ಜಮ್ಮು ಕಾಶ್ಮೀರದ ಲಕ್ಷಾಂತರ ಹಿಂದು ನಿರಾಶ್ರಿತರಿಗೆ ವಾಸ ಪ್ರಮಾಣ ಪತ್ರ ನೀಡಿದ ಮೆಹಬೂಬ್ ಮುಫ್ತಿ, ಭೌಗೋಳಿಕ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿ ಇಸ್ಲಾಂವಾದಿಗಳು

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ 7 ದಶಕಗಳಿಂದ ಜಮ್ಮು ಕಾಶ್ಮೀರದಲ್ಲಿ ನಿರಾಶ್ರಿತರಾಗಿಯೇ ಜೀವನ ಮಾಡುತ್ತಿರುವ ಪಶ್ಚಿಮ ಪಾಕಿಸ್ತಾನದ ಹಿಂದು ನಿರಾಶ್ರಿತರಿಗೆ, ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ವಾಸ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯನ್ನು ವಿತರಿಸಿದ್ದಾರೆ. ಸರ್ಕಾರದ ಈ ನಿರ್ಧಾರ ನಿರಾಶ್ರಿತರಾಗಿಯೇ ಬದುಕುತ್ತಿರುವ ಹಿಂದುಗಳಿಗೆ ಸಂವಿಧಾನಿಕ ಹಕ್ಕು ಸಿಗುವ ಭರವಸೆ ಮೂಡಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಪ್ರತ್ಯೇಕತಾವಾದಿಗಳು ಹಾಗೂ ವಿರೋಧ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಕೋಪಕ್ಕೆ ಕಾರಣವಾಗಿದೆ.

1947ರ ದೇಶ ವಿಭಜನೆ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನ ಪ್ರದೇಶದಿಂದ ನಿರಾಶ್ರಿತರಾಗಿ ವಲಸೆ ಬಂದ ಸಾವಿರಾರು ಹಿಂದು ಕುಟುಂಬಗಳು ಈವರೆಗೂ ನಿರಾಶ್ರಿತರಾಗಿಯೇ ಬದುಕಿದ್ದಾರೆ ಎಂಬುದು ನಂಬಲೇಬೇಕಾದ ಸತ್ಯ. ಸತತ 7 ದಶಕಗಳಿಂದಲೂ ನಾಗರೀಕ ಹಕ್ಕಿಗಾಗಿ ಇವರು ಸರ್ಕಾರಕ್ಕೆ ಮನವಿ ನೀಡುತ್ತಿದ್ದರೂ, ಪ್ರತಿ ಬಾರಿಯೂ ಸರ್ಕಾರ ಇವರ ಮನವಿಯನ್ನು ಕಡೆಗಣಿಸುತ್ತಲೇ ಬಂದಿತ್ತು.

ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಮೈತ್ರಿಯ ಸರ್ಕಾರ ಇರುವುದರಿಂದ ಈ ಹಿಂದು ನಿರಾಶ್ರಿತರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಅದರ ಬೆನ್ನಲ್ಲೇ ಮೆಹಬೂಬ್ ಮುಫ್ತಿ ಸರ್ಕಾರ ಈ ನಿರಾಶ್ರಿತರಿಗೆ ವಾಸ ಪ್ರಮಾಣ ಪತ್ರವನ್ನು ನೀಡಿದೆ. ಸರ್ಕಾರದ ಈ ನಿರ್ಧಾರ ಪ್ರತ್ಯೇಕತವಾದಿಗಳ ಚಿತ್ತ ಕೆಡಿಸಿದ್ದು, ಇದರ ವಿರುದ್ಧ ಹೋರಾಡಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧವಿರುವುದಾಗಿ ಪ್ರತ್ಯೇಕತಾವಾದಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬುರ್ಹಾನ್ ವಾನಿ ಹತ್ಯೆಯ ನಂತರ ಸುದೀರ್ಘ ನಾಲ್ಕು ತಿಂಗಳ ಕಾಲ ಅಶಾಂತಿಯಿಂದ ಕೂಡಿದ್ದ ಕಣಿವೆ ರಾಜ್ಯದಲ್ಲಿ ಮತ್ತೆ ಶಾಂತಿ ಸುವ್ಯವಸ್ಥೆ ಕದಡದಂತೆ ನೋಡಿಕೊಳ್ಳಲು ಪೊಲೀಸ್ ಮತ್ತು ಅರೆ ಸೇನಾ ಪಡೆಗಳಿಗೆ ಜವಾಬ್ದಾರಿ ನೀಡಲಾಗಿದೆ.

ಸದ್ಯ ಜಮ್ಮು ಕಾಶ್ಮೀರ ಸರ್ಕಾರ ಕೇವಲ ವಾಸ ಪ್ರಮಾಣ ಪತ್ರವನ್ನು ಮಾತ್ರ ನೀಡಿದೆ. ಈ ನಿರ್ಧಾರದಿಂದ ಲಕ್ಷಾಂತರ ಹಿಂದು ನಿರಾಶ್ರಿತರ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತದೆ ಎಂದು ಭಾವಿಸಿದರೆ ಅದು ತಪ್ಪು. ಕಾರಣ, ಇವರು ಜಮ್ಮು ಕಾಶ್ಮೀರದ ನಿವಾಸಿಗಳು ಎಂದು ಗುರುತಿಸಲಷ್ಟೇ ಈ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ನೀಡಲಾಗಿದೆ.

‘ನಿರಾಶ್ರಿತರಿಗೆ ಕೇವಲ ಗುರುತಿನ ಚೀಟಿ ನೀಡಲಾಗುತ್ತಿದೆಯೇ ಹೊರತು, ಅವರಿಗೆ ಯಾವುದೇ ರೀತಿಯ ಖಾಯಂ ನಿವಾಸಿಗಳು ಅನುಭವಿಸುವ ಸೌಕರ್ಯವನ್ನು ನೀಡಿಲ್ಲ. ಈ ನಿರಾಶ್ರಿತರು ಪಶ್ಚಿಮ ಪಾಕಿಸ್ತಾನದ ನಿವಾಸಿಯಾಗಿದ್ದು, ಈಗ ಇಲ್ಲಿ ವಾಸಿಸುತ್ತಿದ್ದಾರೆ ಎಂದು ಗುರುತಿಸಲಷ್ಟೇ ಪ್ರಮಾಣ ಪತ್ರ ನೀಡಲಾಗಿದೆ. ಉಳಿದಂತೆ ಯಾವುದೇ ಅನುಕೂಲಗಳನ್ನು ಮಾಡಿಕೊಟ್ಟಿಲ್ಲ’ ಎಂದು ಸ್ವತಃ ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ನಯೀಮ್ ಅಕ್ತರ್ ತಿಳಿಸಿದ್ದಾರೆ.

ನಿರಾಶ್ರಿತರಾಗಿ ಬದುಕುತ್ತಿರುವ ಲಕ್ಷಾಂತರ ಹಿಂದುಗಳಿಗೆ ಇಲ್ಲಿನ ಚುನಾವಣೆಗಳಲ್ಲಿ ಸ್ಪರ್ಧಿಸಲು, ಮತದಾನ ಮಾಡಲು, ಖಾಯಂ ಆಸ್ತಿ ಹೊಂದುವುದಾಗಲಿ ಹಾಗೂ ರಾಜ್ಯ ಸರ್ಕಾರದ ನೌಕರಿ ಪಡೆಯುವ ಅವಕಾಶವನ್ನಾಗಲಿ ಕೊಟ್ಟಿಲ್ಲ. ಒಂದು ವೇಳೆ ಇವರಿಗೆ ಈ ಅವಕಾಶ ಕಲ್ಪಿಸಿ ಬಿಟ್ಟರೆ, ಮುಂಬರುವ ಚುನಾವಣೆಗಳಲ್ಲಿ ಇವರ ಮತದಾನ ಪ್ರಮುಖ ಪಾತ್ರ ವಹಿಸಲಿದೆ. ಇವರಿಗೆ ಎಲ್ಲ ರೀತಿ ಹಕ್ಕು ಸಿಕ್ಕಿಬಿಟ್ಟರೆ ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ ಪ್ರಾಬಲ್ಯ ಕಡಿಮೆಯಾಗಲಿದೆ ಎಂಬುದು ಪ್ರತ್ಯೇಕತಾವಾದಿಗಳ ಆತಂಕ. ಹೀಗಾಗಿಯೇ ಕೇವಲ ವಾಸ ಪ್ರಮಾಣ ಪತ್ರ ನೀಡಿದ್ದಕ್ಕೆ ಪ್ರತ್ಯೇಕತಾವಾದಿಗಳು ಹಾಗೂ ವಿಪಕ್ಷಗಳಿಂದ ಇಷ್ಟು ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತಿದೆ ಪ್ರತ್ಯೇಕತಾವಾದಿಗಳ ಮುಖಂಡರಾದ ಸೈಯದ್ ಅಲಿ ಶಾ ಗಿಲಾನಿ, ಮೀರ್ವೈಜ್ ಉಮರ್ ಫಾರೂಕ್ ಮತ್ತು ಮೊಹಮದ್ ಯಾಸಿನ್ ಮಲಿಕ್ ಅವರ ಹೇಳಿಕೆ. ‘ಸರ್ಕಾರ ಹಿಂದು ನಿರಾಶ್ರಿತರಿಗೆ ವಾಸ ಪ್ರಮಾಣ ಪತ್ರ ನೀಡುತ್ತಿರುವುದು ಸರ್ಕಾರದ ಮತ್ತೊಂದು ಕಾಶ್ಮೀರ ವಿರೋಧಿ ಹಾಗೂ ಮುಸ್ಲಿಂ ವಿರೋಧಿ ನಡೆಯಾಗಿದೆ. ಈ ನಡೆಯನ್ನು ವಿರೋಧಿಸಲು ಕಾಶ್ಮೀರದ ಜನರು ಎಂತಹುದೇ ತ್ಯಾಗಕ್ಕೂ ಸಿದ್ಧ’ ಎಂಬುದು ಈ ಪ್ರತ್ಯೇಕತಾವಾದಿ ಮುಖಂಡರ ಹೇಳಿಕೆ.

‘ಬಿಜೆಪಿಯು ಈ ಹಿಂದು ನಿರಾಶ್ರಿತರನ್ನು ಬಳಸಿಕೊಂಡು ಕಣಿವೆ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವುದು ಬಿಜೆಪಿಯ ಈ ನಡೆಯ ಹಿಂದಿನ ಉದ್ದೇಶ. ಬಿಜೆಪಿಯು ಈ ನಿರಾಶ್ರಿತರಿಗೆ ಎಲ್ಲ ರೀತಿಯ ಸಂವಿಧಾನಾತ್ಮಕ ಹಕ್ಕು ನೀಡಲು ಪ್ರಯತ್ನಿಸುತ್ತಿದೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡರು ಕಿಡಿ ಕಾರಿದ್ದಾರೆ. ಈ ಎಲ್ಲ ವಿರೋಧಗಳಿಂದ ಕಾಶ್ಮೀರದಲ್ಲಿ 70 ವರ್ಷಗಳಿಂದ ಯಾವುದೇ ಸೌಕರ್ಯವನ್ನು ಪಡೆಯದೇ ನಿರಾಶ್ರಿತರಾಗಿಯೇ ಬದುಕುತ್ತಿರುವ ಲಕ್ಷಾಂತರ ಹಿಂದುಗಳಿಗೆ ಕಿಂಚಿತ್ತು ಸೌಲಭ್ಯಗಳು ಸಿಗದಿರುವಂತೆ ಮಾಡಲು ಪ್ರತ್ಯೇಕತಾವಾದಿಗಳು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟವಾಗಿದೆ.

ಕೇವಲ ವಾಸ ಪ್ರಮಾಣ ಪತ್ರ ಹಂಚಿಕೆಗೇ ಇಷ್ಟು ದೊಡ್ಡ ಮಟ್ಟದ ರಾಜಕೀಯ ಚರ್ಚೆ ಹಾಗೂ ವಿರೋಧ ಎದ್ದಿರುವಾಗ ಈ ಸಾವಿರಾರು ಹಿಂದು ಕುಟುಂಬಗಳಿಗೆ ಪೂರ್ಣ ಪ್ರಮಾಣದ ಸಂವಿಧಾನಾತ್ಮಕ ಹಕ್ಕು ಸಿಗುವುದಾದರೂ ಯಾವಾಗ?

Leave a Reply