ದಾಖಲೆಯ ತ್ರಿಶತಕ ಬಾರಿಸಿದ ಕರುಣ್ ನಾಯರ್, ಚೆನ್ನೈನಲ್ಲಿ ಆಂಗ್ಲರ ವಿರುದ್ಧ ಕನ್ನಡಿಗರ ದರ್ಬಾರ್

ಡಿಜಿಟಲ್ ಕನ್ನಡ ಟೀಮ್:

ಟೆಸ್ಟ್ ಕ್ರಿಕೆಟ್ ನಲ್ಲಿ ಇನಿಂಗ್ಸ್ ಒಂದರಲ್ಲಿ 300 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ… ಟೆಸ್ಟ್ ಕ್ರಿಕೆಟ್ ನ ಮೊದಲ ಶತಕದಲ್ಲಿ ತ್ರಿಶತಕ ಗಡಿ ಮುಟ್ಟಿದ ಭಾರತದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಬ್ಯಾಟ್ಸ್ ಮನ್… ಇವು ಚೆನ್ನೈನ ಎಂ.ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ (ಅಜೇಯ 303) ಬರೆದ ದಾಖಲೆಗಳು.

ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ ಗಳಿಸಿದ್ದ 477 ರನ್ ಗಳಿಗೆ ಪ್ರತಿಯಾಗಿ ಭಾರತ 7 ವಿಕೆಟ್ ಕಳೆದುಕೊಂಡು 759 ರನ್ ದಾಖಲಿಸಿದೆ. ಆ ಮೂಲಕ ಇಂಗ್ಲೆಂಡ್ ವಿರುದ್ಧ 282 ರನ್ ಗಳ ಬೃಹತ್ ಮುನ್ನಡೆ ಪಡೆದಿದೆ. ದಿನದಾಟ ಮುಕ್ತಾಯಕ್ಕೆ ಎರಡನೇ ಇನಿಂಗ್ಸ್ ಆರಂಭವಿಸಿರುವ ಪ್ರವಾಸಿ ಆಂಗ್ಲರ ಪಡೆ ವಿಕೆಟ್ ನಷ್ಟವಿಲ್ಲದೆ 12 ರನ್ ದಾಖಲಿಸಿದೆ. ಪಂದ್ಯದಲ್ಲಿ ಅಂತಿಮ ದಿನದಾಟ ಬಾಕಿ ಉಳಿದಿದ್ದು, ಭಾರತದ ಸ್ಪಿನ್ ಬಲೆಯಿಂದ ಆಂಗ್ಲ ಬ್ಯಾಟ್ಸ್ ಮನ್ ಗಳು ಬೀಳುತ್ತಾರೋ ಅಥವಾ ತಪ್ಪಿಸಿಕೊಂಡು ಪಂದ್ಯದಲ್ಲಿ ಸೋಲಿನಿಂದ ಪಾರಾಗುತ್ತಾರೋ ಕಾದು ನೋಡಬೇಕು.

ಅಂದಹಾಗೆ ಈ ಪಂದ್ಯದಲ್ಲಿ ಭಾರತ ಗಳಿಸಿರುವ 759 ರನ್ ಗಳು ಈವರೆಗು ಭಾರತ ತಂಡ ಟೆಸ್ಟ್ ಕ್ರಿಕೆಟ್ ಇನಿಂಗ್ಸ್ ಒಂದರಲ್ಲಿ ಗಳಿಸಿರುವ ಗರಿಷ್ಠ ಮೊತ್ತವೂ ಆಗಿದೆ. ಈ ಹಿಂದೆ 2009ರಲ್ಲಿ ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ 726ಕ್ಕೆ9 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು, ಗರಿಷ್ಠ ಸಾಧನೆಯಾಗಿತ್ತು.

ಇವಿಷ್ಟೂ ತಂಡ ಪಂದ್ಯದ ಚಿತ್ರಣವಾಯ್ತು. ಇನ್ನು ಪಂದ್ಯದಲ್ಲಿ ಸ್ಟಾರ್ ಆಗಿ ಮಿಂಚಿದ ಕರುಣ್ ಆಟದ ಬಗ್ಗೆ ಹೇಳೋದಾದ್ರೆ ಇದೊಂದು ಮಾಸ್ಟರ್ ಕ್ಲಾಸ್ ಪ್ರದರ್ಶನ ಎಂದೇ ಪರಿಗಣಿಸಬಹುದು. ಕಾರಣ, ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಸುಲಭದ ಮಾತಲ್ಲ. ಕಾರಣ ವಿಶ್ವ ಶ್ರೇಷ್ಠ ಆಟಗಾರರು ಬ್ಯಾಂಟಿಂಗ್ ಪಡೆಯಲ್ಲಿ ದಂಡಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಂತಿತ್ತು ಕರಣ್ ನಾಯರ್ ಅವರ ಬ್ಯಾಟಿಂಗ್ ಪ್ರದರ್ಶನ.

ಕರುಣ್ ಪಾಲಿಗೆ ಇದು ಮೂರನೇ ಟೆಸ್ಟ್ ಪಂದ್ಯ. ಒಂದು ಲೆಕ್ಕದಲ್ಲಿ ಹೋಲಿಸಿದರೆ, ಕರುಣ್ ಸದ್ಯ ತಂಡದಲ್ಲಿರುವ ಹೊಸ ಮುಖ. ತಮ್ಮ ಪದಾರ್ಪಣೆಯ ಪಂದ್ಯದಲ್ಲಿ 4 ರನ್ ಇರುವಾಗ ದುರಾದೃಷ್ಟಕರ ರೀತಿಯಲ್ಲಿ ರನೌಟ್ ಆಗಿ ನಿರಾಸೆ ಅನುಭವಿಸಬೇಕಾಯಿತು. ಇನ್ನು ಎರಡನೇ ಪಂದ್ಯದಲ್ಲಿ 13 ರನ್ ಗಳಿಗೆ ಔಟಾಗಿ ಮತ್ತದೇ ನಿರಾಸೆ ಅನುಭವಿಸಿದರು. ಈ ಸರಣಿಯಲ್ಲಿ ಈ ಪಂದ್ಯ ಕಡೇಯದಾಗಿತ್ತು. ಮುಂಬರು ಆಸ್ಟ್ರೆಲಿಯಾ ವಿರುದ್ಧದ ಸರಣಿಗೆ ಮತ್ತೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಪರಿಸ್ಥಿತಿ ಇತ್ತು. ಇಂತಹ ಒತ್ತಡದೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿದ ಕರುಣ್ ಮುಂದೆ ಮತ್ತೊಂದು ಸವಾಲು ಎದುರಾಗಿತ್ತು. ಅದೇನೆಂದರೆ ಇಂಗ್ಲೆಂಡ್ ನ ಭಾರಿ ಮೊತ್ತವನ್ನು ಹಿಂದಿಕ್ಕಿ ತಂಡ ದೊಡ್ಡ ಮೊತ್ತ ದಾಖಲಿಸುವಂತೆ ಮಾಡುವುದು. ಇಂತಹ ಸಂದರ್ಭದಲ್ಲಿ ಮತ್ತೊಬ್ಬ ಕನ್ನಡಿಗ ಕೆ.ಎಲ್.ರಾಹುಲ್ ಜತೆ ಇನಿಂಗ್ಸ್ ಕಟ್ಟಿದ ಕರುಣ್ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದರು.

ಕರುಣ್ ಈ ಇನಿಂಗ್ಸ್ ನಲ್ಲಿ ತೋರಿದ ಪ್ರದರ್ಶನ ಆತನ ಬ್ಯಾಟಿಂಗ್ ಪ್ರಬುದ್ಧತೆಗೆ ಸಾಕ್ಷಿಯಾಗಿತ್ತು. ಕವರ್ ಡ್ರೈವ್, ಕಟ್ ಶಾಟ್, ಸ್ವೀಪ್, ರಿವರ್ಸ್ ಸ್ವೀಪ್ ಹೀಗೆ ವೈವಿಧ್ಯಮಯ ಹೊಡೆತಗಳನ್ನು ಲೀಲಾಜಾಲವಾಗಿ ಪ್ರಯೋಗಿಸಿದ ಕರುಣ್ ನಾಯರ್ ಎಲ್ಲರ ಮನ ಗೆದ್ದರು. ಹಂತ ಹಂತವಾಗಿ ಶತಕ, ದ್ವಿಶತಕ ದಾಖಲಿಸಿದರು. ತಂಡ ಮೊದಲ ಇನಿಂಗ್ಸ್ ಮುನ್ನಡೆ ಪಡೆದ ನಂತರ ಚುರುಕಿನ ಬ್ಯಾಟಿಂಗ್ ಗೆ ಮುಂದಾದ ಕರುಣ್, ಪ್ರತಿಯೊಂದು ಹಂತದಲ್ಲೂ ತಂಡಕ್ಕೆ ಅಗತ್ಯ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು. ಜತೆಗೆ ಕೆ.ಎಲ್ ರಾಹುಲ್ 199 ರನ್ ಗಳಿಗೆ ಔಟಾಗಿ ಮೊದಲ ದ್ವಿಶತಕ ಗಳಿಸುವ ಅವಕಾಶ ಕೈಚೆಲ್ಲಿದ ನಿರಾಸೆಯನ್ನು ಮರೆಸುವ ರೀತಿಯಲ್ಲಿ ಕರುಣ್ ಬ್ಯಾಟಿಂಗ್ ಮಾಡಿದರು.

ಈವರೆಗೂ ಭಾರತದ ಪರ ವಿರೇಂದ್ರ ಸೆಹ್ವಾಗ್ (2 ಬಾರಿ) ಮಾತ್ರ ಟೆಸ್ಟ್ ಕ್ರಿಕೆಟ್ ನಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಉಳಿದ್ದಿದ್ದರು. ಈಗ 300ರ ಕ್ಲಬ್ ಗೆ ಕರುಣ್ ಸೇರ್ಪಡೆಯಾಗಿದ್ದಾರೆ. ಭಾನುವಾರ ದಿನದಾಟ ಮುಕ್ತಾಯಕ್ಕೆ 71 ರನ್ ಗಳಿಸಿದ್ದ ಕರುಣ್, ಇಂದಿನ ಆಟದಲ್ಲಿ 245 ಎಸೆತಗಳನ್ನು ಎದುರಿಸಿ 232 ರನ್ ಬಾರಿಸಿದ್ದಾರೆ. 90ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿರುವ ಕರುಣ್ ನಾಯರ್ ತಂಡಕ್ಕಾಗಿ ಆಡಿರುವುದಕ್ಕೆ ಸಾಕ್ಷಿಯಾಗಿದೆ.

ಕರುಣ್ ನಾಯರ್ ಅವರ ಈವರೆಗಿನ ಕ್ರಿಕೆಟ್ ಹಾದಿ ಅತ್ಯುತ್ತಮವಾಗಿದೆ. 2001ರಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಕರುಣ್ ನಾಯರ್ ಗೆ ಸಚಿನ್ ಹಾಗೂ ರಾಹುಲ್ ದ್ರಾವಿಡ್ ಸ್ಫೂರ್ತಿ. ಅದರಲ್ಲೂ ರಾಹುಲ್ ದ್ರಾವಿಡ್ ಸಲಹೆ ಪಡೆಯುತ್ತ ಬೆಳೆದ ಕರುಣ್, ಐಪಿಎಲ್ ನಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲೇ ಹೆಚ್ಚು ಆಡಿದ್ದಾರೆ. ಇನ್ನು ಭಾರತ ಎ ತಂಡದ ನಾಯಕತ್ವ ವಹಿಸಿದಾಗಲೂ ದ್ರಾವಿಡ್ ಕೋಚ್ ಆಗಿದ್ದಾರೆ. ಒಂದು ರೀತಿಯಲ್ಲಿ ದ್ರಾವಿಡ್ ಅವರನ್ನೆ ಗುರುವಾಗಿ ಸ್ವೀಕರಿಸಿರುವ ಕರುಣ್ ನಾಯರ್, ಟೆಸ್ಟ್ ಕ್ರಿಕೆಟ್ ನ ಮೊದಲ ಶತಕದಲ್ಲೇ ದ್ರಾವಿಡ್ ಅವರ ಗರಿಷ್ಠ ಮೊತ್ತ 270 ರನ್ ಅನ್ನು ಹಿಂದಿಕ್ಕಿರುವುದು ನಿಜಕ್ಕೂ ಮಹತ್ವದ ಸಾಧನೆಯೇ ಸರಿ.

ದ್ರಾವಿಡ್ ನಿವೃತ್ತಿಯ ನಂತರ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಕರ್ನಾಟಕ ಆಟಗಾರರ ಕೊರತೆಯನ್ನು ಕೆ.ಎಲ್.ರಾಹುಲ್ ಹಾಗೂ ಕರುಣ್ ನಾಯರ್ ನೀಗಿಸಿದ್ದಾರೆ. ಈ ಪಂದ್ಯದಲ್ಲಿ ಈ ಇಬ್ಬರು ಬ್ಯಾಟ್ಸ್ ಮನ್ ಗಳು ಸ್ಟಾರ್ ಗಳಾಗಿ ಮಿಂಚಿರುವುದು ನಾವೆಲ್ಲರು ಹೆಮ್ಮೆ ಪಡುವಂತಹ ವಿಷಯ. ಮುಂದಿನ ದಿನಗಳಲ್ಲೂ ಈ ಇಬ್ಬರು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಮತ್ತಷ್ಟು ಮಿಂಚಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply