ಗ್ರಾಮ ಭಾರತದಲ್ಲಿ ಸಾಧ್ಯವೇ ಡಿಜಿಟಲ್ ಹಣಕಾಸು ವ್ಯವಸ್ಥೆ? ಜಾರ್ಖಂಡ್ ಪಂಚಾಯ್ತಿಗಳು ತುಂಬಿವೆ ಭರವಸೆ!

ಡಿಜಿಟಲ್ ಕನ್ನಡ ಟೀಮ್:

ಭಾರತದಂಥ ದೇಶದಲ್ಲಿ, ಅಪಾರ ಜನಸಂಖ್ಯೆಗೆ ಮೂಲಸೌಕರ್ಯಗಳು ಮತ್ತು ಸಲಕರಣೆ ಜ್ಞಾನವಿನ್ನೂ ಹರಡಬೇಕಿರುವ ಹೊತ್ತಿನಲ್ಲಿ ನಗದು ರಹಿತ ವ್ಯವಸ್ಥೆ ಸಾಧುವೇ ಎಂಬುದು ನಿಜವಾಗಿಯೂ ಮಿಲಿಯನ್ ಡಾಲರ್ ಪ್ರಶ್ನೆಯೇ ಆಗಿದೆ. ನಗದು ರಹಿತವಲ್ಲದಿದ್ದರೂ ಕನಿಷ್ಠ ನಗದಿನ ವ್ಯವಸ್ಥೆ ರೂಪಿಸಬೇಕು ಎಂಬುದು ಕೇಂದ್ರ ಸರ್ಕಾರದ ಪ್ರಯತ್ನ.

ಈ ಕುರಿತ ಸಂಶಯಗಳನ್ನಿಟ್ಟುಕೊಂಡೇ ಕೆಲ ಪ್ರಯತ್ನ ಫಲಗಳನ್ನು ಶ್ಲಾಘಿಸಬೇಕಿದೆ. ಈವರೆಗೆ ನಗದು ರಹಿತ ಹಳ್ಳಿಗೆ ಗುಜರಾತಿನ ಅಕೋದರವನ್ನೇ ಉದಾಹರಣೆಯಾಗಿ ನೀಡುತ್ತ ಬಂದಿದ್ದಾಗಿತ್ತು. ಈಗ ಜಾರ್ಖಂಡಿನ ಯಶೋಗಾಥೆಯೊಂದನ್ನು ಟೆಲಿಗ್ರಾಫ್ ವರದಿ ಮಾಡಿದೆ.

ಆ ರಾಜ್ಯದ ನಾಲ್ಕು ಪಂಚಾಯತಿಗಳಿಗೆ ಮುಖ್ಯಮಂತ್ರಿ ರಘುವರ ದಾಸ್ ಅವರು ₹1 ಲಕ್ಷ ಬಹುಮಾನಗಳೊಂದಿಗೆ ಸನ್ಮಾನಿಸಿದ್ದಾರೆ. ಡಿಜಿಟಲ್ ಹಣಕಾಸು ವ್ಯವಸ್ಥೆಯತ್ತ ಗಣನೀಯ ಹೆಜ್ಜೆ ಇಟ್ಟಿರುವುದಕ್ಕೆ ಪಂಚಾಯಿತಿಗಳಿಗೆ ಈ ಸನ್ಮಾನ ಒಲಿದಿದೆ.

ನೀತಿ ಆಯೋಗದ ಪ್ರಕಾರ, ಪ್ರದೇಶವೊಂದರಲ್ಲಿ ಎಲ್ಲ ಕುಟುಂಬಗಳ ಒಬ್ಬರಿಗಾದರೂ ಬ್ಯಾಂಕ್ ಖಾತೆ ಹಾಗೂ ಒಂದು ಎಟಿಎಂ ಕಾರ್ಡ್ ಇದ್ದಲ್ಲಿ, ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆಧಾರ ಜೋಡಿತ ಖಾತೆಗಳ ಮುಖಾಂತರ ಹಣ ತಲುಪಿಸುವ ವ್ಯವಸ್ಥೆ ಶೇ. 95ರ ಮಟ್ಟಿಗೆ ಇದ್ದಲ್ಲಿ ಅದನ್ನು ನಗದು ರಹಿತ ಪ್ರದೇಶವೆಂದು ಘೋಷಿಸಬಹುದಾಗಿದೆ.

ಜಾರ್ಖಂಡಿನ ನಾಲ್ಕು ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಎಲ್ಲ ಅರ್ಹತೆಗಳನ್ನು ಪಡೆದಿರುವುದಕ್ಕೆ ಈ ಬಹುಮಾನ ನೀಡಲಾಗಿದೆ. ದುಗ್ಧಾ ಪಶ್ಚಿಮ ಪಂಚಾಯ್ತಿ ವ್ಯಾಪ್ತಿಯ 695 ಮನೆಗಳು ಬ್ಯಾಂಕ್ ಖಾತೆ ಹೊಂದಿವೆ. ಅಂಗಡಿ ಮುಂಗಟ್ಟುಗಳಿಗೆ 80 ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರಗಳನ್ನು ಒದಗಿಸಲಾಗಿದೆ. ಈವರೆಗೆ ಪೇಟಿಎಂ ಉಪಯೋಗಿಸಿ 60 ವ್ಯವಹಾರಗಳಾಗಿವೆ.

ದುಗ್ಧಾ ದಕ್ಷಿಣದಲ್ಲಿ 660 ಬ್ಯಾಂಕ್ ಖಾತೆ ಕುಟುಂಬಗಳು, 16 ಪಿಒಎಸ್, 22 ಪೇಟಿಎಂ ವ್ಯವಹಾರಗಳು. ಧರ್ಮಾ ಬಹಲ್ ನಲ್ಲಿ 1742 ಬ್ಯಾಂಕ್ ಖಾತೆಯುಳ್ಳ ಕುಟುಂಬಗಳು, 10 ಪಿಒಎಸ್ ಯಂತ್ರಗಳು, ಡಿಜಿಟಲ್ ಮಾದರಿಯ 585 ವ್ಯವಹಾರಗಳು. ಖಷಿದಾ ವ್ಯಾಪ್ತಿಯಲ್ಲಿ 1871 ಬ್ಯಾಂಕ್ ಖಾತೆಯುಳ್ಳ ಕುಟುಂಬಗಳು,14 ಪಿಒಎಸ್ ಮತ್ತು 670 ಡಿಜಿಟಲ್ ವ್ಯವಹಾರಗಳು.

ಹಿಂದುಳಿದ ರಾಜ್ಯ ಎಂದು ಪರಿಗಣಿತವಾಗಿರುವ ಜಾರ್ಖಂಡ್ ಗ್ರಾಮಗಳಲ್ಲೂ ಡಿಜಿಟಲ್ ವ್ಯವಹಾರ ಸಾಧ್ಯವಾಗುತ್ತದೆ ಎಂದಾದರೆ, ಭಾರತದ ಇತರೆಡೆಗೂ ಇದು ಸ್ಫೂರ್ತಿ ತುಂಬಬಲ್ಲದು.

Leave a Reply