ರಾಜ್ಯ ಸರ್ಕಾರದ ಹೊಸ ಯೋಜನೆ ‘ಮಾತೃಪೂರ್ಣ’, ಎಸ್ಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ, ಏಳು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, ಮೋದಿಗೆ ರಾಹುಲ್ ಪ್ರಶ್ನೆ, ಅಚ್ಚರಿ ತಂದ ನಜೀಬ್ ಜಂಗ್ ರಾಜಿನಾಮೆ

ರಾಜ್ಯದಲ್ಲಿ ವ್ಯಾಪಕ ಬರಗಾಲ ಎದುರಾಗಿದ್ದು ಕುಡಿಯಲು ನೀರು, ಜಾನುವಾರುಗಳಿಗೆ ಅಗತ್ಯ ಮೇವು ಪೂರೈಸಬೇಕೆಂದು ಆಗ್ರಹಿಸಿ ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಗುರುವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದು…

ಡಿಜಿಟಲ್ ಕನ್ನಡ ಟೀಮ್:

ಮಹಿಳೆಯರಿಗಾಗಿ ಸರ್ಕಾರದಿಂದ ಮಾತೃಪೂರ್ಣ ಯೋಜನೆ

ರಾಜ್ಯದ ಜನರಿಗೆ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯದಂತಹ ವಿವಿಧ ಯೋಜನೆಗಳನ್ನು ನೀಡಿದ್ದ ಸರ್ಕಾರ ಈಗ ಮಹಿಳೆಯರಿಗಾಗಿ ‘ಮಾತೃಪೂರ್ಣ’ ಹೊಸ ಯೋಜನೆ ನೀಡಲು ಮುಂದಾಗಿದೆ. ಸರ್ಕಾರದ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಗರ್ಭಿಣಿ ಮತ್ತು ಹಾಲುಣಿಸುವ ಬಡ ಮಹಿಳೆಯರಿಗೆ ಪ್ರತಿನಿತ್ಯ ಪೌಷ್ಟಿಕ ಊಟ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಅಪೌಷ್ಟಿಕತೆ ತಡೆಗಟ್ಟಿ, ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಿಯರಿಗೆ ಪೌಷ್ಟಿಕ ಆಹಾರ ನೀಡುವುದು. ಆ ಮೂಲಕ ಅಪೌಷ್ಟಿಕತೆಯಿಂದ ಗರ್ಭಿಣಿಯರು ಅಸುನೀಗುವುದನ್ನು ತಡೆಯುವುದು, ಆರೋಗ್ಯಯುತ ಮಕ್ಕಳು ಜನನಕ್ಕೆ ನೆರವಾಗಲು ಈ ಯೋಜನೆ ತರಲಾಗುತ್ತಿದೆ. ಮುಂದಿನ ವರ್ಷ ಜನವರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಿದ್ದು, ತುಮಕೂರಿನ ಮದುಗಿರಿ, ಬಾಗಲಕೋಟೆಯ ಜಮಖಂಡಿ, ರಾಯಚೂರಿನ ಮಾನ್ವಿ ಹಾಗೂ ಮೈಸೂರಿನ ಎಚ್.ಡಿ ಕೋಟೆಯಲ್ಲಿ ಅನುಷ್ಟಾನವಾಗಲಿದೆ. ಈ ಹಂತದಲ್ಲಿ 32 ಸಾವಿರ ಗರ್ಭಿಣಿಯರು ಹಾಗೂ ಹಾಲುಣಿಸುವ ಮಹಿಳೆಯರು ಯೋಜನೆಯ ಫಲಾನುಭವಿಗಳಾಗುವ ನಿರೀಕ್ಷೆ ಇದೆ. ಇವರಿಗೆ ಮಧ್ಯಾಹ್ನ ಮೊಟ್ಟೆ, ಅನ್ನ ಸಾಂಬಾರ್, ಸೊಪ್ಪು ತರಕಾರಿ ನೀಡಲಾಗುತ್ತದೆ. ಮೊಟ್ಟೆ ಸೇವಿಸದವರಿಗೆ ಬೆಲ್ಲ, ಕೊಬ್ಬರಿ, ಕಡಲೆಬೀಜ ಮಿಶ್ರಣದ ಪೌಷ್ಟಿಕಾಂಶವುಳ್ಳ ಪದಾರ್ಥ ವಿತರಣೆ ಮಾಡಲಾಗುವುದು. ಅಂಗನವಾಡಿ ಕೇಂದ್ರಗಳ ಮೂಲಕ ಊಟ ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಎಸ್ಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ರಾಜ್ಯದ 10ನೇ ತರಗತಿಯ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮಾರ್ಚ್ 30ರಿಂದ ಏಪ್ರಿಲ್ 12ರವರೆಗೂ ನಡೆಯಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೊದಲನೇ ದಿನ ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಸಂಸ್ಕೃತ ಪರೀಕ್ಷೆ ನಡೆಯಲಿದೆ. ಏಪ್ರಿಲ್ 1ರಂದು ಅರ್ಥಶಾಸ್ತ್ರ, ಏಪ್ರಿಲ್ 3ರಂದು ಗಣಿತ, ಏಪ್ರಿಲ್ 5ರಂದು ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ, ಎಪ್ರಿಲ್ 7ಕ್ಕೆ ವಿಜ್ಞಾನ, ಏಪ್ರಿಲ್ 10ಕ್ಕೆ ತೃತೀಯ ಭಾಷೆ ಹಿಂದಿ/ಕನ್ನಡ/ಇಂಗ್ಲೀಷ್, ಇತರೆ ಭಾಷೆ, ಏಪ್ರಿಲ್  12 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷೆಗಳು 2.30 ನಿಮಿಷ ನಡೆಯಲಿದ್ದು, ಈ ಭಾರಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪರೀಕ್ಷಾ ಮಂಡಳಿ ನಿರ್ಧರಿಸಿರುವುದಾಗಿ ತಿಳಿಸಲಾಯಿತು.

ಎಸಿಬಿ ದಾಳಿ

ರಾಜ್ಯದ ವಿವಿಧ ಇಲಾಖೆಯ ಏಳು ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ನಡೆಸಿರುವ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರದ 12 ಕಡೆಗಳಲ್ಲಿ 7 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಿಬಿಎಂಪಿ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಬಸವರಾಜು, ಬೆಳ್ತಂಗಡಿಯ ಗುರುವಾಯರು ಕೆರೆಯ ತಾಲೂಕು ಕಚೇರಿ ಸೂಪರಿಟೆಂಡೆಂಟ್ ಗೋವಿಂದ್ ನಾಯಕ್ , ಹಿರಿಯ ಆರೋಗ್ಯ ಅಧಿಕಾರಿ ಲೀಲಾವತಿ, ಬಳ್ಳಾರಿ ಜಿಲ್ಲಾ ಆಸ್ಪತ್ರೆ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಪಂಪಾಪತಿ, ಚಿತ್ರದುರ್ಗ ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಎಚ್.ಎಲ್.ಪುಟ್ಟರಾಜು, ಜಾವಣಗೆರೆಯ ಕೆಆರ್ಐಡಿಎಲ್ ಎಇಇ ಉಮೇಶ್ ಪಾಟೀಲ್ ಅವರ ನಿವಾಸದ ಮನೆ ಮೇಲೆ ದಾಳಿ ನಡೆದಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.

ಕೆಎಂಎಫ್ ನೂತನ ಅಧ್ಯಕ್ಷರಾಗಿ ಎ.ಪಿ ರವೀಂದ್ರ

ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್ ಅವರ ಪುತ್ರ ಎಂ.ಪಿ ರವೀಂದ್ರ ಅವರನ್ನು ಕರ್ನಾಟಕ ಹಾಲು ಮಹಾ ಒಕ್ಕೂಟ (ಕೆಎಂಎಫ್)ದ ನೂತನ ಅಧ್ಯಕ್ಷರನ್ನಾಗಿ ನೇಮಿಸಲು ಸರ್ಕಾರ ಮುಂದಾಗಿದೆ. ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರ ನಿವಾಸದಲ್ಲಿ ಗುರುವಾರ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಹೊಸ ವರ್ಷ ಆರಂಭದ ವೇಳೆಗೆ ರವೀಂದ್ರ ಅವರು ಕೆಎಂಎಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

‘ಸಹರಾ ಡೈರಿಯಲ್ಲಿ ಲಂಚ ಪಡೆದಿರುವವರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ.. ಈಗ ಏನಂತೀರಾ ಮೋದಿ ಜೀ…’ ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ನೀಡಿರುವ ತಿರುಗೇಟು. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸುಬ್ರತಾ ರಾಯ್ ಒಡೆತನದ ಸಹರಾ ಸಂಸ್ಥೆಯಿಂದ ₹ 40 ಕೋಟಿ ಮತ್ತು ಬಿರ್ಲಾ ಕಂಪನಿಯಿಂದ ₹ 12 ಕೋಟಿ ಲಂಚ ಸ್ವೀಕರಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದು, 2014ರಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕ ಡೈರಿಯಲ್ಲಿನ ಲಂಚ ಪಡೆದವರ ಪಟ್ಟಿ ಇದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿದೆ. ಇದನ್ನು ಉತ್ತರ ಪ್ರದೇಶ ಪ್ರವಾಸದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ರಾಹುಲ್, ‘ಮೋದಿ ಅವರು ಎಷ್ಟು ಬೇಕಾದರು ನನ್ನ ಅಣಕ ಮಾಡಲಿ. ಆದರೆ ಅದಕ್ಕೂ ಮುನ್ನ ತಾವು ಲಂಚ ಪಡೆದಿರುವ ಬಗ್ಗೆ ಜನರಿಗೆ ಉತ್ತರ ನೀಡಲಿ’ ಎಂದು ಹೇಳಿದರು. ರಾಹುಲ್ ಗಾಂಧಿ ಅವರ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದ್ದು, ‘ಸುಪ್ರೀಂ ಕೋರ್ಟಿನಲ್ಲಿ ಈಗಾಗಲೇ ವಜಾ ಆಗಿರುವ ಅರ್ಜಿಯ ಅಂಶಗಳನ್ನೇ ರಾಹುಲ್ ಗಾಂಧಿ ಮತ್ತೆ ಹೇಳುತ್ತಿದ್ದಾರೆ. ಈ ಆರೋಪ ಮಾಡಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿನ ಆರೋಪ ಮರೆಮಾಚುವ ಪ್ರಯತ್ನ ಮಾಡಿದ್ದಾರೆ’ ಎಂದಿದೆ.

ನಜೀಬ್ ಜಂಗ್ ರಾಜಿನಾಮೆ

ಅನಿರೀಕ್ಷಿತ ಬೆಳವಣಿಗೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಸ್ಥಾನದಲ್ಲಿ ಇನ್ನು 18 ತಿಂಗಳ ಕಾಲ ಅಧಿಕಾರ ಹೊಂದಿದ್ದ ನಜೀಬ್ ಜಂಗ್ ಅವರು ದಿಢೀರನೆ ರಾಜಿನಾಮೆ ನೀಡಿದ್ದಾರೆ. ತಮ್ಮ ರಾಜಿನಾಮೆಗೆ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. 65 ವರ್ಷದ ಮಾಜಿ ಐಎಎಸ್ ಅಧಿಕಾರಿ ನಜೀಬ್ ಜಂಗ್ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ ಆಗಿದ್ದರು. 2013ರ ಜುಲೈ 9ರಂದು ಯುಪಿಎ ಸರ್ಕಾರ ಜಂಗ್ ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿತ್ತು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾದ ನಂತರ ಜಂಗ್ ಸರ್ಕಾರದ ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಟೀಕೆಗಳನ್ನು ಎಎಪಿ ಸರ್ಕಾರ ಮಾಡಿತ್ತು. ಈ ರಾಜಿನಾಮೆ ನೀಡಿದ ನಂತರ ದೆಹಲಿ ಸಿಎಂ ಕೇಜ್ರಿವಾಲ್ ಈ ನಿರ್ಧಾರಕ್ಕೆ ಕಾರಣ ಏನೆಂದು ಕೇಳಿದ್ದು, ಜಂಗ್ ವೈಯಕ್ತಿಕ ಕಾರಣಗಳಿಂದಾಗಿ ರಾಜಿನಾಮೆ ನೀಡಿದ್ದೇನೆ ಎಂದು ತಿಳಿಸಿರುವುದಾಗಿ ವರದಿಗಳು ಬಂದಿವೆ.

ಐಸಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆರ್.ಅಶ್ವಿನ್ ಆಯ್ಕೆ

ಪ್ರಸಕ್ತ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಗ್ಯಾರಿ ಸೋಬರ್ಸ್ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಕ್ವಿಂಟಾನ್ ಡಿ ಕಾಕ್, ಐಸಿಸಿ ಟಿ20 ಅತ್ಯುತ್ತಮ ಪ್ರದರ್ಶನಕ್ಕೆ ವೆಸ್ಟ್ ಇಂಡೀಸ್ ನ ಕಾರ್ಲೋಸ್ ಬ್ರಾಥ್ ವೈಟ್, ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್, ಐಸಿಸಿ ಉದಯೋನ್ಮುಕ ಆಟಗಾರ ಪ್ರಶಸ್ತಿಗೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಆಯ್ಕೆಯಾಗಿದ್ದಾರೆ.

ಇನ್ನು ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟವಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ವರ್ಷ ಮೂರು ದ್ವಿಶತಕ ಹಾಗೂ ಟೀಂ ಇಂಡಿಯಾದ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿಯನ್ನು ಈ ತಂಡಕ್ಕೆ ಆಯ್ಕೆ ಮಾಡಿಲ್ಲ. ಇನ್ನು ಸತತ ವೈಫಲ್ಯ ಅನುಭವಿಸಿರುವ ಇಂಗ್ಲೆಂಡ್ ನಾಯಕ ಅಲಾಸ್ಟೇರ್ ಕುಕ್ ಅವರನ್ನು ಈ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರುವುದು ಟೀಕೆಗೆ ಕಾರಣವಾಗಿದೆ. ಇನ್ನು ಟೆಸ್ಟ್ ತಂಡದಲ್ಲಿ ಅಶ್ವಿನ್ ಭಾರತದ ಪರವಾಗಿ ಸ್ಥಾನ ಪಡೆದ ಏಕೈಕ ಆಟಗಾರ. ಏಕದಿನ ತಂಡದಲ್ಲಿ ಕೊಹ್ಲಿ ನಾಯಕನಾಗಿದ್ದು, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ.

Leave a Reply