ಹೊಳೆದಿದ್ದು ಆಡ್ವಾಣಿ ಅಸಮಾಧಾನ-ಉಳಿದಿದ್ದು ಶೂನ್ಯ ಸಾಧನೆಯ ಗದ್ದಲದ ಅಧಿವೇಶನ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸಂಸತ್ ಕಲಾಪ ಬರಿ ಗದ್ದಲದಲ್ಲೇ ಮುಳುಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಿನ್ನೆ ವಿಕಲಚೇತನರ ಹಕ್ಕು ಮಸೂದೆಯನ್ನು ಅಂಗೀಕರಿಸಿದ್ದನ್ನು ಹೊರತು ಪಡಿಸಿದರೆ, ಈ ಬಾರಿಯ ಅಧಿವೇಶನದಲ್ಲಿ ಮಾಡಿದ ಸಾಧನೆ ಶೂನ್ಯ. ಪದೇ ಪದೇ ಗದ್ದಲ ಪ್ರತಿಭಟನೆಯ ಮೂಲಕ ಸಂಸತ್ತಿನ ಅಮೂಲ್ಯ ಸಮಯ ಹಾಳಾಗುತ್ತಿರುವುದಕ್ಕೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಆಡ್ವಾಣಿ ‘ಇಂತಹ ಪರಿಸ್ಥಿತಿಯಲ್ಲಿ ನಾನು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುವುದೇ ಸೂಕ್ತ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಡ್ವಾಣಿ ಅವರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪ್ರತಿಕ್ರಿಯೆ ನೀಡಿದ್ದು, ‘ಆಡ್ವಾಣಿ ಅವರ ಈ ಬೇಸರಕ್ಕೆ ಪ್ರತಿಪಕ್ಷಗಳ ನಡೆಯೇ ಕಾರಣ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸದನದ ಕಲಾಪವನ್ನು ಹಾಳು ಮಾಡಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ಆಡ್ವಾಣಿ ಅವರ ಮಾತು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿರಲಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ಸುಗಮ ಕಲಾಪಕ್ಕೆ ವಿರೋಧ ಪಕ್ಷಗಳು ಹೇಗೆ ಅಡ್ಡಿ ಪಡಿಸಿದವೂ ಅದೇ ರೀತಿಯಲ್ಲಿ  ಆಡಳಿತ ಪಕ್ಷವು ವಿಪಕ್ಷಗಳ ಮನವೊಲಿಸಲು ವಿಫಲವಾಗಿದೆ. ಹೀಗಾಗಿ ಆಡ್ವಾಣಿ ಅವರು ಇಬ್ಬರಿಗೂ ಚಾಟಿ ಬೀಸಿದ್ದಾರೆ.

ಕಳೆದ ತಿಂಗಳು 16ರಿಂದ ಶುರುವಾದ ಈ ಬಾರಿಯ ಚಳಿಗಾಲದ ಅಧಿವೇಶನ ಇಂದಿಗೆ 19ನೇ ದಿನಕ್ಕೆ ಕಾಲಿಟ್ಟಿತ್ತು. ಇಂದು ಸಹ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಣ ಹಗ್ಗಜಗ್ಗಾಟದ ಪರಿಣಾಮ ಲೋಕಸಭೆಯಲ್ಲಿ ಗದ್ದಲ ಏರ್ಪಟ್ಟಿತ್ತು. ಹೀಗಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು. ಇನ್ನು ರಾಜ್ಯ ಸಭೆಯಲ್ಲೂ ಪರಿಸ್ಥಿತಿ ಇದೇ ರೀತಿ ಇತ್ತು. ಆರಂಭದಲ್ಲಿ ಎರಡು ಬಾರಿ ಕಲಾಪವನ್ನು ಮುಂದೂಡಲಾಗಿತ್ತು. 2 ಗಂಟೆಗೆ ಕಲಾಪ ಮತ್ತೆ ಆರಂಭವಾದಾಗಲೂ ಗದ್ದಲ ನಿಲ್ಲದ ಪರಿಣಾಮ ರಾಜ್ಯಸಭೆಯ ಕಲಾಪವನ್ನು ನಾಳೆಗೆ ಅಂದರೆ ಅಂತಿಮ ದಿನಕ್ಕೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಕಲಾಪ ಮುಂದೂಡುತ್ತಿದ್ದಂತೆ ಬೇಸರಗೊಂಡ ಆಡ್ವಾಣಿ ಅವರು ಗೃಹಮಂತ್ರಿ ರಾಜನಾಥ್ ಸಿಂಗ್ ಹಾಗೂ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಜತೆ ಮಾತುಕತೆ ನಡೆಸಿದರು. ಅಲ್ಲದೆ ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸಿ ಕಲಾಪ ಕಾರ್ಯೋನ್ಮುಖವಾಗುವಂತೆ ಮಾಡಲು ರಾಜನಾಥ್ ಸಿಂಗ್ ಅವರಿಗೆ ಸಲಹೆ ನೀಡಿದರು. ‘ಒಂದು ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಸಂಸತ್ತಿನಲ್ಲಿದ್ದಿದ್ದರೆ ತೀವ್ರ ಬೇಸರಕ್ಕೆ ಒಳಗಾಗುತ್ತಿದ್ದರು. ಕಲಾಪಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಡಚಣೆಯಾಗುತ್ತಿರುವುದು ನಿಜಕ್ಕೂ ನಿರಾಸೆಯ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ನಾನು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುವುದೇ ಸೂಕ್ತ’ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಮಹತ್ವಾಕಾಂಕ್ಷಿ ಜಿಎಸ್ಟಿ ಮಸೂದೆಯ ಮುಂದಿನ ಪ್ರಕ್ರಿಯೆ ಹಾಗೂ ಇತರೆ ಪ್ರಮುಖ ನಿರ್ಣಯಗಳು ಸಂಸತ್ತಿನ ಒಪ್ಪಿಗೆ ಪಡೆಯಲು ಕಾದು ಕುಳಿತಿದ್ದರೆ, ಅತ್ತ ಸಂಸದರು ಮಾತ್ರ ತಮ್ಮ ಪಟ್ಟು ಬಿಡದೇ ಹಗ್ಗಜಗ್ಗಾಟ ಮಾಡುತ್ತಾ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಹೀಗಾಗಿ ಈ ಬಾರಿಯ ಅಧಿವೇಶನದಲ್ಲಿನ ಸಮಯ ಪೋಲಾಗಿದ್ದು ಸಹಜವಾಗಿಯೇ ಹಿರಿಯ ರಾಜಕಾರಣಿಗಳಾದ ಎಲ್.ಕೆ ಆಡ್ವಾಣಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಸಮಾಧಾನ ತರಿಸಿದೆ.

Leave a Reply