ಕಾಳಧನ ಬಯಲು ಕಾರ್ಯಕ್ಕೆ ಚುನಾವಣಾ ಆಯೋಗವೂ ಕೈ ಜೋಡಿಸ ಹೊರಟಿರೋದು ಹೇಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಕಾಳಧನ ವಿರೋಧದ ಕ್ರಮಗಳೇ ಸುದ್ದಿಯಲ್ಲಿರುವ ಈ ದಿನಗಳಲ್ಲಿ, ಚುನಾವಣಾ ಆಯೋಗ ಸಹ ಈ ಕಾರ್ಯಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುವುದಕ್ಕೆ ಹೊರಟಿದೆ.

ಹೆಸರಿಗಷ್ಟೇ ನೋಂದಣಿ ಮಾಡಿಸಿಕೊಂಡು ಕಾರ್ಯವ್ಯಾಪ್ತಿಯಲ್ಲೇ ಇರದ ಸುಮಾರು 200 ಪುಡಿ ರಾಜಕೀಯ ಪಕ್ಷಗಳನ್ನು ತನಿಖೆಗೆ ಒಳಪಡಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಗೆ ಪತ್ರ ಬರೆಯಲಿದೆ.

ಇವು ಹೇಗೆ ಕಾಳಧನ ಸಮಸ್ಯೆಯ ಭಾಗವಾಗಿವೆ ಎಂದಿರಾ? ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ತೆರಿಗೆ ವಿನಾಯ್ತಿ ಲಾಗಾಯ್ತಿನಿಂದ ಇದೆ. ಅಲ್ಲದೇ ಈಗಿರುವ ಕಾಯ್ದೆಗಳ ಪ್ರಕಾರ ₹20,000 ಕ್ಕಿಂತ ಹೆಚ್ಚಿನ ದೇಣಿಗೆ ನೀಡಿದವರ ದಾಖಲೆಗಳನ್ನಷ್ಟೇ ರಾಜಕೀಯ ಪಕ್ಷಗಳು ಒದಗಿಸಿದರೆ ಸಾಕು. ಈ ಮಾರ್ಗವನ್ನು ಲೆಕ್ಕವಿಲ್ಲದ ಹಣದ ಹರಿವಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಮುಕ್ತ ಮುಕ್ತ.

ಇದೇನೂ ಈಗಿನ ಸರ್ಕಾರ ಮಾಡಿರುವ ಕಾಯ್ದೆ ಅಲ್ಲ. ₹20 ಸಾವಿರಕ್ಕಿಂತ ಕಡಿಮೆ ಮೊತ್ತದ ದಾಖಲೆಯನ್ನೂ ಇಡುವ ವ್ಯವಸ್ಥೆ ಆಗಬೇಕು ಎಂಬ ಒತ್ತಾಯಗಳಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ಎಲ್ಲ ಪಕ್ಷಗಳ ಧೋರಣೆಯೂ ಭಿನ್ನವೇನಿಲ್ಲ.

ಇದೀಗ ಚುನಾವಣಾ ಆಯೋಗವು ಸುಮಾರು 200 ನೊಂದಾಯಿತ ರಾಜಕೀಯ ಪಕ್ಷಗಳ ಸಿಂಧುತ್ವವನ್ನು ಪ್ರಶ್ನಿಸುತ್ತಿದೆ. ಏಕೆಂದರೆ ಇವು 2005ರಿಂದ ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಲೇ ಇಲ್ಲ. ತಮ್ಮ ಲೆಕ್ಕಪತ್ರಗಳನ್ನು ಆಯೋಗಕ್ಕೆ ಒಪ್ಪಿಸುತ್ತಲೂ ಇಲ್ಲ. ಚುನಾವಣಾ ಆಯೋಗಕ್ಕಿರುವ ಸಂಕಷ್ಟ ಎಂದರೆ, ಅದು ರಾಜಕೀಯ ಪಕ್ಷಗಳನ್ನು ಒಮ್ಮೆ ನೋಂದಾಯಿಸಿಕೊಂಡಮೇಲೆ ನಂತರ ಅಸಿಂಧುಗೊಳಿಸುವ ಅಧಿಕಾರವಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳೆಂದು ಹೆಸರು ನೋಂದಾಯಿಸಿಕೊಂಡವರು ಕಾಳಧನ ಬಿಳಿ ಮಾಡಿಕೊಂಡಿರುವುದನ್ನು ನೋಡುತ್ತ ಕೂರಬೇಕಷ್ಟೆ. ರಾಜ್ಯಮಟ್ಟದ 58 ಪಕ್ಷಗಳು, ಏಳು ರಾಷ್ಟ್ರೀಯ ಪಕ್ಷಗಳ ಜತೆಯಲ್ಲೇ 1786 ನೋಂದಾಯಿತ ರಾಜಕೀಯ ಪಕ್ಷಗಳಿವೆ.

ಇದೀಗ, ಹಣಕಾಸು ರಿಪೇರಿ ಪರ್ವವನ್ನೇ ಉಪಯೋಗಿಸಿಕೊಂಡು ತೆರಿಗೆ ಏಜೆನ್ಸಿಗಳಿಗೆ ಇಂಥ ಹಲವು ರಾಜಕೀಯ ಪಕ್ಷಗಳ ಸಾಚಾತನ ಪರೀಕ್ಷಿಸುವ ಮಾರ್ಗವೊಂದನ್ನು ತೆರೆದಿರಿಸುವ ಬಗ್ಗೆ ಚುನಾವಣಾ ಆಯೋಗ ಯೋಚಿಸುತ್ತಿದೆ.

Leave a Reply