ನಿಮ್ಮ ಮನೆಯ ಚಾವಣಿಯ ಮೇಲೂ ಕೂತಿರಬಹುದು ವಿಶ್ವದೂಳು: ಅದು ಕಸವಲ್ಲ, ವಿಶ್ವದ ಆರಂಭದ ಚರಿತ್ರೆ ಹೇಳುವ ಪುರಾವೆ

author-ananthramuದೂಳು ಎಲ್ಲಿಲ್ಲ? ಮನೆಯ ಒಳಗೆ, ಹೊರಗೆ, ಕಟ್ಟಡಗಳ ಮೇಲೆ, ವಾಹನಗಳ ಮೇಲೆ, ಅಷ್ಟೇ ಏಕೆ, ನಮ್ಮ ಕಣ್ಣಿಗೆ ರಾಚುವಂತೆ ನಮ್ಮ ಸುತ್ತಲ ಪರಿಸರದಲ್ಲಿ ಇದನ್ನು ನಿತ್ಯವೂ ಎದುರಿಸುತ್ತೇವೆ- ದೂಳು ವಿಶ್ವವ್ಯಾಪಿ, ನಿಜವಾದ ಅರ್ಥದಲ್ಲೂ. ನೀವು ಮನೆಯನ್ನು ವ್ಯಾಕ್ಯೂಂ ಕ್ಲೀನರ್ ನಿಂದ ಶುದ್ಧಗೊಳಿಸಬಹುದು. ಆದರೆ ಅಲ್ಲಿ ಮತ್ತೆ ದೂಳು ಸೇರುತ್ತದೆ. ಇನ್ನು ಸಿಮೆಂಟ್ ಕಾರ್ಖಾನೆಯ ಹತ್ತಿರ ವಾಸದ ಮನೆಗಳಿದ್ದರೆ ಅವರ ಪಾಡಂತೂ ಹೇಳತೀರದು. ನಿಮ್ಮ ಮನೆಯ ಪಕ್ಕದಲ್ಲೇ ಬೋರ್ ಹೋಲ್ ಕೊರೆಸುವಾಗ ನಿಮಗೆ ಅದೆಷ್ಟು ಉಸಿರುಕಟ್ಟುತ್ತದೆ. ನಿಸರ್ಗವಂತೂ ಒಂದು ಕೃಪೆಮಾಡಿದೆ. ನಮ್ಮ ಮೂಗುಗಳಿಗೆ ರೋಮಕೊಟ್ಟಿದೆ. ಅವು ರೋಮನ್ ಸೈನಿಕರಂತೆ ಒಳನುಗ್ಗುವ ಶತ್ರುಗಳ ಮೇಲೆ ಹೋರಾಡುತ್ತವೆ. ಒಂದರ್ಥದಲ್ಲಿ ತಡೆಗೋಡೆ. ಇದನ್ನೂ ದಾಟಿಹೋಗುವ ಶತ್ರುಗಳಿಗೆ ಮೂಗಿನೊಳಗಿನ ಲೋಳೆ ಇದ್ದೇಇದೆ ಟ್ರಾಪ್ ಮಾಡಲು. ಇಷ್ಟಿದ್ದೂ ಗುಪ್ತವಾಗಿ ಶ್ವಾಸಕೋಶಕ್ಕೆ ದೂಳಿನ ಕಣಗಳೂ ಲಗ್ಗೆಹಾಕಿದಾಗ ಅವು ಕೊಡುವ ಬಾಧೆಯೇ ಬೇರೆ.

ಈಗ ವಿಜ್ಞಾನಿಗಳ ಗಮನ ಈ ದೂಳಿನ ಬಗ್ಗೆ ಅಲ್ಲ, ವಿಶ್ವದೂಳಿನತ್ತ ಕೇಂದ್ರೀಕರಿಸುತ್ತಿದೆ. ನೀವು `ಸ್ಟಾರ್ ಡಸ್ಟ್’ ಹೆಸರು ಕೇಳಿದರೆ ಬಾಲಿವುಡ್ ಸಿನಿಮಾಗಳ ಬಗ್ಗೆ, ತಾರೆಗಳ ಬಗ್ಗೆ ಬರುವ ಸುದ್ದಿಗಳ ಪತ್ರಿಕೆಯೆಂದು ಥಟ್ಟನೆ ಅನ್ನಿಸಬಹುದು. ವಾಸ್ತವವಾಗಿ ಇದೇ ಹೆಸರಿನ ಹಾಲಿವುಡ್ ಚಿತ್ರ 2007ರಲ್ಲಿ ತೆರೆಕಂಡಿತ್ತು. ಅದೊಂದು ಫ್ಯಾಂಟಸಿ ಫಿಲಂ. ಈಗ ವಿಜ್ಞಾನಿಗಳಿಗೆ `ಸ್ಟಾರ್ ಡಸ್ಟ್’ ಎಂದರೆ ನಾಸಾದ 300 ಕಿಲೋಗ್ರಾಂ ತೂಕದ ರೋಬಟ್ ವ್ಯೋಮಶೋಧಕ ಕಣ್ಣಮುಂದೆ ನಿಲ್ಲುತ್ತದೆ. ಮೈಮೇಲೆಲ್ಲ ಬಾಣಲೆಯಂತೆ ತಟ್ಟೆ ಅಂಟಿಸಿಕೊಂಡು 1999ರಲ್ಲೇ ಅಂತರಿಕ್ಷಕ್ಕೆ ಜಿಗಿದು ಬಲೆಬೀಸಿ ನಕ್ಷತ್ರಗಳ ನಡುವೆ ತೇಲುತ್ತಿರುವ ವಿಶ್ವದೂಳನ್ನು `ವೈಲ್ಡ್ ಕಾಮೆಟ್’ ಎಂಬ ಹೆಸರಿನ ಧೂಮಕೇತು ಉದುರಿಸಿದ ಕಣಗಳನ್ನು ಗುಡ್ಡೆಮಾಡಿಕೊಂಡು 2006ರಲ್ಲಿ ಮರಳಿದಾಗ, ಆ ದೂಳಿಗೆ ಯಾವ ವಜ್ರವೂ ಸಾಟಿಯಲ್ಲ, ಬಂಗಾರವೂ ಸಾಟಿಯಲ್ಲ. ಆ ದೂಳಿನಲ್ಲಿ ಅಂತರನಕ್ಷತ್ರ ಮಾಧ್ಯಮದಿಂದ (Inter stellar) ಹಿಡಿದಿಟ್ಟಿದ್ದ 45 ಕಣಗಳಿದ್ದವು.

ಏನಿದು ವಿಶ್ವದೂಳು (Cosmic dust)? ಇದು ನಕ್ಷತ್ರಗಳ ನಡುವೆ ತೇಲುತ್ತಿರುವ ದೂಳಿನ ಕಣಗಳು. ಹೊಸ ನಕ್ಷತ್ರಗಳ ಸುತ್ತಲೂ ಜಮಾಯಿಸಿರುತ್ತವೆ. ಗೆಲಾಕ್ಸಿಗಳನ್ನೂ ಆವರಿಸಿರುತ್ತವೆ, ಮುಂದೆ ಭೂಮಿಯಂತಹ ಗ್ರಹಗಳ ಹುಟ್ಟಿಗೂ ಕಚ್ಚಾ ಪದಾರ್ಥವಾಗಿ ಒದಗಿಬರುತ್ತದೆ. ನಕ್ಷತ್ರಗಳು ಮುದಿಯಾದಂತೆ ಒಳಗಿನ ದ್ರವ್ಯವೆಲ್ಲ ಹೊರಚೆಲ್ಲಿದಾಗ ಹೆಚ್ಚಿನ ಪಾಲು ದೂಳು ಹುಟ್ಟುತ್ತದೆ. ಅದು ವಿಶ್ವದಲ್ಲಿ ಪಸರಿಸುತ್ತದೆ. ಸಿಲಿಕಾನ್ ಕಾರ್ಬೈಡ್, ಗ್ರಾಫೈಟ್, ಅಲ್ಯೂಮಿನಿಯಂ ಆಕ್ಸೈಡ್, ಆಕ್ಸಿಜನ್ ನಿಂದ ತೊಡಗಿ ಕಬ್ಬಿಣದವರೆಗೆ ಅನೇಕ ಧಾತುಗಳಿರುತ್ತವೆ. ಎಷ್ಟೋ ವೇಳೆ ಈ ವಿಶ್ವದೂಳು ಉಲ್ಕೆಗಳಲ್ಲಿ ಮೆತ್ತಿಕೊಂಡಿರುತ್ತದೆ. ಉಲ್ಕೆಗಳು ರಭಸದಿಂದ ಭೂಮಿಗೆ ಆಕರ್ಷಿತವಾದಾಗ ಹೆಚ್ಚಿನವು ವಾಯುಗೋಳದಲ್ಲಿ ಘರ್ಷಣೆಯಿಂದಾಗಿ ಉರಿದುಹೋಗಬಹುದು-ನಿಮ್ಮ ಮನಸ್ಸಿನಲ್ಲಿ ಆ ಘಟನೆ ಇನ್ನೂ ಹಸಿರಾಗಿರಬಹುದು. ಕಲ್ಪನಾ ಛಾವ್ಲಾ ಮತ್ತು ಆಕೆಯ ಜೊತೆಗಿದ್ದ ಗಗನಯಾನಿಗಳ ನೌಕೆ `ಕೊಲಂಬಿಯ’ ವಾಯುಗೋಳದಲ್ಲಿ ಮರುಪ್ರವೇಶ ಮಾಡುವಾಗ (Reentry) 2003ರಲ್ಲಿ ಉರಿದೇಹೋಯಿತಲ್ಲ!

ಕೆಲವೊಮ್ಮೆ ಉಲ್ಕೆಗಳು ಮತ್ತು ಕ್ಷುದ್ರಗ್ರಹದ ಚೂರುಗಳು ಬಚಾವಾಗಿ ಭೂಮಿಗೂ ಬೀಳುವುದುಂಟು. ವಿಶ್ವದೂಳನ್ನು ಸಾಮಾನ್ಯವಾಗಿ ನಕ್ಷತ್ರದೂಳು ಎಂದು ಕರೆಯುವುದುಂಟು. ಇವನ್ನು ಅಧ್ಯಯನ ಮಾಡಲು ಉಲ್ಕಾಪಿಂಡಗಳು ಯುಕ್ತವಾಗಿ ಪರಿಣಮಿಸುತ್ತವೆ. ಕ್ಷುದ್ರಗ್ರಹಗಳು ಒಂದಕ್ಕೊಂದು ಲಟ್ಟಿಸಿದಾಗಲೂ ಭೂಮಿಯ ಸಮೀಪದಲ್ಲಿದ್ದರೆ ಸೆಕೆಂಡಿಗೆ ಹನ್ನೆರಡು ಕಿಲೋಮೀಟರ್ ವೇಗದಲ್ಲಿ ದೂಳು ನುಗ್ಗಬಹುದು. ವಿಶ್ವದೂಳಿನ ಕಣಗಳಿಗೆ ನಿರ್ದಿಷ್ಟ ರೂಪ ಎಂಬುದಿಲ್ಲ. ಅವು ಎಷ್ಟು ಸಣ್ಣ ಎಂದರೆ ಒಂದು ಟ್ರಿಲಿಯನ್ (1,000,000,000,000) ಇಂಥ ಕಣಗಳನ್ನು ಹಿಡಿದಿಡಲು ಒಂದು ಸಾಧಾರಣ ಚಮಚ ಸಾಕು.

stardust4-min

ಸ್ಟಾರ್ ಡಸ್ಟ್

ವಿಶ್ವದಲ್ಲಿ ನಕ್ಷತ್ರಗಳ ಹುಟ್ಟು-ಸಾವು ಅಂದರೆ ಉಗಮ-ವಿಕಾಸ ಅಂದರೆ ಗ್ರಹದಂಥ ಬೇರೆ ಬೇರೆ ಕಾಯಗಳ ಉಗಮ-ವಿಕಾಸ-ಇವೇ ಕಥೆಗಳನ್ನು ಈ ದೂಳಿನ ಅಧ್ಯಯನ ತಿಳಿಸುತ್ತದೆ ಎಂಬ ಕಾರಣಕ್ಕಾಗಿ ವಿಜ್ಞಾನಿಗಳು ವಿಶೇಷ ಆಸ್ಥೆಯಿಂದ ಇವನ್ನು ಹುಡುಕುತ್ತಾರೆ. ಈವರೆಗಿನ ರೂಢಿಯಂತೆ ಭೂಮಿಯ ದಕ್ಷಿಣ ತುದಿಯಲ್ಲಿರುವ ಶ್ವೇತಖಂಡವೆನ್ನಿಸುರುವ ಅಂಟಾರ್ಟಿಕದಲ್ಲಿ ಶುಭ್ರ ಹಿಮದ ಹಾಳೆಗಳ ಮೇಲೆ ವಿಶ್ವದೂಳಿನ ಕಣಗಳನ್ನೂ ಹಾಗೆಯೇ ಸೂಕ್ಷ್ಮ ಉಲ್ಕೆಗಳನ್ನೂ ವಿಜ್ಞಾನಿಗಳು ಹುಡುಕುತ್ತಾರೆ (ಬಿಳಿಯ ಪಂಚೆಯ ಮೇಲೆ ಒಂದು ಚುಕ್ಕಿ ಇಟ್ಟರೂ ಕಣ್ಣಿಗೆ ಕಾಣುವಂತೆ). ಅದರಲ್ಲೂ ಜಪಾನಿನ ತಜ್ಞರು ಇದನ್ನೇ ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ವಾಸ್ತವವಾಗಿ ಸಾಗರದ ಮೇಲೆ ವಿಶ್ವದೂಳು ಬಿದ್ದರೂ ಸಂಗ್ರಹಿಸುವುದು ಕಷ್ಟ. ಹಾಗೆಯೇ ಭೂಮಿಯ ಮೇಲೆ ಬಿದ್ದರಂತೂ ಪತ್ತೆಹಚ್ಚುವುದು ಇನ್ನೂ ಕಷ್ಟ. ಇಡೀ ಹಿಮಾಲಯ ಪರ್ವತಶ್ರೇಣಿಯಲ್ಲಿ ಒಂದು ಗುಲಗಂಜಿ ಕಳೆದುಹೋದರೆ ಅದನ್ನು ಹುಡುಕಿದಂತೆ. ಪ್ರತಿಬಾರಿಯೂ `ಸ್ಟಾರ್ ಡಸ್ಟ್’ ಶೋಧಕವನ್ನು ಅಂತರಿಕ್ಷಕ್ಕೆ ಕಳಿಸುವಂಥ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಕನಿಷ್ಠ 200 ಮಿಲಿಯನ್ ಡಾಲರ್ ವ್ಯಯಿಸಬೇಕಾಗುತ್ತದೆ. ಒಂದು ಲೆಕ್ಕದಂತೆ ದಿನವೊಂದಕ್ಕೆ 100 ಮೆಟ್ರಿಕ್ ಟನ್ ವಿಶ್ವದೂಳು ಭೂಮಿಯ ಮೇಲೆ ಬೀಳುತ್ತದೆ.

ನೀವು ಯಾವುದೋ ವಸ್ತುವನ್ನು ಬಹು ಗಂಭೀರವಾಗಿ ಹುಡುಕುತ್ತಿದ್ದೀರಿ ಎನ್ನೋಣ. ಅದಕ್ಕಾಗಿ ದೊಡ್ಡ ಯೋಜನೆ ರೂಪಿಸಿದ್ದೀರಿ. ಆದರೆ ಅದನ್ನು ಸಾಧಿಸುವುದು ಸುಲಭವಲ್ಲ ಎನ್ನುವುದು ನಿಮಗೆ ಗೊತ್ತು. ಇಂಥ ಸಂದರ್ಭದಲ್ಲಿ ಅದು ನಿಮ್ಮ ಹಿತ್ತಲಲ್ಲೇ ಕಂಡುಬಂದರೆ ಆಗ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು? ಇಂಥ ಸಂದರ್ಭ ಎದುರಾದದ್ದು ನಾರ್ವೆಯ ಪ್ರಸಿದ್ಧ ಜಾಜ್ ಸಂಗೀತಗಾರ ಜಾನ್ ಲಾರ್ಸನ್ ಗೆ. ಅವನು ಒಬ್ಬ ಸಂಶೋಧಕನೂ ಹೌದು. ಅವನಿಗೊಂದು ಐಡಿಯಾ ಬಂತು. ದೂರದ ಅಂಟಾರ್ಟಿಕ ಖಂಡಕ್ಕೆ ಹೋಗುವುದು ಅಥವಾ ಅಂತರಿಕ್ಷಕ್ಕೆ ಹೋಗುವುದು ಅವನಿಗೆ ನಿಲುಕದ ಕನಸು. ವಿಶ್ವದೂಳು, ಸೂಕ್ಷ್ಮ ಉಲ್ಕೆಗಳನ್ನು ಅಂಟಾರ್ಟಿಕದಲ್ಲಿ ಪತ್ತೆಹಚ್ಚಬಹುದಾದರೆ ನಮ್ಮ ಮನೆಗಳ ಚಾವಣಿಗಳ ಮೇಲೆ ಏಕೆ ಅವು ಬಿದ್ದಿರಬಾರದು ಎಂದು ಯೋಚಿಸಿ, ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಮ್ಯಾಥ್ಯೂ ಜಿಂಗ್ ನನ್ನು ಸಂಪರ್ಕಿಸಿ ಇಬ್ಬರು ವಿಶ್ವದೂಳಿನ ಬೇಟೆಗೆ ಹೊರಟೇ ಬಿಟ್ಟರು. ಆಸ್ಲೋ, ಪ್ಯಾರಿಸ್, ಬರ್ಲಿನ್ ನಗರಗಳಲ್ಲಿ ಆಯ್ದ ಮನೆಗಳ ಚಾವಣಿ ಹತ್ತಿದರು. ಚಾವಣಿಯಿಂದ ನೀರು ಹರಿಯುವ ಮಾರ್ಗಗಳಲ್ಲಿ ಕಟ್ಟುಕೊಂಡಿದ್ದ ದೂಳನ್ನು ಸಂಗ್ರಹಿಸಿದರು. ಸುಮಾರು 300 ಕೆ.ಜಿ.ಯಷ್ಟು. ಅತ್ಯಾಧುನಿಕವಾದ ಎಲ್ಲ ಸಾಧನ, ಸಲಕರಣೆಗಳನ್ನು ಬಳಸಿ ದೂಳನ್ನು ವಿಶ್ಲೇಷಿಸಿದರು. ಅದರಲ್ಲಿ ಕ್ಷುದ್ರಗ್ರಹದಿಂದ, ಧೂಮಕೇತುಗಳಿಂದ ಬಂದ ಕಣಗಳ ಜೊತೆಗೆ ವಿಶ್ವದೂಳಿನ ಕಣಗಳೂ ಪತ್ತೆಯಾದವು. ಒಟ್ಟು ಸುಮಾರು 500 ಕಣಗಳು. ವಿಶ್ವದೂಳಿನ ಕಣಗಳನ್ನು ಪ್ರತ್ಯೇಕಿಸಲು ಅವುಗಳ ಗುಣವನ್ನು ಅಧ್ಯಯನಮಾಡಿ ಅಯಸ್ಕಾಂತ ಬಳಸಿ ಪ್ರತ್ಯೇಕಿಸಿದ್ದರು. ಇದು ಜಗತ್ತಿನ ಗಮನವನ್ನು ಈಗ ಸೆಳೆದಿದೆ. ಇವರ ಮುಷ್ಟಿಯಲ್ಲಿ ಸೌರಮಂಡಲ ಪ್ರಾರಂಭವಾದ ಇತಿಹಾಸವೇ ಇದೆ. ಇಂಥ ವಿಶ್ವದೂಳಿನ ಕಣಗಳು ನಿಮ್ಮ ಟೆರೇಸ್ ಗಳಲ್ಲಿ ಸಂಚಯನವಾಗಿ ಅವು ಮಳೆಕೊಯ್ಲಿಗಾಗಿ ರಚಿಸಿರುವ ತೊಟ್ಟಿಗಳ ತಳದಲ್ಲೂ ಇರಬಹುದು!

Leave a Reply