ಡಿ.30ರ ಡೆಡ್ ಲೈನ್ ಸಮೀಪಿಸುತ್ತಿದ್ದಂತೆ, ನಗದು ವ್ಯವಸ್ಥೆ ರಿಪೇರಿಗೆ ಥರಾವರಿ ಕ್ರಮಗಳು

ಡಿಜಿಟಲ್ ಕನ್ನಡ ಟೀಮ್:

‘ಈವರೆಗೂ ಅಮಾನ್ಯಗೊಂಡಿರುವ ₹ 15.44 ಲಕ್ಷ ಕೋಟಿ ಹಣವನ್ನು ನಗದಿನ ಮೂಲಕವೇ ಬದಲಾಯಿಸಲು ಸಾಧ್ಯವಿಲ್ಲ. ಆ ಪೈಕಿ ಬಹುಪಾಲು ಕೊರತೆಯನ್ನು ಡಿಜಿಟಲ್ ನಗದು ತುಂಬಲಿದೆ. ನೋಟು ಅಮಾನ್ಯ ನಿರ್ಧಾರ ಒಂದು ಧೈರ್ಯದ ಹೆಜ್ಜೆ… ಈ ಹೆಜ್ಜೆಯನ್ನು ಇಡಲು ಭಾರತ ಸಮರ್ಥವಾಗಿದೆ. ಕಳೆದ ಏಳು ದಶಕಗಳ ಕಾಲ ಭಾರತದಲ್ಲಿ ಅಸಾಧ್ಯ ಎಂದು ಬಿಂಬಿತವಾಗಿದ್ದ ಪರಿಸ್ಥಿತಿ ಈಗ ಸಹಜವಾಗಿದೆ…’ ಇದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ನೋಟು ಅಮಾನ್ಯ ನಿರ್ಧಾರ ಕುರಿತು ಆಡಿರುವ ಮಾತುಗಳು.

ಎಫ್ಐಸಿಸಿಐನ ಸಭೆಯ ನಂತರ ಕಳೆದ 40 ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ನಗದು ರಿಪೇರಿ ಕಾರ್ಯದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಜೇಟ್ಲಿ, ‘ಸರ್ಕಾರದ ಈ ನಿರ್ಧಾರದ ಹಿಂದೆ ನಗದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಸದ್ಯ ಎದುರಾಗಿರುವ ನೋಟಿನ ಸಮಸ್ಯೆಯನ್ನು ಆರ್ಬಿಐ ಶೀಘ್ರವೇ ಕಡಿಮೆ ಮಾಡಲಿದ್ದು, ಉಳಿದ ನಗದಿನ ಕೊರತೆಯನ್ನು ಡಿಜಿಟಲ್ ನಗದು ತುಂಬಲಿದೆ’ ಎಂದಿದ್ದಾರೆ. ಸದ್ಯಕ್ಕೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ನವೆಂಬರ್ 8ರಂದು ನೋಟು ಅಮಾನ್ಯ ನಿರ್ಧಾರ ಪ್ರಕಟಗೊಂಡ ನಂತರ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ 1716 ಕೋಟಿ ₹ 500 ಮುಖ ಬೆಲೆಯ ನೋಟುಗಳು, 685 ಕೋಟಿ ₹ 1000 ಮುಖಬೆಲೆಯ ನೋಟುಗಳು ಅಮಾನ್ಯ ಗೊಂಡಿದ್ದವು. ಈ ನೋಟುಗಳ ಒಟ್ಟಾರೆ ಮೊತ್ತ ₹ 15.44 ಲಕ್ಷ ಕೋಟಿ.

ಸರ್ಕಾರ ಈ ನಗದು ರಿಪೇರಿ ಕಾರ್ಯ ಆರಂಭಿಸಿದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಿ ಸುಧಾರಣೆಗೆ ತರಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ಆ ಪೈಕಿ ಕಳೆದ 24 ತಾಸಿನಲ್ಲೂ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಆ ಪೈಕಿ ಪ್ರಮುಖ ಕ್ರಮಗಳು ಹೀಗಿವೆ…

  • ಎಲ್ಲ ಉಳಿತಾಯ ಖಾತೆಗಳಿಗೂ ಆಧಾರ್ ಜೋಡಣೆ: ನಗದು ರಹಿತ ವಹಿವಾಟು ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ನಿರ್ಧಾರಗಳ ಪೈಕಿ ಎಲ್ಲ ಖಾತೆಗಳಿಗೂ ಆಧಾರ್ ಸಂಖ್ಯೆ ಸೇರಿಸುವುದು. ಅದರೊಂದಿಗೆ ಚಿಲ್ಲರೆ ವ್ಯಾಪಾರ ಕೇಂದ್ರಗಳೂ ಸೇರಿದಂತೆ ಎಲ್ಲ ಹಂತಗಳಲ್ಲೂ ಡಿಜಿಟಲ್ ವಹಿವಾಟಿಗೆ ನೆರವಾಗುವುದು ಈ ನಿರ್ಧಾರದ ಹಿಂದಿನ ಉದ್ದೇಶ. ದೇಶದ ಬಹುತೇಕ ಜನರ ಬಳಿ ಡಿಜಿಟಲ್ ವಹಿವಾಟು ಮಾಡಲು ಅಗತ್ಯ ಮೊಬೈಲ್ ಫೋನುಗಳಿಲ್ಲ. ಈ ರೀತಿಯಾಗಿ ದೇಶದಲ್ಲಿ ಸುಮಾರು 30 ಕೋಟಿ ಜನರಿದ್ದಾರೆ. ಅವರಿಗೆ ಡಿಜಿಟಲ್ ಆರ್ಥಿಕತೆಯ ವ್ಯಾಪ್ತಿಗೆ ಒಳಪಡಲು ಈ ನಿರ್ಧಾರ ಸಹಾಯವಾಗಲಿದೆ. ಈವರೆಗೂ ದೇಶದಲ್ಲಿ 112 ಕೋಟಿ ಬ್ಯಾಂಕ್ ಖಾತೆಗಳು ಇದ್ದು, ಆ ಪೈಕಿ ಕೇವಲ 40 ಕೋಟಿ ಖಾತೆಗಳಿಗೆ ಮಾತ್ರ ಆಧಾರ್ ಕಾರ್ಡ್ ಸಂಖ್ಯೆ ಸೇರಿಸಲಾಗಿದೆ. ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಪ್ಪಿಗೆ ದೊರೆತಿದ್ದು, ಇದನ್ನು ಜಾರಿಗೊಳಿಸುವ ಜವಾಬ್ದಾರಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ರವಿಶಂಕರ್ ಪ್ರಸಾದ್ ಅವರ ಹೆಗಲಿಗೆ ನೀಡಲಾಗಿದೆ.
  • ‌₹ 2 ಲಕ್ಷ ಠೇವಣಿ ಮಾಡಿದವರ ಮೇಲೂ ಸರ್ಕಾರದ ಕಣ್ಣು: ನವೆಂಬರ್ 8ರಂದು ನೋಟು ಅಮಾನ್ಯ ನಿರ್ಧಾರ ಪ್ರಕಟಗೊಂಡ ನಂತರ ದೇಶದಲ್ಲಿ ಕಪ್ಪು ಹಣವನ್ನು ಬಿಳಿಯಾಗಿಸಲು ನಕಲಿ ಖಾತೆಗಳು ಹಾಗೂ ಬೇನಾಮಿ ಖಾತೆಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಹೊಸ ನಿರ್ಧಾರಕ್ಕೆ ಬಂದಿದೆ. ಅದೇನೆಂದರೆ, ಈವರೆಗೂ ‌₹ 2 ಲಕ್ಷಕ್ಕೂ ಹೆಚ್ಚು ಹಣ ಹೊಂದದೇ ಇದ್ದ ಖಾತೆಗಳಲ್ಲಿ ಈಗ ‌₹ 2 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಠೇವಣಿಯಾಗಿದ್ದರೆ, ಅಂತಹ ಖಾತೆಗಳ ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಇಂತಹ ಖಾತೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ ನೀಡಿದೆ. ಈ ನಿರ್ಧಾರದ ಹಿಂದೆ ಬೇನಾಮಿ ಹೆಸರಿನಲ್ಲಿ ಹಣ ಠೇವಣಿ ಹಾಗೂ ನಕಲಿ ಖಾತೆಗಳ ಬಳಕೆಯನ್ನು ಪತ್ತೆ ಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಕಪ್ಪು ಹಣದ ವಿರುದ್ಧ ಸರ್ಕಾರ ನಡೆಸುತ್ತಿರುವ ಮುಂದಿನ ಹಂತದ ಸಮರ ಎಂದೇ ಪರಿಗಣಿಸಲಾಗುತ್ತಿದೆ. ನೋಟು ಅಮಾನ್ಯದ ನಿರ್ಧಾರದ ನಂತರ 27 ಸಾವಿರ ಜನಧನ್ ಖಾತೆಗೆ 2 ವಾರಗಳ ಅವಧಿಯಲ್ಲೇ ಒಟ್ಟು 45 ಸಾವಿರ ಕೋಟಿ ಹಣ ಠೇವಣಿಯಾಗಿತ್ತು. ಇದರೊಂದಿಗೆ ಕಪ್ಪು ಹಣವನ್ನು ಬಿಳಿಯಾಗಿಸುವ ಅಡ್ಡ ಮಾರ್ಗಕ್ಕೆ ಜನಧನ್ ಖಾತೆ ಬಳಕೆಯಾಗಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
  • 3000 ನೋಟಿಸ್ ಜಾರಿ: ನೋಟು ಅಮಾನ್ಯ ನಿರ್ಧಾರದ ನಂತರ ಬ್ಯಾಂಕುಗಳಲ್ಲಿ ಠೇವಣಿಯಾಗಿರುವ ಬೃಹತ್ ಮೊತ್ತ ಹಾಗೂ ಅನುಮಾನಾಸ್ಪದ ಠೇವಣಿಗಳ ಪೈಕಿ ಈಗಾಗಲೇ ಆರ್ಬಿಐನಿಂದ 3 ಸಾವಿರ ನೋಟಿಸ್ ಜಾರಿಯಾಗಿವೆ. ಇನ್ನು ತಮಗೆ ಬಂದ ಮಾಹಿತಿ ಆಧಾರದ ಮೇಲೆಗೆ 291 ಪ್ರಕರಣಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಆರ್ಬಿಐನ ನೇರ ತೆರಿಗೆ ವಿಭಾಗದ ಮುಖ್ಯಸ್ಥ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.
  • ರಾಜಕೀಯ ಪಕ್ಷಗಳ ಠೇವಣಿಗೆ ತೆರಿಗೆ ಮುಕ್ತ: ರಾಜಕೀಯ ಪಕ್ಷಗಳು ಹಳೇಯ ನೋಟಿನಲ್ಲಿ ಹಣ ಠೇವಣಿ ಮಾಡಿದರೆ, ಅದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಇದು ಈಗಿನ ನಿರ್ಧಾರವಲ್ಲ 1961ರ ತೆರಿಗೆ ಕಾಯ್ದೆಯ 13ಎ ಪರಿಚ್ಛೇದದಲ್ಲಿ ಇದಕ್ಕೆ ವಿನಾಯಿತಿ ನೀಡಲಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯಿಂದ ₹ 20 ಸಾವಿರಕ್ಕಿಂತ ಕಡಿಮೆ ದೇಣಿಗೆ ಪಡಿದರೆ ಮಾತ್ರ ಈ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಈ ಠೇವಣಿಗಳ ಬಗ್ಗೆ ರಾಜಕೀಯ ಪಕ್ಷಗಳು ಸೂಕ್ತ ದಾಖಲೆ ಹೊಂದಿರಬೇಕು ಸ್ಪಷ್ಟ ಸೂಚನೆಯೂ ಇದೆ.

ಈ ಪ್ರಮುಖ ನಿರ್ಧಾರಗಳ ಜತೆಗೆ ಇಂದಿನಿಂದ ಸರ್ಕಾರ ನೀಡಿರುವ ಕಪ್ಪು ಹಣ ಘೋಷಣೆಯ ಕಡೇಯ ಅವಕಾಶ ಆರಂಭವಾಗಿದೆ. ಪ್ರಧಾನಮಂತ್ರಿ ಕಲ್ಯಾಣ ಯೋಜನೆ ಮೂಲಕ ಕಪ್ಪುಹಣ ಹೊಂದಿರುವವರು ತಮ್ಮಲಿರುವ ಅನಧಿಕೃತ ಹಣವನ್ನು ಸರ್ಕಾರಕ್ಕೆ ಘೋಷಿಸಿ ಅದಕ್ಕೆ ಸೂಕ್ತ ತೆರಿಗೆ ಕಟ್ಟಿ ತಮ್ಮಲ್ಲಿರುವ ಹಣವನ್ನು ಕಾನೂನು ಬದ್ಧವಾಗಿ ಬಿಳಿಯಾಗಿಸಿಕೊಳ್ಳಬಹುದು. ಇಂದಿನಿಂದ ಈ ಯೋಜನೆ ಆರಂಭವಾಗಿದ್ದು, ಮುಂದಿನ ವರ್ಷ ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯಲ್ಲಿ ಕಪ್ಪುಹಣ ಘೋಷಿಸಿಕೊಂಡವರು ಶೇ.50ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟಿ ಉಳಿದ ಶೇ.50ರಷ್ಟು ಹಣವನ್ನು ಬಿಳಿಯಾಗಿಸಿಕೊಳ್ಳಬಹುದು.

ಕಪ್ಪು ಹಣ ಹಾಗೂ ಅಕ್ರಮ ನೋಟು ಬದಲಾವಣೆ ಬಗ್ಗೆ ಸಾರ್ವಜನಿಕರು ತೆರಿಗೆ ಇಲಾಖೆಗೆ ಮಾಹಿತಿ ನೀಡಲು blackmoneyinfo@incometax.gov.in ಇ ಮೇಲ್ ವಿಳಾಸ ನೀಡಿರುವುದು ಗೊತ್ತಿರುವ ವಿಚಾರ. ಈ ಎಲ್ಲ ನಿರ್ಧಾರಗಳು ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಅಕ್ರಮ ಹಣ ಬದಲಾವಣೆ, ಕಪ್ಪು ಹಣ ಹಾಗೂ ತೆರಿಗೆ ವಂಚನೆ ವಿರುದ್ಧ ಹೋರಾಡಲು ಪ್ರಮುಖ ಅಸ್ತ್ರಗಳಾಗಿವೆ.

Leave a Reply