ವಾಯುಸೇನೆಯಲ್ಲಿ ಧರ್ಮಾಧಾರಿತ ಗಡ್ಡ ವಿನಾಯ್ತಿ ಇಲ್ಲ, ಹೆದ್ದಾರಿಗಳಲ್ಲಿ ಮದ್ಯವಿಲ್ಲ: ಮಹತ್ವದ 2 ಸುಪ್ರೀಂ ತೀರ್ಪುಗಳು

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಧರ್ಮದ ಆಧಾರದಲ್ಲಿ ತನಗೆ ಗಡ್ಡ ಬಿಡುವ ಅವಕಾಶ ಕೇಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪಿತ್ತಿದೆ.

ಸಿಬ್ಬಂದಿ ಸ್ವಚ್ಛ ಮುಖಕ್ಷೌರ ಮಾಡಿಕೊಂಡಿರಬೇಕು ಎಂಬ ವಾಯುಸೇನೆಯ ಆಂತರಿಕ ನಿಯಮದ ವಿರುದ್ಧ ಮೊಹಮದ್ ಜುಬೇರ್ ಹಾಗೂ ಅನ್ಸಾರಿ ಅಫ್ತಾಬ್ ಅಹಮದ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಇದು ಕೆಲವು ಧಾರ್ಮಿಕ ಆಚರಣೆಗೆ ವಿರುದ್ಧವಾಗಿದ್ದು, ಅಂಥ ಸಮುದಾಯದ ವ್ಯಕ್ತಿಗಳ ಮೂಲಭೂತ ಹಕ್ಕನ್ನೇ ಕಸಿದಂತಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಹೈಕೋರ್ಟಿನಲ್ಲಿ ಇವರ ಅರ್ಜಿ ವಜಾ ಆಗಿತ್ತು. ಅದರ ವಿರುದ್ಧ ಮೇಲ್ಮನವಿ ಆಲಿಸಿತು ಸುಪ್ರೀಂಕೋರ್ಟ್.

ಈ ಪ್ರಕರಣದಲ್ಲಿ ಗೃಹ ಸಚಿವಾಲಯದ ಪ್ರತಿಕ್ರಿಯೆಯನ್ನೂ ಕೇಳಲಾಗಿತ್ತು. ‘ಸೇನೆ ಜಾತ್ಯತೀತವಾದದ್ದು. ಯಾವುದೇ ಧಾರ್ಮಿಕ ಪರಿಗಣನೆ ಆಧಾರದಲ್ಲಿ ಇಲ್ಲಿ ನಿಯಮಗಳನ್ನು ರೂಪಿಸುವುದಿಲ್ಲ’ ಎಂದು ಸರ್ಕಾರ ಪ್ರತಿಕ್ರಿಯಿಸಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಠಾಕೂರ್ ನೇತೃತ್ವದ ಪೀಠ ಇದನ್ನೇ ಎತ್ತಿ ಹಿಡಿದಿದೆ.

ಇನ್ನು ಸುಪ್ರೀಂ ಕೋರ್ಟಿನಿಂದ ಬಂದಿರುವ ಮತ್ತೊಂದು ಮಹತ್ವದ ಆದೇಶ ಏನೆಂದರೆ, ದೇಶದಾದ್ಯಂತ ಇರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದು. ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಅವರ ನೇತೃತ್ವದ ತ್ರಿಸದಸ್ಯತ್ವ ಪೀಠ ಈ ತೀರ್ಪು ನೀಡಿದೆ. ಪ್ರತಿವರ್ಷ ರಸ್ತೆ ಅಪಘಾತದಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಕಳೆದ ವಾರವಷ್ಟೇ ಆತಂಕ ವ್ಯಕ್ತಪಡಿಸಿದ್ದ ಕೋರ್ಟ್, ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ತೀರ್ಪಿನೊಂದಿಗೆ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲು ಅನ್ನು ಮುಂದೆ ಅವಕಾಶ ನೀಡುವುದಿಲ್ಲ. ಜತೆಗೆ ಈಗಾಗಲೇ ಪರವಾನಿಗೆ ಪಡೆದಿರುವವರಿಗೆ ಮುಂದಿನ ವರ್ಷ ಮಾರ್ಚ್ 31ರ ನಂತರ ಆ ಪರವಾನಿಗೆಗಳನ್ನು ನವೀಕರಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

Leave a Reply