ನಡುಗಡ್ಡೆಗಳೂ ಜಾಗತಿಕ ರಾಜಕೀಯವನ್ನು ಹೆಂಗೆಲ್ಲ ನಿರ್ದೇಶಿಸುತ್ತವೆ ಗೊತ್ತೇ? ಇಂದಿನ ಜಪಾನ್-ರಷ್ಯಾ ಭೇಟಿಯ ಸ್ವಾರಸ್ಯವಿರೋದೇ ಇಲ್ಲಿ!

ಡಿಜಿಟಲ್ ಕನ್ನಡ ವಿಶೇಷ:

ಮೇಟಿ ಪಂಚೆ ಸಡಿಲಿಸಿದ್ದನ್ನೇ ಸುದ್ದಿ ಮೆಲುಕಾಗಿಸುತ್ತಿರುವ ಈ ಹೊತ್ತಿನಲ್ಲಿ, ಜಪಾನ್ ಪ್ರಧಾನಿಯ ಹುಟ್ಟೂರು ನಗಾತೊದಲ್ಲಿ ಆ ದೇಶದ ಪ್ರಧಾನಿ ಶಿಂಜೊ ಅಬೆ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತುಕತೆಗೆ ಕುಳಿತಿದ್ದಾರೆ. ಎರಡನೇ ವಿಶ್ವಯುದ್ಧದ ತರುವಾಯ ಎರಡು ದೇಶಗಳ ನಡುವೆ ವ್ಯಾಜ್ಯದ ವಿಷಯವಾಗಿ ಉಳಿದುಬಿಟ್ಟಿರುವ ಕುರಿಲ್ ದ್ವೀಪ ಸಮೂಹಗಳ ಬಗ್ಗೆ ವಿಶ್ವದ ಈ ಎರಡು ಪ್ರಮುಖ ನಾಯಕರು ಚೌಕಾಶಿ ನಡೆಸಲಿದ್ದಾರೆ.

1945ರ ಸೆಪ್ಟೆಂಬರ್ ನಲ್ಲಿ ರಷ್ಯನ್ ಪಡೆಗಳು ಶಿಕೊಟಾನ್, ಇತುರುಪ್, ಕುನಾಶಿರ್, ಹಬೊಮೈ ದ್ವೀಪಗಳನ್ನು ಆಕ್ರಮಿಸುತ್ತಲೇ ಅಲ್ಲಿಂದ ಸುಮಾರು 18 ಸಾವಿರ ಜಪಾನಿಗರನ್ನು ಅವರ ದೇಶಗಳಿಗೆ ಕಳುಹಿಸಿ, ರಷ್ಯಾದಿಂದ 5 ಸಾವಿರ ಮಂದಿಯನ್ನು ಈ ದ್ವೀಪಗಳಲ್ಲಿ ನೆಲೆಗೊಳಿಸಲಾಯಿತು. ಜತೆಗೆ ರಷ್ಯದ ಮಿಲಿಟರಿ ಡೇರೆ ಹಾಕಿಕೊಂಡಿತು. ಅದಕ್ಕೂ ಹಿಂದಿನ ಇತಿಹಾಸದ ಹೆಜ್ಜೆಗಳಲ್ಲೂ ಈ ದ್ವೀಪಗಳು ಜಪಾನ್ ಮತ್ತು ರಷ್ಯದ ಪರಸ್ಪರ ಕಸಿಯುವ ಆಟ ನಿಚ್ಚಳವಾಗಿದೆ.

ಇದೀಗ ನಡೆಯುತ್ತಿರುವ ಮಾತುಕತೆ ರಷ್ಯಾ-ಜಪಾನ್ ನಡುವಿನ ಒಟ್ಟಾರೆ ಮೈತ್ರಿಗೆ ಸಂಬಂಧಿಸಿದ್ದು. ಅಲ್ಲಿ ಈ ನಡುಗಡ್ಡೆಗಳ ವ್ಯಾಜ್ಯ ಪ್ರಮುಖವಾಗಿ ಚರ್ಚೆಯಾಗುತ್ತದೆ. ಹಾಗಂತ ಇದರ ಬೆನ್ನಲ್ಲೇ ಎಲ್ಲ ಸುಸೂತ್ರವಾಗಿ, ಜಪಾನಿಗೆ ರಷ್ಯಾ ಔದಾರ್ಯ ತೋರಿಬಿಡುತ್ತದೆ ಎಂದೇನೂ ಅಲ್ಲ. ಒಂದು ಬೈಠಕ್ಕಿನಲ್ಲಿ ಬಗೆಹರಿಯುವ ಸಮಸ್ಯೆಯೂ ಇದಲ್ಲ. ಅಷ್ಟಾಗಿಯೂ ಸ್ವಾರಸ್ಯ ಏನೆಂದರೆ, ಈವರೆಗೆ ಆ ಬಗ್ಗೆ ಮಾತೇ ಆಡೆವು ಎಂಬಂತೆ ಮುಖ ತಿರುಗಿಸಿಕೊಂಡಿದ್ದ ರಷ್ಯ, ಈಗ ತುಸು ಸಡಿಲವಾಗಿದೆ. ವರ್ಷಗಳ ಹಿಂದೆ ಸಮೀಕ್ಷೆಗಳು ನಡೆದಾಗ ರಷ್ಯಾದ ಜನರು ಯಾವುದೇ ಕಾರಣಕ್ಕೂ ಈ ದ್ವೀಪಗಳನ್ನು ಜಪಾನಿಗೆ ಬಿಟ್ಟುಕೊಡಬಾರದು ಅಂತ ಧ್ವನಿ ಮೊಳಗಿಸಿದ್ದರು. ಈಗಲೂ ಬಹುಮತದ ಅಭಿಪ್ರಾಯ ಹಾಗೆಯೇ ಇದೆಯಾದರೂ ಒಂದೊಳ್ಳೆ ಮೈತ್ರಿ ಸಾಧ್ಯವಾಗುವುದಾರೆ, ಬೇರೆ ಲಾಭಗಳಾಗುವುದಿದ್ದರೆ ಜಪಾನಿಗೆ ಎರಡು ದ್ವೀಪ ಬಿಟ್ಟುಕೊಟ್ಟರೂ ತಪ್ಪಿಲ್ಲ ಎಂಬ ಧ್ವನಿಗಳೂ ಇವೆ.

jap_kuril_isl

ಜಾಗತಿಕ ನಕಾಶೆಯಲ್ಲಿ ಮತ್ತೆ ದೈತ್ಯನ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ ರಷ್ಯಾಕ್ಕೆ ಆ ನಿಟ್ಟಿನಲ್ಲಿ ಜಪಾನ್ ಸಹಕಾರವೂ ಅಗತ್ಯವಿದೆ. ಹಾಗೆಂದೇ, ತನ್ನ ಮಿತ್ರನಾಗಿರುವ ಚೀನಾದೊಂದಿಗೆ ಜಪಾನಿಗೆ ಹೊಯ್ದಕ್ಕಿ ಬೇಯದಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಚೌಕಾಶಿಯ ಮೇಜಿಗೆ ಅಬೆಯನ್ನು ಬಿಟ್ಟುಕೊಂಡಿದ್ದಾರೆ ರಷ್ಯಾದ ಗಟ್ಟಿಗ ವ್ಲಾದಿಮಿರ್ ಪುಟಿನ್. ಏಷ್ಯದ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿರುವ ಚೀನಾದ ಜತೆ ರಷ್ಯಾಕ್ಕೆ ಒಳ್ಳೇ ದೋಸ್ತಿಯೇ ಇದ್ದರೂ ದೀರ್ಘಾವಧಿಯಲ್ಲಿ ಅದರ ಅಧೀನದಲ್ಲಿ ಬೆಳೆದುಕೊಂಡಿರುವುದನ್ನು ರಷ್ಯಾ ಒಪ್ಪದು. ಹಾಗೆಂದೇ ತನ್ನ ಆಂತರಿಕ ಮರು ನಿರ್ಮಾಣದಲ್ಲಿ ಜಪಾನಿನ ಎಲೆಕ್ಟ್ರಾನಿಕ್ ಕೌಶಲದ ಅಗತ್ಯ ರಷ್ಯಾಕ್ಕಿದೆ. ಆರ್ಥಿಕ ಏರುಗತಿ ಕಾಣುವುದಕ್ಕೆ ಜಪಾನಿನ ಹಲವು ವೃತ್ತಿಪರ ಸಹಯೋಗಗಳೂ ರಷ್ಯಾಕ್ಕೆ ಬೇಕಿದೆ. ಅಮೆರಿಕದ ಪೌರೋಹಿತ್ಯದಲ್ಲಿ ಯುರೋಪಿನ ರಾಷ್ಟ್ರಗಳು ರಷ್ಯಾವನ್ನು ದೂರ ಮಾಡಿರುವುದರಿಂದ ಏಷ್ಯದ ಯಾವುದೇ ರಾಷ್ಟ್ರದೊಂದಿಗೆ ವಹಿವಾಟು ವೃದ್ಧಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲುವ ಸ್ಥಿತಿಯಲ್ಲಿಲ್ಲ ರಷ್ಯಾ.

ಹೀಗಾಗಿ ದ್ವೀಪಗಳು ಚೌಕಾಶಿಗೊಂದು ನೆಪವಾಗಿವೆ. ಅದೇನೇ ಇದ್ದರೂ ಕೇವಲ ದ್ವೀಪ ಕೇಂದ್ರಿತ ಪರಿಸ್ಥಿತಿ ಗಮನಿಸಿದರೂ ಅಲ್ಲಿನ ಪರಿಸ್ಥಿತಿಗಳು ಭಿನ್ನ. ರಷ್ಯಾಕ್ಕೆ ಹತ್ತಿರವಿರುವ ದ್ವೀಪ ಸಮೂಹಗಳಲ್ಲಿ ಒಳ್ಳೆಯ ಅಭಿವೃದ್ಧಿಯೇ ಆಗಿದ್ದರೂ, ರಷ್ಯಾದಿಂದ 7000 ಕಿ.ಮೀ ದೂರವಿದ್ದು, ಜಪಾನಿಗೆ ಹೊಂದಿಕೊಂಡಿರುವ ಶಿಕೊತಾನಿನಲ್ಲಿ ಮೂಲಸೌಕರ್ಯಗಳೆಲ್ಲ ತೀರ ಕೆಳಮಟ್ಟದಲ್ಲಿವೆ. ಪ್ರವಾಸೋದ್ಯಮ ಸಹ ರಷ್ಯಾದ ನಿಯಂತ್ರಣ ನೀತಿಯಿಂದಾಗಿ ಚಿಗಿತುಕೊಂಡಿಲ್ಲ. ಹೀಗಾಗಿ ಅಲ್ಲಿನ ನಿವಾಸಿಗಳು, ಜಪಾನಿಗೆ ಈ ದ್ವೀಪ ನೀಡಿದರೇ ಅಭಿವೃದ್ಧಿಯಾದೀತು, ಜಪಾನಿಯರು ಮೂಲಸೌಕರ್ಯ ಒದಗಿಸುತ್ತಾರೆ ಎಂದೆಲ್ಲ ಪ್ರತಿಪಾದಿಸುವಂತಾಗಿದೆ.

ಇಷ್ಟೆಲ್ಲ ಆಗುತ್ತಿರಬೇಕಾದರೆ ಇಲ್ಲಿ ಅಮೆರಿಕ-ಚೀನಾಗಳ ಹಿತಾಸಕ್ತಿ ಸಹ ಆಟವಾಡುತ್ತದೆ. ಸಾಗರ ಸಂಚಾರ ಸುಗಮ ಹಾಗೂ ಕಾರ್ಯತಂತ್ರ ದೃಷ್ಟಿಯಿಂದ ಅಮೆರಿಕಕ್ಕೆ ಈ ದ್ವೀಪಗಳನ್ನು ಜಪಾನ್ ಪಡೆಯುವುದು ಒಳ್ಳೆಯದೆನಿಸಿದರೆ, ಜಪಾನ್ ಲಾಗಾಯ್ತಿನಿಂದ ಅಮೆರಿಕಕ್ಕೆ ಹತ್ತಿರವಾಗಿದೆ ಎಂಬಂಶವೇ ರಷ್ಯಾ ಮತ್ತು ಚೀನಾಗಳು ಇದರ ಜತೆ ಅತಿ ಎಚ್ಚರಿಕೆಯಿಂದ ವ್ಯವಹರಿಸುವುದಕ್ಕೆ ಕಾರಣ ಒದಗಿಸಿವೆ.

ನಡುಗಡ್ಡೆಗಳು ಸಹ ಜಾಗತಿಕ ರಾಜಕೀಯದ ನಡೆಗಳನ್ನು ಹೇಗೆಲ್ಲ ನಿರ್ದೇಶಿಸುತ್ತವೆ ಎಂಬ ಕೌತುಕದ ಕಣ್ಣಿನಿಂದ ಶಿಂಜೊ ಅಬೆ- ವ್ಲಾದಿಮಿರ್ ಪುಟಿನ್ ಭೇಟಿಯನ್ನು ಗಮನಿಸಿದರೆ, ಮೇಟಿ ಸುದ್ದಿಗಿಂತ ಇಲ್ಲಿ ರಸ- ಸತ್ವಗಳಿರುವುದು ಗೊತ್ತಾದೀತು.

Leave a Reply