ಏನಿವು ರಿಯಲ್ ಮತ್ತು ನಾಮಿನಲ್ ಹಣಗಳು?

authors-rangaswamyದೇಶದಿಂದ ದೇಶಕ್ಕೆ ಹಣದ ಹೆಸರು ಮೌಲ್ಯ ಬದಲಾಗುತ್ತೆ ಅದು ಆಯಾ ದೇಶದ ಆರ್ಥಿಕ ಸ್ಥಿತಿಗತಿ ಅವಲಂಬಿಸುರುತ್ತೆ ಇದೆಲ್ಲಾ ಸರಿ. ದೇಶದೊಳಗೆ ನಾಮಿನಲ್ ಮನಿ ಮತ್ತು ರಿಯಲ್ ಮನಿ ಎನ್ನುವುದು ಇದೆಯೇ? ಹೌದಾದರೆ ನಾಮಿನಲ್ ಮನಿ ಮತ್ತು ರಿಯಲ್ ಮನಿ ಎಂದರೇನು? ಮತ್ತು ಇವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ತಿಳಿಸಿ ಎಂದು ಮಿಂಚಂಚೆ ಮಾಡಿ ಕೇಳಿದ್ದು ದಾವಣಗೆರೆಯಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಪ್ರಶಾಂತ್.

ನಮ್ಮ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿದ ಹಣ ಅದು ನೋಟು ಇರಬಹದು ಅಥವಾ ನಾಣ್ಯವಿರಬಹುದು ಅದರ ಮೇಲೆ ಮುದ್ರಣವಾದ ಸಂಖ್ಯೆ ಆ ನೋಟಿನ ಅಥವಾ ನಾಣ್ಯದ  ಮೌಲ್ಯ ಅಥವಾ ಬೆಲೆಯನ್ನು ಸೂಚಿಸುತ್ತದೆ. ಉದಾಹರಣೆಗೆ ನೋಟಿನ ಮೇಲೆ ಹತ್ತು ರೂಪಾಯಿ ಎಂದು ಬರೆದಿದ್ದರೆ ಅದು ಆ ನೋಟಿನ ಬೆಲೆ ಸೂಚಿಸುತ್ತದೆ. ಇದನ್ನ ಜನಸಾಮಾನ್ಯ ನಾಮಿನಲ್ ಹಣ ಅಥವಾ ಮನಿ ಎಂದು ವ್ಯಾಖ್ಯಾನಿಸುತ್ತಾನೆ. ಅದೇ ಹತ್ತು ರೂಪಾಯಿ ನೋಟು ಯಾವ ವಸ್ತುವ ಕೊಳ್ಳುವ ಶಕ್ತಿ ಹೊಂದಿದೆ ಅದನ್ನು ಅವಲಂಬಿಸಿ ಅದನ್ನು ರಿಯಲ್ ಮನಿ ಎನ್ನುತ್ತಾರೆ.  ಒಂದು ಸಣ್ಣ ಉದಾಹರಣೆ ನಾಮಿನಲ್ ಮನಿ ಮತ್ತು ರಿಯಲ್ ಮನಿ ಎಂದರೇನು ಎಂದು ತಿಳಿದು ಕೊಳ್ಳಲು ಸಹಾಯ ಮಾಡುತ್ತದೆ.

hana class

2000 ಇಸವಿಯಲ್ಲಿ ಮುದ್ರಿತವಾದ ಹತ್ತು ರೂಪಾಯಿ ನೋಟಿನ ಮುಖ ಬೆಲೆ 2016 ರಲ್ಲಿ ಕೂಡ ಹತ್ತು ರೂಪಾಯಿ ಇದರಲ್ಲಿ ಯಾವ ಸಂಶಯವೂ ಇಲ್ಲ ಇದು ನಾಮಿನಲ್ ಮನಿ. 2000 ಇಸವಿಯಲ್ಲಿ ಹತ್ತು ರುಪಾಯಿಗೆ ಒಂದು ಕೆಜಿ ಅಕ್ಕಿ ಸಿಗುತಿತ್ತು ಎಂದು ಕೊಳ್ಳಿ, ಅದೇ ಅಕ್ಕಿಯ ಕೊಳ್ಳಲು 2016 ರಲ್ಲಿ ಇಪ್ಪತ್ತು ರೂಪಾಯಿ ತೆರಬೇಕು. ಅಂದರೆ ಹತ್ತು ರುಪಾಯಿಗೆ ಇಂದು ಸಿಗುವುದು ಅರ್ಧ ಕೆಜಿ ಅಕ್ಕಿ ಮಾತ್ರ ಇದು ರಿಯಲ್ ಮನಿ. ಇದನ್ನ ಹೀಗೆ ಸಮೀಕರಿಸಬಹುದು, 2000 ರದ ಹತ್ತು ರೂಪಾಯಿಯ ರಿಯಲ್ ಮನಿ ಪವರ್ 5 ರೂಪಾಯಿ. ಇನ್ನು ಸರಳವಾಗಿ ಹೇಳಬೇಕಾದರೆ ಹಣದ ಕೊಳ್ಳುವ ಶಕ್ತಿ ರಿಯಲ್ ಮನಿ ಎನ್ನಿಸಿಕೊಳ್ಳುತ್ತದೆ. ಮುದ್ರಿದ ಮೌಲ್ಯ ನಾಮಿನಲ್ ಮನಿ ಎನಿಸಿಕೊಳ್ಳುತ್ತದೆ.

ಸರಿ, ಹಾಗಾದರೆ ಇದು ವೇಳೆ ಆಧಾರಿತ ಎನ್ನುವ ನಿರ್ಧಾರಕ್ಕೆ ನೀವು ಬರುವುದಕ್ಕೆ ಮುಂಚೆ ಸ್ವಲ್ಪ ನಿಧಾನಿಸಿ. ಭಾರತದಂತ ದೇಶದಲ್ಲಿ ಇದು ವೇಳೆ ಆಧಾರಿತ ಆಗ ಬೇಕಿಲ್ಲ ಸ್ಥಳ ಆಧಾರಿತ ಕೂಡ ಆಗಬಹದು. ಹೇಗೆ ಎನ್ನುವುದನ್ನ ಒಂದು ಉದಾಹರಣೆ ಸ್ಪಷ್ಟವಾಗಿಸುತ್ತೆ.  ಬೆಂಗಳೂರು ನಗರದಲ್ಲಿ ವಾಸಿಸುವ ಜನ ಒಂದು ಎಳನೀರು ಬೇಕೆಂದರೆ 30 ರೂಪಾಯಿ ತೆರಬೇಕು. ನೀವು ತಿಪಟೂರಿನ ರಸ್ತೆಯಲ್ಲಿ ಅದೇ ಎಳನೀರನ್ನ 20 ರುಪಾಯಿಗೆ ಪಡೆಯಬಹದು. ಹೀಗೆ ಒಂದಲ್ಲ ಹಲವು ವಸ್ತುಗಳ ಬೆಲೆ ಬದಲಾಗುತ್ತದೆ. ನಮ್ಮ ಬಳಿ ಇರುವ ನೋಟಿನ ಖರೀದಿ ಮೌಲ್ಯ ರಿಯಲ್ ಮನಿ ಸೂಚಿಸುತ್ತದೆ.

ಅರ್ಥ ಇಷ್ಟೇ ಮೌಲ್ಯವಿರುವುದು ವಸ್ತುವಿಗೆ. ಹಣ ವಸ್ತುವಿನ ಮೌಲ್ಯ ಅಳೆಯುವ ಒಂದು ಸಾಧನ ಮಾತ್ರ. ನಾಮಿನಲ್, ರಿಯಲ್ ಇವೆಲ್ಲಾ ಹೀಗೆ ನಮ್ಮ ಗ್ರಹಿಕೆಗೆ, ಲೆಕ್ಕಕ್ಕೆ ನಾವು ಮಾಡಿಕೊಂಡಿರುವ ಸಾಧನಗಳು.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply