ರಾಹುಲ್, ಚಿದು, ಮನಮೋಹನ್… ಎಲ್ಲರ ಟೀಕಾಸ್ತ್ರಗಳಿಗೂ ಮೋದಿ ಲೇವಡಿಯ ಪ್ರತ್ಯುತ್ತರ

ಡಿಜಿಟಲ್ ಕನ್ನಡ ಟೀಮ್:

‘ರಾಹುಲ್ ಗಾಂಧಿ ಹೇಗೆ ಸಾರ್ವಜನಿಕ ಭಾಷಣ ಮಾಡಬೇಕು ಎಂಬುದನ್ನು ಈಗ ಕಲಿಯುತ್ತಿದ್ದು, ನನಗೆ ತುಂಬಾ ಸಂತೋಷವಾಗಿದೆ… ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು ನನ್ನ ಸರ್ಕಾರಕ್ಕೆ ಪ್ರಮಾಣ ಪತ್ರ ಕೊಡಲು ಹೋಗಿ ಅವರ ಸರ್ಕಾರಕ್ಕೆ ಪ್ರಮಾಣ ಪತ್ರ ಕೊಟ್ಟಿದ್ದಾರೆ…’ ಇವು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ವಿರುದ್ಧ ಮಾತಿನ ಚಾಟಿ ಬೀಸಿದ ಪರಿ.

ನೋಟು ಅಮಾನ್ಯ ನಿರ್ಧಾರದ ವಿರುದ್ಧ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇವರ ವಿರೋಧಗಳಿಗೆ ಮೋದಿ ಈಗ ಪ್ರತ್ಯುತ್ತರ ನೀಡಿದ್ದಾರೆ.

ಇನ್ನು ನಿನ್ನೆಯಷ್ಟೇ, ‘ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಲಂಚ ಪಡೆದು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು…’ ಎಂದು ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ಮೋದಿ, ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡುತ್ತಲೇ ತಿರುಗೇಟು ಕೊಟ್ಟಿದ್ದಾರೆ. ಈ ಸಭೆಯಲ್ಲಿ ಮೋದಿ ಕಾಂಗ್ರೆಸ್ ವಿರುದ್ಧದ ಲೇವಡಿಯ ಮಾತುಗಳು ಹೀಗಿದ್ದವು…

‘ಕಾಂಗ್ರೆಸ್ ಪಕ್ಷ ಯುವ ನಾಯಕನ್ನು ಹೊಂದಿದೆ. ಆ ಯುವ ನಾಯಕ ಹೇಗೆ ಭಾಷಣ ಮಾಡಬೇಕೆಂಬುದನ್ನು ಈಗ ಕಲಿಯುತ್ತಿದ್ದಾರೆ. ಅವರು ಚೆನ್ನಾಗಿ ಮಾತನಾಡುವುದನ್ನು ಕಲಿಯುತ್ತಿರುವುದನ್ನು ಕಂಡು ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ನಾನು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹೇಳಿದ್ದರು. ಈಗ ಅವರು ಮಾತನಾಡುವುದನ್ನು ಕಲಿತಿದ್ದಾರೆ. ಆದರೆ ಯಾವುದೇ ಭೂಕಂಪವಾಗಿಲ್ಲ. 2009 ರಲ್ಲಿ ರಾಹುಲ್ ಗಾಂಧಿ ಅವರಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಿರಲಿಲ್ಲ. ಆದರೆ ಈಗ ಮಾತನಾಡುವುದನ್ನು ಕಲಿತಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿ ಮಾತನಾಡದೇ ಇದ್ದಿದ್ದರೆ ದೇಶದಲ್ಲಿ ದೊಡ್ಡ ಭೂಕಂಪವೇ ಸಂಭವಿಸುತ್ತಿತ್ತು, ಆದರೆ ರಾಹುಲ್ ಗಾಂಧಿ ಮಾತನಾಡುವ ಮುನ್ನ ಯೋಚಿಸುವುದೇ ಇಲ್ಲ ಎಂಬುದು ಸ್ಪಷ್ಟವಾಗಿದೆ.’

‘ಭಾರತದಲ್ಲಿ ಶೇ.50 ರಷ್ಟು ಬಡವರಿದ್ದಾರೆ. ನಗದು ರಹಿತ ವಹಿವಾಟಿನ ವ್ಯವಸ್ಥೆ ಭಾರತದಲ್ಲಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ನನ್ನ ಸರ್ಕಾರದ ಪ್ರಮಾಣ ಪತ್ರ ನೀಡುತ್ತಿದ್ದಾರೋ ಅಥವಾ ಅವರ ಸರ್ಕಾರದ ಪ್ರಮಾಣ ಪತ್ರ ನೀಡುತ್ತಿದ್ದಾರೋ ತಿಳಿಯುತ್ತಿಲ್ಲ. 1970 ರಿಂದ ದೇಶದ ಆರ್ಥಿಕ ತಜ್ಞರ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಲೇ ಬಂದಿರುವ ವ್ಯಕ್ತಿಯ ಬಾಯಿಂದ ಇಂತಹ ಮಾತುಗಳು ಬಂದಿರುವುದು ನನಗೆ ಅಚ್ಚರಿಯುಂಟು ಮಾಡಿದೆ.’

‘ಇನ್ನು ಭಾರತದ ಮಾಜಿ ಹಣಕಾಸು ಸಚಿವರು (ಪಿ.ಚಿದಂಬರಂ) ಭಾರತದ ಶೇ.50 ರಷ್ಟು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ. ಈ ಶೇ.50 ರಷ್ಟು ಗ್ರಾಮಗಳು ವಿದ್ಯುತ್ ಸಂಪರ್ಕವನ್ನು ಪಡೆಯದೇ ಇರುವುದಕ್ಕೆ ನಾನು ಹೊಣೆಯೇ? ನಿಮ್ಮ ಕೆಟ್ಟ ಆಡಳಿತದ ಪರಿಣಾಮವಾಗಿ ನನ್ನ ಸರ್ಕಾರದ ಕಾರ್ಯ ಕುಂಠಿತವಾಗಿದೆ ಎಂಬುದನ್ನು ಹೇಳಲು ಬೇಸರವಾಗುತ್ತದೆ. ಕೆಲವು ರಾಜಕೀಯ ನಾಯಕರು ನೋಟು ಅಮಾನ್ಯದಂತಹ ಭ್ರಷ್ಟಾಚಾರ ವಿರೋಧಿ ನಿಲುವನ್ನು ಬೆಂಬಲಿಸದೇ ಭ್ರಷ್ಟಾಚಾರ ಹಾಗೂ ಕಪ್ಪುಹಣದ ಬೆನ್ನಿಗೆ ನಿಂತಿರುವುದನ್ನು ಕಂಡು ನನಗೆ ಬೇಸರವಾಗಿದೆ.’

‘ಪಾಕಿಸ್ತಾನ ಸೇನೆಯು ನಮ್ಮ ಮೇಲೆ ಗುಂಡು ಹಾರಿಸುತ್ತಾ ಉಗ್ರರಿಗೆ ರಕ್ಷಣೆ ನೀಡಿ ಭಾರತದ ಒಳಗೆ ನುಸುಳಲು ನೆರವಾಗುವ ರೀತಿಯಲ್ಲೇ, ಕೆಲವು ವಿರೋಧ ಪಕ್ಷಗಳು ನೋಟು ಅಮಾನ್ಯ ನಿರ್ಧಾರವನ್ನು ವಿರೋಧಿಸುತ್ತಾ ಭ್ರಷ್ಟರಿಗೆ ಹಾಗೂ ಕಾಳಧನಿಕರಿಗೆ ರಕ್ಷಣೆ ನೀಡಲು ಮುಂದಾಗಿವೆ.’

Leave a Reply