ಮಹಾರಾಷ್ಟ್ರ, ಗುಜರಾತ್ ನಂತರ ಚಂಡೀಗಢ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ, ಹಳ್ಳ ಹಿಡಿಯುವ ಹಾದಿಯಲ್ಲಿ ಮುಂದುವರಿದ ಕಾಂಗ್ರೆಸ್

ಡಿಜಿಟಲ್ ಕನ್ನಡ ಟೀಮ್:

ಆಡಳಿತ ವಿರೋಧಿ ಅಲೆ ಎದ್ದಿರುವ ಪಂಜಾಬ್ ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು ಇಲ್ಲಿ ಬಿಜೆಪಿ ಮತ್ತು ಅಕಾಲಿದಳ ಮೈತ್ರಿಗೆ ಹಿನ್ನಡೆಯಾಗಲಿದೆ ಎಂಬ ಮಾತು ವ್ಯಾಪಕವಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ನಡೆದ ಚಂಡೀಗಢ ಪಾಲಿಕೆ ಚುನಾವಣೆ ಫಲಿತಾಂಶ ಈ ಮಾತುಗಳನ್ನು ಸುಳ್ಳಾಗಿಸಿವೆ. ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಅದರೊಂದಿಗೆ ಅಧಿಕಾರ ಉಳಿಸಿಕೊಳ್ಳುವ ಬಿಜೆಪಿಯ ಪ್ರಯತ್ನ ಜೀವಂತವಾಗಿದೆ ಎಂಬುದನ್ನು ಸಾರಿದೆ.

ಹೌದು, ಇತ್ತೀಚೆಗೆ ನಡೆದ ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯೂ ಭರ್ಜರಿ ಗೆಲುವು ದಾಖಲಿಸಿದೆ. 26 ವಾರ್ಡುಗಳಲ್ಲಿ ನಡೆದ ಚುನಾವಣೆಯಲ್ಲಿ 67 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 122 ಸ್ಪರ್ಧಿಗಳು ಸ್ಪರ್ಧಿಸಿದ್ದರು. 26 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ ಬಿಜೆಪಿ 20 ರಲ್ಲಿ ಭರ್ಜರಿ ಜಯ ಸಾಧಿಸಿರದೆ ಅಕಾಲಿ ದಳ 1 ಸೀಟು ಸಂಪಾದಿಸಿದೆ. ಆ ಮೂಲಕ ಬಿಜೆಪಿ ಮತ್ತು ಅಕಾಲಿ ಮೈತ್ರಿಯು ಒಟ್ಟು 21 ಸ್ಥಾನಗಳನ್ನು ತಮ್ಮ ತೆಕ್ಕೆಗೆ ಬಾಚಿಕೊಂಡಿವೆ. ಉಳಿದಂತೆ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಮಾತ್ರ ಪಡೆದು ಇಲ್ಲೂ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಮತ್ತೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ (6) ಮತ್ತು ಅಕಾಲಿ ದಳ (6) ಜಂಟಿಯಾಗಿ 12 ಕ್ಷೇತ್ರಗಳನ್ನು ಪಡೆದಿದ್ದರೆ, ಕಾಂಗ್ರೆಸ್ 11 ಸ್ಥಾನಗಳನ್ನು ಸಂಪಾದಿಸಿತ್ತು. ಇನ್ನು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ ಎರಡು ಸೀಟುಗಳನ್ನು ಗೆದ್ದುಕೊಂಡಿದ್ದವು. ಈ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದೆ.

ಚಂಡೀಗಢ ಪಂಜಾಬ್ ರಾಜಧಾನಿಯಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಫಲಿತಾಂಶ ಬಿಜೆಪಿ ಪಾಳೆಯದಲ್ಲಿನ ಉತ್ಸಾಹ ಇಮ್ಮಡಿಗೊಳಿಸಿದೆ ಅಂತಲೇ ಬಣ್ಣಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿ ಸುಮಾರು ತಿಂಗಳು ಕಳೆದ ನಂತರ ಈ ಚುನಾವಣೆ ನಡೆಸಿದ್ದು, ಗೆಲವು ಸಾಧಿಸಿದ ನಂತರ ಬಿಜೆಪಿ ಮುಖಂಡರು ಕೇಂದ್ರದ ಸರ್ಕಾರದ ನಿರ್ಧಾರ ಚುನಾವಣೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ವಿಶ್ಲೇಷಿಸುತ್ತಿದ್ದಾರೆ..

ಈ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಆದರೆ, ಪಕ್ಷದ ಕೆಲವು ಕಾರ್ಯಕರ್ತರು ಪಕ್ಷೇತರರಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದ್ದು, ಇಲ್ಲಿ ತ್ರಿಕೋನ ಸ್ಪರ್ಧೆಯನ್ನು ಎದುರು ನೋಡಲಾಗುತ್ತಿದೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಸ್ಪರ್ಧೆ ಈ ಸಮೀಕರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

Leave a Reply