ರಾಜಕೀಯ ಪಕ್ಷಗಳ ಆದಾಯಕ್ಕೆ ತೆರಿಗೆ ವಿನಾಯಿತಿ- ಜೇಟ್ಲಿ ಕೊಟ್ಟ ಸಮರ್ಥನೆ ಏನು?

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ ಜಾರಿಗೆ ಬಂದ ಜಾರಿಗೆ ಬಂದ ತೆರಿಗೆ ಕಾಯ್ದೆ (ಎರಡನೇ ತಿದ್ದುಪಡಿ) 2016 ರಲ್ಲಿ ರಾಜಕೀಯ ಪಕ್ಷಗಳ ಆದಾಯವನ್ನು ತೆರಿಗೆ ಮುಕ್ತಗೊಳಿಸಿ ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಗೊಂದಲಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಹೊಸ ಕಾಯ್ದೆ ಜಾರಿಯ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜಕೀಯ ಪಕ್ಷಗಳ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಅದರಿಂದ ಪ್ರಸ್ತುತ ಸರ್ಕಾರವೇ ಈ ಕ್ರಮವನ್ನು ಕೈಗೊಂಡಿದೆ ಎಂಬ ಚಿತ್ರಣ ಮೂಡಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಅರುಣ್ ಜೇಟ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಹಿಂದೆ ಇದ್ದ 1961ರ ತೆರಿಗೆ ಕಾಯ್ದೆಯಲ್ಲೇ ರಾಜಕೀಯ ಪಕ್ಷಗಳ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಅದನ್ನು ಹಾಗೇ ಮುಂದುವರಿಸಿದ್ದು, ಪ್ರಸ್ತುತ ಸರ್ಕಾರ ಈ ಬಗ್ಗೆ ಹೊಸದಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಹಾಗೂ ಈ ಹಿಂದೆ ಇದ್ದಕ್ಕಿಂತ ಹೆಚ್ಚಿನ ವಿನಾಯಿತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಅವರು ನೀಡಿರುವ ಸಂಪೂರ್ಣ ವಿವರ ಹೀಗಿದೆ…

‘ನೋಟು ಅಮಾನ್ಯದ ನಿರ್ಧಾರದ ನಂತರ ಡಿಸೆಂಬರ್ 15ರಂದು ಜಾರಿಗೆ ಬಂದ ತೆರಿಗೆ ಕಾಯ್ದೆ 2016 (ಎರಡನೇ ತಿದ್ದುಪಡಿ)ಯಲ್ಲಿ ಸರ್ಕಾರವು ರಾಜಕೀಯ ಪಕ್ಷಗಳಿಗೆ ಹೊಸದಾಗಿ ತೆರಿಗೆ ವಿನಾಯಿತಿ ನೀಡಿಲ್ಲ. ರಾಜಕೀಯ ಪಕ್ಷಗಳ ಆದಾಯ ಮತ್ತು ದೇಣಿಗೆಯ ವಿಷಯ 1961ರ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಅಡಿಯಲ್ಲಿ ಸೇರಿಸಲಾಗಿದ್ದು, ಆಗಲೇ ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ವಿಷಯ ಹೊರತುಪಡಿಸಿ 1961ರ ಕಾಯ್ದೆಯಲ್ಲಿನ ಕೆಲವು ಅಂಶಗಳನ್ನು ಮಾತ್ರ ತಿದ್ದುಪಡಿ ಮಾಡಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಪ್ರಕಾರ ರಾಜಕೀಯ ಪಕ್ಷಗಳು ತಮ್ಮ ಆದಾಯ ಮತ್ತು ಖರ್ಚು ವೆಚ್ಚದ ಬಗೆಗಿನ ಎಲ್ಲ ದಾಖಲೆಗಳನ್ನು ತೆರಿಗೆ ಇಲಾಖೆಗೆ ಸಲ್ಲಿಸಬೇಕಿದೆ. ನೋಟು ಅಮಾನ್ಯ ನಿರ್ಧಾರದ ನಂತರ ಯಾವುದೇ ರಾಜಕೀಯ ಪಕ್ಷಗಳು ಹಳೇಯ ನೋಟುಗಳನ್ನು ಪಡೆಯಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿಯ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಚಟುವಟಿಕೆಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ ರಾಜಕೀಯ ಪಕ್ಷಗಳು ನೋಟು ಅಮಾನ್ಯದ ನಂತರ ಹಳೇ ನೋಟು ಸ್ವೀಕರಿಸುವಂತಿಲ್ಲ ಎಂದು ಸೂಚಿಸಲಾಗಿತ್ತು. ಒಂದು ವೇಳೆ ಯಾವುದೇ ಪಕ್ಷ ಇಂತಹ ಚಟುವಟಿಕೆಯಲ್ಲಿ ಭಾಗಿಯಾದರೆ ಅದು ಕಾನೂನಿನ ಉಲ್ಲಂಘನೆಯಾಗಲಿದೆ. ಸಾಮಾನ್ಯ ವ್ಯಕ್ತಿ ಹೇಗೆ ತನ್ನಲ್ಲಿರುವ ಹಳೇಯ ನೋಟುಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕುತ್ತಾನೋ ಅದೇ ರೀತಿ ರಾಜಕೀಯ ಪಕ್ಷಗಳು ಹಳೇಯ ನೋಟುಗಳನ್ನು ತಮ್ಮ ಖಾತೆಗೆ ಹಾಕಬಹುದು. ಜನಸಾಮಾನ್ಯರ ರೀತಿಯಲ್ಲೇ ರಾಜಕೀಯ ಪಕ್ಷಗಳಿಗೂ ಡಿ.30ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ. ಹೀಗೆ ಠೇವಣಿ ಮಾಡಿದ ಹಣದ ಬಗ್ಗೆ ರಾಜಕೀಯ ಪಕ್ಷಗಳು ನವೆಂಬರ್ 8ಕ್ಕೂ ಮುನ್ನ ಪಡೆದ ಹಣದ ಬಗ್ಗೆ ಸೂಕ್ತ ದಾಖಲೆಗಳನ್ನು ತೆರಿಗೆ ಇಲಾಖೆಗೆ ಸಲ್ಲಿಸಬೇಕಿದೆ. ಈ ದಾಖಲೆಗಳಲ್ಲಿ ದೋಷ ಕಂಡು ಬಂದಿದ್ದೇ ಆದರೆ ಅಂತಹ ರಾಜಕೀಯ ಪಕ್ಷಗಳು ಇತರರ ರೀತಿಯಲ್ಲೇ ತೆರಿಗೆ ಇಲಾಖೆಯ ಅಧಿಕಾರಿಗಳ ವಿಚಾರಣೆಗೆ ಒಳಪಡಲಿದೆ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳಿಗೆ ಯಾವುದೇ ರೀತಿಯ ವಿನಾಯಿತಿ ನೀಡಲಾಗಿಲ್ಲ. ಸರ್ಕಾರದ ನಿರ್ಧಾರದಲ್ಲಿ ಯಾರಿಗೂ ತಾರತಮ್ಯ ಮಾಡಲಾಗಿಲ್ಲ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಾರ ಪರವೂ ನಿಲ್ಲಲು ಸಿದ್ಧವಿಲ್ಲ. ನೋಟು ಅಮಾನ್ಯ ನಿರ್ಧಾರದ ನಂತರ ಬಿಜೆಪಿಯ ಎಲ್ಲ ಶಾಸಕರು ಹಾಗೂ ಸಂಸದರ ಬ್ಯಾಂಕು ಖಾತೆಯ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡುವ ಮೂಲಕ ಸಾರ್ವಜನಿಕ ಜೀವನದಲ್ಲಿ ರಾಜಕೀಯ ವ್ಯಕ್ತಿಗಳು ಎಷ್ಟು ಪಾರದರ್ಶಕವಾಗಿರಬೇಕು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಬೇರೆ ಪಕ್ಷಗಳು ಸಹ ತಮ್ಮ ನಾಯಕರುಗಳಿಗೆ ಇದೇ ರೀತಿ ಸೂಚನೆ ನೀಡಿ ತಾವು ಸಹ ಭ್ರಷ್ಟಾಚಾರ ವಿರುದ್ಧ ಕಠಿಣ ನಿಲುವು ತಾಳಬೇಕಿದೆ.’

Leave a Reply