ಜಡೇಜಾ ಸ್ಪಿನ್ ಜಾದುವಿನ ಮುಂದೆ ಹೈರಾಣಾದ ಆಂಗ್ಲರು, ಭಾರತಕ್ಕೆ 4-0 ಸರಣಿ ಜಯ

ಜಯದ ಸಂಭ್ರಮದಲ್ಲಿ ಟೀಂ ಇಂಡಿಯಾ…

ಡಿಜಿಟಲ್ ಕನ್ನಡ ಟೀಮ್:

ತವರಿನ ಅಭಿಮಾನಿಗಳ ಪ್ರೋತ್ಸಾಹದ ಮುಂದೆ ಟೀಂ ಇಂಡಿಯಾ 4-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಡ್ರಾನತ್ತ ಸಾಗುತ್ತಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಮಂಗಳವಾರ ಸಂಘಟಿತ ದಾಳಿ ನಡೆಸಿದ ಭಾರತದ ಬೌಲರ್ ಗಳು ತಂಡ ಪಂದ್ಯವನ್ನು ಇನಿಂಗ್ಸ್ ಹಾಗೂ 75 ರನ್ ಗಳ ಅಂತರದಲ್ಲಿ ಗೆಲ್ಲುವಂತೆ ಮಾಡಿದರು.

ನಿನ್ನೆಯಷ್ಟೇ ಕನ್ನಡಿಗ ಕರುಣ್ ನಾಯರ್ ಅವರ ಅಮೋಘ ಬ್ಯಾಟಿಂಗ್ ಅಬ್ಬರಕ್ಕೆ ಸುಸ್ತಾಗಿದ್ದ ಇಂಗ್ಲೆಂಡ್ ತಂಡ, ಇಂದು ಎಡಗೈ ಸ್ಪಿನ್ನರ್ ರವೀಂದ್ರ ಜಡೆಜಾ ಅವರ ಸ್ಪಿನ್ ಮೋಡಿಯನ್ನು ಅರಿಯಲು ಸಾಧ್ಯವಾಗದೇ ಹೈರಾಣಾದರು. ಪಂದ್ಯದ ಅಂತಿಮ ದಿನವಾದ ಮಂಗಳವಾರ ಇಂಗ್ಲೆಂಡ್ ತಂಡ ಆರಂಭಿಕ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳದೇ 97 ರನ್ ದಾಖಲಿಸಿತ್ತು. ಆಗ ಪಂದ್ಯ ಡ್ರಾ ಕಾಣುತ್ತದೆ ಎಂಬುದು ಎಲ್ಲರ ಭಾವನೆಯಾಗಿತ್ತು.

ಪಂದ್ಯಕ್ಕೆ ಟ್ವಿಸ್ಟ್ ಸಿಕ್ಕಿದ್ದೇ ದಿನದ ಎರಡನೇ ಅವಧಿಯಲ್ಲಿ. ಈ ಹಂತದಲ್ಲಿ ಆಂಗ್ಲರ ನಾಯಕ ಅಲಾಸ್ಟೇರ್ ಕುಕ್ (49) ಅವರ ವಿಕೆಟ್ ಕೆಡವಿದ ರವೀಂದ್ರ ಜಡೇಜಾ, ಆಂಗ್ಲರ ಸೋಲಿಗೆ ನಾಂದಿ ಹಾಡಿದರು. ಕುಕ್ ಬೆನ್ನಲ್ಲೇ ಅರ್ಧಶತಕ ದಾಖಲಿಸಿದ್ದ ಜೆನ್ನಿಂಗ್ಸ್ (54) ಹಾಗೂ ತಂಡದ ಆಧಾರ ಸ್ತಂಭ ಜೋ ರೂಟ್ (6) ಹಾಗೂ ಜೇರ್ ಸ್ಟೋ (1) ಬೇಗನೆ ವಿಕೆಟ್ ಒಪ್ಪಿಸಿದರು. ಆಂಗ್ಲರ ಈ ದಿಢೀರ್ ಕುಸಿತದ ಪರಿಣಾಮ ಭಾರತದ ಪಾಳೆಯದಲ್ಲಿ ಗೆಲುವಿನ ಆಸೆ ಚಿಗುರೊಡೆಯಿತು.

ಈ ಹಂತದಲ್ಲಿ ಮೊಯಿನ್ ಅಲಿ (44) ಹಾಗೂ ಬೆನ್ ಸ್ಟೋಕ್ಸ್ (23) ಸ್ವಲ್ಪ ಜಿಗುಟಿನ ಆಟ ಪ್ರದರ್ಶಿಸಿದರು. ಈ ವೇಳೆ ಮತ್ತೆ ದಾಳಿಗಿಳಿದ ಜಡೇಜಾ ಅಲಿಗೆ ಪೆವಿಲಿಯನ್ ದಾರಿ ತೋರುವ ಮೂಲಕ ಆಂಗ್ಲರ ಹೋರಾಟಕ್ಕೆ ಮತ್ತೊಮ್ಮೆ ಪೆಟ್ಟು ಕೊಟ್ಟರು. ಈ ಹಂತದಲ್ಲಿ ಅಮಿತ್ ಮಿಶ್ರಾ ಹಾಗೂ ಉಮೇಶ್ ಯಾದವ್ ಸಹ ಜಡೇಜಾಗೆ ಉತ್ತಮ ಸಾಥ್ ಕೊಟ್ಟರು. ಪರಿಣಾಮ ನಂತರ ಬಂದ ಯಾವುದೇ ಆಂಗ್ಲರ ದಾಂಡಿಗರು ಎರಡಂಕಿ ರನ್ ಹೊಡೆಯಲಿಲ್ಲ. ಆಂಗ್ಲರ ಎರಡನೇ ಇನಿಂಗ್ಸ್ ನಲ್ಲಿ 7 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಪಂದ್ಯವನ್ನು ಭಾರತದ ಮಡಿಲಿಗೆ ತಂದು ಹಾಕಿದರು.

ಕಳೆದ ಬಾರಿ ಭಾರತದ ಪ್ರವಾಸದಲ್ಲಿ 2-1 ಅಂತರದಲ್ಲಿ ಹಾಗೂ ಇಂಗ್ಲೆಂಡ್ ತಂಡ ತನ್ನ ತವರಿನಲ್ಲಿ ಭಾರತದ ವಿರುದ್ಧದ 4-0 ಸರಣಿ ಜಯ ಸಾಧಿಸಿದ್ದಕ್ಕೆ ಭಾರತ ಈಗ ಸೇಡು ತೀರಿಸಿಕೊಂಡಂತಾಗಿದೆ. ಸರಣಿಯಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ದಾಖಲೆಯ ತ್ರಿಶತಕ ಬಾರಿಸಿದ ಕರುಣ್ ನಾಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್ 477

ಅಲಿ 146, ಡಾವ್ಸನ್ 66, ರಶೀದ್ 60 (ಜಡೇಜಾ 106ಕ್ಕೆ 3, ಇಶಾಂತ್ 42ಕ್ಕೆ 1)

ಭಾರತ ಮೊದಲ ಇನಿಂಗ್ಸ್ 759ಕ್ಕೆ 7 ಡಿಕ್ಲೇರ್

ಕರುಣ್ ಅಜೇಯ 303, ರಾಹುಲ್ 199, ಪಟೇಲ್ 71 (ಬ್ರಾಡ್ 80ಕ್ಕೆ 2, ಡಾವ್ಸನ್ 129ಕ್ಕೆ 2)

ಇಂಗ್ಲೆಂಡ್ ಎರಡನೇ ಇನಿಂಗ್ಸ್ 207

ಜೆನ್ನಿಂಗ್ಸ್ 54, ಕುಕ್ 49, ಅಲಿ 44 (ಜಡೇಜಾ 48ಕ್ಕೆ 7, ಇಶಾಂತ್ 17ಕ್ಕೆ 1)

Leave a Reply