ನೀಟ್ ಪರೀಕ್ಷೆ ಬರೆಯಲು ಕನ್ನಡ ಮಾಧ್ಯಮಕ್ಕಿಲ್ಲ ಅವಕಾಶ, ಕನ್ನಡಿಗರಿಗೆ ಆಗಿರುವ ಅನ್ಯಾಯ ಕೇಳುವವರು ಯಾರು?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣಕ್ಕೆ ನಡೆಯಲಿರುವ ಏಕರೂಪ ಪ್ರವೇಶ ಪರೀಕ್ಷೆ ನೀಟ್ (ನ್ಯಾಷನಲ್ ಎಲಿಜಬಿಲಿಟಿ ಕಮ್ ಎಂಟರೆನ್ಸ್ ಎಕ್ಸಾಂ) ಪರೀಕ್ಷೆ ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ ದೊಡ್ಡ ಹಿನ್ನಡೆಯಾಗಲಿದೆ. ಕಾರಣ, ಈ ಪರೀಕ್ಷೆಯನ್ನು 8 ಭಾಷೆಗಳಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಅವಕಾಶ ಕನ್ನಡ ಭಾಷೆಗೆ ಇಲ್ಲವಾಗಿದೆ.

ಕಳೆದ ಬುಧವಾರ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ನೀಟ್ ಪರೀಕ್ಷೆಯನ್ನು ಬರೆಯಬಹುದಾದ ಎಂಟು ಭಾಷೆಗಳ ಪಟ್ಟಿಯನ್ನು ಪ್ರಕಟಿಸಿದೆ. ಆ ಪೈಕಿ ಇಂಗ್ಲಿಷ್, ತಮಿಳು, ಹಿಂದಿ, ಅಸ್ಸಾಂ, ಬೆಂಗಾಲಿ, ಗುಜರಾತಿ, ಮರಾಠಿ ಹಾಗೂ ತೆಲುಗು ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಇದರೊಂದಿಗೆ ಕನ್ನಡದಲ್ಲಿ ಪ್ರವೇಶ ಪರೀಕ್ಷೆ ಬರೆಯಲು ಬಯಸಿದ್ದ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರೆಚಲಾಗಿದೆ.

ಈ ಪಟ್ಟಿಯಿಂದ ಕನ್ನಡ ಭಾಷೆಯನ್ನು ಕೈಬಿಟ್ಟಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಹಾಗೆ ನೋಡುವುದಾದರೆ, ಈ ಪಟ್ಟಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕನ್ನಡ ಭಾಷೆಯನ್ನು ಸೇರಿಸಬೇಕಿತ್ತು. ಕಾರಣ, ಈವರೆಗೂ ದೇಶಕ್ಕೆ ಅತಿ ಹೆಚ್ಚು ಸಂಖ್ಯೆಯ ವೈದ್ಯರನ್ನು ನೀಡಿರುವುದು ಕರ್ನಾಟಕ ರಾಜ್ಯವೇ. ಕರ್ನಾಟಕದಲ್ಲಿ ಒಟ್ಟು 53 ಮೆಡಿಕಲ್ ಕಾಲೇಜುಗಳಿವೆ. ಆ ಪೈಕಿ 18 ಕಾಲೇಜುಗಳು ಸರ್ಕಾರಿ ಹಾಗೂ ಉಳಿದ ಕಾಲೇಜುಗಳು ಖಾಸಗಿಯಾಗಿವೆ. ಈ ಎಲ್ಲ ಕಾಲೇಜುಗಳಿಂದ ಪ್ರತಿ ವರ್ಷ ಒಟ್ಟು 7,095 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಬಹುದು. ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಇಷ್ಟೆಲ್ಲಾ ಅವಕಾಶವಿದ್ದರೂ ನಮ್ಮ ಭಾಷೆಯ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಅವಕಾಶ ವಂಚಿತರಾಗುವ ಪರಿಸ್ಥಿತಿ ನಿಜಕ್ಕೂ ದೊಡ್ಡ ಅನ್ಯಾಯವೇ ಸರಿ.

ಈಗ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶ ನೀಡದಿರುವುದರಿಂದ ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ತೀವ್ರ ಆಘಾತವಾಗಿದೆ. ಕೇಂದ್ರದ ಈ ನಿರ್ಧಾರದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯುವಂತೆ ಅವಕಾಶ ಮಾಡಿಕೊಡಲು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಖಾರವಾಗಿ ಪತ್ರ ಬರೆಯಲಾಗಿದೆ. ಆ ಪತ್ರದಲ್ಲಿ ಕೇಂದ್ರ ಸಚಿವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಆಕ್ಷೇಪ ವ್ಯಕ್ತಪಡಿಸಿರುವುದು ಹೀಗೆ…

‘ನಮ್ಮ ರಾಜ್ಯ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನಷ್ಟೇ ಹೊಂದಿಲ್ಲ. ಕರ್ನಾಟಕದಲ್ಲಿನ ಶೇ.70 ರಷ್ಟು ಮಕ್ಕಳು ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿಯೇ ಬರೆಯುತ್ತಾರೆ. ಕೇಂದ್ರದ ಈ ನಿರ್ಧಾರದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಾಗೂ ಕನ್ನಡಿಗರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ. ಅಲ್ಲದೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ 7 ಕೋಟಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ.’

ಕಳೆದ ಬಾರಿಯೂ ನೀಟ್ ಪರೀಕ್ಷೆಯನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಬರೆಯುವಂತೆ ಮಾಡಲಾಗಿತ್ತು. ಹೀಗಾಗಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮುಂದಿನ ಪರೀಕ್ಷೆ ಬರುವ ಮುನ್ನ ಕನ್ನಡದಲ್ಲಿಯೂ ಈ ಪರೀಕ್ಷೆ ಬರೆಯುವ ಅವಕಾಶ ಮಾಡಿಕೊಡಿ ಎಂದು ಶಿಕ್ಷಣ ಇಲಾಖೆಯೂ ಮನವಿ ಮಾಡಿದೆ.

ತಮಿಳುನಾಡಿನ ವೈದ್ಯಕೀಯ ಕಾಲೇಜುಗಳ ಸೀಟುಗಳ ಪೈಕಿ ಶೈ.85ರಷ್ಟು ಸ್ಥಳೀಯ ವಿದ್ಯಾರ್ಥಿಗೆ ಮೀಸಲಿಡಲಾಗಿದೆ. ಆದರೆ ಕರ್ನಾಟಕದಲ್ಲಿ ಇರುವ ಗರಿಷ್ಠ ಸೀಟುಗಳ ಪೈಕಿ ಸಿಂಹಪಾಲು ಕನ್ನಡ ಹೊರತಾಗಿ ಈ ಭಾಷೆಗಳಲ್ಲಿ ಬರೆಯುವ ವಿದ್ಯಾರ್ಥಿಗಳ ಪಾಲಾಗಲಿದೆ.

ನೀಟ್ ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡಕ್ಕೆ ಆಗಿರುವ ಅನ್ಯಾಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ಪ್ರಶ್ನಿಸಲಾಗುತ್ತಿದೆ. ಇನ್ನು ನೀಟ್ ಪರೀಕ್ಷೆಯಲ್ಲಿ ಕನ್ನಡವನ್ನು ನಿರ್ಲಕ್ಷಿಸಿರುವ ಬಗ್ಗೆ ರಾಜ್ಯದ ಯಾವೊಬ್ಬ ಸಂಸದರು ಸಂಸತ್ತಿನಲ್ಲಿ ಉಸಿರು ಎತ್ತದಿರುವುದು ನಿಜಕ್ಕೂ ನಮ್ಮ ದುರಾದೃಷ್ಟಕರದ ವಿಷಯ. ಈ ಎಲ್ಲ ಬೆಳವಣಿಗೆಗಳಿಂದ ಪದೇ ಪದೇ ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬ ವಾದಕ್ಕೆ ಪುಷ್ಟಿ ನೀಡುತ್ತಿದ್ದು, ನೀಟ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿದ್ದರೆ, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಯಾವುದೇ ಸೀಟುಗಳನ್ನು ನೀಡಬಾರದು ಎಂಬ ಕೂಗುಗಳು ಕೇಳಿಬರುತ್ತಿವೆ.

ಕನ್ನಡಿಗರಿಗೆ ಹಾಗೂ ಕನ್ನಡ ಭಾಷೆಗೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ತೀವ್ರವಾಗುವ ಮುನ್ನ ನಮ್ಮ ಜನಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಸೂಕ್ತ.

Leave a Reply