ರಷ್ಯಾಕ್ಕೂ ಬಂತು ಪಾಕ್- ಚೀನಾ ಕಾರಿಡಾರಿಗೆ ಕೈಜೋಡಿಸುವ ತವಕ, ಹೆಚ್ಚುತ್ತಲೇ ಹೋಗುವುದೇ ಭಾರತದ ಆತಂಕ?

author-chaitanyaಪಾಕಿಸ್ತಾನವು ಉಗ್ರವಾದಿ ರಾಷ್ಟ್ರ ಹಾಗೂ ಇದೇ ಕಾರಣಕ್ಕೆ ಅದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸಬೇಕು ಎಂಬ ಭಾರತದ ಪ್ರಯತ್ನ ಜಾರಿಯಲ್ಲಿರುವಾಗಲೇ ಮಿತ್ರ ರಾಷ್ಟ್ರ ರಷ್ಯಾದಿಂದ ಪ್ರಹಾರವೊಂದು ಸಿಕ್ಕಿದೆ.

ಪಾಕಿಸ್ತಾನದ ಗ್ವಾದಾರ್ ಬಂದರಿನಿಂದ ಚೀನಾದ ಕ್ಸಿನಿಯಾಂಗಿಗೆ ತಲುಪಿಕೊಳ್ಳುವ ಆರ್ಥಿಕ ಕಾರಿಡಾರಿಗೆ ತನ್ನ ಬೆಂಬಲ ಘೋಷಿಸಿದೆ. ಈ ಚೀನಾ-ಪಾಕ್ ಆರ್ಥಿಕ ಹೆದ್ದಾರಿಯು (ಸಿಪಿಇಸಿ) ಭಾರತಕ್ಕೆ ಸಲ್ಲಬೇಕಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಸೀಳಿಕೊಂಡೇ ಹೋಗುತ್ತದೆ. ಹಾಗೆಂದೇ ಭಾರತ ಈ ಹಿಂದೆಯೂ ಪ್ರತಿರೋಧ ದಾಖಲಿಸಿತ್ತು. ಆದರೆ ಚೀನಾ ಸೊಪ್ಪು ಹಾಕಿರಲಿಲ್ಲ. ಇದೀಗ, ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ ರಷ್ಯಾ ಸಹ ಸಿಪಿಇಸಿಯಲ್ಲಿ ಪಾಲ್ಗೊಳ್ಳಲಿದೆ.

ಹಾಗೆ ನೋಡಿದರೆ ಇಂಥದೊಂದು ಸುಳಿವು ಈ ಹಿಂದೆಯೂ ಇತ್ತು. ಆದರೆ ರಷ್ಯಾ ಅಂಥ ಸುದ್ದಿಗಳನ್ನೆಲ್ಲ ಆಗಾಗ ತಳ್ಳಿಹಾಕುತ್ತ ಬಂದಿತ್ತು. ಗ್ವಾದಾರ್ ಬಂದರಿನ ಮಾರ್ಗವನ್ನು ರಷ್ಯಾ ಸಹ ಉಪಯೋಗಿಸಿಕೊಳ್ಳಬಹುದೇ ಎಂಬ ಬಗ್ಗೆ ಚಿಂತನೆಗಳಾಗಿವೆಯೇ ಹೊರತು ಆ ಯೋಜನೆಯಲ್ಲಿ ಭಾಗಿಯಾಗಿಲ್ಲ ಎಂಬ ಹೇಳಿಕೆಗಳು ಈ ಹಿಂದೆ ಬಂದಿದ್ದವು. ಈಗ ಪಾಕಿಸ್ತಾನಕ್ಕೆ ರಾಯಭಾರಿ ಆಗಿರುವ ಅಲೆಕ್ಸಿ ವೈ ದೆವೊದ್ ಪ್ರಕಾರ ರಷ್ಯಾ ಸಿಪಿಇಸಿಯನ್ನು ಬಲವಾಗಿ ಬೆಂಬಲಿಸುತ್ತದೆ. ಅಷ್ಟೇ ಅಲ್ಲ, ಈ ಕಾರಿಡಾರ್ ಅನ್ನು ತನ್ನ ಉದ್ದೇಶಿತ ಯುರೇಷಿಯನ್ ಆರ್ಥಿಕ ಕಾರಿಡಾರಿನೊಂದಿಗೆ ಬೆಸೆಯುವ ಚಿಂತನೆಯನ್ನು ಅದು ಪ್ರತಿಪಾದಿಸುತ್ತಿದೆ.

ಪಾಕಿಸ್ತಾನದೊಂದಿಗೆ ಚೀನಾ ಕೈಜೋಡಿಸಿರುವುದೇ ತಲೆನೋವಾಗಿರುವ ಈ ಸಂದರ್ಭದಲ್ಲಿ, ಪಾಕಿಸ್ತಾನದ ಒಳಗಿನ ಅಂತಾರಾಷ್ಟ್ರೀಯ ಯೋಜನೆಗೆ ರಷ್ಯಾ ಸಹ ಕೈಜೋಡಿಸಿರುವುದು ಭಾರತಕ್ಕೆ ಬಿದ್ದ ರಾಜತಾಂತ್ರಿಕ ಪ್ರಹಾರವೇ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸುವುದು ಎಂಬ ಕಲ್ಪನೆಯೇ ಇಲ್ಲಿ ಬುಡಮೇಲಾಗಿಬಿಡುತ್ತದೆ. ಅಲ್ಲದೇ ಜಾಗತಿಕ ರಾಜಕೀಯದಲ್ಲಿ ಪಾರಮ್ಯಕ್ಕೆ ಪೈಪೋಟಿ ನಡೆಯುತ್ತಿರುವಾಗ ಚೀನಾ-ರಷ್ಯಾ- ಪಾಕಿಸ್ತಾನಗಳು ಒಂದಾಗುವುದು ಏಷ್ಯ ರಾಜಕೀಯದಲ್ಲೂ ನಮಗಾಗುವ ಹಿನ್ನಡೆಯೇ.

ಸಾಂಪ್ರದಾಯಿಕ ಸ್ನೇಹಿತನಾಗಿದ್ದ ಭಾರತವನ್ನು ಬಿಟ್ಟು ಅದೇಕೆ ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸುವ ಹೆಜ್ಜೆ ಇಡುತ್ತಿದ್ದೀರಿ ಎಂಬುದಕ್ಕೆ ರಷ್ಯದ ಉತ್ತರ ಸಿದ್ಧವಿದೆ. ಈ ಹಿಂದೆ ಪಾಕಿಸ್ತಾನದೊಂದಿಗೆ ರಷ್ಯಾ ಜಂಟಿ ಸಮರಾಭ್ಯಾಸ ನಡೆಸಿದಾಗಲೇ ಈ ಪ್ರಶ್ನೆ ಎದುರಾಗಿತ್ತು. ಅದಕ್ಕೆ ರಷ್ಯಾ ನೀಡಿದ ಉತ್ತರ ಈ ಧಾಟಿಯಲ್ಲಿತ್ತು- ‘ಪಾಕಿಸ್ತಾನದೊಂದಿಗಿನ ಸಂಪರ್ಕವನ್ನು ಭಾರತದ ಹಿತಾಸಕ್ತಿ ವಿರುದ್ಧ ನಡೆ ಎಂದು ಅರ್ಥೈಸುವುದು ಸರಿಯಲ್ಲ. ಭಾರತದ ಜತೆಗಿನ ಸ್ನೇಹವನ್ನು ಕಳೆದುಕೊಳ್ಳುತ್ತಿಲ್ಲ. ಭಾರತವು ಅಮೆರಿಕದೊಂದಿಗಿನ ಮೈತ್ರಿಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವುದಕ್ಕೆ ರಷ್ಯಾ ಯಾವ ತಕರಾರನ್ನೂ ಮಾಡಿಲ್ಲ. ಹೀಗಿರುವಾಗ ಪಾಕಿಸ್ತಾನದೊಂದಿಗೆ ತೀರ ಕೆಳಮಟ್ಟದ ಚಟುವಟಿಕೆಗಳನ್ನಿಟ್ಟುಕೊಂಡ ಮಾತ್ರಕ್ಕೆ ಅದು ಭಾರತಕ್ಕೆ ಆಕ್ಷೇಪಾರ್ಹವಾಗಬಾರದು.’

ರಷ್ಯಾದ ಜಾಗದಲ್ಲಿ ನಿಂತು ಯೋಚಿಸಿದರೆ ಅದು ತನ್ನ ಹಿತಾಸಕ್ತಿಗೆ ಸರಿಯಾದುದನ್ನೇ ಮಾಡುತ್ತಿದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ರಷ್ಯಾಕ್ಕೆ ಪಾಕಿಸ್ತಾನದ ಮೇಲೆ ಪ್ರೀತಿ ಬಂದಿದೆ ಎಂದಲ್ಲ. ಆದರೆ ಅಮೆರಿಕವು ರೂಪಿಸಿರುವ ಜಾಗತಿಕ ವಾತಾವರಣವು ರಷ್ಯಾ ಇನ್ನೊಂದು ಧ್ರುವವನ್ನು ಅಪ್ಪಿಕೊಳ್ಳಲೇಬೇಕಾದ ಸ್ಥಿತಿ ನಿರ್ಮಿಸಿದೆ. ಸಧ್ಯಕ್ಕಿರುವ ಇನ್ನೊಂದು ಧ್ರುವವೇ ಚೀನಾ ಪಾಳೆಯ.

ಇಲ್ಲಿ ಅಮೆರಿಕದ ಕಿತಾಪತಿಗಳನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಸೊವಿಯತ್ ಯೂನಿಯನ್ ಸಿಡಿದಿರುವುದಕ್ಕಷ್ಟೇ ಸಂತೃಪ್ತವಾಗಿಲ್ಲವದು. ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳ ಜತೆ ರಷ್ಯಾ ಉತ್ತಮ ಸಂಬಂಧವಿರಿಸಿಕೊಳ್ಳುವುದಕ್ಕೆ ಅಡ್ಡಲಾಗಿ ಏನೆಲ್ಲ ಮಾಡಬೇಕೋ ಅವನ್ನೆಲ್ಲ ಮಾಡುತ್ತಿದೆ. ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಪಡೆಗಳನ್ನು ಬಳಸಿಕೊಂಡು ತನ್ನನ್ನು ನಿರಂತರ ಸುತ್ತುವರಿಯುತ್ತಿದೆ ಎಂಬುದು ರಷ್ಯಾಕ್ಕೆ ಅಮೆರಿಕದ ವಿರುದ್ಧ ಆಕ್ರೋಶ ಅತಿಯಾಗಲು ಕಾರಣ. ಪೊಲ್ಯಾಂಡಿನಲ್ಲಿ ನ್ಯಾಟೊ ಪಡೆಗಳನ್ನಿಟ್ಟು ರಷ್ಯಾದ ಹೊಸ್ತಿಲಲ್ಲೇ ಅಮೆರಿಕವು ಮಿಲಿಟರಿ ಸೊಕ್ಕು ತೋರಿದರೆ ಪುಟಿನ್ ಯಾಕಾದರೂ ಸಹಿಸಿಕೊಳ್ಳಬೇಕು? ರಷ್ಯಾದ ನೈಸರ್ಗಿಕ ಅನಿಲಕ್ಕೆ ದೊಡ್ಡ ಮಾರುಕಟ್ಟೆಯಾಗಿದ್ದ ಯುರೋಪ್ ಬಾಗಿಲನ್ನು ರಷ್ಯಾದೊಳಗೆ ಕ್ರಿಮಿಯಾ ವಿಲೀನದ ನೆಪವಿರಿಸಿಕೊಂಡು ಮುಚ್ಚಿಸಿದ್ದೂ ಅಮೆರಿಕವೇ. ಇವತ್ತಿಗೆ ಸಿರಿಯಾದ ಪ್ರಮುಖ ನಗರ ಅಲೆಪ್ಪೊ ಐಎಸ್ಐಎಸ್ ಉಗ್ರರಿಂದ ಮುಕ್ತವಾಗುತ್ತಿದ್ದರೆ ಅದಕ್ಕೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಕಾರಣವೇ ಹೊರತು ಅಮೆರಿಕದ ಪೌರೋಹಿತ್ಯವಲ್ಲ. ಅಷ್ಟಾಗಿಯೂ ಸಿರಿಯಾದಿಂದ ಅಸಾದ್’ನನ್ನು ಕೆಳಗಿಳಿಸಬೇಕೆಂಬ ಉದ್ದೇಶಕ್ಕಾಗಿ ಪರೋಕ್ಷವಾಗಿ ಐಎಸ್ಐಎಸ್ ಕೈಯನ್ನೂ ಬಲಪಡಿಸುವುದಕ್ಕೆ ಹೇಸದ ಅಮೆರಿಕ, ಅಲ್ಲೂ ರಷ್ಯಾ ಕ್ರಮದ ವಿರುದ್ಧ ಜಗತ್ತನ್ನು ಎತ್ತಿಕಟ್ಟುತ್ತಿದೆ. ನಿಜ.. ಸಿರಿಯಾದಲ್ಲಿ ಎಲ್ಲರಿಗೂ ಅವರವರ ಹಿತಾಸಕ್ತಿಗಳಿವೆ. ಆದರೆ ಅಮೆರಿಕನ್ನರು ತಾವು ಸರಿಮಾಡುತ್ತೇವೆಂದು ಆಕ್ರಮಿಸಿದ ಯಾವ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಿದ್ದಾರೆ ಹೇಳಿ? ಸದ್ದಾಂನನ್ನು ಹೊಡೆದೆವೆಂದು ಮೀಸೆ ತಿರುವಿಕೊಂಡಿದ್ದೇ ಬಂತು. ಇರಾಕ್ ಇನ್ನೂ ಕೆಟ್ಟ ಸ್ಥಿತಿಗೆ ಜಾರಿದೆ.

ಹೀಗೆಲ್ಲ ಇದ್ದರೂ, ರಷ್ಯಾವನ್ನು ಮಾತ್ರ ಏನಕೇನ ವಿರೋಧಿಸುತ್ತಿದೆ ಅಮೆರಿಕ. ಅದೊಂದು ಅಹಮಿಕೆಯ ತಿಕ್ಕಾಟ. ಹಾಗೆಂದೇ ಅದು ಸಿಪಿಇಸಿ ಆಗಿರಬಹುದು, ದಕ್ಷಿಣ ಚೀನಾ ಸಮುದ್ರವಿರಬಹುದು.. ರಷ್ಯಾ ಸಹಜವಾಗಿಯೇ ಅಮೆರಿಕದ ವಿರುದ್ಧ ನೆಲೆಯಲ್ಲಿ ನಿಂತುಕೊಳ್ಳುತ್ತದೆ. ಅದು ಪಾಕಿಸ್ತಾನ ಪ್ರೀತಿಯೂ ಅಲ್ಲ, ಭಾರತ ದ್ವೇಷವೂ ಅಲ್ಲ.

ಇಂತಿಪ್ಪ ಜಾಗತಿಕ ರಾಜಕಾರಣದಲ್ಲಿ ಭಾರತಕ್ಕಿರುವ ಆಶಾಭಾವವೇನು? ಚೀನಾದ ವಿರುದ್ಧ ಕಟು ಧೋರಣೆ, ರಷ್ಯಾದ ಜತೆಗೆ ಸೌಮ್ಯಭಾವ ತೋರ್ಪಡಿಸುತ್ತಿರುವ ಡೊನಾಲ್ಡ್ ಟ್ರಂಪ್ ಜನವರಿಯಿಂದ ಅಮೆರಿಕದ ಅಧ್ಯಕ್ಷ ಪದವಿ ವಹಿಸಿಕೊಂಡ ನಂತರ ಇಡಲಿರುವ ಹೆಜ್ಜೆಗಳು ನಿರ್ಣಾಯಕವಾಗುತ್ತವೆ. ರಷ್ಯಾಕ್ಕೆ ಅಮೆರಿಕವು ಒಡ್ಡಿರುವ ಅಸುರಕ್ಷತಾಭಾವವನ್ನು ತುಸುವೇ ಸಡಿಲವಾಗುವಂತೆ ನೋಡಿಕೊಂಡರೂ ಸಮೀಕರಣಗಳು ಬದಲಾದಾವು. ಐಎಸ್ಐಎಸ್ ವಿಷಯದಲ್ಲಿ ರಷ್ಯಾದಷ್ಟೇ ಕಠೋರ ನಿಲುವು ಹೊಂದಿರುವ ಟ್ರಂಪ್ ಭವಿಷ್ಯದಲ್ಲಿ ಪುಟಿನ್ ಜತೆ ನಡೆದುಕೊಳ್ಳಲಿರುವ ರೀತಿ-ನೀತಿಗಳು ಏಷ್ಯ ರಾಜಕೀಯವನ್ನು ಬಹುವಾಗಿ ಪ್ರಭಾವಿಸಲಿವೆ.

ಹೋಪ್ ಫಾರ್ ದಿ ಬೆಸ್ಟ್.

Leave a Reply