ತಲೆಗವಸು ಧರಿಸದೇ ಸೌದಿ ಯುವರಾಜನನ್ನು ಭೇಟಿಯಾದ ಜರ್ಮನಿ ಸಂಸದೆ, ಸ್ವಾಭಿಮಾನದ ಮಾದರಿ ಇಲ್ಲಿದೆ…

ಡಿಜಿಟಲ್ ಕನ್ನಡ ಟೀಮ್:

ಕೆಲದಿನಗಳ ಹಿಂದಷ್ಟೇ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ತಮ್ಮ ದೇಶದಲ್ಲಿ ಬುರ್ಕಾವನ್ನು ಭಾಗಶಃ ನಿಷೇಧಿಸುವ ಆಶಯ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ವಾರಗಳ ಹಿಂದೆ ಜರ್ಮನಿಯ ರಕ್ಷಣಾ ಸಚಿವೆಯ ಸೌದಿ ಅರೇಬಿಯಾ ಭೇಟಿ ಸಹ ಇಂಥದೇ ದಾಢಸೀತನಕ್ಕಾಗಿ ಸುದ್ದಿಯಾಗಿದೆ.

ಪರಮ ಕರ್ಮಠ, ಸಂಪ್ರದಾಯಬದ್ಧ ದೇಶವಾದ ಸೌದಿಗೆ ಭೇಟಿ ನೀಡಿದರೆ ಆ ಸಂದರ್ಭದಲ್ಲಿ ಎಲ್ಲರೂ ಅಲ್ಲಿನ ರೀತಿ-ರಿವಾಜು ಪಾಲಿಸುತ್ತಾರೆ. ಆದರೆ ಜರ್ಮನಿಯ ರಕ್ಷಣಾ ಸಚಿವೆ ಉರ್ಸುಲಾ ವೊನ್ ದೆರ್ ಲೆಯೆನ್ ಡಿಸೆಂಬರ್ 9ಕ್ಕೆ ಸೌದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಪ್ರದಾಯದಂತೆ ಹಿಜಾಬ್ ಧರಿಸಿ ತಲೆಯನ್ನು ಮುಚ್ಚಿಕೊಳ್ಳುವ ಪರಿಪಾಠವನ್ನು ಪಾಲಿಸಲಿಲ್ಲ.

ರಾಜ ಕುವರ ಮೊಹಮದ್ ಬಿನ್ ಸಲ್ಮಾನ್ ಅಲ್ ಸೌದ್’ರನ್ನು ಹಿಜಾಬ್ ಧರಿಸದೇ ಮಾತುಕತೆಯಲ್ಲಿ ಎದುರಾದ ಉರ್ಸುಲಾ ನಡೆ ಗಟ್ಟಿಗಿತ್ತಿ ಮಾದರಿಯದ್ದೇ. ನಾವು ಗಮನಿಸಿಯೇ ಇದ್ದೇವೆ. ಭಾರತದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರು ಇರಾನಿನ ಧಾರ್ಮಿಕ ಗುರು ಅಯತೊಲ್ಲಾ ಖೊಮೇನಿಯನ್ನು ಭೇಟಿ ಮಾಡುವಾಗಲೂ ತಲೆಗವಸು ಧರಿಸಿ ಅಲ್ಲಿನ ಸಂಪ್ರದಾಯ ಪಾಲಿಸಿದ್ದರು. ಇದು ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಚರ್ಚೆಯೂ ಆಗಿತ್ತು.

german-minister2

ಆದರೆ ಉರ್ಸುಲಾ ಮಾತ್ರ ಯಾರೇನಂದುಕೊಳ್ಳುತ್ತಾರೋ ಯೋಚಿಸಲಿಲ್ಲ. ಶಿಷ್ಟಾಚಾರಕ್ಕೂ ಜೋತು ಬೀಳಲಿಲ್ಲ. ಆಕೆ ಹೇಳಿದ್ದು- ‘ನಮಗಿಷ್ಟ ಬಂದ ವಸ್ತ್ರವನ್ನು ಧರಿಸುವ ಹಕ್ಕು ಹೆಂಗಸು ಮತ್ತು ಗಂಡಸಿಗೆ ಸಮಾನವಾಗಿ ಇರಬೇಕು. ಮಹಿಳೆಯ ಧಿರಿಸಿಗೆ ನಿರ್ದೇಶನಗಳನ್ನು ಕೊಡುವುದು ನನ್ನನ್ನು ರೊಚ್ಚಿಗೇಳಿಸುತ್ತದೆ.’

ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಧಿರಿಸು ನಿಯಮವನ್ನು ಪಾಲಿಸದೇ ಇರುವುದಕ್ಕೆ ಬಂಧನಗಳಾಗುತ್ತಲೇ ಇರುತ್ತವೆ. ಉರ್ಸುಲಾ ಭೇಟಿಯ ವಾರದ ಹಿಂದಷ್ಟೇ ಮಹಿಳೆಯೊಬ್ಬಳನ್ನು ಈ ಕಾರಣಕ್ಕಾಗಿ ಬಂಧಿಸಲಾಗಿತ್ತು. ಆದರೆ ಜರ್ಮನಿಯ ರಕ್ಷಣಾ ಸಚಿವೆಯೇ ಶಿರವಸ್ತ್ರ ನಿಯಮ ಧಿಕ್ಕರಿಸಿದ ಬಗ್ಗೆ ಸೌದಿ ಅಧಿಕಾರಿಗಳು ಮೌನವಾಗಿರುವುದೇ ಈಕೆಯ ಪ್ರತಿಭಟನಾತ್ಮಕ ನಡೆಯ ಗಟ್ಟಿತನವನ್ನು ತೋರಿಸುತ್ತದೆ.

ಉದಾರವಾದ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವುದು ದೊಡ್ಡದಲ್ಲ. ಆದರೆ ಉನ್ನತ ವೇದಿಕೆಗಳಲ್ಲೂ ಅದನ್ನು ಪಾಲಿಸುವುದಕ್ಕೆ ಛಾತಿ ಬೇಕಾಗುತ್ತದೆ. ಉರ್ಸುಲಾ ಅಷ್ಟರಮಟ್ಟಿಗೆ ಅಭಿನಂದನಾರ್ಹರು. ಅಂದಹಾಗೆ, ಕಾನೂನಾತ್ಮಕವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಂಪೂರ್ಣ ಮುಖಮುಚ್ಚುವ ಬುರ್ಕಾ ಧಾರಣೆ ನಿಷೇಧಿಸಬೇಕು ಎಂದಿದ್ದರು ಜರ್ಮನಿಯ ಛಾನ್ಸೆಲರ್ ಮರ್ಕೆಲ್.

ಈ ಇಬ್ಬರು ಹೆಂಗಸರು ಹೊಸ ಧೋರಣೆಯೊಂದನ್ನು ಪ್ರತಿಪಾದಿಸುತ್ತಿದ್ದಾರೆಯೇ? ಜರ್ಮನಿಯ ಬೆನ್ನುಹುರಿ ಸೆಟಗೊಳ್ಳುತ್ತಿದೆಯೇ?

Leave a Reply