ಸದ್ಯದಲ್ಲೇ ಸಾರಿಗೆ ಪ್ರಯಾಣದರ ಏರಿಕೆ? ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಕಣಕ್ಕೆ?, ಮೋದಿ ವಚನಭ್ರಷ್ಟ- ಬೆಳಗಾವಿಯಲ್ಲಿ ಸಿದ್ದರಾಮಯ್ಯ ಟೀಕೆ, ಬೆಂಗ್ಳೂರಿನಲ್ಲಿ ಇಬ್ಬರು ಆರ್ಬಿಐ ಅಧಿಕಾರಿಗಳ ಬಂಧನ, ಉಗ್ರರ ದಾಳಿಗೆ ಮೂವರು ಯೋಧರು ಹುತಾತ್ಮ

Seer, Ramakrishna Ashrama, Tumkur, Veereshananda, Former Chief Minister, B.S. Yediyurappa with others during book release at Gandhi Bhavana in Bengaluru on Saturday.

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ಪತ್ರಕರ್ತ, ಲೇಖಕ ಜೋಗಿ ಅವರ 50ನೇ ಪುಸ್ತಕ ‘ಕಥೆ-ಚಿತ್ರಕತೆ-ಸಂಭಾಷಣೆ ಜೋಗಿ’ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಖ್ಯಾತನಟ ವಿ.ರವಿಚಂದ್ರನ್, ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಉದಯವಾಣಿ ಪತ್ರಿಕೆ ಸಂಪಾದಕ ರವಿ ಹೆಗಡೆ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ್ ಭಟ್, ಜೋಗಿ, ಚಿತ್ರ ನಿರ್ದೇಶಕ ಲಿಂಗದೇವರು, ಖ್ಯಾತನಟ ಪ್ರಕಾಶ್ ರೈ.

ಡಿಜಿಟಲ್ ಕನ್ನಡ ಟೀಮ್:

ಸದ್ಯದಲ್ಲೇ ಸಾರಿಗೆ ಪ್ರಯಾಣ ದರ ಏರಿಕೆ

ನೋಟು ಅಮಾನ್ಯ ನಿರ್ಧಾರ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತೀವ್ರ ನಷ್ಟ ಎದುರಿಸುತ್ತಿದ್ದು, ಪ್ರಯಾಣದರ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ.

ನೋಟು ಅಮಾನ್ಯ ನಿರ್ಧಾರದಿಂದ ಈಗಾಗಲೇ ಸಂಸ್ಥೆ ನಿತ್ಯ ₹ 75 ಲಕ್ಷ ನಷ್ಟವನ್ನು ಎದುರಿಸುವಂತಾಗಿದೆ. ಅದರ ಬೆನ್ನಲ್ಲೇ ಸತತವಾಗಿ ಡೀಸೆಲ್ ದರ ಏರಿಕೆಯಾಗಿರುವುದರಿಂದ ವಾರ್ಷಿಕವಾಗಿ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಇದೇ ರೀತಿ ನಷ್ಟ ಮುಂದುವರಿದರೆ ಸಂಸ್ಥೆಯನ್ನು ಮುಚ್ಚಬೇಕಾಗುತ್ತದೆ ಎಂದಿರುವ ಸಚಿವರು ಸಾರಿಗೆ ದರ ಏರಿಕೆ ಬಗ್ಗೆ ಸ್ಪಷ್ಟ ಸೂಚನೆಯನ್ನು ಕೊಟ್ಟಿದ್ದಾರೆ.

ಬಿಜೆಪಿಯಿಂದ ಶ್ರೀನಿವಾಸ್ ಸ್ಪರ್ಧೆ?

ಸಚಿವ ಸ್ಥಾನ ಕಳೆದುಕೊಂಡ ನಂತರ ಕಾಂಗ್ರೆಸ್ ಪಕ್ಷದಿಂದ ಹೊರ ಬಂದು ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಿದ್ದ ಶ್ರೀನಿವಾಸ ಪ್ರಸಾದ್ ಅವರು ಸ್ವಕ್ಷೇತ್ರ ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿಗಳು ಬಂದಿವೆ. ಕಾಂಗ್ರೆಸ್ ಪಕ್ಷದಿಂದ ಹೊರ ಬರುವುದರ ಜತೆಗೆ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ಸಮರಕ್ಕೆ ಶ್ರೀನಿವಾಸ ಪ್ರಸಾದ್ ಸಿದ್ಧರಾದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಿಂದ ಶ್ರೀನಿವಾಸ್ ಪ್ರಸಾದ್ ಅವರಿಗೆ ಆಹ್ವಾನ ಬಂದಿತ್ತಾದರೂ ಆರಂಭದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿಯಿಂದ ಸ್ಪರ್ಧಿಸುವರು ಎಂಬ ಮಾಹಿತಿ ಲಭಿಸಿದೆ. ಬಿಜೆಪಿ ಸೇರ್ಪಡೆ ಬಗ್ಗೆ ಡಿ.20ರಂದು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದ್ದು, ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಪ್ರಸಾದ್ ಅವರಿಗೆ ಅಧಿಕೃತ ಆಹ್ವಾನ ನೀಡುವ ಸಾಧ್ಯತೆ ಇದೆ.

ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

‘ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆಗಳಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಅವರ ಭರವಸೆಗಳಿಂದ ಜನಸಾಮಾನ್ಯರು ಭ್ರಮನಿರಸನರಾಗಿದ್ದಾರೆ. ಮೋದಿ ಒಬ್ಬ ವಚನಭ್ರಷ್ಟ…’ ಇದು ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪರಿ.

ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಲೇ, ಕೇಂದ್ರ ಸರ್ಕಾರ ರಾಜ್ಯದ ಕಡೆ ತೋರುತ್ತಿರುವ ನಿರ್ಲಕ್ಷ್ಯವನ್ನು ಟೀಕಿಸಿದರು. ಈ ವೇದಿಕೆಯಲ್ಲಿ ಸಿಎಂ ಹೇಳಿದ ಮಾತುಗಳು ಹೀಗಿವೆ…

‘ಪ್ರವಾಹ ಹಾಗೂ ಭೀಕರ ಬರಗಾಲ ಎರಡೂ ವಿಕೋಪಗಳಿಂದಲೂ ರಾಜ್ಯ ತತ್ತರಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲುಪಬೇಕಿರುವ ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಎರಡು ತಿಂಗಳ ಹಿಂದೆಯೇ ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದೆ. ನಂತರ ಪರಿಸ್ಥಿತಿ ಪರಿಶೀಲಿಸಲು ಅಧ್ಯಯನ ತಂಡವೂ ಬಂದು ಹೋಯಿತು. ಆದರೆ ಪರಿಹಾರ ಮಾತ್ರ ಬರಲಿಲ್ಲ. ಇನ್ನು ರಾಜ್ಯದ ಪರಿಸ್ಥಿತಿಯನ್ನು ವಿವರಿಸುತ್ತೇನೆ. ನಿಮ್ಮನ್ನು ಭೇಟಿ ಮಾಡುವ ಅವಕಾಶ ಕೊಡಿ ಎಂದು ಕೇಳಿಕೊಂಡರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದೇಶದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಮೋದಿ ಅವರು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಜನರು ಕೇಂದ್ರದಲ್ಲಿ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಲಿದ್ದಾರೆ.’

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಪ್ರಧಾನಿ ಮೋದಿ ವಿರುದ್ಧ ಟೀಕೆ ಮುಂದುವರಿಸಿದರು. ‘ಪ್ರಧಾನಿ ಮೋದಿ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರು ಬರೆದ ಪತ್ರಕ್ಕೂ ಮೋದಿ ಅವರು ಬೆಲೆ ಕೊಡುತ್ತಿಲ್ಲ. ಮೋದಿ ಪ್ರಧಾನಿಯಾಗಿರುವುದು ಒಂದು ದುರಂತ. ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರದಿಂದ ದೇಶದ ಶೇ.82ರಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮಿ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ದೇಶದ ಇಬ್ಬರು ದೊಡ್ಡ ಕಳ್ಳರು ಅವರು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವುದೇಕೆ? ಈ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಮೋದಿ ಆರೋಪ ಮಾಡಿದರು.

ಪ್ಯಾಂಪೋರ್ ಉಗ್ರರ ದಾಳಿ: 3 ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಪುಲ್ವಮಾ ಜಿಲ್ಲೆಯ ಪ್ಯಾಂಪೋರ್ ಪ್ರದೇಶದಲ್ಲಿರುವ ಜಮ್ಮು ಹಾಗೂ ಶ್ರೀನಗರ ನಡುವಣ ಹೆದ್ದಾರಿಯಲ್ಲಿ ಬರುವ ಭಾರತೀಯ ಸೇನಾ ಕೇಂದ್ರದ ಮೇಲೆ ಉಗ್ರರ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನಾ ಪಡೆಯು ಪ್ರತಿ ದಾಳಿ ನಡೆಸಿದ್ದು, ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಿದೆ.

ಇಬ್ಬರು ಆರ್ಬಿಐ ಅಧಿಕಾರಿಗಳ ಬಂಧನ

ಅಕ್ರಮವಾಗಿ ನೋಟು ಬದಲಾವಣೆ ಮಾಡುತ್ತಿದ್ದ ದಂಧೆಯಲ್ಲಿ ಭಾಗಿಯಾಗಿದ್ದ ಬೆಂಗಳೂರು ಆರ್ಬಿಐ ಶಾಖೆಯ ಇಬ್ಬರು ಉನ್ನತ ಅಧಿಕಾರಿಗಳನ್ನು ಶನಿವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಕವಿನ್ ಹಾಗೂ ಸದಾನಂದ ನಾಯ್ಕ್ ಎಂದು ಹೇಳಲಾಗಿದ್ದು, ಇವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇವರು ಯಾವರೀತಿಯಲ್ಲಿ ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬುದರ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಬಹುಕೋಟಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ವಾಯು ಪಡೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ಅವರನ್ನು ಈಗ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಳೆದ ಒಂದು ವಾರದಿಂದ ತ್ಯಾಗಿ ಅವರು ಸಿಬಿಐ ವಶದಲ್ಲಿದ್ದರು. ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಡಿ.30ರ ವರೆಗೂ ತ್ಯಾಗಿ ಅವರು ನ್ಯಾಯಾಂಗ ವಶದಲ್ಲಿರಲಿದ್ದಾರೆ.
  • ಗಂಟಲು ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿದ್ದು, ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ನಾಯಕನನ್ನು ಶನಿವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಶೀಘ್ರ ಚೇತರಿಕೆಗೆ ಶುಭಕೋರಿದ್ದಾರೆ. ಕರುಣಾನಿಧಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ.20ರಂದು ನಡೆಯಬೇಕಿದ್ದ ಡಿಎಂಕೆ ಸಭೆಯನ್ನು ರದ್ದುಗೊಳಿಸಲಾಗಿದೆ.

Leave a Reply