ಅಲ್ಲಾಹೊ ಅಕ್ಬರ್ ಎಂದು ರಷ್ಯ ರಾಯಭಾರಿಗೆ ಗುಂಡಿಟ್ಟ ಟರ್ಕಿಗ, ಇದು ಅಟಾಟುರ್ಕ್ ನಿರ್ಮಿಸಹೊರಟಿದ್ದ ಧರ್ಮನಿರಪೇಕ್ಷ ಟರ್ಕಿಯ ಇಸ್ಲಾಮಿಕರಣದ ದುರಂತ ಸೋಜಿಗ

author-chaitanyaಸೋಮವಾರ ತಡರಾತ್ರಿ ಟರ್ಕಿಯ ಅಂಕಾರಾದಲ್ಲಿ ಹಾಗೊಂದು ಭಯಾನಕತೆ ನಡೆದುಹೋಗಿದೆ. ಟರ್ಕಿಗೆ ರಷ್ಯಾದ ರಾಜತಾಂತ್ರಿಕರಾಗಿದ್ದ ಅಂದ್ರೈ ಕಾರ್ಲೊರನ್ನು ಟರ್ಕಿ ಪೊಲೀಸ್ ಪಡೆಯಲ್ಲಿದ್ದ ವ್ಯಕ್ತಿಯೇ ಗುಂಡಿಕ್ಕಿ ಕೊಂದಿದ್ದಾನೆ. ಅದರ ಬೆನ್ನಲ್ಲೇ ಆತನನ್ನೂ ಕೊಲ್ಲಲಾಗಿದೆ.

‘ಇದು ಟರ್ಕಿ ಮತ್ತು ರಷ್ಯಾಗಳ ನಡುವಿನ ಬಾಂಧವ್ಯವನ್ನು ಹಳಿ ತಪ್ಪಿಸುವ ಕೆಲಸ. ಇದನ್ನು ನಾವು ಉಗ್ರವಾದಿ ಕೃತ್ಯ ಎಂದೇ ಪರಿಗಣಿಸುತ್ತೇವೆ. ಈ ಹಂತಕನನ್ನು ನಿರ್ದೇಶಿಸಿದವರ್ಯಾರು ಎಂಬುದನ್ನು ತನಿಖೆ ಮಾಡಿ ಶಿಕ್ಷಿಸುತ್ತೇವೆ’ ಎಂಬ ಖಡಕ್ ಪ್ರತಿಕ್ರಿಯೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಂದ ಬಂದಿದೆ. ಸಹಜವೆಂಬಂತೆ ಈ ಘಟನೆ ಹಿಂದಿರಬಹುದಾದ ಅಮೆರಿಕ ನೆರಳಿನ ಕುರಿತೆಲ್ಲ ರೋಚಕ ಸಂಚು ಊಹೆಗಳು ಹರಿದಾಡುತ್ತಿವೆ. ಸದ್ಯಕ್ಕಂತೂ ಇದು ನಿರ್ಲಕ್ಷ್ಯಯೋಗ್ಯ.

ರಷ್ಯಾ ರಾಯಭಾರಿಯ ಕೊಲೆಗೆ ಕಾರಣವಂತೂ ಸ್ಪಷ್ಟವಿದೆ. ಅದನ್ನು ಹಂತಕನೇ ಸ್ಪಷ್ಟಪಡಿಸಿ ಸತ್ತಿದ್ದಾನೆ. ‘ಅಲ್ಲಾಹೋ ಅಕ್ಬರ್… ನಾವು ಸಿರಿಯಾದಲ್ಲಿ ಸಾಯುತ್ತಿದ್ದೇವೆ. ನೀನು ಅದಕ್ಕೆ ಪ್ರತಿಯಾಗಿ ಇಲ್ಲಿ ಸಾಯಿ’ ಎಂಬ ಮಾತುಗಳು ಗುಂಡಿಕ್ಕುವ ಸಂದರ್ಭದಲ್ಲಿ ಆತನ ಬಾಯಿಂದುದುರಿವೆ.

ಹಾಗಾದರೆ ಸಿರಿಯಾದಲ್ಲಿ ಸಾಯುತ್ತಿರುವವರು ಯಾರು? ಐಎಸ್ಐಎಸ್ ಉಗ್ರರು. ಇವರು ಆಕ್ರಮಿಸಿಕೊಂಡಿದ್ದ ಮುಖ್ಯ ನಗರ ಅಲೆಪೊದಲ್ಲಿ ಇವರನ್ನೆಲ್ಲ ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುತ್ತಿರುವ ಶ್ರೇಯಸ್ಸು ಸಲ್ಲಬೇಕಾದದ್ದು ರಷ್ಯಾದ ಮಿಲಿಟರಿ ಕಾರ್ಯಾಚರಣೆಗೇನೆ, ಸಿರಿಯಾ ಸಂಘರ್ಷ ಶುರುವಾದ ಪ್ರಾರಂಭದಲ್ಲಿ ಟರ್ಕಿ ಅಮೆರಿಕದ ಪಕ್ಷವನ್ನೇ ವಹಿಸಿಕೊಂಡು ಅಸಾದ್’ನನ್ನು ಇಳಿಸುವುದೇ ಮುಖ್ಯ ಉದ್ದೇಶ ಎಂಬುದಕ್ಕೆ ಜತೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ನಿಲುವು ಹೊಯ್ದಾಟದಲ್ಲಿದೆ. ರಷ್ಯಾದ ಯುದ್ಧ ವಿಮಾನಗಳನ್ನು ಉರುಳಿಸಿದ್ದಕ್ಕೆ ಪುಟಿನ್ ರಿಗೆ ಕ್ಷಮೆಯಾಚನೆ ಪತ್ರ ಬರೆಯುವ ಮೂಲಕ ಟರ್ಕಿಯ ಮುಖ್ಯಸ್ಥ ಎರ್ದೊಗನ್ ರಷ್ಯಾದ ಮನವೊಲಿಸಿದರು. ಅಲ್ಲಿಂದ ರಷ್ಯಾ-ಟರ್ಕಿಗಳ ಸಲ್ಲಾಪ ಚಿಗಿತುಕೊಂಡಿತ್ತು.

ಹಾಗೆ ನೋಡಿದರೆ ಟರ್ಕಿಯ ಎರ್ದೊಗನ್ ಉದ್ದೇಶವಿರುವುದು ಸಿರಿಯಾ ಸಂಘರ್ಷ ಬಳಸಿಕೊಂಡು ತನ್ನ ದೇಶದೊಳಗಿನ ಕುರ್ದಿಶ್ ಹೋರಾಟಗಾರರನ್ನು ಹತ್ತಿಕ್ಕುವುದೇ ಆಗಿದೆ. ಟರ್ಕಿ ಮತ್ತು ಸಿರಿಯಾ ಗಡಿಗಳ ಆಚೀಚೆ ಹರಡಿಕೊಂಡಿರುವ ಕುರ್ದಿಶ್ ಸಮುದಾಯವು ಐಎಸ್ಐಎಸ್ ವಿರುದ್ಧ ಸೆಣೆಸುತ್ತಿದೆ. ಇವರನ್ನು ಬಲಹೀನಗೊಳಿಸಲೆಂದೇ ಅಮೆರಿಕ ಪಾಳೆಯವನ್ನು ಸೇರಿದಂತಿತ್ತು ಟರ್ಕಿ.

ಇವೆಲ್ಲ ಹಿನ್ನೆಲೆಗಳು ಏನೇ ಇದ್ದಿರಲಿ. ಇವತ್ತಿಗೆ, ಅಲ್ಲಾಹೊ ಅಕ್ಬರ್ ಎನ್ನುತ್ತ ರಷ್ಯಾ ರಾಯಭಾರಿಯನ್ನು ಹತ್ಯೆ ಮಾಡಿದವ ಸಾರುತ್ತಿರುವುದು, ಟರ್ಕಿ ಅದ್ಯಾವಮಟ್ಟಿಗೆ ಇಸ್ಲಾಮಿಕರಣವಾಗಿದೆ ಹಾಗೂ ಇಸ್ಲಾಂ ಉಗ್ರರೊಂದಿಗೆ ಸಹಾನುಭೂತಿ ಹೊಂದಿದೆ ಎಂಬ ತಥ್ಯವನ್ನು. ಇದಕ್ಕೆ ಅಮೆರಿಕವನ್ನೋ ಮತ್ಯಾರನ್ನೋ ದೂರಲಾಗದು. ಟರ್ಕಿಯದ್ದೇ ದುರಂತವಿದು.

ataturk
ಕೆಮಲ್ ಅಟಾಟುರ್ಕ್

ಟರ್ಕಿಯ ಈ ಬೆಳವಣಿಗೆಗೆ ಜಗತ್ತೇಕೆ ಆತಂಕಪಡಬೇಕೆಂದರೆ, ಇದು ಬಹುತೇಕ ಇಸ್ಲಾಂ ರಾಷ್ಟ್ರಗಳಂತೆ ಕಟ್ಟರ್ ಜಾಯಮಾನದ ಇಟ್ಟಿಗೆಗಳಲ್ಲಿ ಅರಳಿದ್ದಲ್ಲ. ಆಧುನಿಕ ಟರ್ಕಿಯ ಪಿತಾಮಹನೆಂದು ಗುರುತಿಸಲ್ಪಡುವ ಮುಸ್ತಫಾ ಕೆಮಲ್ ಅಟಾಟುರ್ಕ್ ಬಗ್ಗೆ ಓದುತ್ತಿದ್ದರೆ ಹೆಮ್ಮೆಯಾಗುತ್ತದೆ. 1923ರ ವೇಳೆಗೆ ಟರ್ಕಿಯಿಂದ ಅರ್ಮೇನಿಗರು, ಗ್ರೀಕರನ್ನೆಲ್ಲ ಹೊರದಬ್ಬಿ ರಾಷ್ಟ್ರವಾದಿ ಅಲೆಯಲ್ಲಿ ಆಧುನಿಕ ಟರ್ಕಿಯನ್ನು ರೂಪಿಸಿ ಅದರ ಮೊದಲ ಅಧ್ಯಕ್ಷರಾದವರು ಅಟಾಟುರ್ಕ್. ಇವರ ದೇಶದ ಪರಿಕಲ್ಪನೆ ಐಎಸ್ಐಎಸ್ ಅಥವಾ ಇಸ್ಲಾಂ ಪರಿಕಲ್ಪನೆಯ ಖಲೀಫತ್ ಆಗಿರಲಿಲ್ಲ. ಸಮಾನತೆ ಮತ್ತು ಧರ್ಮ ನಿರಪೇಕ್ಷತೆಗಳ ಅಡಿಪಾಯದಲ್ಲಿ ಎದ್ದಿದ್ದ ಟರ್ಕಿ ಅದು. 15 ವರ್ಷಗಳವರೆಗೆ ಟರ್ಕಿಯನ್ನಾಳಿದ ಅಟಾಟುರ್ಕ್ ಮುಸ್ಲಿಂ ಸಮಾಜದ ನಡುವೆ ಕ್ರಾಂತಿಕಾರಕ ಬದಲಾವಣೆಗಳನ್ನೇ ತಂದ.

ಆಡಳಿತಕ್ಕೆ ಇಸ್ಲಾಂ ನಿಯಮಗಳು ದಿಕ್ಸೂಚಿಯಾಗಿದ್ದನ್ನೇ ಆತ ಮೊದಲಿಗೆ ತೆಗೆದುಹಾಕಿದ. ಧಾರ್ಮಿಕತೆಯ ಆಧಾರದಲ್ಲಿ ನಡೆಯುತ್ತಿದ್ದ ಶಾಲೆಗಳನ್ನು ಮುಚ್ಚಿಸಿ, ಆಧುನಿಕ ಶಿಕ್ಷಣ ಶುರು ಮಾಡಿದ. ಅರೇಬಿಕ್ ಲಿಪಿಯ ಬದಲು ಲ್ಯಾಟಿನ್ ಅನ್ನು ತಂದ. ಟರ್ಕಿಯನ್ನು ಇಸ್ಲಾಂ ನೆಲೆಯಲಲ್ಲದೇ ಯುರೋಪಿಯನ್ ಮಾದರಿಯಲ್ಲಿ ಬೆಳೆಸಲು ಕಟಿಬದ್ಧನಾದ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕು ಎಂದನಲ್ಲದೇ, ಮಹಿಳೆಯರು ತಲೆಮುಚ್ಚಿಕೊಳ್ಳುವ ಧಿರಿಸು ತೊಡುವ ಅಗತ್ಯವಿಲ್ಲ ಅಂತ ಫರ್ಮಾನು ಹೊರಡಿಸಿದ. ರೈಲು-ರಸ್ತೆ ಸಂಪರ್ಕಗಳಿಂದ ಟರ್ಕಿಯನ್ನು ಬೆಸೆಯತೊಡಗಿದ.

ಇಂಥ ಕನಸುಗಾರ ಕಟ್ಟಿದ ಖಲೀಫತ್ ವಿರೋಧಿ ಕಲ್ಯಾಣ ರಾಷ್ಟ್ರದಲ್ಲಿ, ಪೊಲೀಸ್ ಪಡೆಯಲ್ಲಿರುವ ವ್ಯಕ್ತಿ ಅಲ್ಲಾಹೋ ಅಕ್ಬರ್ ಎಂದು ಕೂಗುತ್ತ, ಜಗತ್ತನ್ನು ಶಿಲಾಯುಗಕ್ಕೆ ಮರಳಿಸಲು ಹೊರಟಿರುವ ಐಎಸ್ಐಎಸ್ ಜತೆ ಗುರುತಿಸಿಕೊಳ್ಳುತ್ತ ರಷ್ಯಾ ರಾಯಭಾರಿಗೆ ಗುಂಡಿಟ್ಟು ಕೊಂದಿದ್ದನ್ನು ಎಲ್ಲೋ ದೂರದಲ್ಲಿ ನಡೆದ ಘಟನೆ ಅಂತ ನಿರ್ಭಾವುಕರಾಗಿ ನೋಡುವುದು ಹೇಗೆ? ಟರ್ಕಿಯ ಮಾನಸಿಕತೆ ನಕಾರಾತ್ಮಕವಾಗಿ ಬದಲಾಗುತ್ತಿರುವ ಸೂಚನೆಯಲ್ಲವೇ ಇದು?

ಅಟಾಟುರ್ಕ್ ಆತ್ಮದ ನರಳಿಕೆ ಅಗೋ ನಮ್ಮನ್ನೂ ತಾಗಿದಂತಿದೆ!

Leave a Reply