ಗೋಪಾಲನ್ ಗ್ರೂಪ್ಸ್ ಸೇರಿದಂತೆ 20 ಕಡೆ ಐಟಿ ದಾಳಿ, ಮೋದಿ ವಿರುದ್ಧ ಮುಂದುವರಿದ ರಾಹುಲ್ ವಾಗ್ದಾಳಿ, ರೈತರ ಸಾಲ ಮನ್ನಾಕ್ಕೆ ಎಚ್ಡಿಕೆ ಆಗ್ರಹ

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವದ ಸ್ಮರಣಾರ್ಥ ನಾಣ್ಯ, ಮೈಸೂರು ವಿವಿಯ ಸಚಿತ್ರ ಸಂಪುಟ, ಕರ್ನಾಟಕ ವಿಶ್ವಕೋಶ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ 20 ಕಡೆ ತೆರಿಗೆ ಅಧಿಕಾರಿಗಳ ದಾಳಿ

ಅಕ್ರಮ ಹಣದ ವಹಿವಾಟು, ಅಕ್ರಮ ನೋಟು ಬದಲಾವಣೆ, ಕಪ್ಪುಹಣದಲ್ಲಿ ಚಿನ್ನ ಖರೀದಿ ಸೇರಿದಂತೆ ವಿವಿಧ ದೂರುಗಳ ಆಧಾರದ ಮೇಲೆ 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿರುವ ತೆರಿಗೆ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದಾರೆ. ಗೋಪಾಲನ್ ಗ್ರೂಪ್ ನ ಕಚೇರಿಗಳು, ಗುತ್ತಿಗೆದಾರರು, ಉದ್ಯಮಿಗಳು ಹಾಗೂ ಚಿನ್ನದ ಮಳಿಗೆಗಳು ಸೇರಿದಂತೆ ಹಲವೆಡೆಗಳಲ್ಲಿ ತೆರಿಗೆ ಇಲಾಖೆ ದಾಳಿ ನಡೆಸಿದೆ. ನೋಟು ಅಮಾನ್ಯ ನಿರ್ಧಾರದ ನಂತರ ಗೋಪಾಲನ್ ಗ್ರೂಪ್ ಅಕ್ರಮವಾಗಿ ವಹಿವಾಟು ನಡೆಸುತ್ತಿದೆ ಎಂಬ ದೂರು ತೆರಿಗೆ ಅಧಿಕಾರಿಗಳಿಗೆ ರವಾನೆಯಾಗಿತ್ತು. ಇನ್ನು ಅಕ್ರಮವಾಗಿ ನೋಟು ಬದಲಾವಣೆ ಮಾಡುತ್ತಿದ್ದ ಮಾಹಿತಿ ಆಧಾರದ ಮೇಲೆ ಕೆಲವು ಗುತ್ತಿಗೆದಾರರು ಹಾಗೂ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ. ಇನ್ನು ಕಪ್ಪುಹಣವನ್ನು ಬದಲಿಸಲು ಚಿನ್ನದ ಗಟ್ಟಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಕೆಲವು ಚಿನ್ನಾಭರಣ ಮಳಿಗೆಗಳ ಮೇಲೂ ದಾಳಿ ನಡೆಸಲಾಗಿದೆ. ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಮೊದಲ ಹಂತದ ಶೋಧಕಾರ್ಯ ಮುಕ್ತಾಯವಾದ ನಂತರ ಈ ದಾಳಿಯ ಬಗ್ಗೆ ಸಂಪೂರ್ಣ ವಿವರವನ್ನು ತೆರಿಗೆ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಮೋದಿ ವಿರುದ್ಧ ರಾಹುಲ್ ಟೀಕೆ

ನೋಟು ಅಮಾನ್ಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ತಮ್ಮ ಟೀಕೆ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ನೋಟು ಅಮಾನ್ಯ ನಿರ್ಧಾರ ಭಾರತದ ಅರ್ಥವ್ಯವಸ್ಥೆಯನ್ನು ಕೊಳ್ಳೆ ಹೊಡೆಯಲು ತೆಗೆದುಕೊಂಡ ನಿರ್ಧಾರ’ ಎಂದು ವಾಗ್ದಾಳಿ ಮಾಡಿದ್ದಾರೆ.

‘ಕಾಂಗ್ರೆಸ್ ಪಕ್ಷ ಭಾರತದಿಂದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಇಚ್ಛಿಸುತ್ತದೆ. ಭ್ರಷ್ಟಾಚಾರ ವಿರುದ್ಧದ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸುತ್ತದೆ. ಆದರೆ, ನೋಟು ಅಮಾನ್ಯ ನಿರ್ಧಾರ ಕಪ್ಪು ಹಣದ ವಿರುದ್ಧ ಹೋರಾಡಲು ತೆಗೆದುಕೊಂಡಿಲ್ಲ. ಇದೊಂದು ದರೋಡೆಯ ನಿರ್ಧಾರ. ಪ್ರಧಾನಿ ಮೋದಿ ದೇಶದ ರೈತರ ಕೂಗನ್ನು ಕೇಳಲಿಲ್ಲ. ಅವರ ಸಾಲವನ್ನು ಮನ್ನಾ ಮಾಡುವ ಬದಲು, ದೇಶದ 15 ಶ್ರೀಮಂತರ ₹ 1.40 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಸರ್ಕಾರ ದೇಶವನ್ನು ಇಬ್ಬಾಗ ಮಾಡಿದೆ. ಒಂದು ಕಡೆ ದೇಶದ 50 ಶ್ರೀಮಂತರನ್ನು ಪ್ರತ್ಯೇಕಿಸಿ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಿದರೆ, ಉಳಿದ ಭಾಗದಲ್ಲಿ ಶೇ.99 ರಷ್ಟು ದೇಶದ ಬಡವರು, ಪ್ರಾಮಾಣಿಕ ಕಾರ್ಮಿಕರನ್ನು ಇಟ್ಟು ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ದೇಶದ ಶೇ.99 ರಷ್ಟು ಜನರ ಬಳಿ ಕಪ್ಪುಹಣವಿಲ್ಲ. ಕಪ್ಪುಹಣದ ಶೇ.99 ರಷ್ಟು ಹಣ ಸ್ವಿಸ್ ಬ್ಯಾಂಕಿನಲ್ಲಿದೆ. ಶೇ. 6 ರಷ್ಟು ಹಣ ಮಾತ್ರ ನೋಟಿನ ರೂಪದಲ್ಲಿದೆ. ನೋಟು ಅಮಾನ್ಯ ನಿರ್ಧಾರವನ್ನು ಆರಂಭದಲ್ಲಿ ಭ್ರಷ್ಟಾಚಾರ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿದ್ದರು. ನಂತರ ಉಗ್ರವಾದದ ವಿರುದ್ಧ ಹೋರಾಡಲು ಎಂದು ಹೇಳಿದರು. ಈಗ ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಶ್ರೀಮಂತರ 8 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲು ಮೋದಿ ಯೋಚಿಸಿದ್ದಾರೆ. ಬಡವರಿಂದ ಹಣವನ್ನು ಕಿತ್ತು ಶ್ರೀಮಂತರಿಗೆ ಕೊಡಲು ಮುಂದಾಗಿದ್ದಾರೆ’ ಎಂದು ರಾಹುಲ್ ಗಾಂಧಿ ಅವರು ಮೋದಿ ಅವರಿಗೆ ಮಾತಿನ ಮೂಲಕವೇ ಚಾಟಿ ಬೀಸಿದರು.

ಅಕ್ರಮ ಮನೆಗಳ ಸಕ್ರಮ ಕಾಲಾವಧಿ ವಿಸ್ತರಣೆ

ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳ ಸಕ್ರಮಗೊಳಿಸಲು ನೀಡಲಾಗಿದ್ದ ಕಾಲಾವಧಿಯನ್ನು ಸರ್ಕಾರ ವಿಸ್ತರಿಸಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ಶೇ.50 ರಷ್ಟು ದಂಡದ ಪ್ರಮಾಣ ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಹೇಳಿದಿಷ್ಟು…

‘ಈ ನಿರ್ಧಾರದಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ 40 ಲಕ್ಷ ಅರ್ಜಿಗಳು ಬರುವ ನಿರೀಕ್ಷೆ ಇದೆ. ಇದುವರೆಗೂ 20 ಲಕ್ಷ ಅರ್ಜಿಗಳು ಬಂದಿವೆ. ಈ ಸಕ್ರಮಗೊಳಿಸುವ ಕಾಲಾವಕಾಶವನ್ನು ಮುಂದಿನ ವರ್ಷ ಜನವರಿ 21ರವರೆಗೂ ವಿಸ್ತರಿಸಲಾಗಿದೆ. ಈಗ ವಿಧಿಸಲಾಗಿರುವ ದಂಡದ ಪ್ರಮಾಣ ಬಡವರಿಗೆ ದುಬಾರಿಯಾಗಲಿದ್ದು, ಇದನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಡಿ.28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.’

ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಸದ್ಯದಲ್ಲೇ ಕುತ್ತು ಬರಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ‘ಯಡಿಯೂರಪ್ಪನವರು ಭವಿಷ್ಯ ನುಡಿಯುವುದರಲ್ಲಿ ನಿಸ್ಸೀಮರು. ಯಾಕೆಂದರೆ ಅವರು ಈಗಾಗಲೇ ಒಳಗೆ ಹೋಗಿ ಬಂದಿದ್ದಾರೆ. ಅವರಿಗೆ ಒಳಗೆ ಹಾಗೂ ಹೊರಗಿನ ಎಲ್ಲ ವಿಚಾರ ತಿಳಿದಿರುತ್ತದೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಸಾಲ ಮನ್ನಾಕ್ಕೆ ಹೆಚ್ಡಿಕೆ ಆಗ್ರಹ

ರಾಜ್ಯದಲ್ಲಿ ಈರುಳ್ಳಿ, ತೆಂಗು ಬೆಳೆಗೆ ಸಮರ್ಪಕ ಮಾರುಕಟ್ಟೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಈಗಲಾದರೂ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ರೈತರ ದಿನದ ಅಂಗವಾಗಿ ಟ್ವಿಟರ್ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ ಹೆಚ್ಡಿಕೆ, ‘ಸಾಲ ಮತ್ತು ಬರದಿಂದ ರೈತರು ಹೈರಾಣಾಗಿದ್ದಾರೆ. ರೈತರ ಕೂಗು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಕೇಂದ್ರ ಸರ್ಕಾರ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತದೆ. ಆದರೆ ರೈತರ ಸಾಲದ ಬಗ್ಗೆ ಚಕಾರ ಎತ್ತುವುದಿಲ್ಲ’ ಎಂದು ಟೀಕಿಸಿದ್ದಾರೆ.

ಲೈಂಗಿಕ ಸೀಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದ ಕಾಂಗ್ರೆಸ್ ಶಾಸಕ

ಇತ್ತೀಚೆಗಷ್ಟೇ ಮಾಜಿ ಸಚಿವ ಎಚ್.ವೈ ಮೇಟಿ ಅವರ ಲೈಂಗಿಕ ಪ್ರಕರಣದ ಸೀಡಿ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿತ್ತು. ಈಗ ಅಂತಹುದೇ ಮತ್ತೊಂದು ಪ್ರಕರಣ ಬರುತ್ತದೆಯೇ ಎಂಬ ಅನುಮಾನಗಳು ಹುಟ್ಟುಕೊಂಡಿವೆ. ಕಾರಣ, ಕಾಂಗ್ರೆಸ್ ನ ಬಾಗಲಕೋಟೆಯ ಬಿಳಿಗಿ ಶಾಸಕ ಜಿ.ಟಿ ಪಾಟೀಲ್ ಅವರ ರಾಸಲೀಲೆ ಸೀಡಿ ಇದೆ ಎಂಬ ವದಂತಿ ಹಬ್ಬಿದೆ. ಇದರ ಬೆನ್ನಲ್ಲೇ ಶಾಸಕರು ಈ ಸೀಡಿಯನ್ನು ಕನ್ನಡದ 10 ವಾಹಿನಿಗಳಲ್ಲೂ ಪ್ರಸಾರ ಮಾಡಬಾರದು ಹಾಗೂ ಆ ಶೀರ್ಷಿಕೆಯನ್ನಾಗಲಿ ಪ್ರಸಾರ ಮಾಡಬಾರದು ಎಂದು ರಾಜ್ಯ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಬಳಿ ಹಾಲಿ ಶಾಸಕರೊಬ್ಬರ ರಾಸಲೀಲೆ ಸಂಬಂಧಿಸಿದ ಸೀಡಿ ಇದೆ ಎಂಬ ಸುದ್ದಿಯನ್ನು ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಟೀಲ್ ಅವರು ಇಂತಹ ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದಾರೆ.

Leave a Reply