ಮಾಮರದ ಕೋಗಿಲೆ ಎಸ್ಪಿ ಕಂಠಕ್ಕೀಗ ಅರ್ಧ ಶತಮಾನ, ಬದುಕಿಗೆ ಸಾರ್ಥಕತೆ ಕಲ್ಪಿಸಿದೆ ಗಾನಯಾನ

author-ssreedhra-murthyಎಂ.ಆರ್.ವಿಠಲ್ ನಿರ್ದೇಶನದ ‘ನಕ್ಕರದೇ ಸ್ವರ್ಗ’ ಚಿತ್ರಕ್ಕೆ ಹಲವು ಚಾರಿತ್ರಿಕ ಮಹತ್ವಗಳಿವೆ. ನರಸಿಂಹ ರಾಜು ಅವರ ಅಭಿನಯದ ನೂರನೇ ಚಿತ್ರ, ರಾಜ್ಯ ಪ್ರಶಸ್ತಿಯನ್ನು ಪಡೆದ ಮೊದಲ ಚಿತ್ರ, ಕರ್ನಾಟಕದಲ್ಲೇ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಮೊದಲ ಚಿತ್ರ. ಹೀಗೆ ಈ ಚಿತ್ರದಲ್ಲಿ ಸ್ಪರ್ಧೆಯ ಮೂಲಕ ಸಂಗೀತ ನಿರ್ದೇಶಕರನ್ನು ಆರಿಸಲಾಗಿತ್ತು. ಹೀಗೆ ಆಯ್ಕೆಯಾದವರು ಎಂ.ರಂಗರಾವ್. ಅದರಂತೆ ಹೊಸ ಗಾಯಕರೊಬ್ಬರಿಂದ ಹಾಡಿಸಲಾಯಿತು. ಹೀಗೆ ಮುಟ್ಟಿದ್ದೆಲ್ಲ ಚಿನ್ನ ಎನ್ನಿಸಿಕೊಂಡ ಚಿತ್ರದಿಂದ ಬೆಳಕಿಗೆ ಬಂದ ಗಾಯಕರೇ ಎಸ್.ಪಿ.ಬಾಲಸುಬ್ರಹ್ಮಣ್ಯಂ.  ಆ ಚಿತ್ರದಲ್ಲಿ ಅವರು ಪಿ.ಸುಶೀಲಾ ಅವರೊಡನೆ ಹಾಡಿದ ‘ಕನಸಿದು ಮನಸಿದು’ ಗೀತೆ ಧ್ವನಿಮುದ್ರಣಗೊಂಡಿದ್ದು ಡಿಸೆಂಬರ್ 20, 1966 ರಂದು. ಅಂದರೆ ಆ ಕನ್ನಡ ಚಿತ್ರಗೀತೆಗೀಗ ಐವತ್ತು ವರ್ಷಗಳು. ಇದಕ್ಕೆ ಕೇವಲ ಐದು ದಿನಗಳ ಮುಂಚೆ ಎಂದರೆ ಡಿಸೆಂಬರ್ 15 ರಂದು ತೆಲುಗಿನ ‘ಶ್ರೀಶ್ರೀಶ್ರೀ ಮರ್ಯಾದಾ ರಾಮಣ್ಣ’ ಚಿತ್ರಕ್ಕಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ‘ಎಮೀ ಎಮಿಂತ ಮೋಹಮು’ ಎನ್ನುವ ತಮ್ಮ ಮೊದಲ ಗೀತೆಯನ್ನು ಹಾಡಿದ್ದರು.

ಎಸ್.ಪಿ.ಬಿಯವರು ಸಾಗಿ ಬಂದ ಅರ್ಧ ಶತಮಾನದ ಹಾದಿಯೇ ಒಂದು ರೋಚಕ ಚಲನಚಿತ್ರದಂತಿದೆ. 1946ರ ಜೂನ್ 4ರಂದು ಈಗ ಆಂದ್ರಪ್ರದೇಶದಲ್ಲಿರುವ ಕೋನಂಪೇಟೆಯಲ್ಲಿ ಜನಿಸಿದ ಎಸ್.ಪಿ.ಬಿಯವರ ತಂದೆ ಸಾಂಬಶಿವನ್ ಹರಿಕಥಾ ವಿದ್ವಾಂಸರು. ಸೋದರಿಬ್ಬರು ಸಂಗೀತ ಕಲಿಯುತ್ತಿದ್ದರಿಂದ ಆ ಹಾದಿ ಬೇಡ ಎಂದು ಎಸ್.ಪಿ ವಾಯಲಿನ್ ಕಲಿಯಲು ಹೋಗಿದ್ದೂ ಉಂಟು. ತಂದೆಯ ಆಸೆಯಂತೆ ಇಂಜಿನಿಯರ್ ಆಗಲು ಅನಂತ ಪುರಂನ ಜೆ.ಎನ್.ಟಿ.ಸಿ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿರುವಾಗ ಟೈಫಾಯ್ಡ್ ಕಾಡಿತು. ಪರೀಕ್ಷೆಗೆ ಹಾಜರಾಗಲು ಆಗಲೇ ಇಲ್ಲ. ಇದರಿಂದ ಒಂದು ವರ್ಷ ವ್ಯರ್ಥವಾಗುವುದು ಎಂದು ಚಿಂತಿತರಾಗಿದ್ದಾಗ ಮದ್ರಾಸಿನ ‘ಇನ್ಸ್‍ಟ್ಯೂಟ್ ಅಫ್ ಇಂಜಿನಿಯರ್ಸ್’ನಲ್ಲಿ ಕ್ಯಾರಿ ಓವರ್ ಇರುವುದು ತಿಳಿದು ಅಲ್ಲಿಗೆ ಸೇರಿದರು. ಅದು ಅವರ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಯಿತು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಲ್ಲಿ ಮೇರು ಗಾಯಕನಾಗಿರುವುದನ್ನು ಗುರುತಿಸಿದವರು ಆಗ ಅವಕಾಶಗಳನ್ನು ಅರಸುತ್ತಿದ್ದ ಇಳಯರಾಜ. ಇಬ್ಬರೂ ಇನ್ನೂ ಕೆಲವು ಗೆಳಯರ ಜೊತೆ ಸೇರಿ ‘ಸ್ವರ ಸಂಗಮ’ ಎನ್ನುವ ಸಂಗೀತ ತಂಡ ಕಟ್ಟಿದರು. 1966ರ ಫೆಬ್ರವರಿ 17 ‘ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ಸಂಯೋಜಿಸಿದ್ದ ಸ್ಪರ್ಧೆಯಲ್ಲಿ ತಾವೇ ರಚಿಸಿ ಸ್ವರ ಸಂಯೋಜಿಸಿದ್ದ ‘ರಾಗಮು ಅನುರಾಗಮು’ ಎನ್ನುವ ಗೀತೆಯನ್ನು ಹಾಡಿದರು. ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಘಂಟಸಾಲ ಮತ್ತು ಕೋದಂಡ ಪಾಣಿ ಇಬ್ಬರೂ ಎಸ್.ಪಿ.ಬಿಯವರ ಕಂಠಸಿರಿಗೆ ಬೆರಗಾದರು. ಅದರಲ್ಲಿಯೂ ಕೋದಂಡಪಾಣಿ ತಮ್ಮ ಸಂಗೀತ ನಿರ್ದೇಶನದ ಚಿತ್ರದ ಮೂಲಕವೇ ಎಸ್.ಪಿ.ಬಿಯವರನ್ನು  ಚಿತ್ರರಂಗಕ್ಕೂ ತಂದರು.

ದಕ್ಷಿಣ ಭಾರತ ಚಿತ್ರರಂಗದಲ್ಲಿ  ಪ್ರಮುಖ ಗಾಯಕರಿದ್ದ ಕಾಲ ಅದು. ಎಸ್.ಪಿ.ಬಿ ತಮ್ಮ ಹೊಸತನದಿಂದಲೇ ಗಮನ ಸೆಳೆದರು. ಚಿತ್ರಗೀತೆಗೆ ಸ್ಕೀನ್ ಪ್ರೆಸನ್ಸ್‍ ಎನ್ನುವುದಿರುತ್ತದೆ ಎನ್ನುವುದನ್ನು ಗುರುತಿಸಿದ ಮೊದಲಿಗರು ಅವರು. ತಮ್ಮ ಹಾಡಿಗೆ ಅಭಿನಯಿಸುವ ಕಲಾವಿದರ ಧ್ವನಿ ಏರಿಳಿತವನ್ನು ಅರಿತು ಹಾಡುವ ಮೂಲಕ ಸಹಜತೆಯನ್ನು ಸಾಧಿಸಿದರು. ‘ಮಾಮರ ಎಲ್ಲೋ’ ಹಾಡುವಾಗ ವಿಷ್ಣುವರ್ಧನ್ ಕಂಠ ಕೇಳಿಸಿದರೆ ‘ಎಲ್ಲಿರುವೆ ಹಾಡುವಾಗ’ ಅನಂತ್‍ ನಾಗ್‍, ‘ನಲಿವ ಗುಲಾಬಿ ಹೂವೆ’ ಹಾಡುವಾಗ ಶಂಕರ್ ನಾಗ್ ಧ್ವನಿ ಏರಿಳಿತಗಳನ್ನು ನೋಡಬಹುದು. ಈ ಅಸಾಧಾರಣ ಸಾಧನೆಯೇ ಅವರನ್ನು ಭಾರತದ ಮೇರು ಗಾಯಕರನ್ನಾಗಿಸಿತು. ಕಮಲಾ ಹಾಸನ್ ಅವರ ಅಭಿನಯದ ಸಾಧ್ಯತೆಗಳನ್ನೆಲ್ಲಾ ತಮ್ಮ ಕಂಠಸಿರಿಯಲ್ಲಿ ತಂದ ಎಸ್.ಪಿ ಅವರ ಚಿತ್ರಗಳು ತೆಲುಗಿಗೆ ಡಬ್ ಆದಾಗ ಹಿನ್ನೆಲೆ ಧ್ವನಿಯನ್ನೂ ನೀಡಿದರು.

spb-janaki-rnj

ಶಾಸ್ತ್ರೀಯ ಸಂಗೀತವನ್ನು ಕಲಿತಿಲ್ಲ ಎನ್ನುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಿಂಜೆರಿಕೆಯನ್ನು ನಿವಾರಿಸಿದವರು ಕೆ.ವಿಶ್ವನಾಥ್. ‘ಶಂಕರಾಭರಣಂ’ ಚಿತ್ರಕ್ಕೆ ಹಾಡಲು ಕೋರಿದಾಗ ಎಸ್.ಪಿ.ಬಿಯವರೇ ಹಿಂದೆಗೆದಿದ್ದರು. ಆದರೆ ವಿಶ್ವನಾಥ್ ಇಟ್ಟಿದ್ದ ಅಚಲ ವಿಶ್ವಾಸದಿಂದ ಅಮೋಘ ಗೀತೆಗಳು ಮೂಡಿ ಬಂದವು ಮಾತ್ರವಲ್ಲ ರಾಷ್ಟ್ರಪ್ರಶಸ್ತಿ ಕೂಡ ದೊರಕಿತು. ಅವರ ಕುರಿತು ಇಂತಹದೇ ವಿಶ್ವಾಸ ಇಟ್ಟಿದ್ದ ಬಾಲಚಂದರ್ ‘ಏಕ್ ದೂಜೆ ಕೇ ಲಿಯೇ’ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ಕೂಡ ಹಾಡಿಸಿದರು. ವಿಶೇಷವೆಂದರೆ ಈ ಚಿತ್ರ ಕೂಡ ಎಸ್.ಪಿ.ಬಿಯವರಿಗೆ ರಾಷ್ಟ್ರಪ್ರಶಸ್ತಿಯ ಗೌರವವನ್ನು ತಂದು ಕೊಟ್ಟಿತು. ಭಾರತೀಯ ಗಾಯಕರಲ್ಲೇ ಅತಿ ಹೆಚ್ಚು ಎಂದರೆ ಆರು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಬಾಲಸುಬ್ರಹ್ಮಣ್ಯಂ ಅದೆಲ್ಲವನ್ನೂ ಬೇರೆ ಬೇರೆ ಭಾಷೆಯ ಚಿತ್ರಗಳಿಗೆ ಪಡೆದಿದ್ದಾರೆ. ಅವುಗಳಲ್ಲಿ ಕನ್ನಡದ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಕೂಡ ಸೇರಿದೆ.

22 ಭಾಷೆಗಳಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ ಎನ್ನುವುದು ಮಾತ್ರ ವಿಶೇಷವಲ್ಲ  ಆ ಭಾಷೆಗಳನ್ನೆಲ್ಲಾ ಕಲಿತು ಹಾಡಿದ್ದಾರೆ ಎನ್ನುವುದು ವಿಶೇಷ. ಹಾಗೆ ನೋಡಿದರೆ ಅವರು ಅಸಾಧಾರಣ ಕಲಿಕೆಯ ಹಸಿವು ಇವರು ವ್ಯಕ್ತಿ. ‘ರಂಜಿನಿ’ ಎನ್ನುವ ಹಿಂದಿ ಚಿತ್ರದಲ್ಲಿ ಬಳಕೆಯಾದ ಮಧ್ಯಪ್ರದೇಶದ ಬುಡಕಟ್ಟು ಭಾಷೆ ‘ಜಗಪುರಿ’ ಯನ್ನು ಕುತೂಹಲದಿಂದಲೇ ಕಲಿತ ಎಸ್.ಪಿ ಆ ಭಾಷೆ ಕಲಿತು ಹಾಡಿದ್ದು ಮಾತ್ರವಲ್ಲ ಬುಡಕಟ್ಟು ಜನರನ್ನು ಬಳಸಿ ಒಂದು ಟಿ.ವಿ. ಕಾರ್ಯಕ್ರಮವನ್ನು ರೂಪಿಸಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಮಧ್ಯ ಪ್ರದೇಶದಲ್ಲಿ ಜನಿಸಿದ ಗಾಯಕರಿಗೇ ಆ ಭಾಷೆ ಅಪರಿಚಿತ. 1981ರ ಫೆಬ್ರವರಿ 8ರಂದು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಅವರು ಒಂದೇ ದಿನದಿಂದ 21 ಕನ್ನಡ ಚಿತ್ರಗೀತೆಗಳನ್ನು ಧ್ವನಿಮುದ್ರಿಸಿದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ. ಹೀಗೆ ಒಂದೇ ದಿನದಂದು ಅವರು ತಮಿಳಿನ 18, ತೆಲುಗಿನ 14 ಗೀತೆಗಳನ್ನು ಅವರು ಧ್ವನಿಮುದ್ರಿಸಿದ್ದಾರೆ. ಇಲ್ಲಿ ಅಂಕಿ ಅಂಶಗಳಿಗಿಂತ ಒಂದೇ ದಿನ ಇಷ್ಟು ಹಾಡುಗಳನ್ನು ಹಾಡಿದ್ದರೂ ಸ್ವಂತಿಕೆ ಮತ್ತು ವೈವಿಧ್ಯವನ್ನು ಉಳಿಸಿಕೊಂಡಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ.

ದಣಿವರಿಯದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ 68 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, 112 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಟಿ.ವಿ. ಕಾರ್ಯಕ್ರಮಗಳ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಬೆಳಕನ್ನು ಅವರು ತುಂಬಿದ್ದಾರೆ.  ಐವತ್ತು ವರ್ಷಗಳಿಂದ ನಿರಂತರವಾಗಿ ಹಾಡುತ್ತಾ ದಾಖಲೆಯ ಸಂಖ್ಯೆಯಲ್ಲಿ ಗಾನ ಭಂಡಾರಕ್ಕೆ ಹಾಡುಗಳನ್ನು ಸೇರಿಸಿರುವ ಅವರು ‘ಏರಿದವನು ಚಿಕ್ಕವನಿರಬೇಕು’ ಎನ್ನುವ ಕವಿ ವಾಣಿಗೆ ರೂಪಕದಂತಿದ್ದಾರೆ.

Leave a Reply