‘ಒಂದೇ ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸೋದು ನನ್ನ ಗುರಿ’- ದೇಶದ ಆರ್ಥಿಕತೆ ಕುರಿತು ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ಒಂದೇ ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ದೇಶವನ್ನಾಗಿ ಮಾಡುವುದು ನನ್ನ ಗುರಿ…’ ಇದು ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರ ಪ್ರವಾಸದ ವೇಳೆ ಹೇಳಿರುವ ಮಾತು.

ಎರಡು ಮೆಟ್ರೋ ಕಾರಿಡಾರ್ ಗಳಿಗೆ ಶಂಕುಸ್ಥಾಪನೆ, ಮರಾಠಿಗರ ಬಹು ನಿರೀಕ್ಷಿತ ಶಿವಾಜಿ ಸ್ಮಾರಕಕ್ಕೆ ಶಂಕುಸ್ಥಾಪನೆ, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ ನ ನೂತನ ಕ್ಯಾಂಪಸ್ ಅನಾವರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಮಹಾರಾಷ್ಟ್ರ ಪ್ರವಾಸ ಮಾಡಿರುವ ಮೋದಿ, ದೇಶದ ಆರ್ಥಿಕ ವ್ಯವಸ್ಥೆ ಕುರಿತಂತೆ ತಮ್ಮ ಗುರಿಯನ್ನು ಬಿಚ್ಚಿಟ್ಟಿದ್ದಾರೆ. ಮೋದಿ ಅವರ ಮಾತಿನ ಸಾರಾಂಶ ಹೀಗಿವೆ…

‘ಎಲ್ಲರಿಗೂ ಮೇರಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ದೇಶದ ಹಿತಾಸಕ್ತಿ ಹಾಗೂ ಅಭಿವೃದ್ಧಿಗಾಗಿ ಎಂತಹುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ಹಿಂಜರಿಯುವುದಿಲ್ಲ. ಒಂದು ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ನನ್ನ ಗುರಿ. ಆರ್ಥಿಕ ಮಾರುಕಟ್ಟೆಯಲ್ಲಿ ಉತ್ತಮ ಲಾಭ ಪಡೆದವರು ತೆರಿಗೆ ಪಾವತಿ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸೂಕ್ತ ಕಾಣಿಕೆ ನೀಡಬೇಕು. ಇ-ನಾಮ್ ಹಾಗೂ ಇತರೆ ಸಾರ್ವಜನಿಕ ಆರ್ಥಿಕ ಮಾರುಕಟ್ಟೆಯು ರೈತರಿಗೆ ಅನುಕೂಲವಾಗುವಂತೆ ಸೆಬಿ (ಎಸ್ಇಬಿಐ) ಕಾರ್ಯನಿರ್ವಹಿಸಬೇಕು, ದೇಶದ ಅಭಿವೃದ್ಧಿಯು ಹಳ್ಳಿಗಳ ಮೇಲಿನ ಪರಿಣಾಮವನ್ನು ಆಧರಿಸಬೇಕೇ ಹೊರತು ನಗರ ಅಥವಾ ದಲ್ಲಾಳಿಗಳ ವರ್ಗದ ಮೇಲಲ್ಲ. ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಿ ಹಾದಿಯ ಮೂಲಕ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೆಚ್ಚುವಂತೆ ಮಾಡಬೇಕು.

ಸರ್ಕಾರವು ಈಗಾಗಲೇ ಸ್ಟಾರ್ಟ್ ಅಪ್ ಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಈ ಸ್ಟಾರ್ಟ್ ಅಪ್ ಗಳ ಉತ್ತಮ ಆರ್ಥಿಕ ವ್ಯವಸ್ಥೆಗೆ ಷೇರು ಮಾರುಕಟ್ಟೆ ಪ್ರಮುಖ ಪಾತ್ರ ವಹಿಸಲಿದೆ. ಈ ಮಾರುಕಟ್ಟೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಇಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಉತ್ತಮ ಮಾಹಿತಿ ಲಭ್ಯವಿರಬೇಕು. ರಾಜಕೀಯ ಹಿತಾಸಕ್ತಿಗಾಗಿ ಅಲ್ಪಾವಧಿಯ ಆರ್ಥಿಕ ಯೋಜನೆ ಜಾರಿ ಮಾಡುವ ಬದಲು ದೀರ್ಘಾವಧಿಯ ಲಾಭಕ್ಕಾಗಿ ಯೋಜನೆಗಳನ್ನು ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ ನಿಟ್ಟಿನಲ್ಲಿ ನೋಟು ಅಮಾನ್ಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಅಲ್ಪಾವಧಿಯಲ್ಲಿ ನೋವು ತಂದರೂ ದೀರ್ಘಾವಧಿಯಲ್ಲಿ ಅಭಿವೃದ್ಧಿಗೆ ಪ್ರಮುಖ ಅಸ್ತ್ರವಾಗಲಿದೆ.

ದೇಶದಲ್ಲಿ ಉದ್ಯಮಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಆ ಮೂಲಕ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ ದಾಖಲೆಯ ಮಟ್ಟಕ್ಕೆ ತಲುಪಿದೆ. ಇನ್ನು ದೇಶದಲ್ಲಿ ಸುದೀರ್ಘ ಅವಧಿಯಿಂದ ನೆನೆಗುದಿಗೆ ಬಿದ್ದಿದ್ದ ಸರಕು ಸೇವಾ ತೆರಿಗೆ (ಜಿಎಸ್ಟಿ)ಗೆ ಈಗ ಒಂದು ರೂಪ ಪಡೆದುಕೊಂಡಿದೆ. ಶೀಘ್ರದಲ್ಲೇ ಇದು ವಾಸ್ತವವಾಗಿ ಜಾರಿಯಾಗಲಿದೆ. ವಿಶ್ವ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತೀಯ ಆರ್ಥಿಕತೆ ಗರಿಷ್ಠ ಪ್ರಮಾಣದಲ್ಲಿದೆ. ಹೀಗಾಗಿ ಭವಿಷ್ಯದಲ್ಲಿ ಭಾರತ ಉಜ್ವಲ ಅವಕಾಶವಾಗಿ ಬಿಂಬಿತವಾಗಿದೆ. ಮೂರು ವರ್ಷಗಳ ಹಿಂದಿನ ಪರಿಸ್ಥಿತಿಯನ್ನೊಮ್ಮೆ ತಿರುಗಿ ನೋಡಿ… ಭಾರತದ ರುಪಾಯಿ ಮೌಲ್ಯ ಗಣನೀಯವಾಗಿ ಕುಸಿಯುತ್ತಲೇ ಸಾಗಿತ್ತು. ಆದರೆ, ಕಳೆದ ಮೂರು ವರ್ಷದ ಅವಧಿಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಭಾರತ ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಲಿದ್ದು, ಭಾರತ ಅಭಿವೃದ್ಧಿ ಹೊಂದಿದೆ ದೇಶವಾಗಿ ಹೊರಹೊಮ್ಮಲಿದೆ.’

Leave a Reply