ಕಣಿವೆ ರಾಜ್ಯದಲ್ಲಿ ಹುತಾತ್ಮ ಯೋಧರ ಸಂಖ್ಯೆ 60, ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಇದು ದುಪ್ಪಟ್ಟು

ಡಿಜಿಟಲ್ ಕನ್ನಡ ಟೀಮ್:

ವರ್ಷಾಂತ್ಯ ಸಮೀಪಿಸುತ್ತಿರುವ ಹಂತದಲ್ಲಿ ಈ ವರ್ಷದ ಹಾದಿಯನ್ನು ಹಿಂತಿರುಗಿ ನೋಡಿದರೆ ದೇಶದಲ್ಲಿನ ಹಲವು ವಿದ್ಯಮಾನಗಳು ನಮ್ಮ ಕಣ್ಮುಂದೆ ಬಂದು ಹೋಗುತ್ತವೆ. ಆ ಎಲ್ಲ ವಿದ್ಯಮಾನಗಳ ನಡುವೆ ನಮ್ಮನ್ನು ವರ್ಷಪೂರ್ತಿ ಕಾಡುತ್ತಲೇ ಬಂದಿದ್ದು, ಜಮ್ಮು ಕಾಶ್ಮೀರದ ಗಡಿಯಲ್ಲಿ ನಮ್ಮ ಸೈನಿಕರು ಉಗ್ರರ ಜತೆಗೆ ನಡೆಸಿದ ಅನೇಕ ಹೋರಾಟಗಳು ಎಂದರೆ ತಪ್ಪಿಲ್ಲ. ಅದರಲ್ಲೂ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ವರ್ಷಪೂರ್ತಿ ನಡೆದ ಹಲವು ಕಾರ್ಯಾಚರಣೆಗಳಲ್ಲಿ ಈವರೆಗೂ ಒಟ್ಟು 60 ಮಂದಿ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂಬ ಅಂಕಿ ಅಂಶ ನಮ್ಮ ಮನಸಿನ ಚಿತ್ತವನ್ನೊಮ್ಮೆ ಕದಡಿಸುತ್ತದೆ.

ನಿಜ, ಈ ವರ್ಷಪೂರ್ತಿ ಭಾರತದ ಗಡಿಯಲ್ಲಿನ ಕಾರ್ಯಾಚರಣೆಗಳ ಬಗ್ಗೆ ನಾವು ನಿತ್ಯ ಒಂದಿಲ್ಲೊಂದು ಸುದ್ದಿ ನೋಡುತ್ತಲೇ ಬಂದಿದ್ದೇವೆ. ವರ್ಷದ ಆರಂಭದಲ್ಲೇ ಪಠಾಣ್ ಕೋಟ್ ವಾಯು ನೆಲೆ ಮೇಲಿನ ದಾಳಿ ಜತೆಗೆ ಬೇರೆ ಬೇರೆ ಗಡಿಗಳಲ್ಲೂ ಭಾರತೀಯ ಯೋಧರಿಗೆ ಅನೇಕ ಸವಾಲುಗಳು ಎದುರಾಗಿದ್ದವು. ಆದರೆ ಕಣಿವೆ ರಾಜ್ಯದಲ್ಲಿ ಈ ವರ್ಷ ಎದುರಾದ ಪರೀಕ್ಷೆಗಳು ಒಂದೆರಡಲ್ಲ. ಗಡಿಯಲ್ಲಿನ ಕದನ ವಿರಾಮ ಉಲ್ಲಂಘನೆ, ಸಿಯಾಚಿನ್ ನಂತಹ ನರಕದಲ್ಲಿ ಕಾರ್ಯನಿರ್ವಹಣೆ, ಅಕ್ರಮ ನುಸುಳುಕೋರರ ದಾಳಿ ಹೀಗೆ ಒಂದೇ ಎರಡೆ, ಜಮ್ಮು ಕಾಶ್ಮೀರದ ಈ ಎಲ್ಲ ಆತಂಕದ ಸಮಯದಲ್ಲೂ ದೇಶ ರಕ್ಷಣೆಗೆ ಸಾವಿರಾರು ಸೈನಿಕರು ಎದೆ ಕೊಟ್ಟು ನಿಂತರು. ಆ ಪೈಕಿ 60 ಜೀವಗಳು ಪ್ರಾಣ ತ್ಯಾಗ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ.

ಭಾರತೀಯ ಸೇನೆಯ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಈ ವರ್ಷ ಡಿಸೆಂಬರ್ 15ರವರೆಗೂ ಜಮ್ಮು ಕಾಶ್ಮೀರ ಒಂದರಲ್ಲೇ ಒಟ್ಟು 60 ಮಂದಿ ಯೋಧರು ತಮ್ಮ ಪ್ರಾಣ ಬಿಟ್ಟಿದ್ದಾರೆ. ಕಳೆದ ಎರಡು ವರ್ಷದಲ್ಲಿನ ಯೋಧರ ಪ್ರಾಣ ಹಾನಿಗೆ ಹೋಲಿಕೆ ಮಾಡಿದರೆ ಈ ವರ್ಷ ದುಪ್ಪಟ್ಟು ಪ್ರಮಾಣದಲ್ಲಿ ಯೋಧರು ಹತರಾಗಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ 2014ರಲ್ಲಿ ಒಟ್ಟು 32 ಯೋಧರು, 2015 ರಲ್ಲಿ 33 ಯೋಧರು ಕಣಿವೆ ರಾಜ್ಯದಲ್ಲಿ ಪ್ರಾಣ ಬಿಟ್ಟಿದ್ದರು. ಆ ಮೂಲಕ ಈ ರಾಜ್ಯದಲ್ಲಿ ಯೋಧರ ಸಾವಿನ ಪ್ರಮಾಣ ದುಪಟ್ಟಾಗಿರುವುದು ಸಾಬೀತಾಗುತ್ತದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ, ನುಸುಳುಕೋರರ ದಾಳಿ ಹಾಗೂ ಬಿಎಟಿ ಕಾರ್ಯಾಚರಣೆ ವೇಳೆ ಒಟ್ಟು 23 ಯೋಧರು ಪ್ರಾಣ ಬಿಟ್ಟಿದ್ದಾರೆ. 2014 ಹಾಗೂ 2015ರಲ್ಲಿ ಈ ಸಾವಿನ ಪ್ರಮಾಣ ಕ್ರಮವಾಗಿ 5 ಮತ್ತು 4 ಆಗಿತ್ತು. ಅದರೊಂದಿಗೆ ಈ ವರ್ಷ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಕಿತಾಪತಿ ಎಷ್ಟು ತೀವ್ರವಾಗಿದೆ ಎಂಬುದು ತಿಳಿಯುತ್ತದೆ.

ಇನ್ನು ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಈ ವರ್ಷ ಒಟ್ಟು 37 ಯೋಧರು ಹತರಾಗಿದ್ದಾರೆ. 2014 ಮತ್ತು 2015ರಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಕ್ರಮವಾಗಿ 27 ಹಾಗೂ 29 ಯೋಧರು ಪ್ರಾಣ ಬಿಟ್ಟಿದ್ದರು. ಇನ್ನು ಉರಿ ಹಾಗೂ ನಗ್ರೋತಾ ಪ್ರದೇಶಗಳಲ್ಲಿನ ಸೇನಾ ನೆಲೆಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಒಟ್ಟು 26 ಯೋಧರು ಹುತಾತ್ಮರಾಗಿರುವುದು ಭಾರತ ಸೇನೆಗೆ ದುಬಾರಿಯಾಗಿ ಪರಿಣಮಿಸಿದೆ.

ಕಣಿವೆ ರಾಜ್ಯದಲ್ಲಿ ಈ ವರ್ಷ ಭಯೋತ್ಪಾದಕರ ಕೃತ್ಯಗಳು ಹೆಚ್ಚಾಗಿರುವುದನ್ನು ಸೇನಾ ಮೂಲಗಳು ಖಚಿತಪಡಿಸಿದ್ದು, ಈ ವರ್ಷ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿವೆ. ಇಷ್ಟು ವರ್ಷಗಳ ಪೈಕಿ ಗಡಿ ನಿಯಂತ್ರಣ ರೇಖೆಯಲ್ಲಿ ಈ ವರ್ಷ ಹೆಚ್ಚು ಅಕ್ರಮ ನುಸುಳುಗಾರಿಕೆ ಪ್ರಯತ್ನ ನಡೆದಿದೆ ಎಂದು ಮಾಹಿತಿ ಬಂದಿರುವುದಾಗಿ ದ ಇಂಡಿಯನ್ ಎಕ್ಸ್ ಪ್ರೇಸ್ ವರದಿ ಮಾಡಿದೆ.

ಇದು ಕೇವಲ ಕಣಿವೆ ರಾಜ್ಯದಲ್ಲಿ ನಮ್ಮ ಸೈನಿಕರು ಮಾಡಿರುವ ತ್ಯಾಗದ ಅಂಕಿ ಅಂಶ, ಇನ್ನು ಈಶಾನ್ಯ ಭಾಗದಲ್ಲಿ ಹಾಗೂ ಇತರೆ ರಾಜ್ಯಗಳ ಗಡಿ ಪ್ರದೇಶಗಳಲ್ಲಿಯೂ ನಮ್ಮ ಅನೇಕ ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಹೀಗಾಗಿ ವರ್ಷಾಂತ್ಯದ ಸಮೀಪದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದ ಮಧ್ಯೆ ನಮಗಾಗಿ ಪ್ರಾಣ ಬಿಟ್ಟ ಆ ಜೀವಗಳನ್ನೊಮ್ಮೆ ಸ್ಮರಿಸುವ ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು.

Leave a Reply