ಜೀವನವೆಂಬ ‘ಪ್ರೆಷರ್ ಕುಕ್ಕರ್’ ನಲ್ಲಿ ಸಣ್ಣ ಪುಟ್ಟ ಸಂತೋಷ ಕ್ಷಣಗಳನ್ನು ಅನುಭವಿಸದಿದ್ರೆ ಸೀದು ಹೋಗ್ತಿವಿ ಅಂತಿದೆ ವಿನಾಯಕ ಕೋಡ್ಸರ ಅವರ ಕಿರುಚಿತ್ರ

ಡಿಜಿಟಲ್ ಕನ್ನಡ ಟೀಮ್:

ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಮ್ಮ ಜೀವನದಲ್ಲಿ ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾಂತ್ರಿಕ ಜೀವನದ ಒತ್ತಡದಲ್ಲಿ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಮರೆತರೆ ಎಂತಹ ದೊಡ್ಡ ನಷ್ಟ ಎದುರಾಗಬಹುದು ಎಂಬುದನ್ನು ಚೊಕ್ಕವಾಗಿ ವಿವರಿಸುತ್ತಿದೆ ವಿನಾಯಕ ಕೋಡ್ಸರ ಅವರ ‘ಪ್ರೆಷರ್ ಕುಕ್ಕರ್’ ಕಿರು ಚಿತ್ರ.

ಪತ್ರಕರ್ತ, ಬರಹಗಾರರಾಗಿರುವ ವಿನಾಯಕ ಅವರು ನಿರ್ದೇಶಿಸಿರುವ, ಕೆ2 ಪ್ರೋಡಕ್ಷನ್ ಬೆಂಗಳೂರು ಹಾಗೂ ಜ್ಞಾನ ವೃಕ್ಷ ಸಮೂಹ ಶಿಕ್ಷಣ ಸಂಸ್ಥೆಗಳು ಅರ್ಪಿಸುತ್ತಿರುವ ಈ ಕಿರು ಚಿತ್ರ ಡಿ.16 ರಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ವೀಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಕೋಟ್ಯಾಂತರ ವ್ಯವಹಾರದ ಬೆನ್ನತ್ತಿದ ವ್ಯಕ್ತಿಯೊಬ್ಬ ತನ್ನ ಸಂಸಾರದ ಜತೆಗಿನ ಸಣ್ಣ ಪುಟ್ಟ ಕ್ಷಣಗಳನ್ನು ನಿರ್ಲಕ್ಷಿಸುತ್ತಾ ಹೇಗೆ ಸಮಸ್ಯೆಗೆ ಸಿಲುಕುತ್ತಾನೆ. ಕೇವಲ ದುಡ್ಡು ಮಾಡುವುದನ್ನೇ ಯೋಚಿಸುತ್ತಾ ತಮ್ಮ ಕೈಯಲ್ಲಿರುವ ಅಮೂಲ್ಯ ಕ್ಷಣಗಳು ಹಾಗೂ ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಜೀವನ ಎಂಬ ಪ್ರೆಷರ್ ಕುಕ್ಕರಿನಲ್ಲಿ ಬೆಂದು ಸೀದು ಹೋಗುತ್ತಾರೆ ಎಂಬುದನ್ನು ಈ ಕಿರುಚಿತ್ರದಲ್ಲಿ ನಿರ್ದೇಶಕ ವಿನಾಯಕ ಅವರು ವಿವರಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ಕಿರುತೆರೆ ನಿರೂಪಕ ಚಂದನ್, ಕಿರುತೆರೆ ಧಾರಾವಾಹಿ ನಟಿ ರಾಧಿಕಾ ಅಚ್ಯುತರಾವ್, ಪತ್ರಕರ್ತ ನವೀನ್ ಸಾಗರ್, ಕೌಶಿಕ್, ಮಾಸ್ಟರ್ ಕುಶಾಲ್ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ಮೊದಲನೆಯ ಪ್ರಯತ್ನ ಇದಾಗಿದ್ದು, ಈ ಕಿರುಚಿತ್ರವನ್ನು ಇಲ್ಲಿ ನೋಡಬಹುದು.

Leave a Reply