ನೋಟು ಅಮಾನ್ಯದ ನಂತರ ತೆರಿಗೆ ಇಲಾಖೆಯ ಸಮರದಲ್ಲಿ ಸಿಕ್ಕ ಆಸ್ತಿಯ ಮೌಲ್ಯವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಕಳೆದ ತಿಂಗಳು 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ನಂತರ ನಡೆದ ಅಕ್ರಮ ನೋಟು ಬದಲಾವಣೆ ಹಾಗೂ ಕಾಳಧನಿಕರ ವಿರುದ್ಧ ತೆರಿಗೆ ಇಲಾಖೆ ಸಮರವನ್ನೇ ಸಾರಿರೋದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ. ಈ ಸುದೀರ್ಘ ಸಮರದಲ್ಲಿ ತೆರಿಗೆ ಇಲಾಖೆ ವಶಪಡೆಸಿಕೊಂಡಿರುವ ಸಂಪತ್ತು ಎಷ್ಟಿರಬಹುದು ಎಂಬ ಕುತೂಹಲಕಾರಿ ಪ್ರಶ್ನೆ ನಮ್ಮೆಲ್ಲರಲ್ಲೂ ಒಮ್ಮೆಯಾದರೂ ಹುಟ್ಟಿರುತ್ತದೆ. ಅದಕ್ಕೆ ಈಗ ಸಿಕ್ಕಿರುವ ಉತ್ತರ ₹ 3,180 ಕೋಟಿ.

ಹೌದು, ಪ್ರತಿ ನಿತ್ಯ ತೆರಿಗೆ ಅಧಿಕಾರಿಗಳ ದಾಳಿಯಲ್ಲಿ ಕಾಳಧನಿಕರು, ಅಕ್ರಮ ನೋಟು ಬದಲಾವಣೆಯ ದಂಧೆಕೋರರು, ಹವಾಲ ಹಣದ ದಂಧೆ, ನಕಲಿ ಬ್ಯಾಂಕ್ ಖಾತೆ ಹೀಗೆ ಅನೇಕ ಪ್ರಕರಣಗಳನ್ನು ಬಯಲಿಗೆಳೆಯಲಾಗಿದೆ. ಇಲ್ಲಿ ಹೊಸ ನೋಟುಗಳು ಕಂತೆ ಕಂತೆಯಲ್ಲಿ ಸಿಕ್ಕಿರುವುದನ್ನು ಕಂಡು ನಾವೆಲ್ಲರೂ ಬಾಯಿ ಬಿಟ್ಟುಕೊಂಡು ನೋಡಿರುವುದೂ ಉಂಟು.

ಈವರೆಗಿನ ದಾಳಿಯ ಬಗ್ಗೆ ಈಗ ಅಧಿಕೃತ ಅಂಕಿ ಅಂಶಗಳು ಹೊರಬಿದ್ದಿವೆ. ಅದರ ಪ್ರಕಾರ ತೆರಿಗೆ ಅಧಿಕಾರಿಗಳು ನವೆಂಬರ್ 8ರಿಂದ ಡಿಸೆಂಬರ್ 19ರವರೆಗೂ ದೇಶದಾದ್ಯಂತ ಒಟ್ಟು 677 ದಾಳಿ ನಡೆಸಿದ್ದಾರೆ. ಇನ್ನು ತೆರಿಗೆ ವಂಚನೆ, ಹವಾಲ ಹಣ ಸಂಪರ್ಕ ಹೊಂದಿರುವವರಿಗೆ ಸುಮಾರು 3,100 ನೋಟಿಸ್ ಜಾರಿ ಮಾಡಲಾಗಿದೆ. ಈ ದಾಳಿಯಲ್ಲಿ ಒಟ್ಟು ₹ 428 ಕೋಟಿ ಮೌಲ್ಯದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಆ ಪೈಕಿ ₹ 86 ಕೋಟಿಯಷ್ಟು ಹಣ ಹೊಸ ₹ 2000 ಮುಖಬೆಲೆಯ ನೋಟಿನ ರೂಪದಲ್ಲಿದ್ದವು. ಇನ್ನು ಅಕ್ರಮ ಆಸ್ತಿ ಹಾಗೂ ಇತರೆ ಎಲ್ಲ ಸೇರಿದಂತೆ ಒಟ್ಟು ₹ 3,185 ಕೋಟಿ ಮೌಲ್ಯದಷ್ಟಿದೆ.

ತೆರಿಗೆ ಅಧಿಕಾರಿಗಳು 220 ಪ್ರಕರಣಗಳನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಲಾಖೆಗೆ ನೀಡಲಾಗಿದೆ. ಇನ್ನು ತೆರಿಗೆ ಇಲಾಖೆಯು ತನ್ನ ಅಧಿಕಾರಿಗಳು ವಶಪಡಿಸಿಕೊಂಡಿರುವ ಹೊಸ ನೋಟುಗಳನ್ನು ಹಾಗೇ ಇಟ್ಟು ಕೊಳ್ಳುವ ಬದಲಿಗೆ ಬ್ಯಾಂಕಿಗೆ ಠೇವಣಿ ಮಾಡಬೇಕು ಎಂದು ಸೂಚನೆ ನೀಡಿದೆ. ಆ ಮೂಲಕ ಹೊಸ ನೋಟುಗಳು ಮತ್ತೆ ವ್ಯವಸ್ಥೆಯಲ್ಲಿ ಚಲಾವಣೆಗೆ ಬರಲಿದೆ.

Leave a Reply