ಭೂಗರ್ಭದಲ್ಲಿ ಹರಿದಾಡುತ್ತಿರುವ ಕಬ್ಬಿಣದ ನದಿ– ಅದರ ಮೇಲೆ ನಿಂತಿದೆ ವಿಶಾಲ ಗುಪ್ತ ಸಾಗರ: ಈ ಅದೃಶ್ಯ ಲೋಕ ಅನಾವರಣಗೊಂಡಿದ್ದು ಹೇಗೆ?

author-ananthramuಭೂಮಿಯ ಮೇಲೆ ಏನಿದೆ ಎಂದು ಕೇಳಿದರೆ ಸಾವಿರ ಸಾವಿರ ವಸ್ತುಗಳ ಪಟ್ಟಿ ಕೊಡಬಹುದು- ಅಥವಾ ಪ್ರಾಥಮಿಕ ಶಾಲೆಯಲ್ಲೇ ಉರುಹಚ್ಚಿದಂತೆ` ಮುಕ್ಕಾಲುಪಾಲು ಸಾಗರ, ಕಾಲುಭಾಗ ಭೂಮಿ’ ಎಂದು ಹೇಳಿ ಒಂದೇ ಮಾತಿನಲ್ಲಿ ಪ್ರಶ್ನೆಗೆ ತೆರೆ ಎಳೆಯಬಹುದು. ಆದರೆ ಭೂಗರ್ಭದಲ್ಲೇನಿದೆ ಎಂದು ಮಾತು ಉಲ್ಟಾ ತಿರುಗಿಸಿದರೆ ಎಲ್ಲರೂ ಸಲೀಸಾಗಿ ಉತ್ತರ ಕೊಡಲಾರರು. ಆಳ ಗಣಿ, ತೈಲಕ್ಕಾಗಿ ಕೊರೆದ ರಂಧ್ರಗಳು ಕೂಡ ಭೂಗರ್ಭವಂತಿರಲಿ, ಭೂಮಿಯ ಹೊರಪದರವನ್ನೂ

ಭೇದಿಸಿಲ್ಲ. ನಮ್ಮ ಕಾಲಡಿಯ ನೆಲದಲ್ಲಿ ಏನಿದೆ ಎಂದು ಸರಳ ವಿವರಣೆ ಕೊಡಬೇಕೆಂದರೆ ನಮ್ಮ ಕಣ್ಣಮುಂದೆ ಇರುವ ಕೋಳಿಮೊಟ್ಟೆಯನ್ನು ಪರಿಗಣಿಸಬಹುದು. ಅದರ ಹೊರಭಾಗ ತೆಳುಸಿಪ್ಪೆ, ಮಧ್ಯದಲ್ಲಿ ಮೃದುಭಾಗ, ಕೇಂದ್ರದಲ್ಲಿರುವುದು ಹಳದಿಬಂಡಾರ. ಈ ವಾಸ್ತವತೆಯನ್ನು ಭೂಮಿಗೂ ಅನ್ವಯಿಸಿದರೆ ಕ್ರಮವಾಗಿ ಹೊರಚಿಪ್ಪು-ಗರಿಷ್ಠ 70 ಕಿಲೋಮೀಟರ್ ಮಂದ. ಆದರೆ ಭೂಮಿಯ ಲೆಕ್ಕದಲ್ಲಿ ಅದು ತೀರ ತೆಳುವಾದ ಪೊರೆ. ಮಧ್ಯಗೋಳ-2900 ಕಿಲೋ ಮೀಟರ್‍ವರೆಗೆ ವಿಸ್ತರಿಸಿರುತ್ತದೆ. ನಾವು ಗಣಿಮಾಡುವ ಬಹುತೇಕ ಲೋಹಗಳೆಲ್ಲವನ್ನೂ ಹೊತ್ತುತಂದು ಚಿಪ್ಪಿನಲ್ಲಿಟ್ಟಿರುವುದು ಜ್ವಾಲಾಮುಖಿಗಳೇ. ಮಧ್ಯಭಾಗದಿಂದ ಭೂಗರ್ಭಕ್ಕೆ ತಲಪಬೇಕೆಂದರೆ ಇನ್ನೂ 3,470 ಕಿಲೋ ಮೀಟರ್ ಆಳಕ್ಕೆ ಇಳಿಯಬೇಕು, ಅದು ಸಾಧ್ಯವಾಗದ ಮಾತು. ಏಕೆಂದರೆ ಸೂರ್ಯನ ಮೇಲ್ಮೈ ಉಷ್ಣತೆ ಎಷ್ಟಿದೆಯೋ ಅಷ್ಟು ಭೂಗರ್ಭದಲ್ಲೂ ಇದೆ. ಪ್ರತ್ಯಕ್ಷವಾಗಿ ನೋಡದೆ ಪರೋಕ್ಷ ವಿಧಾನಗಳಿಂದ ಭೂಮಿಯ ರಚನೆ ಹೀಗಿದೆ ಎಂದು ವಿಜ್ಞಾನಿಗಳು ಹೇಳಿ ಶತಮಾನವೇ ಆಗಿದೆ.

ಭೂಗರ್ಭದಲ್ಲಿ ನಿಕ್ಕಲ್, ಕಬ್ಬಿಣವಿದೆಯೆಂದು ಸಕಾರಣವಾಗಿ ವಿಜ್ಞಾನಿಗಳು ಊಹಿಸಿದ್ದಾರೆ. ಭೂಮಿಯ ಮೇಲೆ ಬೀಳುವ ಉಲ್ಕೆಗಳ ರಾಸಾಯನಿಕ ಸಂಯೋಜನೆಯೂ ಇದೇ. ಇಷ್ಟೆಲ್ಲ ಸಾಧ್ಯವಾಗಿದ್ದು ಹೇಗೆ? ಭೂಕಂಪನಗಳು ಭೂಮಿಯೊಳಗೆ ಹಾಯುವಾಗ ಈ ಮೂರೂ ಗೋಳದಲ್ಲಿ ವೇಗದಲ್ಲಿ ವ್ಯತ್ಯಯ ತೋರುತ್ತವೆ. ಒಂದು ಲೆಕ್ಕದಲ್ಲಿ ಈ ಭೂಕಂಪನಗಳನ್ನು ಎಕ್ಸ್-ಕಿರಣಗಳಿಗೆ ಹೋಲಿಸಬಹುದು.

ಈಗಿನ ಸಂಗತಿ-ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯದ ಒಂದು ತಜ್ಞ ತಂಡಕ್ಕೆ ಹೊಸ ಐಡಿಯಾ ಬಂತು. ಭೂಕಂಪನಗಳ ಅಧ್ಯಯನದಿಂದ ಭೂಮಿಯ ಒಳರಚನೆಯ ಏನೆಲ್ಲ ಅಗೋಚರ ಭಾಗಗಳನ್ನು ತಿಳಿಯಬಹುದಾದರೆ, ಇನ್ನಷ್ಟು ವಿವರಗಳನ್ನು ಏಕೆ ಪಡೆಯಬಾರದು ಎಂದು ಅಮೆರಿಕದ ಸುಮಾರು 2000 ಭೂಕಂಪನ ಮಾಪಕಗಳು ದಾಖಲೆ ಮಾಡಿದ 500 ಭೂಕಂಪನಗಳ ಮಾಹಿತಿಯನ್ನು ಅಧ್ಯಯನ ಮಾಡಿದವು. ದೊರೆತ ಮಾಹಿತಿಯು ಅಷ್ಟೇ ಕುತೂಹಲಕರವಾಗಿದೆ-ನಾವು ಯಾವುದಾದರೊಂದು ಗಂಟೆ ಬಾರಿಸುತ್ತೇವೆ ಎನ್ನಿ, ಅದರಿಂದ ನಾದ ಹೊಮ್ಮುತ್ತ ಅಲೆಅಲೆಯಾಗಿ ಹೊರಟು ನಮಗೆ ಕೇಳಿಸುತ್ತದೆ. ಅನಂತರ ಕ್ಷೀಣಿಸುತ್ತದೆ. ಭೂಕಂಪನಗಳೂ ಅಷ್ಟೇ. ಭೂಮಿಯ ಒಳಭಾಗವನ್ನು ತಟ್ಟಿದಾಗ ಗಂಟಾನಾದದಂತೆ ಭೂಮಿ ಶಬ್ದಹೊರಡಿಸುತ್ತದೆ. ಹೀಗೆ ಅಧ್ಯಯನ ಮಾಡುವಾಗ ಅನಿರೀಕ್ಷಿತವೆಂಬಂತೆ ಭೂಮಿಯ 700 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನ ತರಂಗಗಳು ಇದ್ದಕ್ಕಿದ್ದಂತೆ ವೇಗ ತಗ್ಗಿಸಿ ಮಂದಗತಿಯಲ್ಲಿ ಸಾಗಿದ್ದು ಗಮನಕ್ಕೆ ಬಂತು. ನೂರಾರು ದಾಖಲೆಗಳನ್ನು ಪರಿಶೀಲಿಸಿದರೂ ಅದೇ ಫಲಿತಾಂಶ. ಭೂಕಂಪನಗಳು ಪರೋಕ್ಷವಾಗಿ ಒಂದು ಸತ್ಯವನ್ನು ಮನಗಾಣಿಸಿದ್ದವು. ಈ ಆಳದಲ್ಲಿ ಭಾರಿ ಪ್ರಮಾಣದ ನೀರಿದೆ. ಎಷ್ಟು ಪ್ರಮಾಣ? ನಾವು ಸೋಜಿಗ ಪಡುವಷ್ಟು ಅಲ್ಲ, ದಿಗಿಲುಪಡುವಷ್ಟು. ಈಗ ಭೂಮಿಯ ಮೇಲಿರುವ ಒಟ್ಟೂ ಸಾಗರಗಳ ನೀರಿನ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚು! ಭೂಮಿಗೆ ನೀರನ್ನು ತಂದದ್ದು ಧೂಮಕೇತುಗಳಲ್ಲ, ಆಳದಲ್ಲಿರುವ ಸಾಗರವೇ ಎಂಬ ಸಂದೇಶ ಕೊಟ್ಟಿದೆ. ಪ್ರಯೋಗಾಲಯದಲ್ಲೂ ಇದನ್ನು ದೃಢಪಡಿಸಿಕೊಂಡಿದ್ದಾರೆ. ಆ ಆಳದಿಂದ ಹೊರಬಂದ ವಜ್ರದಲ್ಲಿ ನೀರಿರುವುದನ್ನು ಕಂಡಿದ್ದಾರೆ. ವಾಸ್ತವವಾಗಿ ಭೂಮಿಯ ಈ ಸಾಗರದ ನೀರನ್ನೆಲ್ಲ ಹೊರಹಾಕಿದರೆ ದೊಡ್ಡ ದೊಡ್ಡ ಪರ್ವತಗಳ ಶಿಖರಗಳಷ್ಟೇ ಕಾಣುತ್ತವಂತೆ. ಬಚಾವಾಗಿದ್ದೇವೆ, ನಿಸರ್ಗ ಸದ್ಯಕ್ಕೆ ಅದು ಹೊರಬರದಂತೆ ಬಂದ್ ಮಾಡಿದೆ.

iron-jet-min

ಹರಿಯುವ ಕಬ್ಬಿಣದ ನದಿ

ಕೆನಡದ ಅಲಾಸ್ಕ ಮತ್ತು ರಷ್ಯದ ಸೈಬೀರಿಯ ಭಾಗದಲ್ಲಿ ಒಂದುವೇಳೆ ಭೂಗರ್ಭ ತಲಪಲು ಒಂದು ದೊಡ್ಡ ಬಾವಿ ಕೊರೆದಿದ್ದಾರೆ ಎನ್ನೋಣ. ಭೂಮಿಯ 6,370 ಕಿಲೋ ಮೀಟರ್ ಆಳದಿಂದ ಭೂಮಿಯ ಬುಗ್ಗೆ ರೂಪದಲ್ಲಿ ಕಬ್ಬಿಣದ ನದಿ ಉಕ್ಕಿ ಇಡೀ ಭೂಮಿಯನ್ನೇ ಬಲಿತೆಗೆದುಕೊಳ್ಳುವ ಸಾಧ್ಯತೆ ಎದುರಾಗುತ್ತದೆ. ಹೀಗಾಗುವುದಿಲ್ಲ ಬಿಡಿ. ಭೂಗರ್ಭ ಕಬ್ಬಿಣ, ನಿಕ್ಕಲ್ ನಿಂದಾಗಿದೆ ಎಂದೆವಲ್ಲವೆ? ಇದು ಮೇಲಿನ ಗೋಳದೊಡನೆ ಸದಾ ಘರ್ಷಣೆಯಲ್ಲಿರುತ್ತದೆ. ವಾಷಿಂಗ್ ಮಷಿನ್ ನಲ್ಲಿ ಬಟ್ಟೆಗಳು ಗಿರಗಿರ ತಿರುಗುವಂತೆ. ಈ ಪ್ರಕ್ರಿಯೆಯಲ್ಲಿ ಇಡೀ ಭೂಮಿ ಡೈನಮೋದಂತೆ ವರ್ತಿಸುತ್ತದೆ. ಅದರ ಪರಿಣಾಮವಾಗಿ ಭೂಮಿಗೆ ಕಾಂತಗುಣ ಲಭ್ಯವಾಗುತ್ತದೆ. ಅದೇನೂ ಅಲ್ಲೇ ಬಚ್ಚಿಟ್ಟಿಕೊಂಡು ಕುಳಿತಿರುವುದಿಲ್ಲ. ಭೂಮಿಯ ಹೊರಗೂ ಕೊಡೆ ಹಿಡಿದಂತೆ ಸಾವಿರಾರು ಕಿಲೋಮೀಟರ್ ಎತ್ತರದವರೆಗೂ ಹಬ್ಬಿರುತ್ತದೆ. ಈ ಕೊಡೆ ಅತಿ ಅಪಾಯಕಾರಿ ಕಣಗಳು ಭೂಮಿಯ ಮೇಲೆ ದಾಳಿಮಾಡದಂತೆ ಆಚೆದೂಡಿ ನಮ್ಮನ್ನು ರಕ್ಷಿಸಿದೆ.

ಇತ್ತೀಚಿನ ವಿಜ್ಞಾನಿಗಳ ಅಧ್ಯಯನದಂತೆ ಭೂಮಿಯ ಕಾಂತತ್ವ ದುರ್ಬಲವಾಗುತ್ತಿದೆ ಎಂಬ ಸಂಗತಿ ಸಿಕ್ಕಿದೆ. ಇದನ್ನು ನೇರವಾಗಿ ಅಳೆಯುವುದು ಹೇಗೆ ಎಂದು ಯೋಚಿಸಿ ಯೂರೋಪಿಯನ್ ಸ್ಪೇಸ್ ಏಜೆನ್ಸಿ 2013ರಲ್ಲಿ `ಸ್ವಾರಮ್’ ಎಂಬ ಹೆಸರಿನ ಅನೇಕ ಉಪಗ್ರಹಗಳನ್ನು ಕಕ್ಷೆಗೆ ಕಳಿಸಿತು. ಅದು ಭೂಗರ್ಭದವರೆಗೂ ತನ್ನ ಕೈಚಾಚಿ ಮಾಹಿತಿಯನ್ನು ಎತ್ತಿಹಾಕಿದೆ-ಇವೆಲ್ಲ ಗುಪ್ತಚರರು ಮಾಡುವ ಕಾರ್ಯದಂತೆ. ಇದು ನೀಡಿರುವ ಮಾಹಿತಿ ವಿಜ್ಞಾನಿಗಳನ್ನೂ ದಿಗ್ಭ್ರಮೆಗೊಳಿಸಿದೆ. ನಿಕ್ಕಲ್ ಮೇಲಿರುವ ಕಬ್ಬಿಣ ಸುಮಾರು 4000 ಡಿಗ್ರಿ ಉಷ್ಣತೆಯಲ್ಲಿ ಸಂಪೂರ್ಣವಾಗಿ ಕರಗಿ ನೀರು ಹರಿಯುವಂತೆ ನದಿಯಾಗಿದೆ. ಸುಮಾರು 230 ಕಿಲೋಮೀಟರ್ ಅಗಲದ ನದಿ. ಆದರೆ ವರ್ಷಕ್ಕೆ 50 ಕಿಲೋ ಮೀಟರ್ ಚಲನೆ ಅಷ್ಟೇ. ಸದ್ಯಕ್ಕೆ ಕೆನಡ ಮತ್ತು ರಷ್ಯದ ನೆಲದಡಿಯಲ್ಲಿ 3,000 ಕಿಲೋ ಮೀಟರ್‍ಗೂ ಕೆಳಗೆ ಹರಿದುಬಂದಿದೆಯಂತೆ. ಅಕ್ವೇರಿಯಂಗಳಲ್ಲಿ ಪುಟ್ಟ ಪುಟ್ಟ ಮೀನುಗಳು ಹೊರಬರಲಾಗದೆ ಸುತ್ತು ಹಾಕುತ್ತಲೇ ಇರುತ್ತವಲ್ಲ, ಹಾಗೆ. ಭೂಮಿ ಹುಟ್ಟಿದಂದಿನಿಂದಲೂ ಈ ಸ್ಥಿತಿಯೇ ಇತ್ತು. ಆದರೆ ಅದನ್ನು ನಾವು ಅರ್ಥಮಾಡಿಕೊಂಡದ್ದು ಈಗಷ್ಟೇ ಎನ್ನುತ್ತಿದ್ದಾರೆ ತಜ್ಞರು.

jet-stream3-min

ಭೂಮಿಯೊಳಗೇ ಗುಪ್ತವಾಗಿ ಅಡಗಿರುವ ವಿಶಾಲ ಸಾಗರ, ಅದರ ಕೆಳಗೆ ನದಿ! ಒಂದಕ್ಕೊಂದು ಸಂಪರ್ಕವಿಲ್ಲ. ನಿಸರ್ಗದ ಈ ವಿದ್ಯಮಾನವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ತತ್ತ್ವಶಾಸ್ತ್ರಕ್ಕೇ ಒಯ್ಯುತ್ತದೋ ಏನೋ. ಎಲ್ಲವೂ ನಿಸರ್ಗ ಕೃಪೆ. ನಮ್ಮ ಭೂಮಿಯ ಅಂತರಾಳ ಹೇಗಿದೆ ಎಂದರೆ `ಕುಕ್ಕರಿನ ವೆಯ್ಟ್’ ತೆಗೆದರೆ ಅದು ಬುಸುಗುಟ್ಟುವ ಹಾಗೆ. ವಾಸ್ತವವಾಗಿ ಭೂ ಹೊರಚಿಪ್ಪಿಲ್ಲದಿದ್ದರೆ ಜೀವಿ ಹುಟ್ಟುವ, ವಿಕಾಸವಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ. ಅದು ರಕ್ಷಾಕವಚದ ಹಾಗೆ ಜೀವಿಜಗತ್ತಿಗೆ ಒದಗಿಬಂದಿದೆ. ಆದರೂ ಅದರ ಕಣ್ಣುತಪ್ಪಿಸಿ ಎಲ್ಲೋ ಜ್ವಾಲಾಮುಖಿಗಳು ಕೆರಳಿಬಿಡುತ್ತವೆ. ಅಂತರಾಳದ ದರ್ಶನ ಮಾಡಿಸುತ್ತವೆ.

ಈಗ ಅನ್ಯಸೌರ ಗ್ರಹಗಳ ಬಗ್ಗೆ ಮಾತನಾಡುವ ಕಾಲಘಟ್ಟ. ನಮ್ಮ ಗೆಲಕ್ಸಿಯಲ್ಲಿ ಯಾವ ನಕ್ಷತ್ರಗಳಲ್ಲಿ ಯಾವ ಗ್ರಹವಿದೆಯೆಂದು ಪತ್ತೆಹಚ್ಚುತ್ತಿರುವ ಸಮಯ. ಎರಡು ಬ್ರಹ್ಮಾಂಡಗಳು ಡಿಕ್ಕಿ ಹೊಡೆಯುವುದನ್ನು `ಹಬಲ್’ ದೂರದರ್ಶಕ ನಮ್ಮ ಮುಂದೆ ತೆರೆದಿಟ್ಟು ಜಗತ್ತನ್ನೇ ವಿಸ್ಮಯಗೊಳಿಸಿದೆ. ವಿಜ್ಞಾನ ಹೀಗೆ ದಾಪುಗಾಲು ಹಾಕುತ್ತಿದ್ದರೂ ನಮ್ಮ ಕಾಲಡಿಯ ನೆಲವೇ ನಮಗೆ ಅಪರಿಚಿತ!

ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ…

Leave a Reply