ರಾಹುಲ್- ಮೋದಿ ಭೇಟಿ: ರೈತರ ಸಾಲ ಮನ್ನಾಕ್ಕೆ ಮನವಿ, ಕಾಂಗ್ರೆಸ್ಸಿಗರಿಗೆ ದೇಶಕ್ಕಿಂತ ಪಕ್ಷವೇ ದೊಡ್ಡದು ಎಂದು ಪ್ರಧಾನಿ ಟೀಕೆ, ಮೇಟಿ ಪ್ರಕರಣಕ್ಕೆ ಸಿಐಡಿಯಿಂದ ತನಿಖೆ ಇಲ್ಲ, ಸಿಬಿಐ ವಶಕ್ಕೆ ಜಯಚಂದ್ರ

ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಖಾಸಗಿ ಏರ್ ಆಂಬುಲೆನ್ಸ್ ಸೇವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಡಿಜಿಟಲ್ ಕನ್ನಡ ಟೀಮ್:

ರೈತರ ಸಾಲ ಮನ್ನಾ ಮಾಡಲು ಪ್ರಧಾನಿಗೆ ವಿಪಕ್ಷಗಳ ಮನವಿ

ಕೆಲದಿನಗಳಿಂದ ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ನೇರ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ಭೇಟಿ ಮಾಡಿದ್ದು ಅಚ್ಚರಿಗೆ ಕಾರಣವಾಯಿತು. ಕಾಂಗ್ರೆಸ್ ಜತೆಗೆ ಇತರೆ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರ ಪ್ರಧಾನಿ ಭೇಟಿಗೆ ಸಾಥ್ ನೀಡಿದ್ದು, ರೈತರ ಸಾಲ ಮನ್ನಾ ಮಾಡುವಂತೆ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ವಿಪಕ್ಷ ನಾಯಕರಿಗೆ ಪ್ರತಿಕ್ರಿಯೆ ಕೊಟ್ಟ ಮೋದಿ, ‘ನಾವು (ಸರ್ಕಾರ ಮತ್ತು ವಿರೋಧ ಪಕ್ಷಗಳು) ಆಗಾಗ್ಗೆ ಈ ರೀತಿಯಾಗಿ ಭೇಟಿ ಮಾಡುತ್ತಿರಬೇಕು’ ಎಂದು ತಿಳಿಸಿದರು.

ಪ್ರಧಾನಿಗೆ ಪ್ರಸ್ತಾವ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ರಾಹುಲ್ ಗಾಂಧಿ ‘ಪ್ರಧಾನಿ ಮೋದಿ ಅವರು ನಮ್ಮ ನಮ್ಮ ಮನವಿಯನ್ನು ಆಲಿಸಿದರೇ ಹೊರತು ಅದಕ್ಕೆ ಯಾವುದೇ ರೀತಿಯ ಉತ್ತರ ನೀಡಲಿಲ್ಲ. ಗೋಧಿಯ ಆಮದು ಸುಂಕ ತೆಗೆದು ಹಾಕಿರುವುದು ಅತ್ಯಂತ ಕೆಟ್ಟ ನಿರ್ಧಾರವಾಗಿದೆ. ಈ ವೇಳೆ ರೈತರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪ್ರಧಾನಿಯವರು ಒಪ್ಪಿಕೊಂಡರು. ಹೀಗಾಗಿ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ್ದೇನೆ’ ಎಂದರು.

ಇನ್ನು ಈ ಬಾರಿಯ ಅಧಿವೇಶನದಲ್ಲಿ ಕಾಲಹರಣವಾಗಿರುವ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ ವಿರೋಧ ಪಕ್ಷಗಳು, ಸರ್ಕಾರವನ್ನು ದೂರಿದವು. ಕಾಂಗ್ರೆಸ್ ಪಕ್ಷದ ರಾಷ್ಟ್ರಪತಿ ಅವರ ಭೇಟಿ ಸಂದರ್ಭದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಎನ್ ಸಿ ಪಿ ಪಕ್ಷಗಳು ಕಾಂಗ್ರೆಸ್ಸಿಗೆ ಬೆಂಬಲ ನೀಡದೇ ದೂರ ಉಳಿದವು. ಆ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟು ಅಧಿವೇಶ ಮುಗಿಯುತ್ತಿದ್ದಂತೆ ಒಡೆದು ಹೋಯಿತೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಕಾಂಗ್ರೆಸ್ ವಿರುದ್ಧ ಮೋದಿ ಟೀಕೆ

ಈ ಬಾರಿಯ ಚಳಿಗಾಲದ ಅಧಿವೇಶನ ಗದ್ದಲ ಹಾಗೂ ಪ್ರತಿಭಟನೆಗೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸಿಗರಿಗೆ ದೇಶಕ್ಕಿಂತ ತಮ್ಮ ಪಕ್ಷವೇ ದೊಡ್ಡದು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಸಂಸತ್ ಅಧಿವೇಶನ ಆರಂಭವಾಗುವ ಮುನ್ನ ಬಿಜೆಪಿ ಸಂಸದೀಯ ಸಭೆ ನಡೆಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ಕಾರದ ನೋಟು ಅಮಾನ್ಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಲೇ ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಈ ವೇಳೆ ಮೋದಿ ಹೇಳಿದಿಷ್ಟು…

‘ಈ ಹಿಂದೆ ವಿರೋಧ ಪಕ್ಷ ಸ್ಥಾನದಲ್ಲಿದ್ದ ಪಕ್ಷಗಳು 2ಜಿ ಹಗರಣ, ಕಲ್ಲಿದ್ದಲು ಹಗರಣ ವಿರುದ್ಧ ಹೋರಾಟ ನಡೆಸುತ್ತಿದ್ದವು. ಆದರೆ ಈಗ, ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದು, ಇದರ ವಿರುದ್ಧ ಪ್ರತಿಪಕ್ಷಗಳು ತಿರುಗಿ ಬಿದ್ದಿವೆ. ಕಾಂಗ್ರೆಸಿಗರಿಗೆ ದೇಶಕ್ಕಿಂತ ತಮ್ಮ ಪಕ್ಷವೇ ದೊಡ್ಡದು. ಆದರೆ ಬಿಜೆಪಿ ಪಕ್ಷಕ್ಕೆ ದೇಶದ ವಿಚಾರವೇ ಪ್ರಮುಖ. 1971ರಲ್ಲೇ ವಾಂಚೋ ಸಮಿತಿಯು ದೇಶದಲ್ಲಿ ನೋಟು ಅಮಾನ್ಯ ನಿರ್ಧಾರ ತೆಗೆದುಕೊಳ್ಳುವಂತೆ ಶಿಫಾರಸ್ಸು ನೀಡಲಾಗಿತ್ತು. ಆ ಶಿಫಾರಸ್ಸನ್ನು ಈವರೆಗೂ ಜಾರಿ ಮಾಡದ ಹಿನ್ನೆಲೆಯಲ್ಲಿ ನಮ್ಮ ದೇಶ ಇಷ್ಟು ಪ್ರಮಾಣದಲ್ಲಿ ಸೊರಗುವಂತಾಯಿತು.’

‘ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಹಾಗೂ ಇತರರಿಗೆ ಧನ್ಯವಾದ ಅರ್ಪಿಸುತ್ತೇನೆ.’

ಸರ್ಕಾರದ ನೋಟು ಅಮಾನ್ಯ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ನಕಾರ

ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರವು ‘ಆರ್ಥಿಕ ನೀತಿಯ ವಿಷಯವಾಗಿದ್ದು’ ಈ ನಿರ್ಧಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿದ್ದು, ಹಳೇಯ ₹ 500 ಮತ್ತು 1000 ನೋಟುಗಳ ಬಳಕೆಯನ್ನು ಕೆಲವು ಕ್ಷೇತ್ರಗಳಲ್ಲಿ ಬಳಕೆಯ ಅವಧಿ ವಿಸ್ತರಿಸುವ ಮನವಿಯನ್ನು ನಿರಾಕರಿಸಿದೆ. ಅಲ್ಲದೆ ಎಲ್ಲ ಬ್ಯಾಂಕುಗಳು ಪ್ರತಿ ವ್ಯಕ್ತಿಗೆ ವಾರಕ್ಕೆ ₹ 24 ಸಾವಿರ ಹಣ ನೀಡುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದೂ ತಿಳಿಸಿದೆ.

ಮೇಟಿ ಪ್ರಕರಣ: ಸಿಐಡಿಯಿಂದ ಪ್ರಕರಣ ಹಿಂಪಡೆದ ಸರ್ಕಾರ

ಮಾಜಿ ಅಬಕಾರಿ ಸಚಿವ ಎಚ್.ವೈ ಮೇಟಿ ಅವರ ಲೈಂಗಿಂಕ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿದ್ದ ರಾಜ್ಯ ಸರ್ಕಾರ ಈಗ ತನ್ನ ನಿರ್ಧಾರವನ್ನು ಹಿಂಪಡೆದಿದೆ. ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವುದರ ಬದಲಿಗೆ ಆಂತರಿಕ ತನಿಖೆ ಮಾಡಿ ವರದಿ ಪಡೆಯುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

60ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದ ಲಾಂಛನ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು ಈ ಪ್ರಕರಣದ ತನಿಖೆ ಬಗ್ಗೆ ಹೇಳಿದಿಷ್ಟು… ‘ರಾಜ್ಯದ ಯಾವುದೇ ಠಾಣೆಯಲ್ಲೂ ಮೇಟಿಯವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿಲ್ಲ. ಸಿಐಡಿಗೆ ಸ್ವಾತಂತ್ರ್ಯವಿದೆ. ಅವರು ಯಾರನ್ನಾದರೂ ವಿಚಾರಣೆ ಮಾಡಬಹುದು. ಮೇಟಿಯವರು ಶಾಸಕರಾಗಿರುವುದರಿಂದ ಅವರ ವಿರುದ್ಧ ತಾವು ಕ್ರಮ ಕೈಗೊಳ್ಳಲು ಬರುವುದಿಲ್ಲ. ಈ ಪ್ರಕರಣದ ಬಗ್ಗೆ ಎಲ್ಲ ಮಾಹಿತಿಯನ್ನು ಕಾಂಗ್ರೆಸ್ ಪಕ್ಷದ ಹೈ ಕಮಾಂಡಿಗೆ ತಿಳಿಸಲಾಗುವುದು. ಮೇಟಿ ಅವರು ಪಕ್ಷದ ಕಾರ್ಯಕರ್ತರಲ್ಲ. ಅವರು ಜನಪ್ರತಿನಿಧಿಗಳಾಗಿದ್ದಾರೆ. ಹಾಗಾಗಿ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಇನ್ನು ಅಕ್ರಮ ಹಣ ಸಂಪಾದನೆ ಬಗ್ಗೆ ಸಚಿವ ಎಚ್.ಸಿ ಮಹದೇವಪ್ಪನವರ ಪಾತ್ರ ಕುರಿತಂತೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಜಾರಿ ನಿರ್ದೇಶನಾಲಯದಿಂದಲೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ.’

ಪರಿಶಿಷ್ಟ ಪಂಗಡಕ್ಕೆ ಕೊಡವ ಸಮುದಾಯ ಸೇರ್ಪಡೆ ಇಲ್ಲ

ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ನಡೆಯುತ್ತಿದ್ದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆಹಿಡಿದಿದ್ದಾರೆ. ವಿಧಾನ ಪರಿಷತ್ತಿನ ಪ್ರತಿಪಕ್ಷದ ಮಾಜಿ ನಾಯಕ ಎ.ಕೆ ಸುಬ್ಬಯ್ಯ ಅವರ ನೇತೃತ್ವದ ಕೊಡಗು ಸೌಹಾರ್ದ ವೇದಿಕೆಯ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೊಡವ ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾರೆ. ಹೀಗಾಗಿ ಅವರನ್ನು ಪರಿಶಿಷ್ಟ ಪಂಗಡದ ಗುಂಪಿಗೆ ಸೇರಿಸುವುದು ಬೇಡ ಎಂದು ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಸಮೀಕ್ಷೆ ಕಾರ್ಯ ನಿಲ್ಲಿಸುವಂತೆ ಆದೇಶ ನೀಡಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ಕಪ್ಪುಹಣ ಹೊಂದಿರುವವರ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಈಗ ಸಾರ್ವಜನಿಕರು ಸಹ ಸುಲಭವಾಗಿ ದೂರು ಅಥವಾ ಮಾಹಿತಿ ನೀಡಬಹುದು. ಸಾರ್ವಜನಿಕರಿಗೆ ಅಕ್ರಮ ಹಣ ಬದಲಾವಣೆ, ಕಪ್ಪುಹಣ ಸಂಗ್ರಹದ ಬಗ್ಗೆ ಮಾಹಿತಿ ಸಿಕ್ಕರೆ ಅವರು ಇ ಮೇಲ್ ಮೂಲಕ ಮಾಹಿತಿ ನೀಡುವ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ಈ ದೂರು ಹಾಗೂ ಮಾಹಿತಿ ರವಾನಿಸಲು ಸರ್ಕಾರ blackmoneyinfo@incometaxindia.nic.in ಇ ಮೇಲ್ ಐಡಿಯನ್ನು ಪ್ರಕಟಿಸಿದೆ.
  • ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ವೇಳೆ ಕೋಟ್ಯಾಂತರ ರುಪಾಯಿ ಅಕ್ರಮ ಹಣದೊಂದಿಗೆ ಸಿಕ್ಕಿಬಿದ್ದ ರಾಜ್ಯ ಹೆದ್ದಾರಿ ಪ್ರಾಧಿಕಾರದ ಮಾಜಿ ವ್ಯವಸ್ಥಾಪಕ ನಿರ್ದೇಶತ ಎಸ್.ಸಿ ಜಯಚಂದ್ರ ಅವರನ್ನು ಇಂದು ಸಿಬಿಐ ತನ್ನ ವಶಕ್ಕೆ ಪಡೆದುಕೊಂಡಿದೆ. ಗುರುವಾರ ಜಯಚಂದ್ರ ಅವರ ವಕೀಲರು ಷರತ್ತುಬದ್ಧ ಜಾಮೀನು ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಆದರೆ, ಕೋರ್ಟ್ ವಿಧಿಸಿದ್ದ ಶ್ಯೂರಿಟಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಯಚಂದ್ರ ಅವರು ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ. ಇದೇ ವೇಳೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ಪರಪ್ಪನ ಅಗ್ರಹಾರದಲ್ಲೇ ಜಯಚಂದ್ರ ಅವರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ.
  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಬಿಡಿಎ ಹಾಗೂ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಪರಿಶೀಲನಾ ಸಭೆ ನಡೆಸಿದರು. ಈ ವಳೆ ಮುಂದಿನ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಲ್ಲ ಅಗತ್ಯಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜತೆಗೆ ಬಿಡಿಎ ನಿರ್ಮಾಣ ಮಾಡುತ್ತಿರುವ ಎಲ್ಲ ವಸತಿ ಬಡಾವಣೆಗಳನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ ನಿವೇಶನ ಹಂಚಿಕೆ ಮಾಡುವಂತೆ ಆದೇಶಿಸಿದ್ದಾರೆ.
  • ವಿವಾಹ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಬಗ್ಗೆ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್, ಈ ಪ್ರಕರಣವನ್ನೇ ರದ್ದುಗೊಳಿಸಿದೆ. ಅಲ್ಲದೆ ಕೆಳ ನ್ಯಾಯಾಲಯದಲ್ಲಿ ಈ ಬಗ್ಗೆ ನಡೆಯುತ್ತಿದ್ದ ವಿಚಾರಣೆಗೂ ಬ್ರೇಕ್ ಹಾಕಿದೆ. ಆ ಮೂಲಕ ನಟಿ ಮೈತ್ರಿಯಾ ಗೌಡ ಅವರು ದಾಖಲಿಸಿದ್ದ ಪ್ರಕರಣದಿಂದ ಕಾರ್ತಿಕ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply