ಭೂ ಮತ್ತು ವಾಯು ಸೇನೆಗೆ ನೇಮಕವಾದ ಹೊಸ ಮುಖ್ಯಸ್ಥರ ಬಗ್ಗೆ ನೀವು ತಿಳಿಯಬೇಕಿರುವ ಮಾಹಿತಿಗಳೇನು?

ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥ ಲೆಫ್ಟಿನೆಂಟ್ ಜೆನರಲ್ ಬಿಪಿನ್ ರಾವತ್

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಭೂ ಸೇನೆ ಹಾಗೂ ವಾಯು ಸೇನೆಗೆ ಹೊಸ ಮುಖ್ಯಸ್ಥರ ನೇಮಕವಾಗಿದೆ. ಭೂ ಸೇನೆಗೆ ಲೆಫ್ಟಿನೆಂಟ್ ಜೆನರಲ್ ಬಿಪಿನ್ ರಾವತ್, ವಾಯು ಸೇನೆಗೆ ಏರ್ ಮಾರ್ಷಲ್ ಬಿರೇಂದರ್ ಸಿಂಗ್ ಧನೊವಾ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಸಾಕಷ್ಟು ದಿನಗಳಿಂದ ಭೂ ಸೇನೆಯ ಮುಖ್ಯಸ್ಥ ಜೆನರಲ್ ದಲ್ಬೀರ್ ಸಿಂಗ್ ಸುಹಾಗ್ ಹಾಗೂ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಹಾಗೂ ಚರ್ಚೆ ನಡೆದಿತ್ತು. ಈ ಎಲ್ಲದಕ್ಕೂ ಭಾನುವಾರ ತೆರೆ ಬಿದ್ದಿದೆ. ಡಿ.31ರಂದು ಜೆನರಲ್ ದಲ್ಬೀರ್ ಸಿಂಗ್ ಹಾಗೂ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ ಅವರ ಸೇವಾ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಮುಂದಿನ ವರ್ಷದಿಂದ ಬಿಪಿನ್ ಹಾಗೂ ಧನೊವಾ ಸೇನಾ ಮುಖ್ಯಸ್ಥ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಲೆ.ಬಿಪಿನ್ ರಾವತ್ ಅವರು 1978ರಲ್ಲಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದು, ಇಲೆವೆನ್ ಗೂರ್ಖಾ ರೈಫಲ್ಸ್ ನ ಐದನೇ ಬೆಟಾಲಿಯನ್ ಗೆ ನೇಮಕವಾಗಿದ್ದರು. ಇಲ್ಲಿ ತಮ್ಮ ಅತ್ಯುತ್ತಮ ಸೇವೆಗಾಗಿ ‘ಸ್ವಾರ್ಡ್ ಆಫ್ ಹಾನರ್’ ಪ್ರಶಸ್ತಿಯನ್ನು ಪಡೆದರು. ನಂತರ ಎತ್ತರ ಪರ್ವತ ಪ್ರದೇಶಗಲಲ್ಲಿ ಯುದ್ಧ ಮಾಡಿದ ಹಾಗೂ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಅಪಾರ ಅನುಭವವನ್ನು ಇವರು ಹೊಂದಿದ್ದಾರೆ. ಪೂರ್ವ ಭಾಗದ ಗಡಿ ಪ್ರದೇಶಗಳಲ್ಲಿ ಕಾಲ್ ದಳ ಸೇನಾ ತಂಡವನ್ನು ಮುನ್ನಡೆಸಿ, ನಂತರ ಕಣಿವೆ ರಾಜ್ಯ ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ ಹಾಗೂ ಕಾಲ್ ದಳ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅನುಭವವನ್ನೂ ಹೊಂದಿದ್ದಾರೆ. ಪೂರ್ವ ಭಾಗದ ಸೇನೆ ಮುಖ್ಯ ಕಚೇರಿಯಲ್ಲಿ ಮೇಜರ್ ಜೆನರಲ್ ಆಗಿದ್ದರು.

bs-dhanoa-lf

ಭಾರತೀಯ ವಾಯು ಸೇನೆಯ ನೂತನ ಮುಖ್ಯಸ್ಥ ಏರ್ ಮಾರ್ಷಲ್ ಬಿರೇಂದರ್ ಸಿಂಗ್ ಧನೊವಾ

ಇನ್ನು ವಾಯು ಸೇನೆ ಮುಖ್ಯಸ್ಥರಾಗಿ ನೇಮಕವಾಗಿರುವ 59 ವರ್ಷದ ಏರ್ ಮಾರ್ಷಲ್ ಧನೊವಾ ಅವರ ಬಗ್ಗೆ ತಿಳಿಯೋದಾದರೆ, ಇವರು ಕಾರ್ಗಿಲ್ ಯುದ್ಧದಲ್ಲಿ ಫೈಟರ್ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದಾರೆ. 1999 ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಹಾರಾಟ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆ ಯುದ್ಧ ಸಂದರ್ಭದಲ್ಲಿ ಧನೊವಾ ಅವರು ಹಲವು ಬಾರಿ ರಾತ್ರಿ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಯನ್ನು ಮುನ್ನಡೆಸಿದ್ದರು. ಇವರು ವಾಯು ಸೇನೆಯ ಮುಖ್ಯಸ್ಥರಾಗಿ ಮುಂದಿನ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುವ ನಿರೀಕ್ಷೆ ಇದೆ.

ಸೇನಾ ಮುಖ್ಯಸ್ಥರ ಆಯ್ಕೆ ಆಗುತ್ತಿದ್ದಂತೆ ಈ ಬಗ್ಗೆ ರಾಜಕೀಯ ತಿಕ್ಕಾಟ ಶುರುವಾಗಿದೆ. ಸೇನಾ ಮುಖ್ಯಸ್ಥರ ಆಯ್ಕೆಯಲ್ಲಿ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿವೆ. ವಾಯು ಸೇನಾ ಮುಖ್ಯಸ್ಥರಾದ ಬಿ.ಎಸ್ ಧನೊವಾ ಅವರು ಉಪ ಮುಖ್ಯಸ್ಥರಾಗಿದ್ದು, ಸೇವಾ ಹಿರಿತನದ ಆಧಾರದ ಮೇಲೆ ಈಗ ಮುಖ್ಯಸ್ಥ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಆದರೆ, ಭೂ ಸೇನಾ ಮುಖ್ಯಸ್ಥ ಸ್ಥಾನಕ್ಕೆ ಇಬ್ಬರು ಹಿರಿಯ ಸೇನಾಧಿಕಾರಿಗಳ ಬದಲಿಗೆ ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಿರುವುದು ಈಗ ರಾಜಕೀಯ ಚರ್ಚೆಗೆ ಹೊಸ ವಸ್ತುವಾಗಿದೆ.

ಬಿಪಿನ್ ರಾವತ್ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಭಾರತೀಯ ಭೂ ಸೇನೆಯ ಉಪ ಮುಖ್ಯಸ್ಥ ಸ್ಥಾನಕ್ಕೆ ನೇಮಕವಾಗಿದ್ದರು. ಈಗ ತಮ್ಮ ಹಿರಿಯ ಅಧಿಕಾರಿಗಳಾದ ಪೂರ್ವ ಕಮಾಂಡ್ ವಿಭಾಗದ ಮುಖ್ಯಸ್ಥ ಲೆ.ಜೆನರಲ್ ಪ್ರವೀಣ್ ಬಕ್ಷಿ ಹಾಗೂ ದಕ್ಷಿಣ ಸೇನಾ ಕಮಾಂಡ್ ವಿಭಾಗದ ಮುಖ್ಯಸ್ಥ ಲೆ.ಜೆನೆರಲ್ ಪಿ.ಎಂ.ಹರೀಜ್ ಅವರ ಬದಲಿಗೆ ಬಿಪಿನ್ ರಾವತ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಿರುವುದಕ್ಕೆ ವಿರೋಧ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತಿವೆ. ಲೆ.ಜೆ. ಬಕ್ಷಿ ಅವರು 1977ರ ಡಿಸೆಂಬರ್ ನಲ್ಲಿ ಹಾಗೂ ಲೆ.ಜೆ. ಹರೀಜ್ 1978 ರ ಜೂನ್ ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಈ ಇಬ್ಬರಿಗಿಂತ ಬಿಪಿನ್ ರಾವತ್ ವಿವಿಧ ಸೇನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ, ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಷಯದಲ್ಲಿ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಬಿಟ್ಟದ್ದು, ಸರ್ಕಾರಕ್ಕೆ ಯಾರು ಸೂಕ್ತ ಎನಿಸುತ್ತದೋ ಅವರನ್ನು ಆಯ್ಕೆ ಮಾಡುವ ಅವಕಾಶವಿದೆ. ಆದರೂ ಇಷ್ಟು ದಿನಗಳ ಕಾಲ ಸೇವಾ ಹಿರಿತನದ ಆಧಾರದ ಮೇಲೆ ಸೇನಾ ಮುಖ್ಯಸ್ಥರ ನೇಮಕವಾಗುತ್ತಿದ್ದರಿಂದ ಈಗ ಪ್ರತಿಪಕ್ಷಗಳು ಈ ವಿಚಾರವನ್ನು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿವೆ.

Leave a Reply