₹ 1 ಲಕ್ಷ, ₹ 10 ಸಾವಿರ ಹಾಗೂ ₹ 5 ಸಾವಿರ ಮೌಲ್ಯದ ಬಹುಮಾನ ಪಡೆಯಲಿದ್ದಾರೆ. ಇನ್ನು ವ್ಯಾಪಾರಿಗಳಿಗೆ 7 ಸಾವಿರ ಮಂದಿ ಪ್ರತಿ ವಾರ ₹ 50 ಸಾವಿರ, 5 ಸಾವಿರ ಹಾಗೂ 2,500 ಮೌಲ್ಯದ ಬಹುಮಾನ ಪಡೆಯಲಿದ್ದಾರೆ. ಮೇಘಾ ಬಹುಮಾನ ವಿಭಾಗದಲ್ಲಿ ಗ್ರಾಹಕರಿಗೆ ಮೊದಲ ಬಹುಮಾನ ₹ 1 ಕೋಟಿ ನೀಡಲಾಗುವುದು. ನಂತರ ₹ 50 ಲಕ್ಷ, ₹ 25 ಲಕ್ಷವನ್ನು ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಿಗೆ ನೀಡಲಾಗುವುದು. ವ್ಯಾಪಾರಿಗಳಿಗೆ ₹ 50 ಲಕ್ಷ, ₹ 25 ಲಕ್ಷ ಹಾಗೂ ₹ 5 ಲಕ್ಷ ಬಹುಮಾನ ನಿಗದಿಪಡಿಸಲಾಗಿದೆ.

ಇದೇ ವೇಳೆ ಕೇಂದ್ರ ಸರ್ಕಾರ ₹ 500 ಮುಖಬೆಲೆಯ ನೋಟಿನ ಮುದ್ರಣದ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದೆ ಎಂದು ತಿಳಿಸಿದೆ. ಮುಂದಿನ 10 ದಿನಗಳಲ್ಲಿ ಈಗಾಗಲೇ ರದ್ದುಗೊಂಡಿರುವ ಶೇ.50ರಷ್ಟು ಮೌಲ್ಯದ ನೋಟುಗಳ ಮುದ್ರಣವನ್ನು ಮಾಡಲಾಗುವುದು. ದೇಶದಲ್ಲಿರುವ 2.2 ಲಕ್ಷ ಬ್ಯಾಂಕು ಎಟಿಎಂಗಳ ಪೈಕಿ 2 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಅಕ್ರಮವಾಗಿ ನೋಟು ಬದಲಾವಣೆ ಮಾಡಿಕೊಂಡ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ₹ 2000 ಮುಖಬೆಲೆಯ ನೋಟುಗಳನ್ನು ಶೀಘ್ರವಾಗಿಯೇ ಚಲಾವಣೆಗೆ ತರಲಾಗುವುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ನಕಲಿ ಖಾತೆ ಮೂಲಕ 60 ಕೋಟಿ ಅವ್ಯವಹಾರ, ಆಕ್ಸಿಸ್… ಏನ್ ನಿನ್ನ ಪ್ರಾಬ್ಲಂ?

ನೋಟು ಅಮಾನ್ಯದ ನಂತರ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿಗಳು ಮಾಮೂಲು ಎಂಬಂತಾಗಿವೆ. ಕೋಟಿಗಟ್ಟಲೇ ಹಣವೂ ಸಿಗುತ್ತಿದೆ. ಹೆಚ್ಚಿನ ಪ್ರಕರಣಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವ ಅಂಶವೂ ಬೆಳಕಿಗೆ ಬಂದಿದೆ.

ಈ ಪೈಕಿ ಆಕ್ಸಿಸ್ ಬ್ಯಾಂಕ್ ತುಸು ಹೆಚ್ಚೇ ಸುದ್ದಿಯಲ್ಲಿದೆ, ಕೆಟ್ಟ ಕಾರಣಗಳಿಗಾಗಿ. ಗುರುವಾರವೂ ನೊಯ್ಡಾದ ಸೆಕ್ಟರ್ 51 ವಿಭಾಗದ ಆಕ್ಸಿಸ್ ಬ್ಯಾಂಕ್ ಮೇಲೆ ಐಟಿ ದಾಳಿ ನಡೆದಿದ್ದು, ಸುಮಾರು 20 ನಕಲಿ ಖಾತೆಗಳನ್ನು ಸೃಷ್ಟಿಸಿ 60 ಕೋಟಿ ರುಪಾಯಿಗಳ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಕೆಲದಿನಗಳ ಹಿಂದೆ ದೆಹಲಿಯ ಚಾಂದನಿ ಚೌಕ ಪ್ರಾಂತ್ಯದ ಆಕ್ಸಿಸ್ ಬ್ಯಾಂಕಿನಲ್ಲಿ 44 ಅಕ್ರಮ ಖಾತೆಗಳನ್ನು ಸೃಷ್ಟಿಸಿ 100 ಕೋಟಿ ರುಪಾಯಿಗಳ ಅವ್ಯವಹಾರ ಮಾಡಲಾಗಿತ್ತು. ಆ ದಾಳಿಯ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು 16 ಉದ್ಯೋಗಿಗಳನ್ನು ಅಮಾನತು ಮಾಡಿ ಇಬ್ಬರು ಬ್ಯಾಂಕ್ ಮ್ಯಾನೇಜರ್’ಗಳನ್ನು ಬಂಧಿಸಿತ್ತು.

ಅದೇಕೋ ಆಕ್ಸಿಸ್ ಬ್ಯಾಂಕಿನಲ್ಲೇ ಹೆಚ್ಚಿನ ಸಮಸ್ಯೆಗಳಿದ್ದಂತೆ ತೋರುತ್ತಿದೆ. ಸರ್ಕಾರದ ಏಜೆನ್ಸಿಗಳು ಈ ಬಗ್ಗೆ ವಿಶೇಷವಾಗಿ ಎಚ್ಚರಿಸಿದ್ದಾರೆಂದೂ ಹೇಳಲಾಗುತ್ತಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಬ್ಯಾಂಕ್ ಅಧಿಕಾರಿಗಳು, ‘ಉಳಿದೆಲ್ಲ ಬ್ಯಾಂಕುಗಳಂತೆಯೇ ನಾವು ಕಾರ್ಯನಿರ್ವಹಿಸುತ್ತೇವೆ. ಆರ್ಬಿಐ, ಜಾರಿ ನಿರ್ದೇಶನಾಲಯಗಳ ಸೂಚನೆಗಳು ನಮಗೂ ಬಂದಿವೆ. ಅದಕ್ಕೆ ಹೊರತಾದ ಯಾವ ಎಚ್ಚರಿಕೆಗಳನ್ನೂ ನೀಡಲಾಗಿಲ್ಲ’ಎಂದಿದ್ದಾರೆ.

ಪಠ್ಯಕ್ರಮ ಬದಲಾವಣೆ ಹಿಂದೆ ಅಹಿಂದ ಧೋರಣೆ: ಕಾಗೇರಿ ಆರೋಪ

ಮುಂದಿನ ಶೈಕ್ಷಣಿಕ ವರ್ಷದಿಂದಲೇ 1 ರಿಂದ 10ನೇ ತರಗತಿವರೆಗಿನ ಪಠ್ಯಕ್ರಮ ಬದಲಾವಣೆಗೆ ಸರ್ಕಾರ ತರಾತುರಿ ನಡೆಸಿದ್ದು, ಈ ಪಠ್ಯಕ್ರಮಗಳಲ್ಲಿ ಅಹಿಂದ ವರ್ಗಗಳ ಹಾಗೂ ಎಡಪಂಥೀಯ ಧೋರಣೆಯನ್ನು ಸೇರಿಸಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೇರಿ ಅವರು, ‘ಮುಖ್ಯಮಂತ್ರಿಗಳು ಪಠ್ಯಕ್ರಮ ಬದಲಾವಣೆ ವಿಷಯವಾಗಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯ ಜತೆ ಮಾತುಕತೆ ನಡೆಸಿದ್ದು, ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿದೆ. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ. 2005ರಲ್ಲಿ ಕೇಂದ್ರ ಸರ್ಕಾರ ಹೊಸ ಪಠ್ಯಕ್ರಮ ಜಾರಿಗೆ ತರಲು ಮಾರ್ಗಸೂಚಿ ಹೊರಡಿಸಿತ್ತು.ಬರಗೂರು ಅವರ ನೇತೃತ್ವದ ಸಮಿತಿ ಶಿಫಾರಸ್ಸು ನೀಡದೇ, ಪಠ್ಯಕ್ರಮ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಆ ಮೂಲಕ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಪಠ್ಯಕ್ರಮ ಬದಲಾವಣೆ ಮಾಡಲಾಗುತ್ತಿಲ್ಲ’ ಎಂದು ದೂರಿದರು.

ಮೋದಿ ಮೇಲಿನ ಮೇಲಿನ ಸಿಎಂ ಸಿಟ್ಟು ಜನತಾದರ್ಶನದಲ್ಲಿ

ಪ್ರಧಾನ ಮಂತ್ರಿ ಅವರ ನೋಟು ಅಮಾನ್ಯ ನಿರ್ಧಾರದ ಬೇಸರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತಾದರ್ಶನದಲ್ಲಿ ಹೊರ ಹಾಕಿದ್ದಾರೆ. ತಮ್ಮ ತವರು ಕ್ಷೇತ್ರ ವರುಣಾದಿಂದ ಮುಖ್ಯಮಂತ್ರಿಗಳ ನೆರವು ಬಯಸಿ ಬಂದಿದ್ದ ಕಮಲಮ್ಮ ಎಂಬ ಮಹಿಳೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಆರ್ಥಿಕ ಸಹಾಯ ಬೇಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ‘ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿ ಎಲ್ಲದಕ್ಕೂ ಬೀಗ ಹಾಕಿದ್ದಾರೆ. ಈಗ ಮೊದಲಿನಂತೆ ಹಣ ಕೊಡಲು ಸಾಧ್ಯವಿಲ್ಲ. ಬೇಕಿದ್ದರೆ ಬಸ್ ಚಾರ್ಜ್ ಕೊಡುತ್ತೇನೆ ಸುಮ್ಮನೆ ಊರಿಗೆ ಹೋಗು…’ ಎಂದರು. ಆ ಮಹಿಳೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ನಾಳೆಯಿಂದ ಕೇವಲ ಬ್ಯಾಂಕುಗಳಲ್ಲಿ ಮಾತ್ರ ಹಳೇ ನೋಟು

ನೋಟು ಅಮಾನ್ಯ ನಿರ್ಧಾರದ ಬೆನ್ನಲ್ಲೇ ಜನರಿಗೆ ಆಗುವ ಸಮಸ್ಯೆ ತಪ್ಪಿಸಲು ಕೇಂದ್ರ ಸರ್ಕಾರ ಆಸ್ಪತ್ರೆ, ಪೆಟ್ರೋಲ್ ಬಂಕ್ ಹಾಗೂ ಟಿಕೆಟ್ ಬುಕಿಂಗ್ ಕೇಂದ್ರಗಳಲ್ಲಿ ಹಳೇ ₹ 500 ಮತ್ತು 1000 ನೋಟುಗಳನ್ನು ಬಳಸಲು ಅವಕಾಶ ನೀಡಿತ್ತು. ಈಗ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಳೇ ನೋಟು ಬಳಕೆಗೆ ನೀಡಿದ್ದ ಅವಕಾಶವನ್ನು ನಾಳೆಯಿಂದ ತೆಗೆದು ಹಾಕಲಿದೆ. ಆ ಮೂಲಕ ಹಳೇ ನೋಟುಗಳನ್ನು ಕೇವಲ ತಮ್ಮ ಬ್ಯಾಂಕು ಖಾತೆಗಳಲ್ಲಿ ಠೇವಣಿ ಮಾಡಲಷ್ಟೇ ಅವಕಾಶವಿದೆ.

ಬಾಬಾ ರಾಮದೇವರ ಪತಂಜಲಿಗೆ ದಂಡ

ದಾರಿತಪ್ಪಿಸುವಂತಹ ಜಾಹೀರಾತು ಪ್ರಕಟಿಸಿದ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಗೆ ಉತ್ತರಾಖಂಡದ ಹರಿದ್ವಾರ ಕೋರ್ಟ್ ₹ 11 ಲಕ್ಷ ದಂಡ ವಿಧಿಸಿದೆ. ಈ ಸಂಸ್ಥೆಯ ಅಡುಗೆ ಎಣ್ಣೆ, ಉಪ್ಪು, ಪೈನಾಪಲ್ ಜಾಮ್, ಜೇನುತುಪ್ಪದ ಉತ್ಪನ್ನಗಳ ರುದ್ರಪುರ ಪರೀಕ್ಷಾ ಘಟಕದಲ್ಲಿನ ತಪಾಸಣೆಯಲ್ಲಿ ಗುಣಮಟ್ಟ ಪಡೆಯಲು ವಿಫಲವಾಗಿದ್ದವು. ಈ ಕಾರಣಕ್ಕೆ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಪತಂಜಲಿ ಸಂಸ್ಥೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ‘ಗುಣಮಟ್ಟದ ಪರೀಕ್ಷೆಯಲ್ಲಿ ಯಶಸ್ವಿಯಾಗದಿದ್ದರೂ ಜಾಹೀರಾತುಗಳ ಮೂಲಕ ದಾರಿ ತಪ್ಪಿಸಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಿದ್ದಕ್ಕಾಗಿ’ ನ್ಯಾಯಾಲಯ ಪತಂಜಲಿಗೆ ದಂಡ ವಿಧಿಸಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ಪದವಿ ಪೂರ್ವ ಶಿಕ್ಷಕರು ಬಿಎಡ್ ಪದವಿ ಪಡೆದುಕೊಳ್ಳಲು ಮತ್ತೊಂದು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
  • ಐ ಫೋನ್ ಪಡೆಯುವ ಸಲುವಾಗಿ ಫ್ಲಿಪ್ ಕಾರ್ಟಿನ ಡಿಲೆವರಿ ಬಾಯ್ ನನ್ನು ಹತ್ಯೆ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಈ ಪ್ರಕರಣ ಬೆಂಗಳೂರಿನಲ್ಲೇ ನಡೆದಿದ್ದು, ಇದೇ ತಿಂಗಳು 9ನೇ ತಾರೀಖಿನಂದು 29 ವರ್ಷದ ನಂಜುಂಡಸ್ವಾಮಿ ಎಂಬ ಡಿಲೆವರಿ ಬಾಯ್ ಐ ಫೋನ್ ನೀಡುವ ಸಲುವಾಗಿ ಜಿಮ್ ವೊಂದಕ್ಕೆ ಹೋಗಿದ್ದಾನೆ. ಈ ಫೋನ್ ಆರ್ಡರ್ ಮಾಡಿದ್ದ ಜಿಮ್ ಟ್ರೇನರ್ ಆಗಿದ್ದ 22 ವರ್ಷದ ವರುಣ್ ಕುಮಾರ್ ಚಾಕುವಿನಿಂದ ಆತನ ಕುತ್ತಿಗೆ ಕತ್ತರಿಸಿ ಐ ಫೋನ್ ತೆಗೆದುಕೊಂಡಿದ್ದಾನೆ ಎಂದು ಮಾಹಿತಿ ಬಂದಿದೆ.
  • ಮಾಜಿ ಸಚಿವ ಎಚ್.ವೈ ಮೇಟಿ ಅವರ ರಾಸಲೀಲೆ ಪ್ರಕರಣ ಬಹಿರಂಗಗೊಳಿಸಿದ ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ಮಲಾಲಿಗೆ ಮಾಜಿ ಸೈನಿಕರ ಸಂಸ್ಥೆ ಸ್ವಯಂ ಪ್ರೇರಿತವಾಗಿ ಭದ್ರತೆ ಒದಗಿಸಲು ಮುಂದಾಗಿದೆ. ಮೇಟಿ ಅವರ ಬೆಂಬಲಿಗರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಪ್ರಕರಣ ಸಂಪೂರ್ಣವಾಗಿ ಹೊರ ಬಂದು ಸಚಿವಸ್ಥಾನಕ್ಕೆ ಮೇಟಿ ಅವರು ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜಶೇಖರ್ ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸುಮಾರು 20ಕ್ಕೂ ಹೆಚ್ಚು ಮಾಜಿ ಸೈನಿಕರು 24/7 ಭದ್ರತೆ ನೀಡಲಿದ್ದಾರೆ.

Leave a Reply