ಜಯಲಲಿತಾ ನಂತರ ಎಐಡಿಎಂಕೆಗೆ ಅಮ್ಮನಾಗುವ ಹಾದಿಯಲ್ಲಿ ಶಶಿಕಲಾ

ಡಿಜಿಟಲ್ ಕನ್ನಡ ಟೀಮ್:

ಜಯಲಲಿತಾ ಅವರ ನಿಧನವಾದ ನಂತರ ಎಐಡಿಎಂಕೆ ಪಕ್ಷದ ಅಧಿಕಾರದ ಲಗಾಮು ಯಾರ ಕೈ ಸೇರಲಿದೆ ಎಂಬ ಕುತೂಹಲ ಎಲ್ಲರ ಗಮನ ಸೆಳೆದಿದೆ. ಹಲವು ದಿನಗಳಿಂದ ಜಯಲಲಿತಾ ಅವರ ಸ್ಥಾನವನ್ನು ಆಕೆಯ ಆಪ್ತ ಸ್ನೇಹಿತೆ ಶಶಿಕಲಾ ಅವರು ತುಂಬಲಿದ್ದಾರೆ ಎಂಬ ವರದಿಗಳು ಬರುತ್ತಿವೆ.

ಎಐಡಿಎಂಕೆ ಪಕ್ಷದ ಅಧಿಕಾರ ನಿಯಂತ್ರಣ ಯಾರು ಪಡೆಯಲಿದ್ದಾರೆ ಎಂಬುದು ಅಧಿಕೃತವಾಗಿ ಹೇಳದಿದ್ದರೂ, ಜಯಲಲಿತಾ ಅವರ ನಿಧನದ ನಂತರದ ಹಲವು ಬೆಳವಣಿಗೆಗಳು ಎಐಡಿಎಂಕೆ ಪಕ್ಷದ ಅಧಿಕಾರ ಶಶಿಕಲಾ ಅವರ ಕೈಸೇರಲಿವೆ ಎಂಬ ಸೂಚನೆಗಳನ್ನು ಕೊಡುತ್ತಿವೆ. ಆದರೆ, ಪಕ್ಷದ ಅಧಿಕಾರವನ್ನು ಪಡೆಯುವ ಬಗ್ಗೆ ಶಶಿಕಲಾ ಅವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಆದರೆ ಜಯಲಲಿತಾ ಅವರು ಪಕ್ಷದ ಮುಖಂಡರಾಗಿ ಇದ್ದಾಗ ಪಕ್ಷದ ನಾಯಕರಿಂದ ಯಾವ ರೀತಿಯ ಮರ್ಯಾದೆ ಹಾಗೂ ಗೌರವವನ್ನು ಪಡೆಯುತ್ತಿದ್ದರೋ ಅದೇ ರೀತಿಯ ಗೌರವ ಈಗ ಶಶಿಕಲಾ ಅವರಿಗೆ ಸಿಗುತ್ತಿದೆ ಎಂಬುದಕ್ಕೆ ಈ ಮೇಲಿನ ಫೋಟೋ ಸಾಕ್ಷಿಯಾಗಲಿದೆ.

ಇನ್ನು ಗುರುವಾರ ಎಐಡಿಎಂಕೆ ಪಕ್ಷದ ವಕ್ತಾರ ಸಿ ಪೊನ್ನಯ್ಯನ್ ಅವರು ಶಶಿಕಲಾ ಅವರೆ ಪಕ್ಷದ ಮುಖ್ಯಸ್ಥರಾಗಲಿದ್ದಾರೆ ಎಂಬ ಸೂಚನೆಯನ್ನು ಕೊಟ್ಟಿದ್ದಾರೆ. ಈ ಬಗ್ಗೆ ಅವರು ಹೇಳಿರುವುದಿಷ್ಟು… ‘ಶಶಿಕಲಾ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವುದು ಎಲ್ಲರ ಒತ್ತಾಸೆಯಾಗಿದೆ. ಪಕ್ಷಕ್ಕಾಗಿ ಶಶಿಕಲಾ ಅವರು ಅಮ್ಮಾ ಅವರ ಅಂತರಾತ್ಮದಂತೆ ಕೆಲಸ ಮಾಡಿದ್ದಾರೆ.’

ಒಟ್ಟಿನಲ್ಲಿ ಜಯಲಲಿತಾ ಅವರಿಗೆ ಸಲ್ಲುತ್ತಿದ್ದ ಗೌರವ ಹಾಗೂ ಮರ್ಯಾದೆ ಆಗಲೇ ಶಶಿಕಲಾ ಅವರ ಪಾಲಿಗೆ ಬಂದಿದ್ದು, ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವುದೊಂದೇ ಬಾಕಿ ಎಂಬಂತಿದೆ ಸದ್ಯದ ಪರಿಸ್ಥಿತಿ.

Leave a Reply