ಮೇಟಿ ಕಾಮಕಾಂಡದಲ್ಲಿ ಷಡ್ಯಂತ್ರವಿದೆ ಅಂತ ಸಿಎಮ್ಮೇ ಹೇಳಿದ ಮೇಲೆ ಸಿಐಡಿ ತನಿಖೆ ಇನ್ನೆಂಗಿರಬಹುದು..?!

author-thyagaraj (1)ಸುಳ್ಳು ಮತ್ತು ಸತ್ಯ ಎರಡೂ ಹೇಗೆಲ್ಲ ದುರ್ಬಳಕೆ ಆಗುತ್ತದೆ ಎಂಬುದಕ್ಕೆ ಸಚಿವ ಸ್ಥಾನವನ್ನು ಆಪೋಶನ ತೆಗೆದುಕೊಂಡು, ಸಿದ್ದರಾಮಯ್ಯ ಸರಕಾರದ ಕಳಂಕ ವರ್ಧಿಸಿರುವ ಎಚ್.ವೈ. ಮೇಟಿ ಕಾಮಕಾಂಡ ಮತ್ತೊಂದು ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಮೇಟಿ ಅವರ ಒತ್ತಾಸೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿರುವ ಪ್ರಕರಣದ ಸಿಐಡಿ ತನಿಖೆ ಎತ್ತ ಸಾಗುತ್ತದೆ, ಮತ್ತದರ ವರದಿ ಹೇಗಿರುತ್ತದೆ ಎಂಬುದಕ್ಕೂ ದಿಕ್ಸೂಚಿ ಆಗಿದೆ.

ಕೆಲಸ ಕಾಯಂ ಮಾಡಿಸಿ ಅಂದವಳ ಜತೆ ಸರಕಾರಿ ಕಚೇರಿಯಲ್ಲೇ ಶೋಭನ ಮಾಡಿಕೊಂಡು ವಿಡಿಯೋಸಮೇತ ಸಿಕ್ಕಾಕಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾದ ಮೇಲೂ ‘ನನ್ನದೇನೂ ತಪ್ಪಿಲ್ಲ’ ಅಂತ ತೊಡೆ ಸವರಿ ನೋಡಿಕೊಳ್ಳುತ್ತಿರೋ ಎಚ್.ವೈ. ಮೇಟಿ ಒಂದು ಕಡೆ. ಅವರ ಮುಖಕ್ಕೆ ತುಪಕ್ ಅಂತ ಉಗಿದು ರಾಜೀನಾಮೆ ಕಿತ್ಕೊಂಡಾದ ಮೇಲೂ ‘ಇದರಲ್ಲೇನೋ ಷಡ್ಯಂತ್ರವಿದೆ’ ಅಂತಾ ಗಡ್ಡ ತರಿದ ಗಲ್ಲ ಸವರಿಕೊಳ್ಳುತ್ತಿರೋ ಸಿಎಂ ಸಿದ್ದರಾಮಯ್ಯ ಅವರು ಮತ್ತೊಂದು ಕಡೆ. ಇನ್ನು ಅವರ ಸಂಪುಟದ ಕೆಲ ಸಹೋದ್ಯೋಗಿಗಳಂತೂ ಮೇಟಿ ವೃದ್ಧಾಪ್ಯವನ್ನೇ ಕ್ಲೀನ್ ಚಿಟ್ ಆಗಿ ಪರಿವರ್ತಿಸಲು ಪಲ್ಟಿ ಹೊಡೆಯುತ್ತಿರುವುದು ಮಗದೊಂದು ಕಡೆ. ಪೈಪೋಟಿಗೆ ಬಿದ್ದಂತೆ ಇಷ್ಟೆಲ್ಲ ಕಸರತ್ತುಗಳು ನಡೆಯುತ್ತಿರುವಾಗ ಸರಕಾರಿ ಕೃಪಾಪೋಷಿತ ಸಿಐಡಿ ತನಿಖೆ ಅದ್ಯಾವ ರೀತಿ ಹಳ್ಳ ಹಿಡಿಯಬಹುದು ಎಂಬುದನ್ನು ಊಹಿಸುವುದು ಯಾರಿಗೂ ಕಷ್ಟವಲ್ಲ. ಅದು ಹಾಗೆಯೇ ತೆರೆಯ ಮೇಲೆ ಸರಿದು ಹೋಗುತ್ತಿದೆ.

ನಿಜ, ಮೇಟಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಜುಗರವಾಗಿದೆ. ಹಿಂದೆ ಮೂವರು ಬಿಜೆಪಿ ಸಚಿವರು ಅಸೆಂಬ್ಲೀಲಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿ ಸಿಕ್ಕಿಬಿದ್ದಾಗ ಅವರು ರಾಜೀನಾಮೆ ನೀಡುವವರೆಗೂ ಪ್ರತಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯನವರು ಹೋರಾಟ ಮಾಡಿದ್ದರು. ಮುಂದೆ ಚುನಾವಣೆ ಪ್ರಚಾರಕ್ಕೂ ಈ ವಿಷಯ ಬಳಸಿಕೊಂಡಿದ್ದರು. ಈಗ ವ್ಯತಿರಿಕ್ತ ಸನ್ನಿವೇಶ ನಿರ್ಮಾಣವಾಗಿದೆ. ಬಿಜೆಪಿ ಜಾಗದಲ್ಲಿ ಕಾಂಗ್ರೆಸ್ ನಿಂತಿದೆ, ಮೈಮೇಲೆ ಕಳಂಕ ಸುರಿದುಕೊಂಡು.

ಹಿಂದೆ ಯಡಿಯೂರಪ್ಪನವರು ಸಿಐಡಿ ತನಿಖೆ ಅಂತಾ ವಹಿಸದೆ ಸಚಿವರ ರಾಜೀನಾಮೆ ಪಡೆದು ಮನೆಗೆ ಕಳುಹಿಸಿದ್ದರು. ತಪ್ಪು ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಮೇಲೆ ಅದರಲ್ಲಿ ಸಮರ್ಥನೇ ಹುಡುಕುಕವುದಾದರೂ ಏನಿದೆ? ಆದರೆ ಸಿದ್ದರಾಮಯ್ಯನವರು ಮೇಟಿ ಅವರ ‘ಸಾಧನೆ’ಯ ವಿಡಿಯೋ ನೋಡಿದ ಮೇಲೂ ಸಿಐಡಿ ತನಿಖೆ ಮೂಲಕ ಸಮರ್ಥನೆ ಹುಡುಕಲು ಹೊರಟಿರುವುದು ಅನುಕಂಪಕ್ಕೆ ಕಾರಣವಾಗಿದೆ!

ಇರಲಿ, ಪಾಪ ಚುನಾವಣೆ ಹೊಸ್ತಿಲಲ್ಲಿ ಇವೆಲ್ಲ ಕಸರತ್ತು ಪಕ್ಷದ ದೃಷ್ಟಿಯಿಂದ ಬೇಕಿರಬೇಕು. ಆದರೆ ಜನ ಏನು ಮೂರ್ಖರೇ?  ಅವರಿಗೇನು ಗೊತ್ತಿಲ್ಲವೇ? ಸರಕಾರದ ಅಧೀನ ಸಂಸ್ಥೆ ಆಗಿರುವ ಸಿಐಡಿ ಆಡಳಿತರೂಢ ಸರಕಾರದ ಗೌರವ, ವರ್ಚಸ್ಸು, ಹಿತಾಸಕ್ತಿಗಳಿಗೆ ವಿರುದ್ಧ ತನಿಖಾ ವರದಿ ಸಲ್ಲಿಸಿರುವ ನಿದರ್ಶನಗಳು ತೀರಾ ಕಡಿಮೆ. ಇತ್ತೀಚಿಗಂತೂ ಇಲ್ಲವೇ ಇಲ್ಲ ಅಂತಾ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಪೂರ್ವ ವಿಡಿಯೋ ಹೇಳಿಕೆಗೂ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲು ಸಾಧ್ಯವಾಗದೇ ಹೋದದ್ದು ಸಿಐಡಿ ತನಿಖೆಯ ತಾಕತ್ತಿಗೆ ತೀರಾ ಲೇಟೆಸ್ಟ್ ಸಾಕ್ಷಿ. ತತ್ಪರಿಣಾಮ ಸಚಿವ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ಕೊಟ್ಟಷ್ಟೇ ವೇಗವಾಗಿ ಮತ್ತೆ ಸಚಿವರಾದರು. ಆದರೆ ಸಿದ್ದರಾಮಯ್ಯ ಸರಕಾರಕ್ಕೆ ಅಂಟಿಕೊಂಡ ಕಳಂಕ ಮಾತ್ರ ಕಾನೂನು ಕಟ್ಟಳೆಗಳಾಚೆಗೂ ಜನಮಾನಸದಲ್ಲಿ ಉಳಿದು ಹೋಯಿತು.

ಈಗ ಎಚ್.ವೈ. ಮೇಟಿ ರಾಸಲೀಲೆ ಕೂಡ ಸಿಐಡಿ ತಾಕತ್ತು ನಿರೂಪಣೆಗೆ ಹೊಸ ವಸ್ತು. ಮೇಟಿ ಏನು ಮಾಡಿದರು ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿ ಹೋಗಿದೆ. ವಿಡಿಯೋ ದೃಶ್ಯಗಳು ಅಕ್ಷರ, ಮಾತುಗಳ ಶ್ರಮ ಕಡಿಮೆ ಮಾಡಿವೆ. ಆದರೂ ಮೇಟಿ ತಾವೇನೂ ತಪ್ಪು ಮಾಡಿಲ್ಲ, ತಾವು ಬಹಳ ಸಾಚಾ ಎಂದು ಹೇಳಿಕೊಂಡಿದ್ದಾರೆ. ತಪ್ಪು ಮಾಡಿದ ರಾಜಕಾರಣಿಗಳೆಲ್ಲರೂ ಹೇಳಿಕೊಳ್ಳುವಂತೆ. ಆದರೆ ಸಿದ್ದರಾಮಯ್ಯನವರು ಮಾತ್ರ ‘ಇದರಲ್ಲೇನೋ ಷಡ್ಯಂತ್ರವಿದೆ’ ಅಂತಾ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರೋದು ಮಾತ್ರ ಸರಿ ಇಲ್ಲ. ಹಾಗಾದರೆ ಏನಿದರೆ ಅರ್ಥ? ಕಾಮಕಾಂಡದಲ್ಲಿ ಷಡ್ಯಂತ್ರ ಇರೋದರ ಬಗ್ಗೆ ತನಿಖೆ ಮಾಡಿ ಅಂತಾ ಸಿಐಡಿಗೆ ಪರೋಕ್ಷ ಸೂಚನೆ ಕೊಟ್ಟಂತಾಗಲಿಲ್ಲವೇ? ಷಡ್ಯಂತ್ರ ಹುಡುಕಿ ಅಂತಾ ಹೇಳಿಕೊಟ್ಟಂತಾಗಲಿಲ್ಲವೇ? ಮುಖ್ಯಮಂತ್ರಿ ಅದವರೇ ಷಡ್ಯಂತ್ರ ಇದೆ ಅಂತ ಹೇಳಿದ ಮೇಲೆ ಸಿಐಡಿ ಇನ್ನೇನು ಹುಡುಕಬಹುದು? ವ್ಯತಿರಿಕ್ತ ಹೇಳಿಕೆ ಕೊಟ್ಟು ತಾವೇಕೆ ಸಿಎಂ ಕೆಂಗಣ್ಣಿಗೆ ಗುರಿ ಆಗಬೇಕು ಎಂಬ ಪೂರ್ವಾಗ್ರಹಕ್ಕೆ ಅದು ಒಳಗಾಗುವುದಿಲ್ಲವೇ? ಸಿಎಂ ತನಿಖಾ ಸಂಸ್ಥೆಯೊಂದರ ಮೇಲೆ ಪ್ರಭಾವ ಬೀರಿದಂತಾಗಲಿಲ್ಲವೇ? ಅಲ್ಲಿಗೆ ತನಿಖೆ ಕತೆ ಏನಾಗಬೇಡ?

ಮೇಟಿ ಮನೆಗೆ ಹೋಗಿದ್ದೇನೋ ಆಯಿತು. ಹಾಗೆಂದ ಮಾತ್ರಕ್ಕೆ ಸರಕಾರಕ್ಕೆ ಅಂಟಿದ ಕಳಂಕ ತಪ್ಪಿ ಹೋಗುವುದಿಲ್ಲ. ಮೊನ್ನೆ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡಿ ಸಿಕ್ಕಿಬಿದ್ದಿದ್ದ ಸಚಿವ ತನ್ವೀರ್ ಸೇಠ್ ಮುಖ್ಯಮಂತ್ರಿಗಳ ಕೃಪಾಕಟಾಕ್ಷದಿಂದ
ಬಚಾವಾಗಿ ಮಂತ್ರಿ ಪದವಿ ಉಳಿಸಿಕೊಂಡರು. ಆದರೆ ಸರಕಾರಕ್ಕೆ ಅಂಟಿದ ಕಳಂಕ ಮಾತ್ರ ಹೋಗಲಿಲ್ಲ. ಇದೀಗ ಆ ಕಳಂಕಕ್ಕೆ ಮತ್ತಷ್ಟು ಬಡ್ಡಿ ಸಮೇತ ಜಮಾ ಮಾಡಿದ್ದಾರೆ ಮೇಟಿ. ಚುನಾವಣೆ ವರ್ಷದಲ್ಲಿ ಇದನ್ನು ಸಹಿಸಿಕೊಳ್ಳಲು ಸರಕಾರಕ್ಕೆ ಆಗುತ್ತಿಲ್ಲ. ಮುಜುಗರದ ಅಲೆ ಈಗಾಗಲೇ ಕುಸಿದಿರುವ ವರ್ಚಸ್ಸನ್ನು ಮತ್ತಷ್ಟು ಒರೆಸಿ ಬಿಸಾಕಿದೆ. ಮೇಟಿ ಅವರನ್ನು ಮತ್ತೆ ಮಂತ್ರಿ ಮಾಡಲು ಅಲ್ಲದಿದ್ದರೂ ಚುನಾವಣೆ ಸಮಯದಲ್ಲಿ ಮತದಾರರಿಗೆ ಮುಖ ತೋರಿಸಲಾದರೂ ಈ ಕಳಂಕ ತೊಳೆದುಕೊಳ್ಳುವುದು ಸರಕಾರಕ್ಕೆ ಬೇಕಿದೆ. ಹೀಗಾಗಿ ಸಿಐಡಿ ತನಿಖೆ ಮೂಲಕ ಮೇಟಿ ಕಾಮಕಾಂಡದ ಸುತ್ತ ಷಡ್ಯಂತ್ರದ ಬಲೆ ಹೆಣೆಸಲು ಹೊರಟಿದೆ.

ಈಗಾಗಲೇ ಮೇಟಿ ಅವರ ರಾಸಲೀಲೆ ವಿಡಿಯೋ ಚಿತ್ರೀಕರಿಸಿದ ಗನ್ ಮ್ಯಾನ್ ಸುಭಾಷ್ ಮುಗಳಖೋಡ ಹಣ ವಸೂಲಿ ಮಾಡಲು, ರಾಸಲೀಲೆಗೆ ಒಡ್ಡಿಗೊಂಡ ಸಂತ್ರಸ್ತೆ ಸರಕಾರಿ ಸೇವೆ ಕಾಯಂ ಮಾಡಿಸಿಕೊಳ್ಳಲು ಹಾಗೂ ಈ ರಾಸಲೀಲೆ ಸಿ.ಡಿ. ಇಟ್ಟುಕೊಂಡು ಬಳ್ಳಾರಿ ಮೂಲದ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರನ್ನು ಮರುನೇಮಕ ಮಾಡಿಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರಲು ಹುನ್ನಾರ ನಡೆಸಿದ್ದರು ಎಂಬಲ್ಲಿಗೆ ಕತೆಯನ್ನು ತಂದು ನಿಲ್ಲಿಸಲಾಗಿದ್ದು, ಸಿಐಡಿ ತನಿಖೆ ಕೂಡ ಇದರ ಸುತ್ತಲೇ ಸುತ್ತುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ‘ಹಣ್ಣು ತಿಂದವ ನುಣುಚಿಕೊಂಡ, ಸಿಪ್ಪೆ ತಿನ್ನಬೇಕು ಅದುಕೊಂಡವ ಸಿಕ್ಕಿಕೊಂಡ’ ಎಂಬಂತೆ ಪ್ರಕರಣ ಪರಿಸಮಾಪ್ತಿಯನ್ನೂ ಕಾಣುತ್ತದೆ.

ಇರಲಿ ಸಿಐಡಿ ಯಾವ ದಿಕ್ಕಾಲ್ಲಾದರೂ ತನಿಖೆ ನಡೆಸಲಿ, ಏನಾದರೂ ವರದಿ ಕೊಡಲಿ ಸರಕಾರಕ್ಕೆ ಈಗಾಗಲೇ ಆಗಿರೋ ಡ್ಯಾಮೇಜ್ ಅನ್ನು ಸರಿಮಾಡಲು ಯಾರ ಕೈಲೂ ಸಾಧ್ಯವಿಲ್ಲ. ಆದರೂ ಪ್ರಯತ್ನ ಮುಂದುವರಿಯುತ್ತದೆ. ಆದರೆ ಇಲ್ಲಿ ಮೇಟಿ ಮಾಡಿರೋದು ಮಾತ್ರ ಹಲ್ಕಟ್ ಗಿರಿಯೇ. ವೈಯಕ್ತಿಕ ಬದುಕಿನ ನೆಲೆಯಲ್ಲಿ ತಮ್ಮ ‘ಸಾಹಸ’ ಸಮರ್ಥಿಸಿಕೊಳ್ಳಲು ಶ್ರಮಿಸಿದ್ದ ಮೇಟಿ ಮಂತ್ರಿ ಸ್ಥಾನದ ಘನತೆ-ಗೌರವಗಳನ್ನು ಗಾಳಿಗೆ ತೂರಿ ‘ವಯಸ್ಸಾಯಿತು ಅಂತ ಮಾತ್ರಕ್ಕೆ ಮಲಗಬಾರದಾ?’ ಅಂತೆಲ್ಲ ಹಸಿಹಸಿಯಾಗಿಯೇ ಮಾಧ್ಯಮದವರ ಬಳಿ ಮೊದಲು ಬಡಬಡಾಯಿಸಿದ್ದರು, ಸಿ.ಡಿ. ಬಿಡುಗಡೆಗೆ ಮೊದಲು.

ಪಾಪ, ಇರಲಿ ಅವರದೂ ಒಂದು ‘ಭಾವ’. ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಒಂದಲ್ಲ ಒಂದು ಪಲ್ಲಂಗ ಪುರಾಣದಲ್ಲಿ ಸಿಕ್ಕಿ ಒದ್ದಾಡಿರುವ ಮೇಟಿ ಅವರದು ತೀರದ ‘ತೀವ್ರ ಭಾವಯಾನ’. ಅವರ ಪ್ರಶ್ನೆಗೆ ಉತ್ತರ ಹುಡುಕಿದರೆ ಸಿಗೋದು ನೈತಿಕತೆ ವಿಚಾರದಲ್ಲಿ ಯಾರಿಗೂ ವಿನಾಯಿತಿ ಇಲ್ಲ ಎಂಬುದು. ಸಾರ್ವಜನಿಕ ಬದುಕಿನಲ್ಲಿ ಇರುವವರಂತೂ ಮಾದರಿ ಆಗಿರಬೇಕು. ಇದನ್ನೂ ಮೀರಿದ್ದು ಅಂತಃಸಾಕ್ಷಿ ಮತ್ತು ಆತ್ಮಪ್ರಜ್ಞೆ. ಮೇಟಿ ಅವರ ಮಲಗೋ ಸ್ವಾತಂತ್ರ್ಯಕ್ಕೆ ಯಾರ ಅಭ್ಯಂತರವೂ ಇಲ್ಲ. ಹಾಗಂತ ಅವರು ವಿಧಾನಸೌಧದಲ್ಲಿ, ವಿಧಾನಸಭೆಯಲ್ಲಿ, ಮೆಜೆಸ್ಟಿಕ್ ಬಸ್ಟಾಂಡ್ ನಲ್ಲಿ ಅಥವಾ ಇನ್ಯಾವುದೋ ಸಾರ್ವಜನಿಕ ಜಾಗದಲ್ಲಿ ಬಂದು ಮಲಗೋಕೆ ಆಗಲ್ಲಾ. ಅವರು ರಾಸಲೀಲೆ ನಡೆಸಿರೋದು ಸರಕಾರಿ ಕಚೇರಿಯಲ್ಲಿ. ಒಬ್ಬ ಚುನಾಯಿತ ಪ್ರತಿನಿಧಿಯಾಗಿ, ಮಂತ್ರಿಯಾಗಿ ಸರಕಾರಿ ಕಚೇರಿಯನ್ನು ಅಂದರೆ ಸಾರ್ವಜನಿಕ ಜಾಗವನ್ನು ತನ್ನ ತೆವಲಿಗೆ ದುರ್ಬಳಕೆ ಮಾಡಿಕೊಂಡದ್ದು ಅಕ್ಷಮ್ಯ ಅಪರಾಧ. ಇನ್ನು ಎರಡನೆಯದು ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆಗೆ ಉದ್ಯೋಗ ಕಾಯಂ ಮಾಡಿಸುವುದಾಗಿ ಆಮಿಷವೊಡ್ಡಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡದ್ದು. ಇಲ್ಲಿಯೂ ಅಧಿಕಾರದ ದುರ್ಬಳಕೆ ಆಗಿದೆ. ತಮಗಿದ್ದ ಮಂತ್ರಿ ಪದವಿಯನ್ನು ಅದಕ್ಕವರು ಬಳಸಿದ್ದಾರೆ. ಅಷ್ಟೇ ಅಲ್ಲದೇ ಕೊಟ್ಟ ಮಾತಿನಂತೆ ನೌಕರಿ ಕಾಯಂ ಮಾಡಿಸದೆ ವಂಚನೆಯನ್ನೂ ಮಾಡಿದ್ದಾರೆ. ಸರಕಾರಿ ಜಾಗ, ಅಧಿಕಾರ ದುರ್ಬಳಕೆ, ಪ್ರಚೋದನೆ, ವಂಚನೆ – ಹೀಗೆ ಸಾಗುತ್ತದೆ ಮೇಟಿ ಅವರ ಲೋಪಗಳ ಸರಮಾಲೆ. ಇಷ್ಟೆಲ್ಲ ಮಾಡಿ ನನ್ನದೇನೂ ತಪ್ಪಿಲ್ಲ ಅಂತಾರಲ್ಲಾ, ಇವರೇನು ಜನರನ್ನು ಡಾ. ರಾಜಕುಮಾರ್ ನಟಿಸಿರೋ ‘ಬಂಗಾರದ ಪಂಜರ’ ಸಿನಿಮಾದ ಕುರಿ ‘ಮೈಲಾರಿ’ ಅಂದುಕೊಂಡಿದ್ದಾರೆಯೇ? ಇವರು ಹೇಳಿದ್ದಕ್ಕೆಲ್ಲ ತಲೆಯಾಡಿಸಲು!

ಇನ್ನು ಷಡ್ಯಂತ್ರ ಮತ್ತು ಬ್ಲಾಕ್ ಮೇಲ್ ವಿಚಾರ. ಇದಿನ್ನು ವಿಚಾರಣೆ ಹಂತದ ವಿಚಾರ. ಆದರೂ ಸಿಎಂ ಮತ್ತು ಮೇಟಿ ಅವರ ಮಾತುಗಳನ್ನು ವಿಶ್ಲೇಷಣೆ ಮಾಡುವುದಾದರೆ, ಮೇಟಿ ಅವರು ಸದ್ಗೃಹಸ್ಥರಾಗಿ ತಮ್ಮ ಮನೇಲಿ ತಾವು ಪವಡಿಸಿದಿದ್ದರೆ, ಅಸಹಾಯಕ ಹೆಣ್ಮಕ್ಕಳನ್ನು ಆಮಿಷವೊಡ್ಡಿ ಪಲ್ಲಂಗಕ್ಕೆ ಕರೆಯದಿದ್ದರೆ, ಸರಕಾರಿ ಕಚೇರಿಯಲ್ಲಿ ಕಚ್ಚೆ ಬಿಚ್ಚಿರದಿದ್ದರೆ ಷಡ್ಯಂತ್ರ ಎಲ್ಲಿ ನಡೆಯುತ್ತಿತ್ತು? ರಾಸಲೀಲೆ ಸಿ.ಡಿ. ಎಲ್ಲಿ ರೆಡಿ ಆಗುತ್ತಿತ್ತು? ಅದಾರು ತಾನೇ ಬ್ಲಾಕ್ ಮೇಲ್ ಮಾಡಲು ಸಾಧ್ಯವಾಗುತ್ತಿತ್ತು? ಮೇಟಿ ಅವರು ತಪ್ಪೇ ಮಾಡದಿದ್ದರೆ ಬ್ಲಾಕ್ ಮೇಲ್ ಪ್ರಶ್ನೆಯಾದರೂ ಎಲ್ಲಿ ಬರುತ್ತಿತ್ತು? ಅವರೂ ತಪ್ಪು ಮಾಡಿ, ಬೇರೆಯವರೂ ತಪ್ಪು ಮಾಡಲು ಅವಕಾಶ ಮಾಡಿಕೊಟ್ಟದ್ದು ಗೋಡೆಯಲ್ಲಿದ್ದ ಗೂಟ ಕಿತ್ತುಕೊಂಡು ನೆತ್ತಿಗೆ ಪೆಟ್ಟಿಕೊಂಡಂತಾಯಿತಲ್ಲವೇ?

ಲಗೋರಿ : ಕಚ್ಚೆಗೆ ಬಿದ್ದ ಕಿಚ್ಚಿಗೆ ಅಧಿಕಾರ ಕರಗಿಸೋ ಶಕ್ತಿಯೂ ಇರುತ್ತದೆ.

Leave a Reply