ಎದ್ದುಹೋಗುವ ಕಾಲಕ್ಕೆ ರಷ್ಯಾ ಮತ್ತು ಚೀನಾಗಳೆದುರು ಅಮೆರಿಕದ ದೌರ್ಬಲ್ಯ ಹೀಗೇಕೆ ಹರಾಜಾಗಿಸಿಕೊಳ್ಳುತ್ತಿದ್ದಾರೆ ಬರಾಕ್ ಒಬಾಮಾ?

ಡಿಜಿಟಲ್ ಕನ್ನಡ ವಿಶೇಷ:

ಜಾಗತಿಕ ರಾಜಕೀಯದಾಟದಲ್ಲಿ ಬೇಕೋ ಬೇಡವೋ ‘ಅಮೆರಿಕ ಗ್ರೇಟ್’ ಎಂಬ ಗ್ರಹಿಕೆಯೊಂದಿದೆ. ಅದು ನೈತಿಕ ಸ್ಥರದಲ್ಲಲ್ಲದಿರಬಹುದು, ಆದರೆ ಮಿಲಿಟರಿ ಮತ್ತು ಆರ್ಥಿಕ ಕಾರಣಗಳಿಂದ ಜಾಗತಿಕ ರಾಜಕಾರಣದ ಮುಂಚೂಣಿ ಸ್ಥಾನದಲ್ಲಿ ನಿಂತಿದೆ.

ಇದೀಗ ಹೊರಹೋಗುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಕೆ ಈ ಗ್ರಹಿಕೆಯನ್ನು ಅಲ್ಲಾಡಿಸುವ ಸೆಲ್ಫ್ ಗೋಲ್ ಎಂದರೆ ತಪ್ಪಿಲ್ಲ. ರಿಪಬ್ಲಿಕನ್’ನ ಡೊನಾಲ್ಡ್ ಟ್ರಂಪ್ ತಮ್ಮದೇ ಪಾಳೆಯದ ಹಿಲರಿ ಕ್ಲಿಂಟನ್ ವಿರುದ್ಧ ಗೆದ್ದು ಮುಂದಿನ ಅಧ್ಯಕ್ಷರಾಗುತ್ತಿರುವುದನ್ನು ಬರಾಕ್ ಒಬಾಮಾ ಅವರಂಥ ಸಮಚಿತ್ತದ ವ್ಯಕ್ತಿಗೂ ಅರಗಿಸಿಕೊಳ್ಳುವುದಕ್ಕಾಗುತ್ತಿಲ್ಲ. ಹೀಗಾಗಿ ಅವರು ಈಗ ಆರೋಪಿಸುತ್ತಿರುವುದೇನೆಂದರೆ- ‘ಟ್ರಂಪ್ ಗೆಲುವಿಗೆ ರಷ್ಯಾ ಸಹಾಯ ಮಾಡಿದೆ. ಚುನಾವಣೆಗಳು ಪ್ರಗತಿಯಲ್ಲಿದ್ದ ಸಮಯದಲ್ಲೇ ಹಿಲರಿ ಕ್ಲಿಂಟನ್’ಗೆ ಸೇರಿದ್ದ ಕೆಲವು ಇ ಮೇಲ್’ಗಳು ಬಹಿರಂಗವಾಗಿದ್ದವು. ಅದು ಡೊನಾಲ್ಡ್ ಟ್ರಂಪ್ ಪರ ಅಭಿಪ್ರಾಯ ತಿರುಗಲು ಕಾರಣವಾಯಿತು. ಹೀಗೆ ಹಿಲರಿ ಮಿಂಚಂಚೆಗಳಿಗೆ ಕನ್ನ ಹಾಕಿ ಜಗತ್ತಿನೆದುರು ಬಹಿರಂಗವಾಗುವಂತೆ ನೋಡಿಕೊಂಡಿದ್ದು ಪುಟಿನ್ ನೇತೃತ್ವದ ರಷ್ಯಾವೇ ಹೊರತು ಮತ್ಯಾರಲ್ಲ’ ಎಂಬುದು ಬರಾಕ್ ಒಬಾಮಾ ಅಪವಾದ ಸರಣಿ.

ಇಲ್ಲಿ ಡೊನಾಲ್ಡ್ ಟ್ರಂಪ್ ರಷ್ಯಾದ ಪರವಾಗಿದ್ದಾರೆಂಬ ಅನುಮಾನ ಬಿತ್ತುವುದಕ್ಕೆ ಹೊರಟಿರುವ ಬರಾಕ್ ಒಬಾಮಾ ಸ್ವಗೋಲು ಹೊಡೆದುಕೊಂಡಿರುವುದು ಹೇಗೆ ಎಂಬುದನ್ನು ಗಮನಿಸಬೇಕು. ಅಮೆರಿಕದ ಸೈಬರ್ ವ್ಯವಸ್ಥೆಯನ್ನು ಕೊರೆಯುವ, ಗೂಢಚಾರಿಕೆ ಮಾಡುವ ಸಕಲ ಸಾಮರ್ಥ್ಯಗಳು ರಷ್ಯಾಕ್ಕಿವೆ ಎಂಬುದನ್ನು ಬರಾಕ್ ಒಬಾಮಾ ಅಧ್ಯಕ್ಷೀಯ ಸ್ಥಾನದಲ್ಲಿ ನಿಂತುಕೊಂಡೇ ಒಪ್ಪಿಕೊಂಡಂತಾಯಿತು. ಹಾಗೆ ನೋಡಿದರೆ ಇದು ಹೊಸ ಆರೋಪವೇನಲ್ಲ. ಅಮೆರಿಕದ ಮಾಹಿತಿ ಕದ್ದೊಯ್ದಿರುವ ಜೂಲಿಯನ್ ಅಸಾಂಜ್’ಗೆ ಆಶ್ರಯ ನೀಡಿದಾಗಲೇ ರಷ್ಯವು ಮಾಹಿತಿ ಕನ್ನದಲ್ಲಿ ಆಸಕ್ತವಾಗಿರುವುದು ಸ್ಪಷ್ಟವಾಗಿದೆ. ಅಷ್ಟಕ್ಕೂ ಇಂಥ ಚಟುವಟಿಕೆಗಳಲ್ಲಿ ಅಮೆರಿಕವೇನೂ ಸುಭಗವಲ್ಲ. ಹಾಗೆಂದೇ ಈ ಆರೋಪ ಮೊದಲು ಕೇಳಿಬಂದಾಗಲೇ ಪುಟಿನ್ ಒಂದು ಕಿಲಾಡಿ ಉತ್ತರ ಕೊಟ್ಟಿದ್ದರು. ‘ನಮಗೆ ಅಮೆರಿಕದ ಸೈಬರ್ ಭದ್ರತಾ ವ್ಯವಸ್ಥೆಯನ್ನು ಭಂಗಗೊಳಿಸುವ ಸಾಮರ್ಥ್ಯವಿದೆ ಎಂದು ಅಮೆರಿಕ ಯೋಚಿಸುತ್ತಿರುವುದು ನಮ್ಮ ಪಾಲಿಗೆ ಪ್ರಶಂಸೆಯೇ. ಆದರೆ ಇದರಲ್ಲಿ ನಮ್ಮ ಕೈವಾಡವೇನಿಲ್ಲ.’

ಇದೀಗ, ರಷ್ಯಾವೇ ಮಾಹಿತಿ ಕದ್ದು ಜಾಹೀರುಗೊಳಿಸಿತೆಂಬ ಬರಾಕ್ ಒಬಾಮಾ ಹೇಳಿಕೆ ದುರ್ಬಲ ಸ್ಥಾನದಲ್ಲಿ ಬಿಂಬಿಸುತ್ತಿರುವುದು ಅಮೆರಿಕವನ್ನೇ ಹೊರತು, ರಷ್ಯಾವನ್ನಲ್ಲ. ಅಮೆರಿಕದ ಚುನಾವಣೆಯಲ್ಲಿ ಜನಾಭಿಪ್ರಾಯ ತಿರುಗಿಸುವ ಆಟ ಹೆಣೆಯುವ ಸಾಮರ್ಥ್ಯ ರಷ್ಯಾಕ್ಕಿದೆ ಎಂದು ಒಬಾಮಾ ಪರೋಕ್ಷವಾಗಿ ಒಪ್ಪಿದಂತಾಯಿತು. ಅಮೆರಿಕನ್ ಪ್ರಜೆಗಳು ಆ ಪರಿ ಮೋಸ ಹೋಗುವವರೇ? ಅಮೆರಿಕಕ್ಕೂ ತಿರುಗಿ ಹಾಗೆಯೇ ಮಾಡುವ ತಾಕತ್ತಿದೆ ಅಂತಲೂ ಬರಾಕ್ ಹೇಳಿದ್ದಾರಾದರೂ ಅದು ಸದ್ಯಕ್ಕೆ ಘಾಸಿಗೊಂಡವನ ಉದ್ವೇಗದ ಮಾತಾಗುತ್ತದೆ.

ಡೊನಾಲ್ಡ್ ಟ್ರಂಪ್ ಮೇಲೆ ಕೆಟ್ಟ ಅಭಿಪ್ರಾಯ ರೂಪಿಸುವುದಕ್ಕೆ ಹೋಗಿ ರಷ್ಯಾವನ್ನು ಹೀರೋ ಸ್ಥಾನದಲ್ಲಿ ನಿಲ್ಲಿಸಿರುವ ಬರಾಕ್ ಒಬಾಮಾ ತಿಳಿಗೇಡಿತನ ಒಂದೆಡೆಯಾದರೆ, ಇದೇ ಸಮಯಕ್ಕೆ ಅತ್ತ ದಕ್ಷಿಣ ಚೀನಾ ಸಮುದ್ರದಲ್ಲಿ ನೀರೋಳಗೆ ಸಂಚರಿಸುತ್ತಿದ್ದ ಅಮೆರಿಕದ ಡ್ರೋನ್ ಅನ್ನು ಚೀನಿಯರು ವಶಪಡಿಸಿಕೊಂಡಿರುವ ವಿದ್ಯಮಾನವೂ ಇನ್ನೊಂದು ಮುಜುಗರದ ಕತೆ ಕಟ್ಟಿದೆ.

ದಕ್ಷಿಣ ಚೀನಾ ಸಮುದ್ರವು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಮುಕ್ತವಾಗಿರಬೇಕೆಂಬ ಪ್ರತಿಪಾದನೆ ಅಮೆರಿಕದ್ದಾಗಿರುವುದರಿಂದ ಅದೇನೋ ಖುಲ್ಲಂಖುಲ್ಲ, ‘ಆ ಡ್ರೋನ್ ತನ್ನದೇ. ಅದನ್ನು ವಶಪಡಿಸಿಕೊಂಡ ಚೀನಾ ಕ್ರಮ ಸರಿಯಲ್ಲ’ ಅಂತ ಎಗರಾಡಿದೆ. ಚೀನಾ ಮಾತ್ರ ತಣ್ಣನೆಯ ಧ್ವನಿಯಲ್ಲಿ, ‘ವಿಷಯ ಸಾವಕಾಶವಾಗಿ, ಸಂಘರ್ಷರಹಿತವಾಗಿ ಬಗೆಹರಿಸಿಕೊಳ್ಳೋಣ ಬಿಡಿ’ ಅಂದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅದಾಗಲೇ ಚೀನಾ ಶಸ್ತ್ರಾಸ್ತ್ರಗಳನ್ನು ಕಲೆಹಾಕಿದೆ ಎಂದು ಅಮೆರಿಕ ಅಧ್ಯಯನ ಕೂಟಗಳೇ ಎರಡು ದಿನಗಳ ಹಿಂದೆ ಹೇಳಿದ್ದು ಗಮನಿಸಿದರೆ, ಇವಕ್ಕೆಲ್ಲ ಸೊಪ್ಪು ಹಾಕುವ ಜಾಯಮಾನವೇ ಚೀನಾದ್ದಲ್ಲ ಎಂಬುದು ಸ್ಪಷ್ಟ. ನೀರೊಳಗಿದ್ದುಕೊಂಡು ಆ ಭಾಗದ ಮಾಹಿತಿ ಕಲೆಹಾಕುತ್ತಿದ್ದ ಅಮೆರಿಕದ ಡ್ರೋನ್ ಅನ್ನು ಹಿಡಿದಿರುವುದು ಚೀನಾಕ್ಕೆ ಹೆಗ್ಗಳಿಕೆಯೇ. ಇಲ್ಲೂ ಮೀಸೆ ಮಣ್ಣಾಗಿಲ್ಲವೆಂದು ನಿರೂಪಿಸುವ ತ್ರಾಸು ತೆಗೆದುಕೊಳ್ಳಬೇಕಿರುವುದು ಅಮೆರಿಕವೇ.

ಗೂಢಚಾರಿಕೆ ವಿಚಾರದಲ್ಲಿ ಜಗತ್ತಿನೆದುರು ತಾನೆಂದೂ ಬಲಿಪಶು ಎಂದು ತೋರಿಸಿಕೊಳ್ಳದೇ ಕೇವಲ ಬಲಿಹಾಕಿ ಬೀಗುವುದರಲ್ಲೇ ನಿರತವಾಗಿದ್ದ ಅಮೆರಿಕ ಈ ಹೊತ್ತಿನಲ್ಲಿ ಕಸುವು ಕಳೆದುಕೊಳ್ಳುತ್ತಿದೆ ಎಂಬ ಗುಟ್ಟನ್ನು ಹೀಗೇಕೆ ಕೊನೆ ಗಳಿಗೆಯಲ್ಲಿ ಬಿಚ್ಚಿಟ್ಟು ಬಡವಾಗುತ್ತಿದ್ದಾರೆ ಬರಾಕ್ ಒಬಾಮಾ?

Leave a Reply