ಐಟಿ ದಾಳಿ: ಸಿಕ್ಕಿದ್ದು 430 ಕೆ.ಜಿ ಚಿನ್ನ, 80 ಕೆ.ಜಿ ಬೆಳ್ಳಿ, ₹ 2.60 ಕೋಟಿ ನಗದು, ದೇವೇಗೌಡ್ರ ಮನೆಯಲ್ಲಿ ತೆಂಗು ಬೆಳೆಗಾರರ ಸಭೆ, ಬಿಜೆಪಿ ಸೇರ್ಪಡೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಅಧಿಕೃತ ಹೇಳಿಕೆ, ಸಹಕಾರಿ ಬ್ಯಾಂಕುಗಳ ಪರಿಶೀಲನೆಗೆ ಮುಂದಾದ ಇಡಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಯಾನಿಯಾ ಕಂಪನಿಯಿಂದ ಖರೀದಿಸಲಾದ ಬಯೋಡಿಸೆಲ್ ಬಳಕೆಯ ಇಪ್ಪತ್ತೈದು ನೂತನ ಬಸ್ ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಚಾಲನೆ ನೀಡಿದರು.

ಡಿಜಿಟಲ್ ಕನ್ನಡ ಟೀಮ್:

ಐಟಿ ಬಲೆಗೆ ಚಿನ್ನದ ತಿಮಿಂಗಿಲಗಳು

ದೇಶದಲ್ಲಿ ಕಾಳಧನಿಕರ ವಿರುದ್ಧದ ತೆರಿಗೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ಶನಿವಾರ ದೊಡ್ಡ ಕುಳಗಳನ್ನೇ ಬೇಟೆಯಾಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ನೋಯ್ಡಾದಲ್ಲಿ ಶೋಧಕಾರ್ಯ ನಡೆಸಿರುವ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಆಸ್ತಿಯ ಬಗ್ಗೆ ತಿಳಿದರೆ ನೀವು ಗಾಬರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಕಾರಣ ಈ ದಾಳಿಯ ವೇಳೆ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಬರೋಬ್ಬರಿ 430 ಕೆ.ಜಿ ಚಿನ್ನದ ಗಟ್ಟಿ, 15 ಕೆ.ಜಿ ಚಿನ್ನಾಭರಣ, 80 ಕೆ.ಜಿ ಬೆಳ್ಳಿ ಹಾಗೂ ₹ 2.48 ಕೋಟಿಯಷ್ಟು ಹಳೇ ನೋಟಿನ ನಗದು, ₹ 12 ಲಕ್ಷ ಹೋಸ ನೋಟಿನ ಹಣ.

ತೆರಿಗೆ ಅಧಿಕಾರಿಗಳು ಸರಕು ವ್ಯಾಪಾರ ಕಂಪನಿ ಶ್ರೀ ಲಾಲ್ ಮಹಲ್ ಲಿಮಿಟೆಡ್ ಮಾಲೀಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದರು. ತಮ್ಮಲ್ಲಿರುವ ಕಪ್ಪು ಹಣವನ್ನು ಚಿನ್ನವಾಗಿ ಪರಿವರ್ತಿಸಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು, ತೆರಿಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಇಂದು ಸಹ ಗೋಪಾಲನ್ ಗ್ರೂಪ್ ಕಚೇರಿಗಳ ಮೇಲೆ ದಾಳಿ ಮುಂದುವರಿದಿದ್ದು, ಅಧಿಕಾರಿಗಳು ದಾಖಲೆಗಳ ತಪಾಸಣೆ ಮುಂದುವರಿಸಿದರು.

ಗೌಡ್ರು ಮನೆಯಲ್ಲಿ ತೆಂಗು ಬೆಳೆಗಾರರ ಸಭೆ

ರಾಜ್ಯದಲ್ಲಿ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಪಕ್ಷಾತೀತವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ. ತುಮಕೂರು ಸಂಸದ ಮುದ್ದಹನುಮೇಗೌಡ ನೇತೃತ್ವದಲ್ಲಿ ತೆಂಗು ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳು ಹಾಗೂ ರೈತ ಸಂಘ ಮುಖಂಡರು ಇಂದು ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡರು. ‘ರಾಜ್ಯದಲ್ಲಿ ತೆಂಗು ಬೆಳೆ ಕುಸಿದಿದ್ದು, ರೈತರನ್ನು ಕಾಪಾಡಲು ಕ್ವಿಂಟಾಲ್ ಗೆ ₹ 15 ಸಾವಿರ ನಿಗದಿಗೊಳಿಸುವಂತೆ ಮನವಿ ಮಾಡಲಾಗುವುದು’ ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.

‘ಕೇಂದ್ರದ ನೋಟು ಅಮಾನ್ಯ ನಿರ್ಧಾರದಿಂದ ರೈತರ ಬೆಳೆ ಖರೀದಿಗೆ ವರ್ತಕರು ಮುಂದೆ ಬರುತ್ತಿಲ್ಲ. ಹೀಗಾಗಿ ಎಲ್ಲ ಬೆಳೆಗಳ ಬೆಲೆ ಕುಸಿತವಾಗಿದ್ದು, ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪ್ರಧಾನಿ ಅವರ ಕ್ಯಾಶ್ ಲೆಸ್ ಹಾಗೂ ಡಿಜಿಟಲ್ ವಹಿವಾಟು ಜಾರಿ ಮಾಡುವುದು ಕಷ್ಟ’ ಎಂದು ಅಭಿಪ್ರಾಯಪಟ್ಟರು ದೇವೇಗೌಡರು.

ಬಿಜೆಪಿಗೆ ಸೇರುತ್ತೇನೆ: ಶ್ರೀನಿವಾಸ್ ಪ್ರಸಾದ್ ಅಧಿಕೃತ ಹೇಳಿಕೆ

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯಾಗುವುದಾಗಿ ಶನಿವಾರ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ತಮ್ಮ ನಿರ್ಧಾರ ಪ್ರಕಟಿಸಿದ ಶ್ರೀನಿವಾಸ ಪ್ರಸಾದ್ ಅವರು, ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಬಿಜೆಪಿಯಲ್ಲಿ ಗರ್ಭಗುಡಿ ಸಂಸ್ಕೃತಿ ಇಲ್ಲ. ಕಾಂಗ್ರೆಸ್ ಪಕ್ಷ ನನ್ನನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಹೀಗಾಗಿ ಆ ಪಕ್ಷವನ್ನು ಬಿಟ್ಟು ಬಿಜೆಪಿ ಸೇರುತ್ತಿದ್ದೇನೆ. ನನ್ನ ರಾಜಕೀಯ ಕೊನೆಗಾಲದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಆಶ್ವಾಸನೆ ಸಿಕ್ಕಿದೆ’ ಎಂದು ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲೇ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯಾಗುವ ನಿರೀಕ್ಷೆ ಇತ್ತು. ಆದರೆ ಈಗ ಜನವರಿ 2ರಂದು ಬಿಜೆಪಿಗೆ ಸೇರುವುದು ಪಕ್ಕಾ ಆಗಿದೆ.

ಜಿಲ್ಲಾ ಸಹಕಾರಿ ಬ್ಯಾಂಕ್ ವಹಿವಾಟು ಪರಿಶೀಲನೆಗೆ ಮುಂದಾದ ಇಡಿ

ನೋಟು ಅಮಾನ್ಯ ನಿರ್ಧಾರದ ನಂತರ ರಾಜ್ಯದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದ ಹಣ ಸಂದಾಯವಾಗಿದ್ದು ಇದೀಗ ಇದರ ಮೂಲವನ್ನು ಕೆದಕಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ರಾಜ್ಯದ ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಬೇನಾಮಿ ಹೆಸರಿನಲ್ಲಿ ಹಣ ಸಂದಾಯ ಮಾಡಿದರೆ, ಮತ್ತೆ ಕೆಲವೆಡೆ ನಕಲಿ ಖಾತೆ ಸೃಷ್ಟಿಸಿ ಹಣ ಸಂದಾಯ ಮಾಡಲಾಗಿದೆ. ಮೈಸೂರು, ಕೊಡಗು, ಹಾಸನ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಬೆಳಗಾವಿ, ಕಲಬುರಗಿ, ತುಮಕೂರು ಮತ್ತು ಮಂಗಳೂರು ಸೇರಿದಂತೆ 10ರಿಂದ 12 ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಸಂದಾಯವಾಗಿರುವ ಬಹುತೇಕ ಹಣ ಕಾಳಧನಿಕರದ್ದು ಎಂದು ಇಡಿ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಗೆ ಮುಂದಾಗಿದೆ.

ಕಪ್ಪುಹಣ ಬದಲಾವಣೆ ಆರೋಪದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯ

ಕಪ್ಪು ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಸುರೇಶ್ ಆಡ್ವಾಣಿ ಅವರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸುರೇಶ್ ಆಡ್ವಾಣಿ ಅವರು ಹತ್ತು ಕೋಟಿ ಮೌಲ್ಯದ ಹಳೇಯ ₹ 500 ಮತ್ತು ₹ 1000 ನೋಟುಗಳನ್ನು ಸಾಗಿಸುತ್ತಿದ್ದ ವೇಳೆ ಸಿಬಿಐ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ದಾಳಿಯ ವೇಳೆ ಐವರು ಬ್ಯಾಂಕು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ. ಈ ಐವರು ವೈದ್ಯನಾಥ್ ಕೊ ಆಪರೇಟಿವ್ ಅರ್ಬನ್ ಬ್ಯಾಂಕಿನ ಅಧಿಕಾರಿಗಳು ಎಂದು ಗುರುತಿಸಲಾಗಿದೆ.

ಕೇಜ್ರಿವಾಲ್ ಗೆ ನಿರಾಳ

2013ರ ದೆಹಲಿ ವಿಧಾನಸಭಾ ಚುನಾವಣೆ ವೇಳೆ ತಪ್ಪು ಮಾಹಿತಿ ನೀಡಿದ್ದ ಆರೋಪ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ನಿರಾಳವಾಗಿದ್ದಾರೆ. ಪ್ರಕರಣದಲ್ಲಿ ಕೇಜ್ರಿವಾಲರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಕೋರ್ಟ್ ಆದೇಶದ ಮೇರೆಗೆ ಕೇಜ್ರಿವಾಲ್ ಅವರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ ₹ 10ಸಾವಿರ ವೈಯಕ್ತಿಕ ಬಾಂಡ್ ಒದಗಿಸಿ ಜಾಮೀನು ಪಡೆಯಲಾಯಿತು. ನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ವರ್ಷ ಏಪ್ರಿಲ್ 7ಕ್ಕೆ ನಿಗದಿಪಡಿಸಲಾಯಿತು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಗಳು…

  • ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 5500 ಹೊಸ ಬಸ್ ಗಳನ್ನು ಸೇವೆಗೆ ಸೇರ್ಪಡೆ ಮಾಡುವುದಾಗಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಆ ಪೈಕಿ 1650 ಬಸ್ ಗಳನ್ನು ಬಿಎಂಟಿಸಿಗೆ ನೀಡಲಾಗುವುದು. ಉಳಿದ ಬಸ್ ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಮೀಸಲಿಡಲಾಗುವುದು.
  • ಜೆಡಿಎಸ್ ಪಕ್ಷದ ಏಳು ಬಂಡಾಯ ಶಾಸಕರು ಎನ್ ಸಿ ಪಿ ಪಕ್ಷ ಸೇರುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ‘ಜನವರಿ 8ರಂದು ಹಿರಿಯ ನಾಯಕ ಶರದ್ ಪವಾರ್ ಅವರ ಜತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದ್ದು, ಈ ನಿರ್ಧಾರ ತಮಗೆ ಅನಿವಾರ್ಯವಾಗಿದೆ’ ಎಂದು ಬಂಡಾಯ ಶಾಸಕರಲ್ಲಿ ಒಬ್ಬರಾದ ಜಮೀರ್ ಅಹ್ಮದ್. ‘ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇವೆ ಎಂಬುದು ಸುಳ್ಳು. ಆ ಪ್ರಕರಣದಲ್ಲಿ ಏನಾಯಿತು ಎಂಬುದು ಕುಮಾರಸ್ವಾಮಿ ಅವರಿಗೆ ಚೆನ್ನಾಗಿಯೇ ಗೊತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು ಜಮೀರ್.
  • ಮುಂಬೈನಲ್ಲಿ ಛತ್ರಪತಿ ಶಿವಾಜಿ ಅವರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಸರ್ಕಾರ ದೇಶದ ಪ್ರಗತಿಗೆ ಬದ್ಧವಾಗಿದೆ. ಡಿಸೆಂಬರ್ 31ರ ನಂತರ ಪ್ರಾಮಾಣಿಕರು ನಿರಾಳವಾಗಲಿದ್ದಾರೆ. ಭ್ರಷ್ಟರು ಸಮಸ್ಯೆ ಎದುರಿಸಲಿದ್ದಾರೆ. ಸರ್ಕಾರದ ನೋಟು ಅಮಾನ್ಯ ನಿರ್ಧಾರವನ್ನು ತಡೆಯಲ್ಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಜನ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಜನರು ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ. ಈ ದೇಶ ಬದಲಾಗುವುದಿಲ್ಲ ಎಂದು ಇಷ್ಟು ದಿನ ನಂಬಲಾಗಿತ್ತು. ಆದರೆ ನನ್ನ ಜನರ ಶಕ್ತಿ ಮೇಲೆ ನಂಬಿಕೆ ಇದೆ. ಹೀಗಾಗಿ ನಾನು ಹೇಳುತ್ತಿದ್ದೇನೆ ಈ ದೇಶ ಖಂಡಿತವಾಗಿಯೂ ಬದಲಾಗುತ್ತದೆ…’ ಎಂದು ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು.

Leave a Reply