ಸಿ.ಟಿ ರವಿ- ಸ್ಮೃತಿ ಇರಾನಿ ಟ್ವಿಟರ್ ಸಂವಾದ ಹೇಳುತ್ತಿರುವ ಕನ್ನಡ ಜಾಗೃತಿಯ ಪಾಠ

ಡಿಜಿಟಲ್ ಕನ್ನಡ ಟೀಮ್:

ಪದೇ ಪದೇ ಕೇಂದ್ರ ಸರ್ಕಾರ ಕನ್ನಡವನ್ನು ಕಡೆಗಣನೆ ಮಾಡುತ್ತಿದ್ದುದಕ್ಕೆ ಈಗ ಬಿಜೆಪಿ ಶಾಸಕರದ್ದೇ ವ್ಯಂಗ್ಯದ ಚಾಟಿ ಕೆಲಸ ಮಾಡಿದೆ. ಕನ್ನಡವನ್ನು ಕಡೆಗಣಿಸಿದ್ದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರಿಗೆ ‘ಕರ್ನಾಟಕ ಭಾರತದ ಒಂದು ರಾಜ್ಯ’ ಎಂಬ ಅಂಶವನ್ನು ನೆನಪಿಸಿದ್ದಾರೆ ಬಿಜೆಪಿ ನಾಯಕ ಸಿ.ಟಿ ರವಿ.

ಕೇಂದ್ರದಿಂದ ಕನ್ನಡದ ಅವಗಣನೆಗೆ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ.  ಏನೆಂದರೆ, ಕೇಂದ್ರ ಜವಳಿ ಸಚಿವಾಲಯವು ನಿನ್ನೆ ‘ಇ-ಧಗ’ ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಯಾಗಿದೆ. ನೇಕಾರರು ನೂಲುಗಳ ಸಂಗ್ರಹಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸುಲಭವಾಗಿ ಮಾಹಿತಿ ರವಾನೆ ಮಾಡಲು ಸಚಿವಾಲಯ ಈ ಆ್ಯಪ್ ಅನ್ನು ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ತಮಿಳು, ಬೆಂಗಾಲಿ, ಒರಿಯಾ, ಉರ್ದು ಮತ್ತು ಅಸ್ಸಾಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಪಟ್ಟಿಯಲ್ಲಿ ಕನ್ನಡವನ್ನು ಸೇರಿಸದೇ ಕಡೆಗಣಿಸಲಾಗಿತ್ತು.

ಜವಳಿ ಸಚಿವಾಲಯದ ಈ ನಿಲುವಿಗೆ ಟ್ವಿಟರ್ ನಲ್ಲೇ ಪ್ರತಿಕ್ರಿಯಿಸಿದ್ದ ಸಿ.ಟಿ.ರವಿ ವ್ಯಗ್ಯವಾಗಿಯೇ ಕರ್ನಾಟಕ ಭಾರತದ ಒಂದು ಭಾಗ ಎಂದು ಹೇಳುವ ಮೂಲಕ ಕನ್ನಡಿಗರಿಗಾಗಿರುವ ಬೇಸರವನ್ನು ಪ್ರತಿಫಲಿಸಿದ್ದರು.

‘ಶ್ರೀಮತಿ ಸ್ಮೃತಿ ಇರಾನಿ ಅವರೆ ಕರ್ನಾಟಕವು ಭಾರತದ ಒಂದು ಭಾಗ ಎಂಬುದನ್ನು ನಿಮಗೆ ನೆನಪಿಸಲು ಇಚ್ಛಿಸುತ್ತೇನೆ. ಆದಷ್ಟು ಬೇಗ ‘ಇ-ಧಗ’ ಆ್ಯಪ್ ಅನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡಿ. ಮುಂಚಿತವಾಗಿಯೇ ನಿಮಗೆ ಧನ್ಯವಾದ ಅರ್ಪಿಸುತ್ತೇನೆ…’ ಹೀಗೆ ಸಿ.ಟಿ ರವಿ ಅವರು ಕನ್ನಡದ ನಿರ್ಲಕ್ಷ್ಯದ ಬಗ್ಗೆ ಕೇಂದ್ರ ಸಚಿವರಿಗೆ ನೇರವಾಗಿ ಮನವರಿಕೆ ಮಾಡಿದ್ದಾರೆ. ಇದಕ್ಕೆ ಸ್ಮೃತಿ ಇರಾನಿ ‘ಈ ಕಾರ್ಯವನ್ನು ಮಾಡಲಿದ್ದೇವೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮಾಡಿದ್ದೆಲ್ಲವೂ ಸರಿ ಎಂಬಂತೆ ರಾಜ್ಯದ ಬಿಜೆಪಿ ನಾಯಕರು ಮುಗುಂ ಆಗುವುದು ಎಂದಿನ ಸ್ಥಿತಿಯಾಗಿತ್ತು. ಆದರೆ, ತಾರತ್ಯಮ ಧೋರಣೆಗಳಿಗೆ ಧ್ವನಿ ಎತ್ತಿದ್ದೇ ಆದರೆ ಅದಕ್ಕೆ ಬೆಲೆ ಸಿಗುತ್ತದೆ ಎಂಬುದನ್ನು ಈ ಪ್ರಕರಣ ನಿರೂಪಿಸಿದೆ.

Leave a Reply